ಮೈಸೂರು: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆ (Karnataka Election 2023) ಕಣ ರಂಗೇರುತ್ತಿದೆ. ಹಲವು ಕ್ಷೇತ್ರಗಳು ಈ ಬಾರಿ ಕುತೂಹಲವನ್ನು ಹುಟ್ಟುಹಾಕುತ್ತಿವೆ. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಇದೇ ತಮ್ಮ ಕೊನೇ ಚುನಾವಣೆ ಎಂದು ಹೇಳಿಕೊಂಡಿದ್ದು, ಕ್ಷೇತ್ರ ಬದಲಾವಣೆಯನ್ನೂ ಮಾಡಿದ್ದಾರೆ. ತಮ್ಮ ಹಳೆ ಕ್ಷೇತ್ರ ವರುಣದಲ್ಲಿಯೇ ಸ್ಪರ್ಧೆಗೆ ಮುಂದಾಗಿದ್ದಾರೆ. ಆದರೆ, ಕ್ಷೇತ್ರದ ಸಂಪೂರ್ಣ ಪ್ರಚಾರದ ಜವಾಬ್ದಾರಿಯನ್ನು ಪುತ್ರ ಯತೀಂದ್ರ ಅವರ ಹೆಗಲಿಗೆ ಹಾಕಿದ್ದಾರೆ. ಇದೇ ಈಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರ ಟೆನ್ಶನ್‌ಗೆ ಕಾರಣವಾಗಿದೆ. ಸ್ವಲ್ಪ ಎಡವಟ್ಟಾದರೂ ಅಪ್ಪನ ರಾಜಕೀಯ ಜೀವನ ಅಂತ್ಯವಾಗಲಿದೆ. ಅದೂ ಸೋಲಿನ ಮೂಲಕ ಆದರೆ? ಎಂಬ ಭಯ ಅವರನ್ನು ಕಾಡುತ್ತಿದ್ದು, ಈ ಆತಂಕವನ್ನು ಅವರೇ ಸ್ವತಃ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವರುಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಯತೀಂದ್ರ ಸಿದ್ದರಾಮಯ್ಯ, ಅಪ್ಪನ ಪರವಾಗಿ ಭರ್ಜರಿ ಮತ ಬೇಟೆಯನ್ನು ಪ್ರಾರಂಭಿಸಿದ್ದಾರೆ. ಆದರೆ, ಅವರಿಗೆ ಚಾಮುಂಡೇಶ್ವರಿ ರೀತಿ ಸೋಲು ವರುಣದಲ್ಲೂ ಮರಕಳಿಸಿದರೆ ಎಂಬ ಭಯ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವ ವೇಳೆ, ಸಿದ್ದರಾಮಯ್ಯ ಅವರನ್ನು ಸೋಲಿಸಲು ಎಲ್ಲರೂ ಒಂದಾಗುತ್ತಾರೆ. ಮತದಾರರು ಅದಕ್ಕೆ ಅವಕಾಶ ಕೊಡಬಾರದು. ಬಹಳ ಎಚ್ಚರಿಕೆಯಿಂದ ಮತ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಯತೀಂದ್ರ ಹೇಳಿದ್ದೇನು?
ಸಿದ್ದರಾಮಯ್ಯ ಅವರು ಎಲ್ಲೇ ನಿಂತರೂ ಅವರನ್ನು ಸೋಲಿಸಲು ಎಲ್ಲರೂ ಒಂದಾಗುತ್ತಾರೆ. ಹಣ ಖರ್ಚು ಮಾಡಿ ಒಟ್ಟಾಗಿ ಸೇರಿ ಷಡ್ಯಂತ್ರ ರೂಪಿಸುತ್ತಾರೆ. ಸಿದ್ದರಾಮಯ್ಯ ಕೊನೇ ಚುನಾವಣೆ ಗೆದ್ದು ಗೌರವಯುತವಾಗಿ ನಿವೃತ್ತಿ ಪಡೆಯಬೇಕು. ಮತದಾರರೇ ಬಹಳ ಎಚ್ಚರಿಕೆಯಿಂದ ಮತ ನೀಡಿ ಎಂದು ಈ ವೇಳೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Karnataka Congress: ಎರಡನೇ ಪಟ್ಟಿಯಲ್ಲಿ ವೀರಶೈವ ಲಿಂಗಾಯತರಿಗೆ 33 ಟಿಕೆಟ್ ನೀಡಲು ಒತ್ತಾಯ
ಹೋಬಳಿ ಮಟ್ಟದಲ್ಲಿ ಯತೀಂದ್ರ ರಣತಂತ್ರ
ವರುಣದಿಂದ ವಿಜಯೇಂದ್ರ ಸ್ಪರ್ಧೆ ಸುದ್ದಿ ಹರಿದಾಡಿ ಕೊನೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಸಿದ್ದರಾಮಯ್ಯ ಟೀಂ ಕ್ಷೇತ್ರದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗಿದೆ. ಈಗ ಯತೀಂದ್ರ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದು, ಹೋಬಳಿ ಮುಖಂಡರ ಜತೆ ನಿರಂತರ ಸಂಪರ್ಕವನ್ನು ಸಾಧಿಸುತ್ತಿದ್ದಾರೆ. ಅವರನ್ನು ಭೇಟಿ ಮಾಡಿ ಮತಯಾಚನೆ ಮಾಡುತ್ತಿರುವುದಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಎಲ್ಲಿಯೂ ಸಹ ಸಣ್ಣ ಮಟ್ಟದ ಲೋಪವೂ ಆಗದಂತೆ ಎಚ್ಚರವಹಿಸುತ್ತಿರುವ ಸಿದ್ದರಾಮಯ್ಯ ಆ್ಯಂಡ್ ಟೀಂ, ಈ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿದಲ್ಲಿ ಜಾತಿ ಲೆಕ್ಕಾಚಾರಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಇಲ್ಲವೇ ಒಂದು ಪ್ರಬಲ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ ಪ್ರಬಲ ಪೈಪೋಟಿ ಒಡ್ಡಬಹುದಾಗಿದ್ದು, ಅದಕ್ಕೆ ಅವಕಾಶ ಸಿಗದಂತೆ ಈಗಿನಿಂದಲೇ ಜನರ ಬಳಿ ಹೋಗುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಯತೀಂದ್ರ ಮುಂದಾಗುತ್ತಿದ್ದಾರೆ.
ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾರ್ಯತಂತ್ರ
ಬಿಜೆಪಿ ಸಹ ಈ ಬಾರಿ ಹಳೇ ಮೈಸೂರು ಭಾಗವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಅವರು ಯಾವ ಅಭ್ಯರ್ಥಿಯನ್ನಾದರೂ ಪ್ರಕಟ ಮಾಡಲಿ, ಆದರೆ, ನಾವು ಈ ವಿಷಯದಲ್ಲಿ ಮೈಮರೆಯೋದು ಬೇಡ. ಹಾಗಾಗಿ ಕ್ಷೇತ್ರದಲ್ಲಿ ಹೈ ಅಲರ್ಟ್ ಆಗಿ ಇರಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 7th Pay commission : ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ; ರಾಜ್ಯ ನೌಕರರ ಸಂಘದಿಂದ ಹೆಚ್ಚಳಕ್ಕೆ ಮನವಿ
ತಂದೆ ಗೆಲ್ಲಿಸುವ ಹೊಣೆ ಮಗನ ಹೆಗಲಿಗೆ
ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಪ್ರಚಾರಕ್ಕೆ ಬರುವುದು ಒಂದೆರಡು ದಿನ ಮಾತ್ರ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ವತಃ ಅವರೇ ಈಚೆಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಈ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಮಾತ್ರವೇ ವರುಣಕ್ಕೆ ಬರುತ್ತೇನೆ. ಇಲ್ಲಿ ಪ್ರಚಾರ ಕಾರ್ಯವನ್ನು ಮಾಡುವುದಿಲ್ಲ. ಎಲ್ಲವನ್ನೂ ಯತೀಂದ್ರ ನೋಡಿಕೊಳ್ಳಲಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡಲಿದ್ದು, ಹೆಲಿಕಾಪ್ಟರ್ ಮೂಲಕ ದಿನಕ್ಕೆ ನಾಲ್ಕು ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ” ಎಂದು ಹೇಳಿದ್ದಾರೆ.
ಹೀಗಾಗಿ ನಾಮಪತ್ರ ಸಲ್ಲಿಸಿ ಒಮ್ಮೆ ನಾಮಪತ್ರ ಸಲ್ಲಿಕೆ ಮಾಡಲು ಬರುವ ಸಿದ್ದರಾಮಯ್ಯ ಅವರು ಈ ವೇಳೆ ಒಂದು ರೋಡ್ ಶೋ ನಡೆಸಬಹುದಾಗಿದ್ದು, ಮತ್ತೊಮ್ಮೆ ಕ್ಷೇತ್ರ ಸಂಚಾರಕ್ಕೆ ಬರುವ ಸಾಧ್ಯತೆ ಇದೆ. ಅದು ಬಿಟ್ಟರೆ ಉಳಿದ ಎಲ್ಲ ಜವಾಬ್ದಾರಿಯನ್ನು ಪುತ್ರ ಯತೀಂದ್ರ ಅವರ ಹೆಗಲಿಗೆ ಹಾಕಿದ್ದಾರೆ ಎಂದೇ ಹೇಳಲಾಗುತ್ತಿದೆ.
ಕಳೆದ ಬಾರಿಯ ತಪ್ಪು ಮರುಕಳಿಸದಂತೆ ಎಚ್ಚರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಪಡೆಯ ಮಾತುಗಳನ್ನು ನಂಬಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋಲು ಅನುಭವಿಸಿದ್ದರು. ಹೀಗಾಗಿ ವರುಣದಲ್ಲಿ ಆ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದು, ಇಡೀ ಚುನಾವಣೆ ಜವಾಬ್ದಾರಿಯನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೆಗಲಿಗೆ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಸಕ ಡಾ. ಯತೀಂದ್ರ ಸಹ ಈಗಾಗಲೇ ಕ್ಷೇತ್ರ ಸಂಚಾರವನ್ನು ಆರಂಭಿಸಿದ್ದಾರೆ.
ಸಮನ್ವಯ ಸಾಧಿಸುವತ್ತ ಯತೀಂದ್ರ ಹೆಜ್ಜೆ
ರಂಗಸಮುದ್ರ ಗ್ರಾಮಕ್ಕೆ ಭೇಟಿ, ಮನೆ ಮನೆ ಮತಯಾಚನೆಯನ್ನೂ ಮಾಡಿದ್ದಾರೆ. ತಳಮಟ್ಟದಲ್ಲಿ ಮತದಾರರು, ಕಾರ್ಯಕರ್ತರು, ಮುಖಂಡರ ನಡುವೆ ಯತೀಂದ್ರ ಸಮನ್ವಯ ಸಾಧಿಸುತ್ತಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.