Site icon Vistara News

Shadow CM : ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಶ್ಯಾಡೊ ಸಿಎಂ; ಸಿಕ್ಕಿತು ದಾಖಲೆ!

Yathindra Siddaramaiah Shadow CM

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ (Congress Guarantee Shceme) ಕಾಂಗ್ರೆಸ್‌ ಸರ್ಕಾರ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2 ತಿಂಗಳು ಸಹ ಕಳೆದಿದೆ. ಈ ನಡುವೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಶ್ಯಾಡೊ ಸಿಎಂ (Shadow CM) ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬ ಗುರುತರ ಆರೋಪ ಎದುರಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಇದನ್ನು ಬಹಿರಂಗವಾಗಿಯೇ ಕುಟುಕಿದ್ದರು. ಅದಾದ ಬಳಿಕ ಬಿಜೆಪಿ ಸಹ “ಶ್ಯಾಡೊ ಸಿಎಂ” ಪೋಸ್ಟರ್‌ ಅಭಿಯಾನವನ್ನು (BJP poster campaign) ನಡೆಸಿತ್ತು. ಆದರೆ, ಇದಕ್ಕೆ ಕಾಂಗ್ರೆಸ್‌ ಸೊಪ್ಪು ಹಾಕಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಹಿತ ಹಲವು ನಾಯಕರು ಈ ಆರೋಪವನ್ನು ತಿರಸ್ಕರಿಸಿದ್ದರು. ಆದರೆ, ಈಗ ಶ್ಯಾಡೊ ಸಿಎಂ ಆರೋಪಕ್ಕೆ ಪುಷ್ಟಿ ನೀಡುವಂತಹ ಫೇಸ್‌ಬುಕ್ ಪೋಸ್ಟ್ (Facebook Post) ಎಲ್ಲ ಕಡೆ ವೈರಲ್‌ ಆಗಿದೆ.

ಸಿಎಂ ಮನೆಯಲ್ಲಿ ಶಿಫಾರಸು ಪತ್ರಗಳಿಗೆ ಯತೀಂದ್ರ ಸಹಿ ಹಾಕುತ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಸಾಮಾಜಿಕ ಕಾರ್ಯಕರ್ತ ಭೈರಪ್ಪ ಹರೀಶ್ ಕುಮಾರ್ (Social activist Bhyrappa Harish Kumar) ಎಂಬುವವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವುದು ಈ ಅನುಮಾನಕ್ಕೆ ಇಂಬು ಕೊಡುತ್ತಿದೆ.

ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಸಾಮಾಜಿಕ ಕಾರ್ಯಕರ್ತ ಭೈರಪ್ಪ ಹರೀಶ್ ಕುಮಾರ್.

ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 380 ರೂ. ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ

ಭೈರಪ್ಪ ಹರೀಶ್ ಕುಮಾರ್ ಅವರು ಯತೀಂದ್ರ ಅವರನ್ನು ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಯತೀಂದ್ರ ಅವರೊಂದಿಗೆ ಸಾಕಷ್ಟು ಚರ್ಚೆಯನ್ನೂ ನಡೆಸಿದ್ದಾರೆ. ಇದನ್ನು ಫೋಟೊ ಸಮೇತ ಫೇಸ್‌ಬುಕ್‌ನಲ್ಲಿ‌ ಹರೀಶ್ ಹಂಚಿಕೊಂಡಿದ್ದಾರೆ.‌ ಜತೆಗೆ ಯತೀಂದ್ರ ಅವರ ಕಾರ್ಯವೈಖರಿ ಬಗ್ಗೆ ಹಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಅದೇ ಈಗ ಶ್ಯಾಡೋ ಸಿಎಂ ಆರೋಪಕ್ಕೆ ಪುಷ್ಟಿ ನೀಡುವಂತಹ ಸಾಕ್ಷಿಯಾಗಿದೆ.

ಸಾಮಾಜಿಕ ಕಾರ್ಯಕರ್ತ ಭೈರಪ್ಪ ಹರೀಶ್ ಕುಮಾರ್ ಅವರ ಫೇಸ್‌ಬುಕ್‌ ಪೋಸ್ಟ್‌

ಶಿಫಾರಸು ಪತ್ರಗಳಿಗೆ ಯತೀಂದ್ರ ಸಹಿ?

ಯತೀಂದ್ರ ಸಿದ್ದರಾಮಯ್ಯ ಅವರ ಬಗ್ಗೆ ‌ಭೈರಪ್ಪ ಹರೀಶ್‌ ಕುಮಾರ್ ಅವರು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಳ್ಳುತ್ತಾ, ಶಿಫಾರಸು ಪತ್ರಗಳಿಗೆ (Recommendation Letter) ಯತೀಂದ್ರ ಸಹಿ ಹಾಕುತ್ತಿದ್ದರು ಎಂದು ಹೇಳಿದ್ದಾರೆ. ಸಿಎಂ ಮನೆಯಲ್ಲಿ (Chief Minister House) ಯತೀಂದ್ರ ಹೇಗೆ ಸಹಿ ಮಾಡುತ್ತಾರೆ ಎಂಬ ಅನುಮಾನ ಈಗ ಮೂಡಿದೆ.

