ಚಿಕ್ಕಮಗಳೂರು: ಸಾರಿಗೆ ಬಸ್‌ನಿಂದ ಯುವತಿಯೊಬ್ಬಳು ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದು, ಸಾವಿನಲ್ಲೂ ಯುವತಿ ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದಿದ್ದಾಳೆ.
ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡಾದ ರಕ್ಷಿತಾ ನಾಯಕ್ ಮೃತ ಯುವತಿ. ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಮ್ ಓದುತ್ತಿದ್ದ ರಕ್ಷಿತಾ ಮೂರು ದಿನಗಳ ಹಿಂದೆ ಸಾರಿಗೆ ಬಸ್‌ನಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಳು. ತಲೆಗೆ ಗಂಭೀರವಾಗಿ ಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ತಕ್ಷಣ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ರಕ್ಷಿತಾಳ ಮೆದುಳು ನಿಷ್ಕ್ರಿಯವಾಗಿರುವುದಾಗಿ ಬುಧವಾರ ವೈದ್ಯರು ತಿಳಿಸಿದ್ದಾರೆ. ಸಾರಿಗೆ ಬಸ್ ಚಲಿಸುವಾಗ ನಿರ್ವಾಹಕನ ನಿರ್ಲಕ್ಷ್ಯದಿಂದ ಯುವತಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಗಳನ್ನು ಕಳೆದುಕೊಂಡ ದುಃಖದಲ್ಲೂ ತಾಯಿ ಲಕ್ಷ್ಮಿಬಾಯಿ, ತಂದೆ ಸುರೇಶ್ ನಾಯಕ್‌ರಿಂದ ಯುವತಿಯ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹೃದಯ, ಎರಡು ಕಿಡ್ನಿ, ಎರಡು ಕಣ್ಣುಗಳು, ಎರಡು ಶ್ವಾಸಕೋಶ ಸೇರಿ ಒಟ್ಟು ಒಂಬತ್ತು ಮಂದಿಗೆ ರಕ್ಷಿತಾಳ ಅಂಗಾಂಗಗಳನ್ನು ಜೋಡಿಸಲು ತೀರ್ಮಾನಿಸಲಾಗಿದೆ. ರಾತ್ರಿ ವೇಳೆಗೆ ಚಿಕ್ಕಮಗಳೂರಿಗೆ ತಜ್ಞ ವೈದ್ಯರ ತಂಡ ಆಗಮಿಸಲಿದ್ದು, ಬಳಿಕ ಗುರುವಾರ ಹೆಲಿಕಾಪ್ಟರ್‌ನಲ್ಲಿ ಅಂಗಾಂಗ ರವಾನೆ ಮಾಡಲಿದ್ದಾರೆ.
ಇದನ್ನೂ ಓದಿ | Crime News | ಆನೆ ದಂತ, ಚಿರತೆ ಚರ್ಮ ಮಾರಾಟ ಮಾಡುತ್ತಿದ್ದವರ ಸೆರೆ; ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಕೇಸ್