Site icon Vistara News

ರಮೇಶ್‌ ಜಾರಕಿಹೊಳಿ ