ಬೆಳಗಾವಿ: ಬಡ ಕುಟುಂಬಕ್ಕೆ ಆಸರೆಯಾಗಬೇಕು ಎಂಬ ಆಸೆ, ಗಗನಸಖಿಯಾಗಬೇಕು ಎಂಬ ಕನಸು ಹೊತ್ತಿದ್ದ ಆಕೆ ೧೯ನೇ ವಯಸ್ಸಿಗೇ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ, ಈಗ ಬೆಳಗಾವಿಯ ಆಸ್ಪತ್ರೆಗೆ ಬಂದು ಅನುಮಾನಾಸ್ಪದವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಬೆಂಗಳೂರಿನಿಂದ ಆಕೆಯನ್ನು ಬೆಳಗಾವಿವರೆಗೆ ಕರೆತಂದು ಬಿಟ್ಟು ಹೋದ ಆ ಹುಡುಗ ಯಾರು, ಅವನು ಸಿಮ್ ಮುರಿದು ಹಾಕಿದ್ದು ಯಾಕೆ? ಬೆಂಗಳೂರಿನಲ್ಲಿ ನಿಜಕ್ಕೂ ಏನಾಗಿತ್ತು? ಅವಳು ಆಸ್ಪತ್ರೆ ಸೇರಿದ ಕೆಲವೇ ಹೊತ್ತಲ್ಲಿ ಪ್ರಾಣ ಕಳೆದುಕೊಂಡಿದ್ದು ಹೇಗೆ ಎಂಬ ಹತ್ತಾರು ಪ್ರಶ್ನೆಗಳು ಆಕೆಯ ಸಾವಿನ ಹಿಂದೆ ಸಾಲುಗಟ್ಟಿ ನಿಂತಿವೆ.
ಹೀಗೆ ಅನುಮಾನಾಸ್ಪದವಾಗಿ ಪ್ರಾಣ ಕಳೆದುಕೊಂಡ ಹುಡುಗಿಯ ಹೆಸರು ತಬಸ್ಸುಂ ಸವದತ್ತಿ. ವಯಸ್ಟು ೧೯ ಮಾತ್ರ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಶಾಬಿರಾ ಬಾನು ಎಂಬವರ ಮಗಳು.
ಗಗನಸಖಿ ಆಗಬೇಕೆಂದು ಕನಸು ಕಂಡಿದ್ದ ಈಕೆ ಈ ಸಂಬಂಧ ಖಾಸಗಿ ಏರ್ ಹೋಸ್ಟೆಸ್ ಟ್ರೇನಿಂಗ್ ಸೆಂಟರ್‌ನಲ್ಲಿ ತರಬೇತಿ ಸಹ ಪಡೆದಿದ್ದಳಂತೆ. ಬಳಿಕ ತನಗೆ ಎಕ್ಸ್‌ಪೀರಿಯೆನ್ಸ್ ಲೆಟರ್ ಬೇಕು ಎಂಬ ಕಾರಣಕ್ಕಾಗಿ ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಕಾಲ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದ್ದಳು.
ಮಂಗಳವಾರ ರಾತ್ರಿ ತಾಯಿ ಶಾಬಿರಾ ಬಾನು ಅವರಿಗೆ ಕರೆ ಮಾಡಿ ಸ್ವಲ್ಪ ಹುಷಾರಿಲ್ಲ, ನಾಳೆ ಊರಿಗೆ ಬರುತ್ತೇನೆ ಎಂದು ಹೇಳಿದ್ದಳು. ಆದರೆ, ತಾಯಿಗೆ ಆಕೆ ಕಂಡಿದ್ದು ಹೆಣವಾಗಿ.
