Site icon Vistara News

Yatindra siddaramaiah: ಅಧಿಕಾರ ಬೇಕು; ಸರ್ಕಾರಿ ಸ್ಥಾನಮಾನದ ಬಯಕೆ ಮುಂದಿಟ್ಟ ಯತೀಂದ್ರ ಸಿದ್ದರಾಮಯ್ಯ

Yatindra siddaramaiah

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅವರ ಹೆಸರು ತೀವ್ರ ಚಲಾವಣೆಗೆ ಬಂದಿದೆ. ಅದರಲ್ಲೂ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ʻಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್‌- YST’ (YST Tax) ಎಂಬ ಪದವನ್ನು ತೇಲಿಬಿಟ್ಟ ನಂತರ ಅವರು ಚರ್ಚೆಯ ಮುನ್ನೆಲೆಗೆ ಬಂದಿದೆ. ಇದರ ನಡುವೆಯೇ ಸ್ವತಃ ಯತೀಂದ್ರ ಕೂಡಾ ತಮಗೆ ಅಧಿಕಾರ ಮತ್ತು ಸ್ಥಾನಮಾನದ ಬೇಕು ಎಂಬ ಬೇಡಿಕೆಯನ್ನು ಸಣ್ಣದಾಗಿ ಮುಂದಿಟ್ಟಿದ್ದಾರೆ.

2018ರ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಗೆದ್ದಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಬಾರಿ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿ ಈಗ ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರಕ್ಕೆ ಸಮಯ ಕೊಡಲಾಗದ ಹಿನ್ನೆಲೆಯಲ್ಲಿ ಅವರ ಜವಾಬ್ದಾರಿಯನ್ನು ನಿಭಾಯಿಸಲು ಯತೀಂದ್ರ ಅವರು ಕಾಯಾ ವಾಚಾ ಮನಸಾ ಸಿದ್ಧರಾಗಿದ್ದಾರಾದರೂ ಒಂದು ಸಣ್ಣ ಹುದ್ದೆಯಾದರೂ ಬೇಕು ಎನ್ನುವ ಆಸೆಯನ್ನು ಹೊಂದಿದ್ದಾರೆ.

ಈ ವಿಚಾರವನ್ನು ಸ್ವತಃ ಅವರೇ ಬುಧವಾರ ಮೈಸೂರಿನಲ್ಲಿ ಹೇಳಿಕೊಂಡರು. ವರುಣ ಕ್ಷೇತ್ರದಲ್ಲಿ ತಂದೆಯವರ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಸಿದ್ಧನಿದ್ದೇನೆ. ತಂದೆಯವರು ಸಿಎಂ ಆಗಿರುವ ಕಾರಣ ಕ್ಷೇತ್ರದ ಜನರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಅವರನ್ನು ನೋಡಲು ಬರುವ ರಾಜ್ಯದ ಜನರನ್ನೆಲ್ಲ ಭೇಟಿಯಾಗಬೇಕು. ಆದ್ದರಿಂದ ವರುಣ ಕ್ಷೇತ್ರದ ಮತದಾರರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಹೀಗಾಗಿ ಅವರ ಜವಾಬ್ದಾರಿಯನ್ನು ನಾನು ನಿಭಾಯಿಸಬಲ್ಲೆ. ಆದರೆ ಈ ಎಲ್ಲ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಲು ಒಂದು ಸಣ್ಣ ಜವಾಬ್ದಾರಿ ಬೇಕು ಎನ್ನುತ್ತಿದ್ದಾರೆ ವಿಜಯೇಂದ್ರ.

ಮಾಧ್ಯಮಗಳ ಮುಂದೆ ಯತೀಂದ್ರ ಸಿದ್ದರಾಮಯ್ಯ

ನಾನು ಈಗ ಜನರ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಅಧಿಕಾರಿಗಳಿಗೆ ಹೇಳಿ ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಸರ್ಕಾರಿ ಸ್ಥಾನಮಾನ ಇರಬೇಕು. ಕಳೆದ ಬಾರಿಯಂತೆ ಸಣ್ಣ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಡಾ. ಯತೀಂದ್ರ ಹೇಳಿಕೆ ನೀಡಿದ್ದಾರೆ.

ʻʻನನಗೆ ಯಾವುದಾದರೂ ಚಿಕ್ಕದಾದ ಸ್ಥಾನಮಾನ ನೀಡಿದ್ರು ಸಹಕಾರಿ ಆಗುತ್ತದೆ. ಕಳೆದ ಬಾರಿ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ಅದು ದೊಡ್ಡ ಹುದ್ದಯಲ್ಲ ಆದರೂ ಅಂತದ್ದೇ ಸಣ್ಣ ಹುದ್ದೆ ನೀಡಿದರೂ ಜನರ ಸೇವೆ ಮಾಡಲು ನಾನು ಸಿದ್ದನಿದ್ದೇನೆʼʼ ಎಂದು ಮೈಸೂರಿನಲ್ಲಿ ಸಿಎಂ ಪುತ್ರ ಡಾ. ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಪಕ್ಷ ಸೂಚಿಸಿದರೆ ಲೋಕಸಭಾ ಚುನಾವಣೆಗೆ ನಿಲ್ಲುವೆ

ಲೋಕಸಭೆಗೆ ಸಿಎಂ ಪುತ್ರ ಡಾ.ಯತೀಂದ್ರ ಸ್ಪರ್ಧೆ ಮಾಡಬೇಕೆನ್ನುವ ಬೆಂಬಲಿಗರ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ʻʻಪಕ್ಷ ಸೂಚನೆ ನೀಡಿದರೆ ಆದೇಶ ಪಾಲಿಸಲು ಸಿದ್ಧʼʼ ಎಂದರು.

ʻʻಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನಾಗಲಿ, ತಂದೆಯವರಾಗಲಿ ಚರ್ಚೆ ನಡೆಸಿಲ್ಲ. ಚುನಾವಣೆಗೆ ಇನ್ನೂ 8 ತಿಂಗಳ ಕಾಲಾವಕಾಶ ಇದೆ. ಚುನಾವಣೆ ಸಮೀಪ ಯಾರು ಸೂಕ್ತ ಅಭ್ಯರ್ಥಿ ಎಂದು ಗೊತ್ತಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಅಷ್ಟೆ. ಆದ್ದರಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ. ಒಂದು ವೇಳೆ ನಾನು ಸ್ಪರ್ಧೆ ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದ್ರೆ ಪಾಲನೆ ಮಾಡಬೇಕಾಗುತ್ತದೆʼʼ ಎಂದು ಯತೀಂದ್ರ ಹೇಳಿದ್ದಾರೆ.

Exit mobile version