Site icon Vistara News

Yadgir News: ಅಪಘಾತದಲ್ಲಿ ಯಾದಗಿರಿ ಬಿಜೆಪಿ ಮುಖಂಡ ಸಾವು; ಬಿ.ವೈ.ವಿಜಯೇಂದ್ರ ಸಂತಾಪ

Neelakantaraya Elheri

ಯಾದಗಿರಿ: ಬೈಕ್ ಹಾಗೂ ಕ್ರೂಷರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಬಿಜೆಪಿ ಮುಖಂಡ ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ (Yadgir News) ಅರಕೇರಾ (ಕೆ) ಗ್ರಾಮದ ಸಮೀಪದ ಯಾದಗಿರಿ- ಹೈದ್ರಾಬಾದ್ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಯಾದಗಿರಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನೀಲಕಂಠರಾಯ ಯಲ್ಹೇರಿ (48) ಮೃತರು. ಇವರು ಬೈಕ್ ಮೇಲೆ ತೆರಳುತ್ತಿದ್ದಾಗ ಕ್ರೂಷರ್ ಡಿಕ್ಕಿಯಾಗಿದ್ದರಿಂದ ದುರಂತ ಸಂಭವಿಸಿದೆ. ಹದಗೆಟ್ಟ ರಾಜ್ಯ ಹೆದ್ದಾರಿಯಲ್ಲಿ ಗುಂಡಿ ತಪ್ಪಿಸಲು ಹೋದಾಗ ಬೈಕ್ ಹಾಗೂ ಕ್ರೂಷರ್ ನಡುವೆ ಅಪಘಾತವಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ

BY Vijayendra

ಯಾದಗಿರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನೀಲಕಂಠರಾಯ ಯಲ್ಹೇರಿ ಅವರ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಂತಾಪ ಸೂಚಿಸಿದ್ದಾರೆ. ಗುರುಮಠಕಲ್ ತಾಲೂಕಿನ ಯಲ್ಹೇರಿ ಗ್ರಾಮದ ನಿವಾಸಿ, ಬಿಜೆಪಿ ಯುವ ಮುಖಂಡ ನೀಲಕಂಠರಾಯ ಯಲ್ಹೇರಿ ಅವರು ಅಪಘಾತದಲ್ಲಿ ನಿಧನ ಹೊಂದಿದ ವಿಷಯ ತಿಳಿದು ತುಂಬಾ ಬೇಸರವಾಗಿದೆ.

ಅದು ಬಿಜೆಪಿಯ ಆರಂಭಿಕ ಕಾಲಘಟ್ಟ. ಕಾಂಗ್ರೆಸ್ ಮತ್ತು ಜನತಾ ಪಕ್ಷಗಳು ಜಿಲ್ಲೆಯಲ್ಲಿ ಉತ್ತುಂಗದಲ್ಲಿದ್ದ ಸಂದರ್ಭ. ಬಿಜೆಪಿ ಧ್ವಜ ಹಿಡಿಯಲು ಕಾರ್ಯಕರ್ತರು ಇರದಿದ್ದಾಗ ಯಲ್ಹೇರಿ ಅವರು, ಹಳ್ಳಿಹಳ್ಳಿ ಸುತ್ತಾಡಿ ಜಾಜಾದ ಕಲ್ಲಿನಿಂದ ಪಕ್ಷದ ಚಿಹ್ನೆ ಕಮಲದ ಚಿತ್ರ ಬಿಡಿಸಿ, ಸಂಘಟನೆ ಮಾಡಿದವರು. 2006ರಲ್ಲಿ ಅಂದಿನ ಶಾಸಕರಾಗಿದ್ದ ಡಾ.ವೀರಬಸವಂತರಡ್ಡಿ ಮುನ್ನಾಳರನ್ನು ಬಿಜೆಪಿಗೆ ಸೇರಿಸುವಲ್ಲಿ ನೀಲಕಂಠರಾಯ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಹಂತಹಂತವಾಗಿ ಪದಾಧಿಕಾರಿ ಹುದ್ದೆ ಪಡೆದಿದ್ದಲ್ಲದೆ, ಸಾಕಷ್ಟು ಕಾರ್ಯಕರ್ತರನ್ನು ಗುರುತಿಸಿದವರು. ಪಕ್ಷದ ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಜಿಲ್ಲಾ ಉಪಾಧ್ಯಕ್ಷರಾಗಿದ್ದರು ಎಂದು ಸ್ಮರಿಸಿದ್ದಾರೆ.

