ಬೆಂಗಳೂರು: ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಕ್ರಿಕೆಟ್ ಹೊರತಾಗಿಯೂ ಬೇರೆ ಕ್ರೀಡೆಗಳಿಗೆ ವೀಕ್ಷಕರನ್ನು ಸೆಳೆಯುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಕ್ರೀಡೆಯ ಬಗ್ಗೆ ಒಲವು ಹೊಂದುವಂತೆ ಮಾಡುವುದೂ ಅಷ್ಟೇ ಮುಖ್ಯ. ಈ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಕಾನೂನು ಹಾಗೂ ನ್ಯಾಯ ಇಲಾಖೆ ಸಚಿವ ಕಿರಣ್ ರಿಜಿಜು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ವರ್ಲ್ಡ್ ಫೋರಂ ಫಾರ್ ಎಥಿಕ್ಸ್ ಇನ್ ಬಿಸ್ನೆಸ್ ವತಿಯಿಂದ ಗುರುವಾರ ಮತ್ತು ಶುಕ್ರವಾರ ಆಯೋಜಿಸಿದ್ದ 6ನೇ ವರ್ಲ್ಡ್ ಸಮ್ಮಿಟ್ ಫಾರ್ ಎಥಿಕ್ಸ್ ಆ್ಯಂಡ್ ಲೀಡರ್‌ಶಿಪ್ ಇನ್ ಸ್ಪೋರ್ಟ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶವು ಕ್ರೀಡಾ ಪರಂಪರೆಯನ್ನು ಹೊಂದಿದೆ,” ಎಂದು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ, ಕ್ರೀಡೆಗಳು ಜನರನ್ನು ಒಗ್ಗೂಡಿಸುವ ಒಂದು ಮಾಧ್ಯಮ. ಆದರೆ, ಕ್ರೀಡೆಗಳನ್ನು ಯುದ್ಧದ ಮಾದರಿಯಲ್ಲಿ ನೋಡಲಾಗುತ್ತದೆ. ಕ್ರೀಡಾಪಟುಗಳು ಜವಾಬ್ದಾರಿ ಪ್ರದರ್ಶನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ | Team India | ಚಂದದ ಕಾರನ್ನು ಶೆಡ್‌ನಲ್ಲಿಡಲಾಗಿದೆ; ಟೀಮ್ ಇಂಡಿಯಾ ಬಗ್ಗೆ ಬ್ರೆಟ್ ಲೀ ಮಾತಿನ ಹುರುಳೇನು?
ಕ್ರೀಡೆಯಲ್ಲಿ ಎಫ್‌ಐಆರ್ ಮುಖ್ಯ- ಪಂಕಜ್ ಅಡ್ವಾಣಿ
ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಕ್ರೀಡಾಪಟು ಪಂಕಜ್ ಅಡ್ವಾಣಿ ಮಾತನಾಡಿ, ಕ್ರೀಡಾಜಗತ್ತಿನಲ್ಲಿ ಎಫ್‌ಐಆರ್ ಬಹಳ ಮುಖ್ಯ ಪಾತ್ರವಹಿಸುತ್ತದೆ. ಅಂದರೆ, ಫೇರ್ ಪ್ಲೇ (ನ್ಯಾಯಸಮ್ಮತ ಆಟ), ಇಂಟಿಗ್ರಿಟಿ (ಸಮಗ್ರತೆ) ಮತ್ತು ರೆಸ್ಪೆಕ್ಟ್ (ಗೌರವ) ಬಹಳ ಮುಖ್ಯ ಪಾತ್ರವಹಿಸುತ್ತದೆ. ಇಲ್ಲಿ ನಾವು ನಮ್ಮವರಿಗಷ್ಟೇ ಅಲ್ಲ, ಎದುರಾಳಿ ತಂಡದ ವೀಕ್ಷಕರಿಗೂ ಸೈ ಎನ್ನಿಸುವಂತೆ ಆಡಬೇಕು. ಆ ನಿಟ್ಟಿನಲ್ಲಿ ನಮ್ಮ ಆಟ ಇರಬೇಕು ಎಂದು ಹೇಳಿದರು.
ಚರ್ಚಿತ ವಿಷಯಗಳು
“ಯುನೈಟೆಡ್ ಫಾರ್ ಎಥಿಕ್ಸ್ ಇನ್ ಸ್ಪೋರ್ಟ್ಸ್” ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು, ಕ್ರೀಡಾಪಟುಗಳು ಚರ್ಚೆ ನಡೆಸಿದರು. ಅಲ್ಲದೆ, ಕ್ರೀಡೆಗಳಲ್ಲಿ ನೈತಿಕತೆ, ಸಮಗ್ರತೆ, ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆದ ಪ್ರಭಾವ, ಮಾನಸಿಕ ರೋಗಗಳ ಸಮಸ್ಯೆ, ಕ್ರೀಡೆಯಲ್ಲಿ ಪಾರದರ್ಶಕತೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆಯೂ ಮುಕ್ತವಾಗಿ ಚರ್ಚೆ ನಡೆಸಲಾಯಿತು. ಕ್ರೀಡಾ ಆಡಳಿತದ ಪ್ರಮುಖ ಸವಾಲುಗಳಾದ ಭ್ರಷ್ಟಾಚಾರ, ಮಾದಕವಸ್ತು ಸೇವನೆ, ಮಾನವೀಯ ಹಕ್ಕುಗಳ ಸವಾಲುಗಳನ್ನು ಗುರುತಿಸುವ ಬಗ್ಗೆಯೂ ಚರ್ಚಿಸಲಾಯಿತು.
ಈ ಸಮಾವೇಶದಲ್ಲಿ 2022ನೇ ಎಥಿಕ್ಸ್ ಇನ್ ಸ್ಪೋರ್ಟ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಎತ್ತಿ ಹಿಡಿದ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.
ಈ ವರ್ಷದ ಪ್ರಶಸ್ತಿಯ ವಿಜೇತರು
- ಎಫ್‌ಸಿ ಯೂನಿಯನ್ ಬರ್ಲಿನ್ ಇವಿ ಫಾರ್ ಔಟ್‌ಸ್ಟ್ಯಾಂಡಿಂಗ್ ಆರ್ಗನೈಸೇಷನ್
- ಕು. ಅಂಜಾ ಹಾಮ್ಮರ್ಸೆಂಗ್ -ಎಡಿನ್ (ಕ್ರೀಡೆಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರೋತ್ಸಾಹ)
- ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸಚಿವ ಕಿರಣ್ ರಿಜಿಜು
- ಸಂದೀಪ್ ಸಿಂಗ್- ಕ್ರೀಡೆ
ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ರಾಷ್ಟ್ರೀಯ ತರಬೇತುದಾರ ಪುಲ್ಲೆಲ ಗೋಪಿಚಂದ್, ಭಾರತದ ಪ್ರಥಮ ಫಾರ್ಮುಲಾ ಒನ್ ಪಟು ನರೇನ್ ಕಾರ್ತಿಕೇಯನ್, ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪುನಿಯ, ಹರ್ಯಾಣದ ಕ್ರೀಡಾ ಮಂತ್ರಿ, ರಾಷ್ಟ್ರೀಯ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್, ರಾಷ್ಟ್ರೀಯ ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರಾದ, ಬಿಲ್ಲಿಯಾರ್ಡ್ಸ್ ಕ್ರೀಡಾಪಟು ಪಂಕಜ್ ಅಡ್ವಾಣಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ | BCCI President | ಬಿಸಿಸಿಐ ಅಧ್ಯಕ್ಷ ಗಾದಿ ತೊರೆದ ಬಗ್ಗೆ ಮೌನ ಮುರಿದ ಸೌರವ್ ಗಂಗೂಲಿ