ಬಿಜೆಪಿಯ ಶ್ಯಾಡೊ ಸಿಎಂ ಪೋಸ್ಟರ್‌ ಅಭಿಯಾನ

ಇತ್ತೀಚೆಗೆ ಟ್ರಾನ್ಸ್‌ಫರ್ ವಿಚಾರದಲ್ಲಿ ಯತೀಂದ್ರ ವಿರುದ್ಧ ಆರೋಪ ಕೇಳಿಬಂದಿತ್ತು. ವರ್ಗಾವಣೆ ಸೇರಿ ಅನೇಕ ವ್ಯವಹಾರವನ್ನು ಯತೀಂದ್ರ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಎದುರಾಗಿತ್ತು. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಸಹ ಈ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ರಾಜ್ಯದಲ್ಲಿ ಜಿಎಸ್‌ಟಿ (GST) ರೀತಿ ವೈಎಸ್‌ಟಿ (YST) (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್‌) ಇದೆ ಎಂದು ಹೇಳಿದ್ದರು. ಆಗ ಬಿಜೆಪಿ ಸಹಿತ ಶ್ಯಾಡೊ ಸಿಎಂ ಎಂದು ಆರೋಪ ಮಾಡಿತ್ತು. ಈ ಎಲ್ಲವಕ್ಕೂ ಈಗ ಹರೀಶ್ ಅವರ ಫೇಸ್‌ಬುಕ್ ಪೋಸ್ಟ್ ಪುಷ್ಟಿ ನೀಡಿದೆ.

ಹರೀಶ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲೇನಿದೆ?

“ಚುನಾವಣೆ ಫಲಿತಾಂಶದ ನಂತರ ಭೇಟಿಯಾಗಲು ಆಗಿರಲಿಲ್ಲ. ಕೇವಲ ದೂರವಾಣಿ ಮುಖಾಂತರವೇ ಕುಶಲೋಪರಿ ವಿಚಾರಿಸುವ ಹಾಗೆ ಆಗಿಬಿಟ್ಟಿತ್ತು. ಅದರಲ್ಲೂ ಇತ್ತೀಚೆಗೆ ಒಂದು ತಿಂಗಳಿನಿಂದ ದೂರವಾಣಿಗೂ ಸಿಗದಷ್ಟು ಬ್ಯುಸಿ ಆಗಿಬಿಟ್ಟಿದ್ದರು. ದಿನನಿತ್ಯ ಕ್ಷೇತ್ರದ ಜನರ ಕೆಲಸ ಕಾರ್ಯಗಳ ಒತ್ತಡ ಅವರನ್ನು ಹೈರಾಣು ಮಾಡಿರುವುದು ನಮ್ಮ ಗಮನಕ್ಕೆ ಬಂದಿತ್ತು. ಸದ್ಯ ಈ ರೀತಿಯ ಬಿಡುವಿಲ್ಲದ ಸಮಯದಲ್ಲೂ ನನ್ನನ್ನು ನೆನೆಸಿಕೊಂಡು ಭೇಟಿ ಮಾಡೋಣ ಎಂದು ಯತೀಂದ್ರ ಅವರೇ ಆಹ್ವಾನ ಕೊಟ್ಟಿದ್ದರು.

ಅವರ ಆಹ್ವಾನದ ಮೇರೆಗೆ ನಿನ್ನೆ ಸಂಜೆ 5:00 ಗಂಟೆಗೆ ಮುಖ್ಯಮಂತ್ರಿಗಳ ಮನೆಗೆ ತೆರಳಿದೆ. ಅಲ್ಲಿ ನೋಡಿದರೆ ಜನಸಾಗರ, ಸಾಲುಗಟ್ಟಿ ನಿಂತಿದ್ದ ಆ ಜನರನ್ನು ನೋಡಿ ಇಂದು ಕೂಡ ಇವರು ಸಿಗುವುದು ಬಹುತೇಕ ಅನುಮಾನ ಎಂದು ಮನಸ್ಸಿನಲ್ಲಿ ಅಂದುಕೊಂಡು ಮನೆಗೆ ತೆರಳಿ ಬರೋಬ್ಬರಿ ಮೂರು ಗಂಟೆ ಅವರ ವಿಶ್ರಾಂತಿ ಕೋಣೆಯಲ್ಲಿ ಕುಳಿತಿದ್ದೆ. ಆ ಜನರ ಕಷ್ಟಗಳನ್ನು ಆಲಿಸುತ್ತಾ ಒಬ್ಬೊಬ್ಬರ ಸಮಸ್ಯೆಗಳಿಗೆ ಖುದ್ದಾಗಿ ಅಧಿಕಾರಿಗಳಿಗೆ ಕರೆ ಮಾಡುತ್ತಾ ಜನ ತಂದಿದ್ದ ಸಮಸ್ಯೆಗಳ ಲೆಟರ್‌ಗಳಿಗೆ “ಶಿಫಾರಸು” ಸಹಿ ಹಾಕುತ್ತಾ ,ಬಡ ಜನರಿಗೆ ಸ್ಪಂದಿಸುತ್ತಿದ್ದ ರೀತಿ ನೋಡಿ ಖುಷಿಯಾಯಿತು ಹಾಗೂ ಇವರ ತಾಳ್ಮೆಗೆ ಅವರೇ ಸರಿಸಾಟಿಯೇನೋ ಅನ್ನಿಸಿಬಿಡ್ತು.

