Site icon Vistara News

Karnataka Election 2023: ಶಿವಮೊಗ್ಗದಲ್ಲಿ ಲಿಂಗಾಯತ ಮುಖಂಡರ ಜತೆ ಯಡಿಯೂರಪ್ಪ ಸಭೆ; ಎಲೆಕ್ಷನ್‌ ಗೆಲ್ಲಲು ರಣತಂತ್ರ

Yediyurappa meets Lingayat leaders in Shivamogga Strategy to win elections Karnataka Election 2023 updates

Yediyurappa meets Lingayat leaders

ಶಿವಮೊಗ್ಗ: ಶಿವಮೊಗ್ಗದಲ್ಲಿ ಸೋಮವಾರ ಬಿರುಸಿನ ರಾಜಕೀಯ ಚಟುವಟಿಕೆ ನಡೆದಿದೆ. ಈ ಸಾಲಿನ ಚುನಾವಣೆಯಲ್ಲಿ (Karnataka Election 2023) ಪಕ್ಷದ ಗೆಲುವಿಗೆ ಯಾವ ಯಾವ ಕಾರ್ಯತಂತ್ರವನ್ನು ಹೆಣೆಯಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ನಿವಾಸದಲ್ಲಿ ಲಿಂಗಾಯತ ಸಮಾಜ ಮುಖಂಡರ ಸಭೆ ನಡೆಸಲಾಗಿದೆ.

Yediyurappa meets Lingayat leaders

ಜಾಗೃತಿ ಮತದಾರರ ಸಭಾ ವತಿಯಿಂದ ವೀರಶೈವ ಸಮಾಜದ ಸ್ನೇಹಮಿಲನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಯಡಿಯೂರಪ್ಪ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಾರಿ ಶಿವಮೊಗ್ಗದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಲಿಂಗಾಯತ ಸಮುದಾಯದವರನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಮುಖಂಡರ ಜತೆ ಸಭೆ ನಡೆದಿದೆ.

ಬಿಜೆಪಿಯ ಲಿಂಗಾಯತ ಮತ ಬ್ಯಾಂಕ್ ಹಂಚಿ ಹೋಗದಂತೆ ಕಸರತ್ತು ನಡೆಸಲಾಗುತ್ತಿದ್ದು, ಲಿಂಗಾಯತ ಸಮುದಾಯದವರ ಸಂಪೂರ್ಣ ಮತಗಳನ್ನು ಸೆಳೆಯಲು ಏನು ಮಾಡಬೇಕು? ಯಾವ ರೀತಿ ಕಾರ್ಯತಂತ್ರವನ್ನು ಹೆಣೆಯಬೇಕು ಎಂಬಿತ್ಯಾದಿಗಳ ಬಗ್ಗೆ ಚರ್ಚೆ ನಡೆಸಲಾಯಿತು.

#image_title

ಇದನ್ನೂ ಓದಿ: Govt Employees News : ಸರ್ಕಾರಿ ನೌಕರರಿಗೆ ಶೇ.17 ರಷ್ಟು ವೇತನ ಹೆಚ್ಚಳ ಜಾರಿಗೆ ಅನುದಾನ; ಆರ್ಥಿಕ ಇಲಾಖೆಯಿಂದ ಸೂಚನೆ

ಕಾಂಗ್ರೆಸ್ ಮುಕ್ತ ಭಾರತ ಆಗಬೇಕೆಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಲಿಂಗಾಯತ ಸಮಾಜದ ಅಭ್ಯರ್ಥಿ ಚೆನ್ನಬಸಪ್ಪ ಅವರನ್ನು ಗೆಲ್ಲಿಸಲು ಲಿಂಗಾಯತ ಮುಖಂಡರು ಈ ಸಂದರ್ಭದಲ್ಲಿ ತೀರ್ಮಾನ ಕೈಗೊಂಡಿದ್ದು, ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗಲು ಕರೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಲಿಂಗಾಯತರ ಮತಗಳ ವಿಭಜನೆಯಾಗದಂತೆ ನೋಡಿಕೊಳ್ಳಲು ಚರ್ಚೆ ನಡೆಸಲಾಗಿದೆ.

ಎಲ್ಲ ಸಮಾಜಗಳಿಗೂ ಬಿಜೆಪಿ ಪಕ್ಷ, ಸರ್ಕಾರವು ಅನುಕೂಲ ಮಾಡಿಕೊಟ್ಟಿದೆ. ಪಿಎಫ್‌ಐ ಬ್ಯಾನ್ ಆದರೂ ಕಾಂಗ್ರೆಸ್ ಅದನ್ನು ಪ್ರಶ್ನೆ ಮಾಡುತ್ತದೆ. ದೇಶದ್ರೋಹ ಕೆಲಸ ಮಾಡುವ ಸಂಘಟನೆ ಇರಬೇಕಾ? ಧರ್ಮ, ಸಂಸ್ಕೃತಿ ಉಳಿಸುವ ಸರ್ಕಾರ ಬರಬೇಕೋ? ದೇಶದ್ರೋಹ ಕೆಲಸ ಮಾಡುವ ಸರ್ಕಾರ ಬರಬೇಕೋ? ಎಂಬ ಸಂದೇಶವನ್ನು ಸಾರ್ವಜನಿಕವಾಗಿ ರವಾನೆ ಮಾಡಬೇಕೆಂಬ ಸಲಹೆಗಳೂ ಕೇಳಿಬಂದವು.

