Site icon Vistara News

Karnataka Election 2023: ವರುಣದಲ್ಲಿ ಯತೀಂದ್ರ ಆ್ಯಕ್ಟಿವ್‌; ಹೋಬಳಿ ಮಟ್ಟದಲ್ಲಿ ರಣತಂತ್ರ, ಸಿಕ್ಕಿದೆ ಲಿಂಗಾಯತರ ಬೆಂಬಲ

active in Varuna Strategy at hobli level lingayats get support Karnataka Election 2023 updates‌

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 2023) ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಸಹ ಬಿರುಸುಗೊಂಡಿವೆ. ಇತ್ತ ಹಲವು ಕಾರಣಗಳಿಂದ ಕೇಂದ್ರಬಿಂದುವಾಗಿರುವ ವರುಣ ವಿಧಾನಸಭಾ ಕ್ಷೇತ್ರದ ಕಣ ರಂಗೇರಿದೆ. ಈಗಾಗಲೇ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೆಸರು ಘೋಷಣೆಯಾಗಿ ಅವರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಬಿಜೆಪಿಯಿಂದ ಅವರಿಗೆ ಪ್ರತಿಸ್ಪರ್ಧಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೆಸರು ಕೇಳಿಬರುತ್ತಿದೆಯಾದರೂ ಯಡಿಯೂರಪ್ಪ ಅದನ್ನು ತಳ್ಳಿಹಾಕಿದ್ದಾರೆ. ಆದರೂ, ಇನ್ನೂ ಚರ್ಚೆ ಮಾತ್ರ ನಿಂತಿಲ್ಲ. ಈ ನಡುವೆ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅವರು ತಮ್ಮ ತಂಡದ ಜತೆಗೆ ಆ್ಯಕ್ಟಿವ್‌ ಆಗಿದ್ದಾರೆ.

ವರುಣದಿಂದ ವಿಜಯೇಂದ್ರ ಸ್ಪರ್ಧೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ಟೀಂ ಕ್ಷೇತ್ರದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗಿದೆ. ಈಗ ಯತೀಂದ್ರ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದು, ಹೋಬಳಿ ಮುಖಂಡರ ಜತೆ ನಿರಂತರ ಸಂಪರ್ಕವನ್ನು ಸಾಧಿಸುತ್ತಿದ್ದಾರೆ. ಅವರನ್ನು ಭೇಟಿ ಮಾಡಿ ಮತಯಾಚನೆ ಮಾಡುತ್ತಿರುವುದಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಕ್ಷೇತ್ರದ ಪ್ರಚಾರದಲ್ಲಿ ನಿರತರಾಗಿರುವ ಯತೀಂದ್ರ ಸಿದ್ದರಾಮಯ್ಯ

ಯಾವುದೇ ಕಾರಣಕ್ಕೂ ಎಲ್ಲಿಯೂ ಸಹ ಸಣ್ಣ ಮಟ್ಟದ ಲೋಪವೂ ಆಗದಂತೆ ಎಚ್ಚರವಹಿಸುತ್ತಿರುವ ಸಿದ್ದರಾಮಯ್ಯ ಆ್ಯಂಡ್‌ ಟೀಂ, ಈ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್‌ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿದಲ್ಲಿ ಜಾತಿ ಲೆಕ್ಕಾಚಾರಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಇಲ್ಲವೇ ಒಂದು ಪ್ರಬಲ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ ಪ್ರಬಲ ಪೈಪೋಟಿ ಒಡ್ಡಬಹುದಾಗಿದ್ದು, ಅದಕ್ಕೆ ಅವಕಾಶ ಸಿಗದಂತೆ ಈಗಿನಿಂದಲೇ ಜನರ ಬಳಿ ಹೋಗುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಯತೀಂದ್ರ ಮುಂದಾಗುತ್ತಿದ್ದಾರೆ.

ಇದನ್ನೂ ಓದಿ: Liquor siezed : ಕಡಲಿನಲ್ಲೂ ಕಣ್ಗಾವಲು; ಗೋವಾದಿಂದ ಸಮುದ್ರ ಮೂಲಕ ಬಂದ ಭಾರಿ ಪ್ರಮಾಣದ ಮದ್ಯ ವಶ

ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾರ್ಯತಂತ್ರ

ಬಿಜೆಪಿ ಸಹ ಈ ಬಾರಿ ಹಳೇ ಮೈಸೂರು ಭಾಗವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಅವರು ಯಾವ ಅಭ್ಯರ್ಥಿಯನ್ನಾದರೂ ಪ್ರಕಟ ಮಾಡಲಿ, ಆದರೆ, ನಾವು ಈ ವಿಷಯದಲ್ಲಿ ಮೈಮರೆಯೋದು ಬೇಡ. ಹಾಗಾಗಿ ಕ್ಷೇತ್ರದಲ್ಲಿ ಹೈ ಅಲರ್ಟ್ ಆಗಿ ಇರಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ತಂದೆ ಗೆಲ್ಲಿಸುವ ಹೊಣೆ ಮಗನ ಹೆಗಲಿಗೆ

ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಪ್ರಚಾರಕ್ಕೆ ಬರುವುದು ಒಂದೆರಡು ದಿನ ಮಾತ್ರ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ವತಃ ಅವರೇ ಈಚೆಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಈ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಮಾತ್ರವೇ ವರುಣಕ್ಕೆ ಬರುತ್ತೇನೆ. ಇಲ್ಲಿ ಪ್ರಚಾರ ಕಾರ್ಯವನ್ನು ಮಾಡುವುದಿಲ್ಲ. ಎಲ್ಲವನ್ನೂ ಯತೀಂದ್ರ ನೋಡಿಕೊಳ್ಳಲಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡಲಿದ್ದು, ಹೆಲಿಕಾಪ್ಟರ್‌ ಮೂಲಕ ದಿನಕ್ಕೆ ನಾಲ್ಕು ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ” ಎಂದು ಹೇಳಿದ್ದಾರೆ.

ಹೀಗಾಗಿ ನಾಮಪತ್ರ ಸಲ್ಲಿಸಿ ಒಮ್ಮೆ ನಾಮಪತ್ರ ಸಲ್ಲಿಕೆ ಮಾಡಲು ಬರುವ ಸಿದ್ದರಾಮಯ್ಯ ಅವರು ಈ ವೇಳೆ ಒಂದು ರೋಡ್‌ ಶೋ ನಡೆಸಬಹುದಾಗಿದ್ದು, ಮತ್ತೊಮ್ಮೆ ಕ್ಷೇತ್ರ ಸಂಚಾರಕ್ಕೆ ಬರುವ ಸಾಧ್ಯತೆ ಇದೆ. ಅದು ಬಿಟ್ಟರೆ ಉಳಿದ ಎಲ್ಲ ಜವಾಬ್ದಾರಿಯನ್ನು ಪುತ್ರ ಯತೀಂದ್ರ ಅವರ ಹೆಗಲಿಗೆ ಹಾಕಿದ್ದಾರೆ ಎಂದೇ ಹೇಳಲಾಗುತ್ತಿದೆ.

ಕಳೆದ ಬಾರಿಯ ತಪ್ಪು ಮರುಕಳಿಸದಂತೆ ಎಚ್ಚರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಪಡೆಯ ಮಾತುಗಳನ್ನು ನಂಬಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋಲು ಅನುಭವಿಸಿದ್ದರು. ಹೀಗಾಗಿ ವರುಣದಲ್ಲಿ ಆ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದು, ಇಡೀ ಚುನಾವಣೆ ಜವಾಬ್ದಾರಿಯನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೆಗಲಿಗೆ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಸಕ ಡಾ. ಯತೀಂದ್ರ‌ ಸಹ ಈಗಾಗಲೇ ಕ್ಷೇತ್ರ ಸಂಚಾರವನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: ಅಶಿಕ್ಷಿತ ಪ್ರಧಾನಿ ದೇಶಕ್ಕೆ ಅಪಾಯಕಾರಿ; ಗುಜರಾತ್ ಹೈಕೋರ್ಟ್​ ತೀರ್ಪನ್ನೇ ಅನುಮಾನಿಸಿದ ಅರವಿಂದ್​ ಕೇಜ್ರಿವಾಲ್​

ಸಮನ್ವಯ ಸಾಧಿಸುವತ್ತ ಯತೀಂದ್ರ ಹೆಜ್ಜೆ

ರಂಗಸಮುದ್ರ ಗ್ರಾಮಕ್ಕೆ ಭೇಟಿ, ಮನೆ ಮನೆ ಮತಯಾಚನೆಯನ್ನೂ ಮಾಡಿದ್ದಾರೆ. ತಳಮಟ್ಟದಲ್ಲಿ ಮತದಾರರು, ಕಾರ್ಯಕರ್ತರು, ಮುಖಂಡರ ನಡುವೆ ಯತೀಂದ್ರ ಸಮನ್ವಯ ಸಾಧಿಸುತ್ತಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.

ಸೋಲಿನ ಭಯದಿಂದ ವರುಣಕ್ಕೆ ಬಿ.ವೈ. ವಿಜಯೇಂದ್ರ

ಬಿ.ವೈ. ವಿಜಯೇಂದ್ರ ಸೋಲಿನ ಭಯದಿಂದ ವರುಣಕ್ಕೆ ಬರಲಿಲ್ಲ. ಗೆಲ್ಲುವ ಅವಕಾಶ ಇದ್ದರೆ ಸ್ಪರ್ಧೆ ಮಾಡುತ್ತಿದ್ದರು. ಸೋಲಿನ ಭೀತಿಯಿಂದಾಗಿ ಕ್ಷೇತ್ರದಿಂದ ಕಾಲ್ಕಿತ್ತಿದ್ದಾರೆ ಎಂದು ವೀರಶೈವ- ಲಿಂಗಾಯತ ಮುಖಂಡ, ಕೆಪಿಸಿಸಿ ಕಾರ್ಯದರ್ಶಿ ವರುಣ ಮಹೇಶ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತೀಂದ್ರ ಅವರು ಕಾರ್ಯಕರ್ತರನ್ನು ಗೊಂದಲಕ್ಕೆ ತಳ್ಳಿದ್ದಾರೆ. ಸಿದ್ದರಾಮಯ್ಯ ಅವರಿಂದ ವರುಣ ಕ್ಷೇತ್ರದ ಕುಡಿಯುವ ನೀರಿನ ತೊಂದರೆ ಬಗೆಹರಿದಿದೆ. ಶಾಲೆ, ಆಸ್ಪತ್ರೆ, ಸಮುದಾಯ ಭವನ, ದೇವಾಲಯ ಅಭಿವೃದ್ಧಿ ಎಲ್ಲವೂ ಆಗಿದೆ. ಸಿಎಂ ಆಗಿದ್ದಾಗ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಡಾ. ಯತೀಂದ್ರ ಸಿದ್ದರಾಮಯ್ಯ 58 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಜನರೊಂದಿಗೆ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿ ವರುಣ ಕ್ಷೇತ್ರದ ಜನ ಕಾಂಗ್ರೆಸ್ ಪರ ಮತ ಹಾಕಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ವೀರಶೈವ- ಲಿಂಗಾಯತ ಸಮುದಾಯದ ಮುಖಂಡರು ಬೆಂಬಲ ಕೊಡಲಿದ್ದಾರೆ. 25-30 ಸಾವಿರ ಸಮುದಾಯದ ಮತಗಳು ಬರಲಿವೆ. ಪಕ್ಷದ ಪರವಾಗಿ ಸಮುದಾಯದ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಹಂತದ ಮುಖಂಡರು ಇದ್ದಾರೆ. ಸಿದ್ದರಾಮಯ್ಯ ಪರವಾಗಿ ಎಲ್ಲರೂ ಮತ ಹಾಕಲಿದ್ದೇವೆ. ವರುಣದಲ್ಲಿ ವೀರಶೈವ ಲಿಂಗಾಯತ ಸಮುದಾಯದ 63 ಸಾವಿರ, ಎಸ್‌ಸಿ 58 ಸಾವಿರ, ನಾಯಕ 30 ಸಾವಿರ, ಕುರುಬ 33 ಸಾವಿರ, ಒಕ್ಕಲಿಗ 12 ಸಾವಿರ, ಮುಸ್ಲಿಂ 8 ಸಾವಿರ, ಇತರೆ 18 ಸಾವಿರ ಮತದಾರರು ಇದ್ದಾರೆ. ಎಲ್ಲ ಸಮುದಾಯದವರೂ ಸಿದ್ದರಾಮಯ್ಯ ಪರವಾಗಿ ಇದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: JDS Politics : ಯಾವ ಬಂಡಾಯಕ್ಕೂ ಸೊಪ್ಪು ಹಾಕಲ್ಲ, ಹಾಸನದಲ್ಲಿ ನಾನು ಹೇಳಿದವನೇ ಅಭ್ಯರ್ಥಿ, ನಾಳೆ ಬೆಳಗ್ಗೆ 2ನೇ ಪಟ್ಟಿ: ಎಚ್‌ಡಿಕೆ

ದಾಸನೂರು ಮಹೇಶ್, ಹಡಜನ ಮಂಜುನಾಥ್, ಸಿ.ಮಹೇಶ್, ದಂಡಿಕೆರೆ ನಾಗೇಂದ್ರ, ಮೊಸಂಬಾಯನಹಳ್ಳಿ ಕುಮಾರ್ ಸೇರಿದಂತೆ ಪ್ರಮುಖರು ಹಾಜರಿದ್ದರು.

Exit mobile version