ವಿಧಾನಸಭೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಪುತ್ರ ಬಿ. ವೈ. ವಿಜಯೇಂದ್ರ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
ಶೂನ್ಯವೇಳೆಯಲ್ಲಿ ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ ಮಾತನಾಡಿದರು, ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರಿಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದೆವು. ಅದೇ ರೀತಿ 2ಎಗೆ ಸೇರಿಸಬೇಕು ಎಂಬುದರ ಕುರಿತು ಕ್ರಮ ವಹಿಸಲಾಗಿತ್ತು. ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಪ್ರಯತ್ನಕ್ಕೆ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ವಹಿಸಲಾಗಿತ್ತು.
ತಮ್ಮ ಅವಧಿಯಲ್ಲಿ ವೀರಶೈವ ಲಿಂಗಾಯ ಸಮುದಾಯದ ಅಭಿವೃದ್ಧಿಗಾಗಿ ಮಂಡಳಿಯನ್ನು ಸ್ಥಾಪಿಸಿ ಐದು ನೂರು ಕೋಟಿ ರೂ. ನೀಡಲಾಯಿತು. ಪಂಚಮಸಾಲಿ ಸಮುದಾಯುವು ಕೃಷಿ ಆಧರಿತವಾಗಿದ್ದು, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ಕಾರಣಕ್ಕೆ ಮೀಸಲಾತಿ ದೊರಕಿಸಿಕೊಡಲು ಪ್ರಯತ್ನಿಸಲಾಗಿದೆ.
ಈ ಎಲ್ಲ ಅಂಶಗಳನ್ನೂ ಪರಿಗಣಿಸಿ ಸರ್ಕಾರ ಕಾನೂನು ಪ್ರಕರಣ ಕ್ರಮ ಕೈಗೊಳ್ಳುತ್ತದೆ.ಸರ್ಕಾರದ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ.ಈ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಸರ್ಕಾರವನ್ನು ವಿನಂತಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಈಗಾಗಲೆ ಈ ವಿಚಾರದಲ್ಲಿ ಬುಧವಾರ ಮಾತನಾಡಿದ್ದೇನೆ. ಕೆಲವರ ಮಾತಿನ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಲು ಬಯಸಿ ಇಲ್ಲಿ ತಿಳಿಸಿದ್ದಾರೆ. 3ಎ ಪಟ್ಟಿಯಿಂದ ಅನೇಕ ಸಮುದಾಯಗಳನ್ನು ಕೈಬಿಡಲಾಯಿತಾದರೂ ಪಂಚಮಸಾಲಿ ಸಮುದಾಯವನ್ನು ಬಿಟ್ಟುಹೋಗದಂತೆ ತಡೆದವರು ಯಡಿಯೂರಪ್ಪ. ಈಗಲೂ ಸಮುದಾಯದ ಕುರಿತು ಕಾಳಜಿ ಹೊಂದಿದ್ದಾರೆ. ಅನೇಕರು ಊಹಾಪೋಹಗಳನ್ನು ಹರಿಬಿಡುತ್ತಿದ್ದಾರಾದರೂ ಯಡಿಯೂರಪ್ಪ ಅವರು ಕೈಗೊಂಡ ಕ್ರಮಗಳು ಇತಿಹಾಸದ ದಾಖಲೆಯಲ್ಲಿವೆ.
ಈಗಾಗಲೆ ಪಂಚಮಸಾಲಿ 2ಎ ಮೀಸಲಾತಿ ವಿಚಾರವನ್ನು ಆಯೋಗ ಪರಿಶೀಲಿಸುತ್ತಿದೆ. ಆಯೋಗದ ವರದಿಯನ್ನು ಆಧರಿಸಿ ಕೂಡಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿಗೆ ಬಿ.ಎಸ್. ಯಡಿಯೂರಪ್ಪ ಅಡ್ಡ ಬಂದಿದ್ದಾರ?: ಈ ಕುರಿತು ಸಚಿವ ನಿರಾಣಿ ಸ್ಪಷ್ಟನೆ