Site icon Vistara News

Yathindra Siddaramaiah: ಯತೀಂದ್ರ ಮಾತಿಗೆ ತಾಳೆಯಾದ ವಿವೇಕಾನಂದ ವರ್ಗ, ʼಸಾಕ್ಷಿ ಇಲ್ಲಿದೆ ನೋಡಿʼ ಎಂದ ಎಚ್‌ಡಿಕೆ

vivekananda si mysore

ಬೆಂಗಳೂರು: ನಿನ್ನೆಯಿಡೀ ರಾಜ್ಯ ರಾಜಕೀಯದಲ್ಲಿ (karnataka politics) ಸಂಚಲನ ಮೂಡಿಸಿದ್ದ ಯತೀಂದ್ರ ಸಿದ್ದರಾಮಯ್ಯ (yathindra siddaramaiah) ಅವರ ತಂದೆಯೊಂದಿಗಿನ (CM Siddaramaiah) ಟೆಲಿಫೋನ್‌ ಸಂಭಾಷಣೆ ಇಂದು ಮತ್ತೆ ಬಿರುಸು ಪಡೆದುಕೊಂಡಿದೆ. ರಾಜ್ಯ ಸರ್ಕಾರ 71 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ (police transfer) ಮಾಡಿರುವುದು ಹಾಗೂ ಅದರಲ್ಲಿ ಮೈಸೂರಿನ ವಿವೇಕಾನಂದ ಹೆಸರೂ ಸೇರಿಕೊಂಡಿರುವುದು ಇದಕ್ಕೆ ಕಾರಣವಾಗಿದೆ.

ವೈರಲ್‌ ಆಗಿದ್ದ ವಿಡಿಯೋದಲ್ಲಿ ತಂದೆ ಸಿದ್ದರಾಮಯ್ಯನವರಿಗೆ ಮಾಡಿ ಮಾತನಾಡಿದ್ದ ಯತೀಂದ್ರ, ಮಹದೇವ್ ಜತೆಯೂ ಮಾತನಾಡಿದ್ದು ಪಬ್ಲಿಕ್‌ ಆಗಿತ್ತು. ʼʼನಾನು ಹೇಳಿದ ನಾಲ್ಕು ಮಾತ್ರ ಮಾಡಿʼʼ ಎಂದಿದ್ದರು ಯತೀಂದ್ರ. ʼʼಯಾವ ವಿವೇಕಾನಂದʼʼ ಎಂದು ಪ್ರಶ್ನಿಸಿದ್ದರು. ನಂತರ ಓಕೆ ಎಂದಿದ್ದರು. ಇದೀಗ ಗುಪ್ತಚರ ಇಲಾಖೆಯಲ್ಲಿದ್ದ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿವೇಕಾನಂದರನ್ನು ಮೈಸೂರಿನ ವಿವಿ ಪುರಂ ಪೊಲೀಸ್‌ ಠಾಣೆಗೆ ವರ್ಗಾಯಿಸಿ ಸರ್ಕಾರ ಆದೇಶ ನೀಡಿದೆ.

ವಿಡಿಯೋ ಬಿಡುಗಡೆ ಆದಾಗ ಇದು ʼವರ್ಗಾವಣೆ ದಂಧೆಗೆ ಸಾಕ್ಷಿʼ ಎಂದು ಪ್ರತಿಪಕ್ಷಗಳು ಮುಗಿಬಿದ್ದಿದ್ದವು. ಆದರೆ ಶಾಲೆಗಳ ದುರಸ್ತಿ ಬಗ್ಗೆ ಮಾತನಾಡಿದ್ದು ಎಂದು ಸಿಎಂ ಹೇಳಿದ್ದರು. ʼʼನಾನು ವರ್ಗಾವಣೆಗೆ ಮೂಗು ತೂರಿಸಿದ್ದು ಸಾಬೀತಾದ್ರೆ ರಾಜಕೀಯ ನಿವೃತ್ತಿʼʼ ಎಂದಿದ್ದರು. ಆದರೆ ಈಗ ಬಿಡುಗಡೆಯಾದ ವರ್ಗಾವಣೆ ಲಿಸ್ಟ್‌ನಲ್ಲಿ ವಿವೇಕಾನಂದ ಹೆಸರಿದೆ. ವಿವೇಕಾನಂದ ವರ್ಗಾವಣೆಯೊಂದಿಗೆ ಸರ್ಕಾರ ಆರೋಪಗಳಿಗೆ ಇನ್ನಷ್ಟು ಸಾಕ್ಷಿ ಕೊಟ್ಟಂತಾಗಿದೆ. ಯತೀಂದ್ರ ಮಾತನಾಡಿರುವುದು ಪೊಲೀಸ್ ವರ್ಗಾವಣೆ ಬಗ್ಗೆಯೇ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ. ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರು ಟ್ವೀಟ್‌ ಸುರಿಮಳೆಗರೆದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ಅವರ ಟ್ವೀಟ್‌ಗಳು ಹೀಗಿವೆ:

ʼʼಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ… ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು.ʼʼ

ʼʼಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ!! ಡೂಪ್ಲಿಕೇಟ್‌ ಸಿಎಂ-DCM ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ CSR ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ.ʼʼ

ʼʼವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್‌ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್‌ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು.. ಅದು ನಿಮ್ಮ ದುರ್ವಿಧಿ. ಆನ್ಸರ್‌ ಮಾಡಿ ಸಿದ್ದರಾಮಯ್ಯನವರೇ..?ʼʼ

ಇದನ್ನೂ ಓದಿ: Yathindra Siddaramaiah: ಯತೀಂದ್ರ ಮಾತಾಡಿರೋ ವಿವೇಕಾನಂದ ಇವರೇನಾ? ವರ್ಗಾವಣೆ ಲಿಸ್ಟ್‌ನಲ್ಲಿ ನಾಲ್ಕನೇ ಹೆಸ್ರು!

ʼʼಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ; 71 ಪೊಲೀಸ್‌ ಇನಸ್ಪೆಕ್ಟರ್‌ಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲಾ ನಿಮ್ಮ ʼಸುಲಿಗೆಪುತ್ರ’ನ ಕೆಚ್ಚು! ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ. ಏನಂತೀರಿ?ʼʼ

ʼʼಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. ʼವರ್ಗಾವರ್ಗಿ ಬಜೆಟ್‌’ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರಿಯʼ ಅಟ್ಟಹಾಸ!! ‘ಕಾಸಿಗಾಗಿ ಹುದ್ದೆ& ಕಾಂಗ್ರೆಸ್‌ ಹುಂಡಿ’ ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-TCM ನಿರ್ಮಾಪಕ, ಡೂಪ್ಲಿಕೇಟ್‌ ಸಿಎಂ-DCM ನಿರ್ದೇಶಕ.. ಹೇಗಿದೆ?ʼʼ

ʼʼಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ.. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್‌ & ರನ್‌ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ.ʼʼ

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ವರ್ಗಾವಣೆ ದಂಧೆ ಆರೋಪ, ಪಾರದರ್ಶಕ ತನಿಖೆ ಅಗತ್ಯ

”ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪುತ್ರ ಯತೀಂದ್ರರವರು ತಾಕೀತು ಮಾಡಿದ ವೀಡಿಯೋ ವೈರಲ್ ಆದ ವಿಷಯ ಈಗ ಮೈಸೂರಿನ ಪೋಲೀಸ್ ವರ್ಗಾವಣೆಗೆ ಸಂಬಂಧಿಸಿದ ವಿಷಯ ಎಂದು ಈಗ ಸಾಬೀತಾಗಿದೆ. ಮಹಾದೇವ ಎಂಬುವವರು ಪೋಲೀಸ್ ವರ್ಗಾವಣೆಗೆ ನೇಮಿಸಲ್ಪಟ್ಟ ಅಧಿಕಾರಿಯಾಗಿದ್ದು, ವಿವೇಕಾನಂದ ಯಾರೆಂಬುದು ಈ ವರ್ಗಾವಣೆ ಪಟ್ಟಿಯಿಂದ ದೃಢಪಟ್ಟಿದೆ. ಮಾನ್ಯ ಸಿದ್ದರಾಮಯ್ಯ ಅವರು ಸುಳ್ಳು ಹೇಳಿರುವುದು ಇಲ್ಲಿ ಸಾಬೀತಾಗಿದೆ” ಎಂದು ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಕೂಡ ಆರೋಪಿಸಿದ್ದಾರೆ.

Exit mobile version