Site icon Vistara News

Yathindra Siddaramaiah: ಯತೀಂದ್ರ ಮಾತಾಡಿರೋ ವಿವೇಕಾನಂದ ಇವರೇನಾ? ವರ್ಗಾವಣೆ ಲಿಸ್ಟ್‌ನಲ್ಲಿ ನಾಲ್ಕನೇ ಹೆಸ್ರು!

yathindra siddaramiah

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮತ್ತೆ 71 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ (transfer) ಮಾಡಲಾಗಿದೆ. ಇದರಲ್ಲಿ ವಿವೇಕಾನಂದ ಎಂಬವರನ್ನು ಮೈಸೂರು ನಗರದ ವಿವಿ ಪುರಂ ಪೊಲೀಸ್‌ ಠಾಣೆಗೆ ವರ್ಗಾಯಿಸಿ ಆದೇಶ ನೀಡಲಾಗಿದೆ.

ಇತ್ತೀಚೆಗಷ್ಟೆ ಮಾಜಿ ಶಾಸಕ, ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಮ್ಮ ತಂದೆ ಜತೆಗೆ ಮಾತನಾಡಿರುವ ವೀಡಿಯೋ ವೈರಲ್ ಆಗಿತ್ತು. ಅದರಲ್ಲಿ ವಿವೇಕಾನಂದ ಎಂಬ ಹೆಸರು ಪ್ರಸ್ತಾಪವಾಗಿತ್ತು. ʼʼಯಾವ ವಿವೇಕಾನಂದ?ʼʼ ಎಂದು ಯತೀಂದ್ರ, ಮಹದೇವ ಜೊತೆಗೆ ವಿಚಾರಿಸಿದ್ದರು. ಆ ವಿವೇಕಾನಂದ ಇದೇನಾ ಎಂಬ ಚರ್ಚೆಗೆ ಆಸ್ಪದವಾಗಿದೆ.

ವೀಡಿಯೋ ವೈರಲ್ ಬೆನ್ನಲ್ಲೇ ಸಾಕಷ್ಟು ಚರ್ಚೆ ಕೂಡ ಆಗಿತ್ತು. ಅಧಿಕಾರಿಗಳ ವರ್ಗಾವಣೆ ಹಿಂದೆ ಯತೀಂದ್ರ ಕೈವಾಡ ಇದೆ ಎಂದು ವಿರೋಧ ಪಕ್ಷದವರು ಆರೋಪ ಮಾಡಿದ್ದರು. ವಿಡಿಯೋ ಸಂಭಾಷಣೆಯಲ್ಲಿ ವಿವೇಕಾನಂದ ಎಂಬ ಹೆಸರನ್ನು ಯತೀಂದ್ರ (yathindra siddaramiah) ಪ್ರಸ್ತಾಪ ಮಾಡಿದ್ದಕ್ಕೂ ಇದೀಗ ಅದೇ ವಿವೇಕಾನಂದ ಅನ್ನೋ ಹೆಸರಿನ ಇನ್ಸ್ಪೆಕ್ಟರ್ ವರ್ಗಾವಣೆಯಾದದ್ದಕ್ಕೂ ತಾಳೆಯಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ವರ್ಗಾವಣೆ ದಂಧೆ ಆರೋಪ, ಪಾರದರ್ಶಕ ತನಿಖೆ ಅಗತ್ಯ

ರಾಜ್ಯ ಗುಪ್ತಚರ ಇಲಾಖೆಯ ಆದೇಶದಲ್ಲಿದ್ದ ವಿವೇಕಾನಂದ ಮೈಸೂರಿಗೆ ವರ್ಗಾವಣೆಯಾಗಿದ್ದಾರೆ. ಜತೆಗೆ, ಮೈಸೂರು ಜಿಲ್ಲೆಯಲ್ಲಿ ನಾಲ್ಕು ಮಂದಿ ಇನ್ಸ್‌ಪೆಕ್ಟರ್‌ಗಳ ವರ್ಗವಾಗಿದೆ. ಅದರಲ್ಲಿ ವಿವೇಕಾನಂದ ಅವರೂ ಒಬ್ಬರು. ʼʼನಾನು ಹೇಳಿರೋ ನಾಲ್ಕು ಮಾತ್ರ ಮಾಡಿʼʼ ಎಂದು ಮಹದೇವ್‌ಗೆ ಯತೀಂದ್ರ ಫೋನ್‌ನಲ್ಲಿ ಆದೇಶಿಸಿದ್ದರು. ಇದೀಗ ನಾಲ್ಕು ಮಂದಿಯ ವರ್ಗವಾಗಿರುವುದು, ಈ ಮಾತಿಗೆ ಇನ್ನಷ್ಟು ಪುಷ್ಟಿ ತುಂಬುವಂತಿದೆ.

ಯತೀಂದ್ರ ಮಾತನಾಡಿರೋ ವಿವೇಕಾನಂದ ಇವರೇನಾ, ಆ ʼನಾಲ್ಕುʼ ಈ ನಾಲ್ಕೇನಾ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದ್ದು, ಸರ್ಕಾರದ ವಿರುದ್ಧದ ಆರೋಪಪಟ್ಟಿಯನ್ನು ಇನ್ನಷ್ಟು ಬಿಗಿ ಮಾಡಲು ಪ್ರತಿಪಕ್ಷಗಳ ನಾಯಕರು ಮುಂದಾಗಿದ್ದಾರೆ.

ಇದನ್ನೂ ಓದಿ: DK Shivakumar : ಯತೀಂದ್ರ ನಮ್ಮ ಹುಡುಗ, ಆರೋಪ ಮಾಡಿ ನಾಯಕನಾಗಿ ಬೆಳೆಸಲಿ ಬಿಡಿ ಎಂದ ಡಿಕೆಶಿ

Exit mobile version