Site icon Vistara News

Yadgiri Bank Fraud | ಮತ್ತೊಂದು ʼಸಹಕಾರʼ ಅವಾಂತರ; ಕೋಟಿ ಕೋಟಿ ಹಣ ಎತ್ತಿಕೊಂಡು ಓಡಿದ ಸಿಇಒ!

ಯಾದಗಿರಿ‌ ವೀರಭದ್ರೇಶ್ವರ ಸಹಕಾರಿ ಬ್ಯಾಂಕ್

ಯಾದಗಿರಿ: ಶಹಾಪುರ ನಗರದಲ್ಲೊಂದು ಸಹಕಾರ ಬ್ಯಾಂಕ್‌ ಕಳೆದ ೧೪ ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿತ್ತು. ಜನರಲ್ಲೂ ವಿಶ್ವಾಸ ಮೂಡಿತ್ತು. ಜತೆಗೆ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಬಡ್ಡಿ ಉತ್ತಮವಾಗಿ ಸಿಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜನ ಕಷ್ಟಪಟ್ಟು ದುಡಿದಿದ್ದ ಹಣವನ್ನು ಇಲ್ಲಿ ಠೇವಣಿ ಮಾಡುತ್ತಿದ್ದರು. ಆದರೆ, ಕೋಟ್ಯಂತರ ರೂಪಾಯಿ ಸಂಗ್ರವಾಗುತ್ತಿದ್ದಂತೆ ಅದರ ಸಿಇಒ ಬೀಗ ಹಾಕಿ (Yadgiri Bank Fraud) ಓಡಿಹೋಗಿದ್ದಾನೆ. ಠೇವಣಿ ಇಟ್ಟ ನಾಗರಿಕರು ಕಂಗಾಲಾಗಿದ್ದಾರೆ.

ಸಹಕಾರಿ ಬ್ಯಾಂಕ್‌ಗಳು ಹೀಗೇ ದೋಖಾ ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಆಗಾಗ ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರಿನಲ್ಲಿ ಗುರು ರಾಘವೇಂದ್ರ ಕೋಆಪರೇಟಿವ್‌ ಬ್ಯಾಂಕ್‌, ವಶಿಷ್ಠ ಕೋಆಪರೇಟಿವ್‌ ಬ್ಯಾಂಕ್‌, ಸಿರಿ ವೈಭವ ಪತ್ತಿನ ಸಹಕಾರಿ ಬ್ಯಾಂಕ್‌ ಹೀಗೆ ಹಲವಾರು ಬ್ಯಾಂಕ್‌ಗಳಲ್ಲಿ ಅವ್ಯವಹಾರ ಸಹಿತ ಅಕ್ರಮಗಳಿಂದ ಕೋಟ್ಯಂತರ ರೂಪಾಯಿ ವಂಚನೆಯ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಈಗ ಅವುಗಳ ಸಾಲಿಗೆ ಶಹಾಪುರದ ಶ್ರೀ ರೇವಣಸಿದ್ದೇಶ್ವರ ವಿವಿಧೋದ್ದೇಶ ಸಹಕಾರ ಸಂಘ ನಿ. ಬ್ಯಾಂಕ್ ಸೇರಿಕೊಂಡಿದೆ.

ಇದನ್ನೂ ಓದಿ | ಡಿಸಿಸಿ ಬ್ಯಾಂಕ್‌ ಅಕ್ರಮಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ: ಸಹಕಾರ ಸಚಿವ ಎಸ್.ಟಿ‌. ಸೋಮಶೇಖರ್

ಆರೋಪಿ ಸಿಇಒ ಸೋಮನಾಥ

ಕಳೆದ ೧೪ ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದ ಈ ಬ್ಯಾಂಕ್‌ ಸುತ್ತಮುತ್ತಲಲ್ಲಿ ಒಳ್ಳೆಯ ಹೆಸರನ್ನು ಗಳಿಸಿತ್ತು. ಅಲ್ಲದೆ, ಅಧಿಕ ಬಡ್ಡಿಯನ್ನು ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನವರು ತಮ್ಮ ಎಲ್ಲ ಉಳಿತಾಯವನ್ನೂ ಸಹ ಈ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರು. ಇನ್ನು ಹಲವಾರು ಜನ ಪಿಗ್ಮಿ ಹಣವನ್ನು ಕಟ್ಟುತ್ತಿದ್ದರು. ಆದರೆ, ಸಹಕಾರಿ ಸಂಘದ ಸಿಇಒ ಸೋಮನಾಥ ಎಂಬಾತ ಎಲ್ಲ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ಜನರಿಗೆ ಮೋಸವಾಗಿದೆ ಎಂದು ಹೇಳಲಾಗಿದೆ.

ಕಳೆದ ತಿಂಗಳಿನಿಂದ ಬಾಗಿಲು

ಕಳೆದ ಜೂನ್‌ವರೆಗೆ ಎಲ್ಲವೂ ಸರಿಯಾಗಿತ್ತು ಎಂದು ಹೇಳಲಾಗಿದ್ದು, ಜುಲೈ ವೇಳೆಗೆ ಒಂದು ದಿನ ಸಹಕಾರಿ ಬ್ಯಾಂಕ್‌ಗೆ ಬೀಗ ಹಾಕಲಾಗಿತ್ತು. ಯಾವುದೋ ಕಾರಣಕ್ಕೆ ಬೀಗ ಹಾಕಲಾಗಿದೆ ಎಂದು ಜನ ತಿಳಿದಿದ್ದರು. ಆದರೆ, ಎರಡು ದಿನ, ಮೂರು ದಿನ, ನಾಲ್ಕು ದಿನ ಕಳೆದರೂ ತೆರೆಯದಿದ್ದರಿಂದ ಜನರಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಹುಡುಕಿ ಹೋಗಿ ವಿಚಾರಣೆ ಮಾಡಿದಾಗ ಅಸಲಿ ವಿಷಯ ತಿಳಿದುಬಂದಿದೆ.

ಸಾರ್ವಜನಿಕರು ಕಟ್ಟಿದ್ದ ಸುಮಾರು 3 ಕೋಟಿ ರೂಪಾಯಿಯಷ್ಟು ಹಣವನ್ನು ಸಂಘದ ಸಿಇಒ ಸೋಮನಾಥ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕ್‌ ಆಡಳಿತ ಮಂಡಳಿ ತಲೆ ಮೇಲೆ ಕೈಹೊತ್ತು ಕುಳಿತಿದ್ದು, ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಈ ಬಗ್ಗೆ ದುಡ್ಡು ಕಳೆದುಕೊಂಡವರು ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಮೊಬೈಲ್‌ ಫೋನ್‌ಗಳನ್ನು ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ಇದೀಗ ಹಣ ಕಳೆದುಕೊಂಡವರು ನ್ಯಾಯಕ್ಕಾಗಿ ಅಲೆದಾಡುತ್ತಿದ್ದು, ದಿಕ್ಕು ತೋಚದಂತಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ಈ ಬಗ್ಗೆ ಸಹಕಾರ ಸಂಘದ ಸಹಾಯಕ ನಿಬಂಧಕಿ ಸೀಮಾ ಪ್ರತಿಕ್ರಿಯೆ ನೀಡಿದ್ದು, ʻʻತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ʼʼಎಂದು ಹೇಳಿದ್ದಾರೆ.

ಇದನ್ನೂ ಓದಿ | ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಹಗರಣದ ತನಿಖೆ ಚುರುಕುಗೊಳಿಸಲು ಒತ್ತಾಯ

Exit mobile version