Site icon Vistara News

Modi In Karnataka | ಅನ್ಯ ಸರ್ಕಾರಗಳಿಗೆ ವೋಟ್‌ ಬ್ಯಾಂಕ್‌ ಚಿಂತೆ; ನಮಗೆ ಅಭಿವೃದ್ಧಿಯೇ ಆದ್ಯತೆ: ಪ್ರಧಾನಿ ಮೋದಿ

modi-in-karnataka-other party govts focussed only on voteban and we focus over development says modi

ಯಾದಗಿರಿ: ವಿವಿಧ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿ ಕೇವಲ ಜಾತಿ ಮತದ ಆಧಾರದಲ್ಲಿ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟಿದ್ದವು. 2014ರಿಂದ ಆಡಳಿತದಲ್ಲಿರುವ ನಮ್ಮ ಸರಕಾರವು ಕೇವಲ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ ಹಾಗೂ ಅಭಿವೃದ್ಧಿ ಯೋಜನೆಗೆ ಚಾಲನೆ ಸೇರಿ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದು.

ಕನ್ನಡದಲ್ಲೆ ಭಾಷಣ ಆರಂಭಿಸಿದ ಮೋದಿ, ʼಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು” ಎಂದರು. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಜನರೇ ಕಾಣುತ್ತಿದ್ದಾರೆ. ಹೆಲಿಪ್ಯಾಡ್‌ನಲ್ಲೂ, ಕಾರ್ಯಕ್ರಮದಲ್ಲಿ, ಪೆಂಡಾಲ್‌ ಹೊರಗೂ ಬಿಸಿಲಿನಲ್ಲಿ ಜನರು ನಿಂತಿದ್ದಾರೆ. ನೀವು ನೀಡುತ್ತಿರುವ ಈ ಪ್ರೀತಿ, ಆಶೀರ್ವಾದವೇ ನಮ್ಮೆಲ್ಲರ ಬಹುದೊಡ್ಡ ಶಕ್ತಿ ಎಂದು ಪ್ರಶಂಸಿಸಿದರು.

ಯಾದಗಿರಿಯು ಸಮೃದ್ಧ ಇತಿಹಾಸವನ್ನು ಒಳಗೊಂಡಿದೆ. ರಟ್ಟಿಹಳ್ಳಿ ಕೋಟೆಯು ನಮ್ಮ ಪೂರ್ವಜರ ಸಾಮರ್ಥ್ಯದ ಪ್ರತೀಕ. ನಮ್ಮ ಪರಂಪರೆ, ನಮ್ಮ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ನಂಟು ಹೊಂದಿದ ಅನೇಕ ಸ್ಥಳಗಳು ಈ ಕ್ಷೇತ್ರದಲ್ಲಿವೆ. ಮಹಾನ್‌ ರಾಜಾ ವೆಂಕಟಪ್ಪ ನಾಯಕ ತಮ್ಮ ಉತ್ತಮ ಆಡಳಿತದಿಂದಾಗಿ ಈ ಪ್ರದೇಶ ವಿಖ್ಯಾತವಾಗಿತ್ತು. ಈ ಪರಂಪರೆಯ ಮೇಲೆ ನಮಗೆ ಗೌರವವಿದೆ.

ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ ಹಾಗೂ ಆಧುನೀಕರಣದಿಂದ ಸುತ್ತಲಿನ ರೈತರಿಗೆ ನೇರವಾಗಿ ಲಾಭವಾಗಿತ್ತದೆ. ಯಾದಗಿರಿ ಬಹುಗ್ರಾಮ ಕುಡಿಯುವ ನೀರಿನಿಂದ ಶುದ್ಧ ಕುಡಿಯುವ ನೀರು ಸಿಗುತ್ತದೆ. ಸೂರತ್‌-ಚೆನ್ನೈ ಎಕನಾಮಿಕ್‌ ಕಾರಿಡಾರ್‌ ಭಾಗದ ಕಾರ್ಯ ಆರಂಭವಾಗಿದೆ. ಇದರಿಂದಾಗಿ ಯಾದಗಿರಿ-ರಾಯಚೂರು ಹಾಗೂ ಕಲಬುರಗಿ ಸಹಿತ ಈ ಕ್ಷೇತ್ರದಲ್ಲಿ ಜನರ ಜೀವನ ಸುಧಾರಿಸುತ್ತದೆ ಮತ್ತು ಉದ್ಯಮಗಳಿಗೂ ಶಕ್ತಿ ಲಭಿಸುತ್ತದೆ. ಅಭಿವೃದ್ಧಿಯ ಈ ಯೋಜನೆಗಳಿಗೆ ಯಾದಗಿರಿಯ ಹಾಗೂ ಕರ್ನಾಟಕದ ಜನರಿಗೆ ಅಭಿನಂದನೆಗಳು.

