ವಿಜಯಪುರ: ಮುಖಕ್ಕೆ ಸಿಗರೇಟು ಹೊಗೆ ಬಿಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನೊಬ್ಬ ರಾಡ್ನಿಂದ ಹಿಗ್ಗಾಮುಗ್ಗ ಥಳಿಸಿ ಪ್ರತಿಕಾರ ತೀರಿಸಿಕೊಂಡಿದ್ದಾನೆ. ಸಿಗರೇಟು ಹೊಗೆ ವಿಷಯದಲ್ಲಿ ಸಣ್ಣ ಜಗಳ ನಡೆದ ಮರುದಿನ ಯುವಕ ಸಿನಿಮೀಯ ಶೈಲಿಯಲ್ಲಿ ಬಂದು ಮಾರಣಾಂತಿಕ ಹಲ್ಲೆ ನಡೆಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆತಂಕ ಸೃಷ್ಟಿಸಿದೆ.
ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ಆಗಸ್ಟ್ ೨ರಂದು ಸಿಗರೇಟು ಹೊಗೆ ಮುಖಕ್ಕೆ ಬಿಟ್ಟ ಘಟನೆ ನಡೆದಿತ್ತು. ಅಕ್ಷಯ್ ಎಂಬ ಇನ್ನೂ ಚಿಗುರು ಮೀಸೆಯ ಹುಡುಗ ಸಾರ್ವಜನಿಕ ಜಾಗದಲ್ಲಿ ರಾಜಾರೋಷವಾಗಿ ಸಿಗರೇಟು ಸೇದಿದ್ದಲ್ಲದೆ, ಪಕ್ಕದಲ್ಲಿ ನಿಂತಿದ್ದ ಮಲ್ಲಪ್ಪ ಬೆಳ್ಳುಂಡಗಿ ಎಂಬಾತನ ಮುಖಕ್ಕೆ ಸ್ಟೈಲಾಗಿ ಹೊಗೆ ಬಿಟ್ಟಿದ್ದ. ಆಗ ಸಿಟ್ಟಿಗೆದ್ದ ಮಲ್ಲಪ್ಪ ಇದನ್ನು ಪ್ರಶ್ನಿಸಿದ್ದ.
ಈ ವೇಳೆ ಇಬ್ಬರ ನಡುವೆ ನಡೆದ ವಾಗ್ವಾದ, ಗಲಾಟೆ ನಡೆದಿತ್ತು. ಅಂದು ಮಲ್ಲಪ್ಪನ ಪರವಾಗಿ ನ್ಯಾಯವಿದ್ದುದರಿಂದ ಅಕ್ಕಪಕ್ಕದವರೂ ಬೆಂಬಲಿಸಿದರು. ಕೊನೆಗೆ ಸ್ಥಳೀಯರು ಸೇರಿ ರಾಜಿ ಸಂಧಾನ ನಡೆಸಿ ಕಳುಹಿಸಿದ್ದರು. ಆದರೆ, ಅಕ್ಷಯ್ ಮಾತ್ರ ʻʻನಿನ್ನನ್ನು ನೋಡಿ ಕೊಳ್ಳುವೆʼʼ ಎಂದು ಮಲ್ಲಪ್ಪನಿಗೆ ಬೆದರಿಕೆ ಹಾಕಿದ್ದ.
ಮರುದಿನ ಮಾರಣಾಂತಿಕ ಹಲ್ಲೆ
ಆಗಸ್ಟ್ ೩ರಂದು ಮಲ್ಲಪ್ಪ ಬೆಳ್ಳುಂಡಗಿ ಒಂದು ಗೂಡಂಗಡಿ ಬಳಿ ನಿಂತಿದ್ದಾಗ ಅಕ್ಷಯ್ ಒಂದು ರಾಡನ್ನು ಹಿಡಿದುಕೊಂಡು ದೂರದಿಂದಲೇ ಬಂದಿದ್ದ. ನಿಜವೆಂದರೆ, ಮಲ್ಲಪ್ಪನಿಗೆ ಈ ವಿಷಯ ಗೊತ್ತೇ ಇರಲಿಲ್ಲ. ಆತ ಗೂಡಂಗಡಿಯಲ್ಲಿ ಏನೋ ಮಾತನಾಡುತ್ತಿದ್ದ. ಆಗ ಹಿಂದಿನಿಂದ ಬಂದ ಅಕ್ಷಯ್ ಆತನ ತಲೆಗೇ ಗುರಿ ಇಟ್ಟು ಹೊಡೆದಿದ್ದಾನೆ. ಒಂದು ಬಾರಿಯಲ್ಲ ಹಲವು ಬಾರಿ ರಾಡ್ನಿಂದ ಹೊಡೆದಿದ್ದು, ಮಲ್ಲಪ್ಪ ಕೆಳಗೆ ಉರುಳಿ ಬಿದ್ದಿದ್ದಾನೆ. ಆಗಲೂ ಬಿಡದೆ ಹೊಡೆದಿದ್ದಾನೆ. ಕೊನೆಗೆ ಆತನನ್ನು ಬಿಟ್ಟು ಹೋಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇಷ್ಟೆಲ್ಲ ನಡೆದಾಗ ಯಾರೂ ತಡೆಯಲು ಹೋಗಿಲ್ಲ. ಬಳಿಕ ಮಲ್ಲಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆ ನಡೆಸಿದ ಬಳಿಕ ಅಕ್ಷಯ್ ಬೈಕ್ ಒಂದರಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಆತನಿಗೆ ಸುನಿಲ್ ಮತ್ತು ಪ್ರಕಾಶ್ ಎಂಬ ಇತರರು ಸಹಕಾರ ನೀಡಿದ್ದರು. ಪೊಲೀಸರು ಸುನಿಲ್ ಮತ್ತು ಪ್ರಕಾಶನನ್ನು ಬಂಧಿಸಿದ್ದಾರೆ. ಅಕ್ಷಯ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ| ಪರಪ್ಪನ ಅಗ್ರಹಾರ ಜೈಲಿಗೆ ಇನ್ನು ಪಾರ್ಸೆಲ್ ಕಳುಹಿಸುವಂತಿಲ್ಲ: ಹೊಸ ನಿಯಮ ಜಾರಿ