ನಿತ್ರಾಣ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಳು
ನಿಜವೆಂದರೆ, ತಬಸ್ಸುಮ್ ತಾಯಿ ಜತೆ ಹೇಳಿದಂತೆಯೇ ಬೆಳಗಾವಿಗೆ ಬಂದಿದ್ದಾಳೆ. ಆದರೆ, ಬಂದಿದ್ದು ಸಂಪೂರ್ಣ ನಿತ್ರಾಣ ಸ್ಥಿತಿಯಲ್ಲಿ. ಬುಧವಾರ ಯಾರೋ ಯುವಕ ತಬಸ್ಸುಮ್‌ಳನ್ನು ನಿತ್ರಾಣ ಸ್ಥಿತಿಯಲ್ಲಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಯಾರೋ ಅಪರಿಚಿತ ವ್ಯಕ್ತಿ ದಾಖಲಿಸಿದ್ದಾನೆ. ಆಕೆಯನ್ನು ದಾಖಲಿಸಿಕೊಂಡ ಸಿಬ್ಬಂದಿ ಇದು ಮೆಡಿಕೋ ಲೀಗಲ್ ಕೇಸ್ (ಎಂಎಲ್‌ಸಿ) ಆಗುತ್ತದೆ ಎಂದು ಹೇಳಿದ್ದರು. ಪೊಲೀಸ್ ಕೇಸು ಆಗುತ್ತದೆ ಎಂದು ಕೇಳಿದವನೇ ಹುಡುಗ ಅಲ್ಲಿಂದ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾಳೆ.
ಕುಟಂಬಸ್ಥರು ಹೇಳೋದೇನು?
ಯುವತಿಯ ತಲೆಗೆ ಗಾಯವಾಗಿದ್ದು ಮೈ ಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯಗಳಿದ್ದು ಯಾರೋ ದುಷ್ಟರು ಅತ್ಯಾಚಾರವೆಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೃತ ತಬಸ್ಸುಮ್ ಸಂಬಂಧಿಕ ಫಝಲ್ ಪಠಾಣ್, ‘ಯಾರೋ ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಿದ್ದಾರೆ. ಇದು ಹೇಗೆ ಆಯ್ತು ಯಾರು ಏನ್ ಮಾಡಿದ್ದಾರೆ ಎನ್‌ಐಎ, ಸಿಬಿಐ ತನಿಖೆ ಆಗಬೇಕು. ಬೆಂಗಳೂರಿಂದ ಬೆಳಗಾವಿ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ತಬಸ್ಸುಮ್ ದಾಖಲಾದಾಗ ಕಣ್ಣು ತೆರೆಯಲು ಸಹ ಆಗುತ್ತಿರಲಿಲ್ಲ. ಓವರ್‌ಡೋಸ್ ಡ್ರಗ್ಸ್ ಕೊಟ್ಟ ಬಗ್ಗೆ ನಮಗೆ ಅನುಮಾನ ಇದೆ. ಮೈ ಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯಗಳಿವೆ. ಈ ಕೃತ್ಯವನ್ನು ಯಾರು ಎಸೆಗಿದ್ದಾರೋ ಆ ಆರೋಪಿಗಳನ್ನು ಬಂಧಿಸದಿದ್ರೆ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡ್ತೀವಿ. ತಬಸ್ಸುಮ್‌ಳನ್ನು ಆಸ್ಪತ್ರೆಗೆ ದಾಖಲಿಸಿದ ವ್ತಕ್ತಿ ಪೊಲೀಸ್ ಕೇಸ್ ಆಗುತ್ತೆ ಅಂದ ತಕ್ಷಣ ಮೊಬೈಲ್ ಪಡೆದುಕೊಂಡು ಹೋಗಿದ್ದಾರೆ. ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದೆ. ಕೈ ಕಾಲು ಸೇರಿ ವಿವಿಧೆಡೆ ಸುಟ್ಟ ಗಾಯಗಳಾಗಿವೆ. ಮಗಳಿಗೆ ಏನಾಗಿದೆ ಎಂದು ತಾಯಿಗೆ ಹೇಳಲು ಬರುತ್ತಿಲ್ಲ. ನಾನು ಮೃತದೇಹ ನೋಡಿದ್ದು ಮೇಲ್ನೋಟಕ್ಕೆ ಅವಳ ಮೇಲೆ ಅತ್ಯಾಚಾರ ಆಗಿದೆ ಅನಿಸುತ್ತದೆʼʼ ಎಂದು ಹೇಳಿದ್ದಾರೆ.