ಬೊಮ್ಮಾಯಿ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ವೇಗವಾಗಿ ಕೆಲಸ ಆಗುತ್ತಿರುವುದು ಪ್ರಶಂಸನೀಯ. ಭಾರತದ ಸ್ವಾತಂತ್ರ್ಯದ 75 ವರ್ಷ ಪೂರೈಸಿದೆ. ಮುಂದಿನ 25 ವರ್ಷಗಳ ಹೊಸ ಸಂಕಲ್ಪವನ್ನು ಸಿದ್ಧಪಡಿಸಿಕೊಳ್ಳಲು ಮುಂದೆ ನಡೆಯುತ್ತಿದೆ. ಈ ಅಮೃತ ಕಾಲವು ಪ್ರತಿ ರಾಜ್ಯಕ್ಕೂ ಮಹತ್ವದ್ದು. ಈ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯವನ್ನು ನಿರ್ಮಾಣ ಮಾಡಬೇಕು. ದೇಶದ ಪ್ರತಿ ನಾಗರಿಕ, ರಾಜ್ಯವೂ ಈ ಅಭಿಯಾನದಲ್ಲಿ ಕೈಜೋಡಿಸಿದರೆ ಮಾತ್ರ ಇದು ಸಾಧ್ಯ. ಹೊಲದಲ್ಲಿ ದುಡಿಯುವ ರೈತನಿಂದ ಉದ್ಯಮಿಯವರೆಗೆ ಎಲ್ಲರ ಜೀವನವೂ ಸುಧಾರಣೆಯಾದರೆ ಮಾತ್ರ ಸಾಧ್ಯ ಎಂದರು.

ಕೆಟ್ಟ ನೀತಿಗಳಿಂದ ಕಲಿತ ಪಾಠ

ಹಿಂದಿನ ದಶಕಗಳ ಕೆಟ್ಟ ಅನುಭವಗಳು, ತಪ್ಪು ನೀತಿಗಳಿಂದ ಕಲಿಯಬೇಕು. ಅವುಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು. ಉತ್ತರ ಕರ್ನಾಟಕದ ಸಾಮರ್ಥ್ಯ ಬೇರೆ ಯಾರಿಗಿಂತಲೂ ಕಡಿಮೆ ಇಲ್ಲ. ಆದರೂ ಈ ಕ್ಷೇತ್ರ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದೆ ಉಳಿದಿದೆ. ಹಿಂದನ ಸರ್ಕಾರಗಳು ಯಾದಗಿರಿ ಸಹಿತ ಅನೇಕ ಜಿಲ್ಲೆಗಳನ್ನು ಹಿಂದುಳಿದವು ಎಂದು ಘೋಷಿಸಿ ಕೈತೊಳೆದುಕೊಂಡಿದ್ದವು. ಈ ಸ್ಥಿತಿಗೆ ಕಾರಣವೇನು? ಅದನ್ನು ಪರಿಹರಿಸುವುದು ಹೇಗೆ? ಎನ್ನುವುದನ್ನು ಈ ಹಿಂದಿನ ಸರ್ಕಾರಗಳು ಆಲೋಚಿಸಲಿಲ್ಲ. ಕ್ರಮವನ್ನೂ ಕೈಗೊಳ್ಳಲಿಲ್ಲ. ರಸ್ತೆ, ವಿದ್ಯುತ್‌, ನೀರಿನ ವ್ಯವಸ್ಥೆ ಸರಿಪಡಿಸುವ ಬದಲಿಗೆ ಆಗಿನ ಪಕ್ಷಗಳ ಸರ್ಕಾರಗಳು ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಒತ್ತು ನೀಡಿದವು. ಜಾತಿ, ಧರ್ಮದ ಆಧಾರದಲ್ಲಿ ಲೆಕ್ಕ ಮಾಡಿಯೇ ಯೋಜನೆಗಳನ್ನು ರೂಪಿಸಿದವು. ಇದರ ಬಹುದೊಡ್ಡ ನಷ್ಟವು ಕರ್ನಾಟಕಕ್ಕೆ ಆಯಿತು. ಇದೆಲ್ಲದರಿಂದ ನಿಮಗೆ ನಷ್ಟವಾಯಿತು.

