ಬೆಂಗಳೂರು: ರಾಮಭಕ್ತ ಹನುಮಂತನ ಜನ್ಮಸ್ಥಾನದ ಕುರಿತು ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಚರ್ಚೆಗಳು ನಡೆದಿರುವಂತೆಯೇ, ಕರ್ನಾಟಕವೇ ಹನುಮನ ಜನ್ಮಸ್ಥಳ ಎಂದು ಅಯೋಧ್ಯೆ ಕ್ಷೇತ್ರವನ್ನೊಳಗೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುದ್ರೆ ಒತ್ತಿದ್ದಾರೆ.
ಬೆಂಗಳೂರಿನ ನೆಲಮಂಗಲದ ಬಳಿಯ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ಮಂಜುನಾಥೇಶ್ವರ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್‌ನ ʼಕ್ಷೇಮವನʼ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಆಹ್ವಾನ ನನಗೆ ದೊರೆತದ್ದು ಅದ್ಭುತ ಕ್ಷಣ. ಶ್ರೀ ಕ್ಷೇತ್ರ ಮಂಜುನಾಥ ಸಂಸ್ಥಾನಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷ. ಕರ್ನಾಟಕದಲ್ಲಿ ಮಂಜುನಾಥ ಎನ್ನುವುದು ನಾಥ ಪರಂಪರೆಯನ್ನೇ ಮುಂದುವರಿಸುತ್ತದೆ. ಈ ಮೂಲಕ ಆಧ್ಯಾತ್ಮಿಕ ಭಾವದಿಂದ ಉತ್ತರ ಪ್ರದೇಶ ಹಾಗೂ ಕರ್ನಾಟಕವನ್ನು ಜೋಡಿಸುತ್ತದೆ ಎಂದರು.
ಮಾತು ಮುಂದುವರಿಸಿದ ಯೋಗಿ ಆದಿತ್ಯನಾಥ, ಕರ್ನಾಟಕವನ್ನು ಎಂದಿಗೂ ಸಂಕಟದಲ್ಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದೇ ಕರ್ನಾಟಕದಲ್ಲಿ ಶ್ರೀರಾಮನ ಸಹಾಯಕ್ಕೆ ಹನುಮಂತ ಸಹಾಯಕ್ಕೆ ಬಂದಿದ್ದ. ಹನುಮಂತನ ಸಹಾಯದಿಂದಲೇ ಸೇತುಬಂಧ ನಿರ್ಮಾಣವಾಯಿತು. ಭಾರತದಲ್ಲಿ ರಾಮರಾಜ್ಯ ಸ್ಥಾಪನೆಗೆ ಹನುಮಂತನ ಈ ಕಾರ್ಯವೇ ಆಧಾರವಾಯಿತು ಎಂದು ಶ್ಲಾಘಿಸಿದರು.
ಕರ್ನಾಟಕದ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಾನ ಎಂದು ಅನೇಕ ಶತಮಾನಗಳಿಂದಲೂ ನಂಬಿಕೊಂಡು ಬರಲಾಗಿದೆ. ಇತ್ತೀಚೆಗೆ ಈ ವಿಚಾರದಲ್ಲಿ ಭಿನ್ನ ಧ್ವನಿ ಹೊರಡಿಸಿದ್ದ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್, ತಿರುಮಲ ಬೆಟ್ಟದಲ್ಲಿ ಆಂಜನೇಯ ಜನಿಸಿದ್ದ ಎಂದು ವಾದ ಮಂಡಿಸಿತ್ತು.
ಕರ್ನಾಟಕದಲ್ಲೆ ಆಂಜನೇಯ ಜನಿಸಿದ್ದು ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ ಎಂದು ಅನೇಕರು ನಿರೂಪಿಸುತ್ತ ಬಂದಿದ್ದಾರೆ. ಕರ್ನಾಟಕ ಸರ್ಕಾರವೂ ಅಂಜನಾದ್ರಿ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಹ ಅಂಜನಾದ್ರಿಗೆ ತೆರಳಿ ಬಂದಿದ್ದಾರೆ.
ಇದೆಲ್ಲ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೆ, ಸಿಎಂ ಬೊಮ್ಮಾಯಿ ಸೇರಿ ಅನೇಕ ಗಣ್ಯರಿದ್ದ ವೇದಿಕೆಯಿಂದಲೇ ಯೋಗಿ ಆದಿತ್ಯನಾಥ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ | ಅಂಜನಾದ್ರಿಯೇ ಹನುಮ ಜನ್ಮಸ್ಥಳ; ನಂಬಿಕೆಗಿಂತ ಬೇರೆ ಪುರಾವೆ ಬೇಕಿಲ್ಲ: ಸಿಎಂ ಬೊಮ್ಮಾಯಿ