Site icon Vistara News

Road accident: ಲಾರಿ, ಬೈಕ್‌ ಮುಖಾಮುಖಿ ಡಿಕ್ಕಿ; ಬೈಕ್‌ನಲ್ಲಿದ್ದ ಯುವಕ, ಯುವತಿ ಸ್ಥಳದಲ್ಲೇ ಸಾವು

Road accident

#image_title

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.

ಬುಧವಾರ ಬೆಳಗ್ಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತಪಟ್ಟವರು ಇಬ್ಬರೂ ಬೈಕ್‌ನಲ್ಲಿದ್ದರು. ಮೃತರನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ದೀಪಿಕಾ (22) ಮತ್ತು ತರೀಕೆರೆ ತಾಲೂಕಿನ ಬೇಲೇನಹಳ್ಳಿ ನಿವಾಸಿ ವಿಶ್ವಾಸ್‌ (22) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಉದ್ಯೋಗಿಗಳಾಗಿದ್ದು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು ಎಂದು ಹೇಳಲಾಗುತ್ತಿದೆ. ಅವರಿಬ್ಬರು ಬೆಳಗ್ಗಿನ ಜಾವ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ತವರಿಗೆ ಬಂದಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ತವರಿಗೆ ಬಂದಿದ್ದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಶಿರಗುಪ್ಪಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಬಸವ್ವ ಚಿಕ್ಕನರ್ತಿ (32) ಎಂದು ಗುರುತಿಸಲಾಗಿದೆ.

ಬಸವ್ವ ಅವರು ಗಂಡನ ಮನೆ ನೆರೆಗಲ್ಲ ಗ್ರಾಮದಿಂದ ಶಿರಗುಪ್ಪಿಗೆ ಬಂದಿದ್ದರು. ಅನಾರೋಗ್ಯದ ಕಾರಣ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇತುವೆ ಮೇಲಿಂದ ತಳ್ಳಿ ಕಾಲೇಜು ವಿದ್ಯಾರ್ಥಿ ಕೊಲೆ

ಕಲಬುರಗಿ: ವಿದ್ಯಾರ್ಥಿಯೊಬ್ಬನನ್ನು ಸೇತುವೆಯ ಮೇಲಿಂದ ತಳ್ಳಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾಗರಾಣಿ ಬಳಿ ನಡೆದ ಈ ಘಟನೆಯಲ್ಲಿ ಕೊಲೆಯಾದವನನ್ನು ಶಿವಕುಮಾರ್ (17) ಎಂದು ಗುರುತಿಸಲಾಗಿದೆ.

ಶಿವಕುಮಾರ್ ಕಲಬುರಗಿ ನಗರದ ಕಮಲನಗರ ನಿವಾಸಿಯಾಗಿದ್ದು, ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ.

ಕೊಲೆಯಾದ ವಿದ್ಯಾರ್ಥಿ ಶಿವಕುಮಾರ್‌

ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ಶಿವಕುಮಾರ್‌ ಜೂನ್‌ 18ರಂದು ಮನೆಯಿಂದ ಸ್ನೇಹಿತರ ಜೊತೆಗೆ ಹೋಗಿದ್ದ. ಜತೆಗೆ ಹೋಗಿದ್ದ ಸ್ನೇಹಿತರು ಮರಳಿಬಂದರೂ ಶಿವಕುಮಾರ್‌ ಮಾತ್ರ ಮನೆಗೆ ಮರಳಿ ಬಂದಿರಲಿಲ್ಲ. ಹೀಗಾಗಿ ಮನೆಯವರು ಆತನಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದ್ದರು.

ಮಂಗಳವಾರ ಸಂಜೆ ಈತನ ಶವ ನಾಗರಾಣಿ ಬಳಿ ಇರುವ ಭೀಮಾ ನದಿಯಲ್ಲಿ ಪತ್ತೆಯಾಗಿದೆ. ಶಿವಕುಮಾರ್‌ನನ್ನು ಗೆಳೆಯರೇ ಬಂದು ಕರೆದುಕೊಂಡು ಹೋಗಿ, ಬಳಿಕ ಶವವಾಗಿ ಪತ್ತೆಯಾಗಿರುವುದರಿಂದ ಸ್ನೇಹಿತರಿಂದಲೇ ಕೊಲೆ ಆಗಿರುವ ಶಂಕೆ ಇದೆ. ಸೇತುವೆಯ ಮೇಲಿಂದ ತಳ್ಳಿ ಕೊಲೆ ಮಾಡಿರುವ ಬಗ್ಗೆ ಸಂಶಯವಿದೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದಲ್ಲಿ ಸಿಡಿಲು ಬಡಿದು ರೈತ ಸಾವು

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೀರುವಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟರು. ಬೀರುವಳ್ಳಿ ಗ್ರಾಮದ ಮಂಜುನಾಥ್ (47) ಮೃತ ರೈತ.

ಸಿಡಿಲು ಬಡಿದು ಮೃತಪಟ್ಟ ಮಂಜುನಾಥ್

ಮಂಜುನಾಥ್‌ ಅವರು ಮಂಗಳವಾರ ತನ್ನ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಸಿಡಿಲು ಬಡಿದಿದೆ. ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗೆ ಕರೆತರುವ ಮುನ್ನವೇ ಮಂಜುನಾಥ್‌ ಕೊನೆಯುಸಿರೆಳೆದಿದ್ದರು.

ಸಮೀಪದಲ್ಲೆ ಇದ್ದ ರಾಜು ಎಂಬ ರೈತನಿಗೂ ಸಿಡಿಲಾಘಾತವಾಗಿದೆ. ಆದರೆ, ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ರಾಜು ಅವರಿಗೆ ಸ್ಥಳೀಯ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: Road Accident: ಗೂಡ್ಸ್‌ ಗಾಡಿ ಚಕ್ರಕ್ಕೆ ಸಿಲುಕಿದ ಮಗು ಮೃತ್ಯು; ನಿಯಂತ್ರಣ ತಪ್ಪಿದ ಬೈಕ್‌, ಲಾರಿ ಹರಿದು ಮತ್ತಿಬ್ಬರ ಸಾವು

Exit mobile version