ನಮ್ಮ ಆದ್ಯತೆ ವೋಟ್‌ ಬ್ಯಾಂಕ್‌ ಅಲ್ಲ. ನಮ್ಮ ಆದ್ಯತೆ ಅಭಿವೃದ್ಧಿ, ಅಭಿವೃದ್ಧಿ ಹಾಗೂ ಅಭಿವೃದ್ಧಿ. 2014ರಲ್ಲಿ ನೀವು ನನಗೆ ಆಶೀರ್ವಾದ ಮಾಡಿದಿರಿ. ನನ್ನ ಹೆಗಲ ಮೇರೆ ಬಹುದೊಡ್ಡ ಹೊಣೆ ಹೊರಿಸಿದಿರಿ. ದೇಶದ ಯಾವುದೇ ಜಿಲ್ಲೆ ಅಭಿವೃದ್ಧಿಯಿಂದ ಹಿಂದೆ ಉಳಿದರೂ ದೇಶ ಅಭಿವೃದ್ಧಿ ಆಗುವುದಿಲ್ಲ. ಅದಕ್ಕಾಗಿಯೇ ಹಿಂದುಳಿದ ಜಿಲ್ಲೆಗಳಿಂದಲೇ ಅಭಿವೃದ್ಧಿಯನ್ನು ಕೈಗೊಂಡಿದ್ದೇವೆ. ಯಾದಗಿರಿ ಸೇರಿ ಇಂತಹ ನೂರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡುತ್ತಿದ್ದೇವೆ. ಸುಶಾಸನಕ್ಕೆ ಒತ್ತು ನೀಡಿದೆವು.

ಇದರಿಂದಾಗಿ ಯಾದಗಿರಿಯಲ್ಲಿ ಮಕ್ಕಳ ಶೇ. 100 ಲಸಿಕೀಕರಣ ಆಗಿದೆ. ಅಪೌಷ್ಠಿಕ ಮಕ್ಕಳ ಸಂಖ್ಯೆ ಕಡಿಮೆ ಆಗಿದೆ. ಶೇ. 100 ಗ್ರಾಮಗಳು ರಸ್ತೆ ಹೊಂದಿವೆ. ಗ್ರಾಪಂಗಳಲ್ಲಿ ಕಾಮನ್‌ ಸರ್ವೀಸ್‌ ಸೆಂಟರ್‌ ಇದೆ. ಶಿಕ್ಷಣ, ಆರೋಗ್ಯ. ಸಂಪರ್ಕದಲ್ಲಿ ಯಾದಗಿರಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇದು ಮೊದಲ 10 ಜಿಲ್ಲೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ಯಾದಗಿರಿಯ ಜನಪ್ರತಿನಿಧಿಗಳು, ಜಿಲ್ಲಾ ಆಡಳಿತಕ್ಕೆ ಶುಭಾಶಯಗಳು.

ಡಬಲ್‌ ಇಂಜಿನ್‌ ಸರ್ಕಾರದ ಹೆಗ್ಗಳಿಕೆ

ಡಬಲ್‌ ಇಂಜಿನ್‌ ಸರ್ಕಾರವು ಅಭಿವೃದ್ಧಿಗೆ ಒತ್ತು ನೀಡುತ್ತಿದೆ. 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ, ನನೆಗುದಿಗೆ ಬಿದ್ದಿದ್ದ 99 ಯೋಜನೆಗಳಿದ್ದವು. ಇದರಲ್ಲಿ ಅರ್ಧದಷ್ಟು ಯೋಜನೆಗಳನ್ನು ಪೂರೈಸಲಾಗಿದೆ. ಕರ್ನಾಟಕದಲ್ಲೂ ಅನೇಕ ಯೋಜನೆ ಜಾರಿಯಲ್ಲಿವೆ. ಡಬಲ್‌ ಇಂಜಿನ್‌ ಸರ್ಕಾರ ಹೇಗೆ ಕೆರಲಸ ಮಾಡುತ್ತಿದೆ ಎನ್ನುವುದನ್ನು ಜಲಜೀವನ ಮಿಷನ್‌ನಲ್ಲೂ ನೋಡಬಹುದು. ಈ ಯೋಜನೆ ಆರಂಭವಾದಾಗ ಕೇವಲ 3 ಕೋಟಿ ಮನೆಗಳಿಗೆ ನಲ್ಲಿಯ ಸಂಪರ್ಕವಿತ್ತು. ಈಗ 11 ಕೋಟಿ ಮನೆಗಳಿಗೆ ನಲ್ಲಿಯ ಮೂಲಕ ನೀರು ಲಭಿಸುತ್ತಿದೆ. ಕರ್ನಾಟಕದಲ್ಲಿ 35 ಲಕ್ಷ ಗ್ರಾಮೀಣ ಮನೆಗಳೂ ಇವೆ. ಮನೆಗೆ ನೀರು ಆಗಮಿಸಿದ ಕೂಡಲೆ ತಾಯಂದಿರು ಮೋದಿಯನ್ನು ಆಶೀರ್ವದಿಸುತ್ತಾರೆ. ಭಾರತದ ಜಲಜೀವನ ಮಿಷನ್‌ ಮೂಲಕ ಲಕ್ಷಾಂತರ ಮಕ್ಕಳ ಜೀವನವನ್ನು ನಾವು ಉಳಿಸಬಹುದು ಎಂದು ಅಧ್ಯಯನ ಹೇಳಿದೆ. ಈ ಕಾರ್ಯಕ್ಕೆ ಈಶ್ವರನೂ ಆಶೀರ್ವಾದ ನೀಡುತ್ತಾನೆ. ಕಲುಷಿತ ನೀರಿನಿಂದ ಮಕ್ಕಳಿಗೆ ಒದಗುತ್ತಿದ್ದ ಅಪಾಯದಿಂದ ಪಾರು ಮಾಡಿದೆ.

