ಯಾದಗಿರಿ : ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಕಂಡು ಅವರಿಗೆ ಒಳ್ಳೆಯ ದಾರಿ ತೋರಿಸಬೇಕಾಗಿದ್ದ ಹೈಸ್ಕೂಲ್ ಮುಖ್ಯ ಶಿಕ್ಷಕನೊಬ್ಬ (High school Head Master) ವಿದ್ಯಾರ್ಥಿನಿಯರ ಜತೆ ಅನುಚಿತವಾಗಿ (POCSO Case) ವರ್ತಿಸಿದ ಹೇಯ ಘಟನೆ ಯಾದಗಿರಿ ಜಿಲ್ಲೆಯಲ್ಲಿ (Yadagiri District) ನಡೆದಿದೆ. ಈ ಆರೋಪದಲ್ಲಿ ಆ ಶಿಕ್ಷಕನನ್ನು ಅಮಾನತು (Teacher Suspended) ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ ಮುಖ್ಯ ಶಿಕ್ಷಕ ಹಣಮೇಗೌಡ ಎಂಬಾತನೇ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ಮಾಡಿದವನು. ಯಾದಗಿರಿ ಸಿಇಓ ಗರೀಮಾ ಪನ್ವಾರ್ ಅವರು ಮುಖ್ಯ ಶಿಕ್ಷಕನನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಕ ಹಣಮೇಗೌಡ ಹತ್ತನೇ ತರಗತಿ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿರನ್ನು ಕಚೇರಿ ಕೋಣೆಗೆ ಕರೆಸಿಕೊಂಡು ಅವರ ಜತೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದ್ದು, ಆತನ ವರ್ತನೆಯಿಂದ ಬೇಸತ್ತ ಮಕ್ಕಳು ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು.
ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡು ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಪೋಷಕರ ದೂರಿನನ್ವಯ ಅಧಿಕಾರಿಗಳು, ಮಕ್ಕಳು ಹಾಗೂ ಪೋಷಕರ ಹೇಳಿಕೆಯನ್ನು ದಾಖಲಿಸಿಕೊಂಡರು. ಅವರ ಹೇಳಿಕೆಗಳನ್ನು ಆಧರಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದರು. ಇದರ ಆಧಾರದ ಮೇಲೆ ಸಿಇಓ ಗರೀಮಾ ಪನ್ವಾರ್ ಅವರು ಹಣಮೇ ಗೌಡ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Kidnapping Case : ಬಸ್‌ನಲ್ಲಿ ಅಪರಿಚಿತರ ಕೈಗೆ ಕೊಟ್ಟ ಮಗು ಮಿಸ್ಸಿಂಗ್; ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಪೊಲೀಸರು
ಸಿಇಒ ಹೊರಡಿಸಿದ ಆದೇಶದಲ್ಲಿ ಏನಿದೆ?
ಯಾದಗಿರಿ ಜಿಲ್ಲೆಯ ಅನಪೂರ ತಾಲೂಕಿನ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಹಣಮಗೌಡ ಇವರು ಶಾಲೆಯ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆಂದು ದೂರು ಬಂದ ಹಿನ್ನೆಲೆಯಲ್ಲಿ ಸದರಿ ಶಾಲೆಗೆ ತನಿಖಾ ತಂಡ ರಚನೆ ಮಾಡಲಾಗಿತ್ತು. ತನಿಖಾ ತಂಡವು ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿ ಹಾಗೂ ವಿದ್ಯಾರ್ಥಿಗಳ ಹೇಳಿಕೆಗಳನ್ನು ಪರೀಶೀಲಿಸಲಾಗಿ ಸದರಿ ಮುಖ್ಯಗುರುಗಳು ಶಾಲಾ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ವರದಿಯಲ್ಲಿ ತಿಳಿಸಿರುತ್ತಾರೆ. ತನಿಖಾ ತಂಡದ ವರದಿ ಹಾಗೂ ದಾಖೆಗಳನ್ನು ಪರಿಶೀಲಿಸಲಾಗಿ ಹಣಮಗೌಡ ಅವರು ಅನುಚಿತವಾಗಿ ವರ್ತಿಸಿರುವುದರಿಂದ ಸದರಿ ಮುಖ್ಯಗುರುಗಳ ಮೇಲೆ ಶಿಸ್ತು ಕ್ರಮಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾದಗಿರಿರವರ ವರದಿ ಸಲ್ಲಿಸಿರುತ್ತಾರೆ.
ಉಲ್ಲೇಖ(02)ರಂತೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿಯನ್ನು ಪರಿಶೀಲಿಸಲಾಗಿ ಹಣಮೆಗೌಡ ಅವರು ಶಾಲೆಯ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವರ ಹಿನ್ನೆಲೆಯಲ್ಲಿ ಸದರಿ ಮುಖ್ಯಗುರುಗಳ ಮೇಲೆ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಈ ಕೇಳಗಿನಂತೆ ಆದೇಶ ಹೊರಡಿಸಲಾಗಿದೆ.
ಹಣಮೇಗೌಡ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ನಿಯಮ 10 (ಡಿ) ರನ್ವಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಿದ್ದೇನೆ, ಸದರಿಯವರು ಕ.ನಾ.ಸೇ.ವಿ.98 ರಂತ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಮತ್ತು ಸಕ್ಷಮ ಪ್ರಾಧಿಕಾರಿಯ ಲಿಖಿತ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ- ಎಂದು ಆದೇಶದಲ್ಲಿ ತಿಳಿಸಲಾಗಿದೆ.