ಕೊನೆಯಲ್ಲಿ ಎಲ್ಲರನ್ನು ಮಾತನಾಡಿಸಿ ದಿಢೀರನೆ ಮೈಸೂರಿಗೆ ಹೊರಟು ನಿಂತು ಬಿಟ್ಟರು. ಅಷ್ಟೊತ್ತು ಕಾದು ನಾನು ಕೂಡ ಅವರ ಪರಿಸ್ಥಿತಿ ಅರ್ಥ ಮಾಡಿಕೊಂಡು ಪುನಃ ಅವರೇ ಬಿಡುವಿದ್ದಾಗ ಕರೆಯುತ್ತಾರೆ ಭೇಟಿ ಮಾಡೋಣ ಎಂದು ನಾನು ಕೂಡ ಹೊರಟೆ. ಬಹುತೇಕ ಗೇಟಿನ ಬಳಿ ಬಂದಿದ್ದೆ. ಅಷ್ಟರಲ್ಲಿ ಕಾರು ಹತ್ತಿ ಹೊರಟು ಬಂದಿದ್ದ ಯತೀಂದ್ರ ರವರು ಬಲಭಾಗದಲ್ಲಿ ನನ್ನನ್ನು ಕಂಡು ತಕ್ಷಣ ಕಾರನ್ನು ನಿಲ್ಲಿಸಿ ಖುದ್ದು ಕೆಳಕ್ಕೆ ಇಳಿದು ಬಂದು ಕ್ಷಮಿಸಿ ಹರೀಶ್ ಅವರೇ ಮರೆತೇ ಬಿಟ್ಟಿದ್ದೆ ಎಂದು ಮುಗುಳು ನಗುತ್ತಾ ತುಂಬಾ ಹೊತ್ತು ಕಾಯಿಸಿ ಬಿಟ್ಟೆ ನಿಮ್ಮನ್ನು ಎನ್ನುತ್ತಾ ಬನ್ನಿ ಎಂದು ಮತ್ತೆ ಮನೆ ಒಳಗಡೆಗೆ ಕರೆದುಕೊಂಡು ಹೋಗಿ ಅಷ್ಟು ಬಿಡುವಿಲ್ಲದ ಒತ್ತಡದಲ್ಲೂ ಕೂಡ ನಮಗಾಗಿ ಅರ್ಧ ಗಂಟೆ ಸಮಯ ಕೊಟ್ಟರು. ನಾವಲ್ಲಿ ಒಂದಷ್ಟು ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದವು.

ಇದನ್ನೂ ಓದಿ: Weather report : ಉತ್ತರ ಕರ್ನಾಟಕದಲ್ಲಿ ಬಿರು ಮಳೆ; ಕರಾವಳಿ, ಮಲೆನಾಡಲ್ಲೂ ಅಬ್ಬರ!

ನಾನು ಒಬ್ಬ ಸಾಮಾನ್ಯ ಕನ್ನಡಪರ ಹೋರಾಟಗಾರ, ಕನ್ನಡಪರ ಹೋರಾಟಗಾರರನ್ನು ಆತ್ಮೀಯವಾಗಿ ಗೌರವಿಸಿದ್ದ ರೀತಿ ನೋಡಿ ಖುಷಿಯಾಯಿತು. ಯತೀಂದ್ರ ಅವರ ಸರಳತೆ ನಮ್ಮ ಮೇಲೆ ಇಟ್ಟಿರುವ ಗೌರವ ನೋಡಿ ಹೆಮ್ಮೆ ಅನಿಸಿತು. ನಿಮ್ಮ ಸಮಾಜಮುಖಿ ಕಾರ್ಯ ಹೀಗೆಯೇ ಮುಂದುವರಿಯಲಿ ಸರ್, ಶುಭವಾಗಲಿ ನಿಮ್ಮ ಪ್ರತಿ ಸಾಮಾಜಿಕ ಕಳಕಳಿಯ ಹೆಜ್ಜೆ ಜತೆ ನಾವಿರುತ್ತೇವೆ” ಎಂದು ಹರೀಶ್‌ ಬರೆದುಕೊಂಡಿದ್ದಾರೆ.

Exit mobile version