ʻʻಹುಡುಗಿ ವಿದ್ಯಾವಂತೆ ಹಾಗೂ ಸೂಕ್ಷ್ಮವಾಗಿದ್ದಳು. ಬಡ ಕುಟುಂಬದಿಂದ ಬಂದಿದ್ದಾಳೆ. ಈ ಸುದ್ದಿ ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿಯವರಿಗೂ ತಲುಪಬೇಕು. ಬೇಟಿ ಬಚಾವೋ ಬೇಟಿ ಪಢಾವೋ ಅಂತಾರೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕೆಲಸಕ್ಕೆ ಹೇಗೆ ಕಳಿಸೋದು’ ಎಂದು ಪ್ರಶ್ನೆ ಮಾಡಿದ್ದಾರೆ ಪಠಾಣ್.
ಅಪರಿಚಿತ ಯುವಕ ಮೆಸೇಜ್ ಮಾಡಿದ್ದ
ತಬಸ್ಸುಮ್‌ಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಅಪರಿಚಿತ ಯುವಕ ತಬಸ್ಸುಮ್ ಮೊಬೈಲ್‌ನೊಂದಿಗೆ ಎಸ್ಕೇಪ್ ಆಗಿದ್ದಾನೆ. ಆದರೆ, ಬುಧವಾರ ರಾತ್ರಿ ತಬಸ್ಸುಮ್ ಮೊಬೈಲ್ ನಂಬರ್‌ನಿಂದ ಆಕೆಯ ತಾಯಿಯ ಮೊಬೈಲ್ ನಂಬರ್‌ಗೆ ವಾಟ್ಸಪ್ ಮೆಸೇಜ್ ಸಹ ಮಾಡಿದ್ದಾನೆ.
‘ಅವರು ಹುಷಾರಾಗಿದ್ದಾರಾ? ಬಸ್‌ನಿಂದ ಇಳಿಯಬೇಕಾದ್ರೆ ಬಿದ್ದು ತಬಸ್ಸುಮ್ ಮೊಬೈಲ್ ಒಡೆದು ಹೋಗಿತ್ತು. ಸಿಮ್ ನನ್ನ ಮೊಬೈಲ್‌ನಲ್ಲಿ ಹಾಕಿ ಮೆಸೇಜ್ ಮಾಡ್ತಿದೀನಿ. ಅವಳ ಮೊಬೈಲ್ ಚಿಕ್ಕ ಬ್ಯಾಗ್‌ನಲ್ಲಿ ಇದೆ. ಅವಳ ಸಿಮ್ ಮುರಿದು ಹಾಕ್ತಿದೀನಿ, ಬೇರೆ ಸಿಮ್ ತಗೆದುಕೊಳ್ಳಿ, ನನಗೆ ತೊಂದರೆ ಕೊಡಬೇಡಿ’ ಎಂಬ ಸಂದೇಶ ರವಾನಿಸಿದ್ದಾನೆ. ಅವನು ಯಾರು? ಅವನ್ಯಾಕೆ ಹೆದರಬೇಕು ಎನ್ನುವುದು ಪೊಲೀಸರ ತನಿಖೆಯಿಂದಲಷ್ಟೇ ಗೊತ್ತಾಗಬೇಕಿದೆ.
ಮುಖ ಊದಿಕೊಂಡಿತ್ತು
ಅಕ್ಟೋಬರ್ 11ರಂದು ತಾಯಿ ಶಾಬೀರಾ ಬಾನುಗೆ ಫೋನ್ ಮಾಡಿದ್ದ ತಬಸ್ಸುಮ್ ತನಗೆ ಹುಷಾರಿಲ್ಲ ಎಂದು ಹೇಳಿದ್ದಳು. ತಾನು ಬೆಂಗಳೂರಿಂದ ಬೆಳಗಾವಿಗೆ ಬರೋದಾಗಿ ಹೇಳಿದ್ದಳಂತೆ. ಈ ವೇಳೆ ತನ್ನ ಸೆಲ್ಫಿ ಫೋಟೋ ಕಳಿಸಿದ್ದಳಂತೆ. ಫೋಟೋದಲ್ಲಿ ನೋಡಿದ್ರೆ ತಬಸ್ಸುಮ್ ಮುಖಕ್ಕೆ ಗಾಯವಾಗಿ ಊದಿಕೊಂಡಿತ್ತಂತೆ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು ತನಿಖೆ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.