ಲಿಂಗಾಯತ ಸಮಾಜದ ಪರವಾಗಿ ನಮ್ಮ ಸರ್ಕಾರವಿದೆ- ಈಶ್ವರಪ್ಪ

ಶಿವಮೊಗ್ಗದಲ್ಲಿ 60 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇವೆ. ಒಬ್ಬೊಬ್ಬರು ಹತ್ತು, ಹತ್ತು ಮತಗಳನ್ನು ಹಾಕಿಸುತ್ತೇವೆ ಎಂದು ಎಲ್ಲರೂ ಪಣ ತೊಡಬೇಕು. ಲಿಂಗಾಯತ ಸಮಾಜದ ಪರವಾಗಿ ನಮ್ಮ ಸರ್ಕಾರವಿದೆ. ಲಿಂಗಾಯತರಿಗೆ ಅನೇಕ ಸ್ಥಾನಮಾನಗಳನ್ನು ಬಿಜೆಪಿ ಸರ್ಕಾರ ನೀಡಿದೆ. ಈಗಾಗಲೇ ಜನರ ಬಳಿಗೆ ತೆರಳದವರು, ಕೇವಲ ಮತಕ್ಕಾಗಿ ಅಷ್ಟೇ ಜನರ ಬಳಿ ತೆರಳುತ್ತಿದ್ದಾರೆ. ಇದನ್ನು ಮತದಾರರು ಗಮನಿಸಬೇಕು ಎಂದು ಸಭೆಯಲ್ಲಿ ಈಶ್ವರಪ್ಪ ಕರೆ ನೀಡಿದರು. ಸಂಸದ ಬಿ.ವೈ. ರಾಘವೇಂದ್ರ, ಅಭ್ಯರ್ಥಿ ಚನ್ನಬಸಪ್ಪ ಚರ್ಚೆಯಲ್ಲಿ ಭಾಗಿಯಾಗಿದ್ದರು.

ಶಿವಮೊಗ್ಗದಲ್ಲಿ ಗೆಲ್ಲುವ ಬಗ್ಗೆ ಬಿಎಸ್‌ವೈ ಜತೆ ಚರ್ಚೆ

ಶಿವಮೊಗ್ಗದಲ್ಲಿ ಗೆಲ್ಲುವ ಬಗ್ಗೆ ಬಿಎಸ್‌ವೈ ಜತೆ ಚರ್ಚೆಯಾಗಿದೆ. ಜಿಲ್ಲೆಯ ಪ್ರಮುಖರೊಂದಿಗೆ ಚರ್ಚೆಯಾಗಿದೆ. ಭದ್ರಾವತಿಯಲ್ಲಿ ಸ್ವಲ್ಪ ಬಿಜೆಪಿ ವೀಕ್ ಇದೆ. ಅದನ್ನೂ ಸರಿಪಡಿಸಿಕೊಂಡು ಏಳಕ್ಕೆ ಏಳು ಸ್ಥಾನವನ್ನು ಗೆಲ್ಲುತ್ತೇವೆ. ಕಾಂಗ್ರೆಸ್‌ನವರು ಶಿವಮೊಗ್ಗದಲ್ಲಿ ತುಂಬಾ ಓಡಾಡುತ್ತಿದ್ದಾರೆ ಅಂತ ಯಡಿಯೂರಪ್ಪ ಅವರಿಗೆ ಯಾರೋ ಹೇಳಿದ್ದಾರೆ. ಆದರೆ, ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದು ಈಶ್ವರಪ್ಪ ಹೇಳಿದರು.

ಲಿಂಗಾಯತ ಸಮಾಜದ ಗಮನ ಸೆಳೆಯಲು ರಾಹುಲ್ ಗಾಂಧಿ ಬಂದಿದ್ದಾರೆ. ಅದರರ್ಥ ಲಿಂಗಾಯತ ಸಮಾಜ ಪೂರ್ಣವಾಗಿ ಬಿಜೆಪಿ ಜತೆ ಇದೆ. ಅದು ಕಾಂಗ್ರೆಸ್‌ಗೆ ಗೊತ್ತಾಗಿದೆ. ಚನ್ನಬಸಪ್ಪ ಅವರನ್ನು ಗೆಲ್ಲಿಸಬೇಕು ಎಂಬುದು ನಮ್ಮ ಆಸೆ. ಹೀಗಾಗಿ ರಾಹುಲ್ ಗಾಂಧಿ ಒಮ್ಮೆ ಶಿವಮೊಗ್ಗಕ್ಕೆ ಬಂದು ಹೋಗಲಿ. ಕಳೆದ ಬಾರಿ 46000 ಮತಗಳಿಂದ ಗೆದ್ದಿದ್ದೇವೆ. ಈ ಬಾರಿ 60000 ಅಂತರದ ಗೆಲುವಿನ ಗುರಿ ಇಟ್ಟುಕೊಂಡಿದ್ದೇವೆ. ಆ ಗುರಿ ದಾಟಲು ರಾಹುಲ್ ಗಾಂಧಿ ಒಮ್ಮೆ ಶಿವಮೊಗ್ಗಕ್ಕೆ ಬರಲಿ ಎಂದು ಹೇಳಿದರು.