ಇದು ಡಬಲ್‌ ಇಂಜಿನ್‌ ಸರ್ಕಾರದ ಲಾಭ. ಡಬಲ್‌ ವೇಗದಲ್ಲಿ ಅಭಿವೃದ್ಧಿ. ಕರ್ನಾಡಕಕ್ಕೆ ಆಗುತ್ತಿರುವ ಲಾಭವನ್ನು ನೀವು ನೋಡಿದ್ದೀರ. ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಕೇಂದ್ರ ಸರ್ಕಾರ ಆರು ಸಾವಿರ ರೂ. ನೀಡಿದರೆ ಕರ್ನಾಟಕ ಸರ್ಕಾರ ನಾಲ್ಕು ಸಾವಿರ ರೂ. ಸೇರಿಸಿ 10 ಸಾವಿರ ರೂ. ನೀಡುತ್ತಿದೆ. ಇದು ಡಬಲ್‌ ಇಂಜಿನ್‌ ಸರ್ಕಾರ. ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ತಂದರೆ ಕರ್ನಾಟಕ ವಿದ್ಯಾನಿಧಿ ಯೋಜನೆ ರೂಪಿಸಿದೆ. ಕೊರೊನಾ ಹೋಗಲಾಡಿಸಲು ಕೇಂದ್ರ ಸರ್ಕಾರ ಒಂದು ಯೋಜನೆ ರೂಪಿಸಿದರೆ ಕರ್ನಾಟಕ ಇದಕ್ಕೆ ಸಹಕರಿಸುತ್ತದೆ. ನೇಕಾರರಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದರೆ, ಕರ್ನಾಟಕ ಸರ್ಕಾರ ಅವರ ಸಾಲ ಮನ್ನಾ ಮಾಡುತ್ತದೆ. ಇದು ಡಬಲ್‌ ಇಂಜಿನ್‌ ಸರ್ಕಾರದ ಲಾಭ ಎಂದರು.

ಸ್ವಾತಂತ್ರ್ಯದ ಇಷ್ಟು ವರ್ಷದ ನಂತರವೂ ಯಾರಾದರೂ ಹಿಂದೆ ಉಳಿದಿದ್ದರೆ ಅವರಿಗೂ ಯೋಜನೆಯನ್ನು ತಲುಪಿಸುತ್ತೇವೆ. ಇಲ್ಲಿನ ಧಾನ್ಯವು ದೇಶದ ಆಮದನ್ನು ಕಡಿಮೆ ಮಾಡಿದೆ. ಕೇಂದ್ರ ಸರ್ಕಾರವು ಶೇ.80ಹೆಚ್ಚಿನ ಧಾನ್ಯವನ್ನು ಕೇಂದ್ರ ಸರ್ಕಾರ ಖರೀದಿಸಿದೆ. ಹಿಂದಿನ ಸರ್ಕಾರಗಳು ಕೇಲವ ಕೆಲವು ನೂರಾರು ಕೋಟಿ ರೂ. ವೆಚ್ಚದಲ್ಲಿ ಖರೀದಿ ಮಾಡುತ್ತಿದ್ದರೆ ನಾವು ಸಾವಿರಾರು ಕೋಟಿ ರೂ. ಮೊತ್ತದಲ್ಲಿ ಖರೀದಿ ಮಾಡಿದ್ದೇವೆ. ಸಿರಿಧಾನ್ಯಗಳಿಗೆ ಒತ್ತು ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ರಾಗಿ ಹಾಗೂ ಜೋಳದ ಉತ್ಪಾದನೆ ಹೆಚ್ಚಿದೆ. ಇದನ್ನು ವಿಶ್ವಾದ್ಯಂತ ಪ್ರಚಾರ ಮಾಡಲು ಡಬಲ್‌ ಇಂಜಿನ್‌ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲೂ ಕರ್ನಾಟಕದ ರೈತರು ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದರು.

ಇದನ್ನೂ ಓದಿ | Modi In Karnataka | ಯುಪಿಎ ಸರ್ಕಾರದಿಂದಾಗಿ ನೀರಾವರಿ ಯೋಜನೆ ಕರ್ನಾಟಕದ ಕೈತಪ್ಪಿತ್ತು: ಸಿಎಂ ಬೊಮ್ಮಾಯಿ ಆರೋಪ

Exit mobile version