ಯಲ್ಹೇರಿಯವರು ಕೇವಲ ಬಿಜೆಪಿ ಮುಖಂಡರಾಗಿರದೆ, ಯಾದಗಿರಿ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳಾಗಿದ್ದರು. ಹಿಂದು ಧರ್ಮ, ರಾಷ್ಟ್ರ ಹಾಗೂ ಗ್ರಾಮೀಣ ಭಾಗದಲ್ಲಿನ ಶಿಕ್ಷಣದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರು. ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂರ ಖಾಸಾ ಶಿಷ್ಯ ಬಳಗದಲ್ಲಿ ಒಬ್ಬರಾಗಿ, ಕಲಬುರಗಿ ಕಂಪು, ವಿಕಾಸ ಅಕಾಡೆಮಿ ಸಂಘಟನೆ ಜಿಲ್ಲಾ ಜವಾಬ್ದಾರಿ ಹೊತ್ತುಕೊಂಡು ಸಮರ್ಥವಾಗಿ ಮುನ್ನಡೆಸಿದ್ದರು ಎಂದು ವಿವರಿಸಿದ್ದಾರೆ.

ಸರ್ಕಾರವು ಹಿಂದೆ ಸ್ಥಾಪಿಸಿದ್ದ ಕಲ್ಯಾಣ ಕರ್ನಾಟಕ ಮಾನವ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಾಮನಿರ್ದೇಶಿತ ಸದಸ್ಯರಾಗಿ ಮಹಿಳೆಯರಿಗೆ, ವಿಶೇಷಚೇತನರಿಗೆ ಸರ್ಕಾರದಿಂದ ಸಾಕಷ್ಟು ನೆರವು ಕೊಡಿಸಿದ್ದರು. ಈ ಹಿಂದೆ ಇನ್ಫೋಸಿಸ್ ಸಹಯೋಗದಡಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯಿಂದ ಗ್ರಾಮೀಣ ಭಾಗದಲ್ಲಿ ಶೌಚಗೃಹ ನಿರ್ಮಾಣ ಯೋಜನೆಯಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದ ಯಲ್ಹೇರಿ, ಅಂದಿನ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್‌ರಿಂದ ಭೇಷ್ ಎನಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸದಾ ಹಿಂದುತ್ವ, ದೇಶದ ಬಗ್ಗೆ ನೀಲಕಂಠರಾಯ ಯಲ್ಹೇರಿ ಮನ ತುಡಿಯುತ್ತಿತ್ತು. ಗುರುರಾಜ ಕರಜಗಿ, ವಾಗಿ ಗೋವಿಂದಚಾರ್ಯರಂಥ ಮೇಧಾವಿಗಳ ಒಡನಾಟವಿಟ್ಟುಕೊಂಡಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Skeletons found : ಐವರ ಅಸ್ಥಿಪಂಜರ ಪತ್ತೆ ಕೇಸ್‌; ಡೇಟ್ ಇಲ್ಲದ ಡೆತ್‌ನೋಟ್ ಪತ್ತೆ!

ಮೃತರ ಕುಟುಂಬ, ಬಂಧು ಮಿತ್ರರು ಮತ್ತು ಅಭಿಮಾನಿಗಳಿಗೆ ದೇವರು ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ; ಅಲ್ಲದೆ ಅವರಿಗೆ ಚಿರಶಾಂತಿಯನ್ನು ಕರುಣಿಸಲಿ ಎಂದು ಬಿ.ವೈ.ವಿಜಯೇಂದ್ರ ಅವರು ಪ್ರಾರ್ಥಿಸಿದ್ದಾರೆ.

Exit mobile version