Site icon Vistara News

Indira Canteen : ಇನ್ನು ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸಾಹಾರಕ್ಕೂ ಅವಕಾಶ

Indira Canteen HC Mahadevappa

#image_title

ಮೈಸೂರು: ಇಂದಿರಾ ಕ್ಯಾಂಟೀನ್‌ಗಳನ್ನು‌ (Indira Canteen) ಮತ್ತೆ ಪೂರ್ಣ ಸ್ವರೂಪದಲ್ಲಿ ಆರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರ ಅಲ್ಲಿ ಮಾಂಸಾಹಾರಕ್ಕೂ (Non vegetarian food) ಅವಕಾಶ ನೀಡಲು ಮುಂದಾಗಿದೆ. ಈ ವಿಚಾರವನ್ನು ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ (Dr. HC Mahadevappa) ಹೇಳಿದ್ದಾರೆ.

ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ನೀಡುವ ಬಗ್ಗೆ ಸದ್ಯಕ್ಕೆ ಚಿಂತನೆ ಇಲ್ಲ. ಆದರೆ, ಹೊರಗಡೆಯಿಂದ ಮಾಂಸಾಹಾರ ತಂದು ತಿನ್ನಬಹುದು ಎಂದು ಅವರು ಹೇಳಿದರು. ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಕೊಡುತ್ತೇವೆ, ಮಾಂಸಾಹಾರವನ್ನು ಹೊರಗಡೆಯಿಂದ ತಂದು ತಿನ್ನಬಹುದು ಎನ್ನುವುದು ಎಚ್‌.ಸಿ ಮಹದೇವಪ್ಪ ಅವರ ಅಭಿಮತ.

87% ಕುಟುಂಬಗಳಲ್ಲಿ ಮಹಿಳೆಯೇ ಯಜಮಾನಿ

ಗೃಹಲಕ್ಷ್ಮಿ ಮತ್ತಿತರ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾರ್ಗಸೂಚಿ ರೂಪಿಸುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ ಅವರು, ರಾಜ್ಯದ ಶೇ.87ರಷ್ಟು ಕುಟುಂಬದಲ್ಲಿ ಮಹಿಳೆಯೇ ಯಜಮಾನಿ ಎಂದರು.
ಕೇಂದ್ರ ಸರ್ಕಾರ ದೇಶಾದ್ಯಂತ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದೆ. ಕಾಯ್ದೆಯ ಮಾರ್ಗಸೂಚಿಗಳ ಅನ್ವಯ ಮನೆಯ ಯಜಮಾನಿ ತೀರ್ಮಾನ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಅನಗತ್ಯವಾಗಿ ಗೊಂದಲ ಮೂಡಿಸುವುದಕ್ಕೆ ಅವಕಾಶವೇ ಇಲ್ಲ ಎಂದು ಹೇಳಿದರು.

ಅಕ್ಕಿ ಖರೀದಿಗೆ ಪರ್ಯಾಯ ಮಾರ್ಗ

ʻʻಚುನಾವಣೆ ಪೂರ್ವದಲ್ಲಿ ಪ್ರಕಟಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ವಿದ್ಯುತ್, ಉಚಿತ ಬಸ್ ಸೌಲಭ್ಯ ಜಾರಿಯಾಗಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ನೀಡಲು ಹಿಂದೇಟು ಹಾಕಿದೆ. ಕೇಂದ್ರ ಸರ್ಕಾರ ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದರೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಅನ್ನಭಾಗ್ಯಕ್ಕೆ ಪರ್ಯಾಯ ಮಾರ್ಗವಾಗಿ ಅಕ್ಕಿ ಖರೀದಿಗೆ ಚಿಂತನೆ ನಡೆಸಲಾಗುತ್ತಿದೆʼʼ ಎಂದು ಎಚ್‌.ಸಿ. ಮಹದೇವಪ್ಪ ಹೇಳಿದರು.

ದಲಿತ ಸಿಎಂ: ಪರಮೇಶ್ವರ್‌ ಹೇಳಿಕೆಗೆ ಬೆಂಬಲ

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಹೇಳಿಕೆಗೆ ಮಹದೇವಪ್ಪ ಸಾಥ್‌ ನೀಡಿದರು.

ʻʻನಮ್ಮಲ್ಲೂ ಹಲವು ಆಟಗಾರರು ಇದ್ದಾರೆ. ಆದರೆ ಅವಕಾಶ ಸಿಗಬೇಕು ಅಷ್ಟೆ. ದಲಿತ ಸಮುದಾಯ ಸಂಪೂರ್ಣವಾಗಿ ಕಾಂಗ್ರೆಸ್​ಗೆ ಬೆಂಬಲ ನೀಡಿದೆ. ಸುಮಾರು ಶೇ.95ರಷ್ಟು ದಲಿತರು ಮತ ಹಾಕಿದ್ದಾರೆ. ವೋಟ್ ಹಾಕೋದು ನಾವು, ಅಧಿಕಾರ ಮಾತ್ರ ಬೇರೆಯವರಿಗೆ ಅನ್ನುವ ನೋವಿದೆ. ಹಿಂದೆಯೂ ಬಿ.ರಾಚಯ್ಯ, ಎನ್.ರಾಚಯ್ಯ ಸೇರಿದಂತೆ ಅನೇಕರಿಗೆ ಸಿಎಂ ಆಗುವ ಅರ್ಹತೆ ಇತ್ತು. ಈಗ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ.
ಡಾ.ಜಿ.ಪರಮೇಶ್ವರ್, ನಾನು, ಕೆ.ಎಚ್.ಮುನಿಯಪ್ಪ ಇದ್ದೇವೆ. ನನ್ನ ಸಮುದಾಯಕ್ಕೆ ರಾಜಕೀಯ ಅಧಿಕಾರ ಸಿಗಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಬಯಕೆ ಆಗಿತ್ತು. ನನಗೂ ಆಸೆ ಇದೆ. ಆಸೆ ಇಲ್ಲದೇ ಇದ್ದರೆ ಬುದ್ದ ಆಗಿಬಿಡುತ್ತಿದ್ದೆ.
ಈಗ ನಾನು ಬುದ್ದನ ಅನುಯಾಯಿ ಆಗಿದ್ದೇನೆʼʼ ಎಂದು ಮಹದೇವಪ್ಪ ನುಡಿದರು.

ಇದನ್ನೂ ಓದಿ : Congress Guarantee: ಆಸೆ ಇದ್ದರೆ ಪ್ರತಾಪ್‌ಸಿಂಹ ಇನ್ನೊಂದು ಮದ್ವೆ ಆಗ್ಲಿ; ತನ್ವೀರ್‌ ಸೇಠ್‌ ಸಲಹೆ!

Exit mobile version