ಬಿಜೆಪಿ ಸೇರಿದ ಜೆಡಿಎಸ್‌ ನಾಯಕರು

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಚಂದ್ರಶೇಖರ್, ರಾಜ್ಯ ನಾಯಕ ಮಂಜುನಾಥ್ ಅವರು ಇದೇ ವೇಳೆ ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪಕ್ಷದ ಧ್ವಜ ನೀಡಿ, ಬಿಜೆಪಿ ಶಾಲು ಹಾಕುವ ಮೂಲಕ ಸೇರ್ಪಡೆಗೊಳಿಸಿದರು.

ಏಪ್ರಿಲ್‌ 27 ರಂದು ಶಿವಮೊಗ್ಗಕ್ಕೆ ಅಣ್ಣಾಮಲೈ

ಏಪ್ರಿಲ್‌ 27 ರಂದು ಶಿವಮೊಗ್ಗಕ್ಕೆ ರಾಜ್ಯ ಚುನಾವಣೆಯ ಸಹ ಪ್ರಮುಖ್ ಅಣ್ಣಾಮಲೈ ಆಗಮಿಸುತ್ತಿದ್ದು, ಶಿವಮೊಗ್ಗ, ಭದ್ರಾವತಿಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಎರಡೂ ಕಡೆ ವಿವಿಧ ಸಮಾಜಗಳ ಸಭೆ, ಸಮಾರಂಭ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಭದ್ರಾವತಿಯಲ್ಲಿ ಪ್ರಮುಖರ ಸಭೆ ನಡೆಯಲಿದ್ದರೆ, ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ 11 ಗಂಟೆಗೆ ವಿವಿಧ ಸಮಾಜಗಳ ಸಮಾವೇಶ ನಡೆಯಲಿದೆ. ಸಂಜೆ 5 ಗಂಟೆಗೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಪ್ರಬುದ್ಧರು-ಯುವಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ಇದನ್ನೂ ಓದಿ: BJP Karnataka: ರಾಜ್ಯದಲ್ಲಿ 2 ದಿನ ಧೂಳೆಬ್ಬಿಸಲಿದೆ ಬಿಜೆಪಿ: ಮಹಾ ಪ್ರಚಾರ ಅಭಿಯಾನದಲ್ಲಿ ಯೋಗಿ ಆದಿತ್ಯನಾಥ ಸೇರಿ 98 ಕೇಂದ್ರ ನಾಯಕರು ಭಾಗಿ

ಏಪ್ರಿಲ್ 30 ರಂದು ರಾಜ್ಯಾದ್ಯಂತ ಮನೆ ಮನೆ ಸಂಪರ್ಕ ಅಭಿಯಾನ ನಡೆಯುತ್ತದೆ. ನಗರದ ಪ್ರತಿ ಮನೆಗೂ ಮಹಾಸಂಪರ್ಕ ಆಭಿಯಾನದ ಮೂಲಕ ಹೋಗುತ್ತಿದ್ದೇವೆ. ಶಿವಮೊಗ್ಗದ 32 ವಾರ್ಡ್‌ಗಳ 8496 ಪೇಜ್ ಪ್ರಮುಖರು ಪ್ರತಿ ಮನೆಗೂ ಹೋಗುತ್ತಾರೆ. ಬಿಜೆಪಿ ಪರವಾಗಿ ಮತ ಕೇಳಲಿದ್ದಾರೆ. ಇದು ಜಿಲ್ಲೆಯಾದ್ಯಂತ ನಡೆಯಲಿದೆ. ಬಿಜೆಪಿ ಪ್ರತಿ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಿದೆ. ಎಲ್ಲರೂ ಬಿಜೆಪಿಯ ಪರವಾಗಿ ನಿಂತು, ಚನ್ನಬಸಪ್ಪ ಅವರನ್ನು ಗೆಲ್ಲಿಸುತ್ತಾರೆ. ಕಳೆದ ಬಾರಿ 46 ಸಾವಿರ ಲೀಡ್‌ನಲ್ಲಿ ಗೆದ್ದಿದ್ದೇವೆ. ಈ ಬಾರಿ 60 ಸಾವಿರ ಲೀಡ್‌ನಲ್ಲಿ ಗೆಲ್ಲುತ್ತೇವೆ. ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಅಣ್ಣಾಮಲೈ ಕೆಲಸ ಮಾಡಿದ್ದಾರೆ. ಅಂತಹ ವ್ಯಕ್ತಿ ಶಿವಮೊಗ್ಗದಲ್ಲಿ ಬಂದು ಪ್ರಚಾರ ಮಾಡುವುದರಿಂದ ಅನುಕೂಲ ಆಗುತ್ತದೆ ಎಂದು ಹೇಳಿದರು.

Exit mobile version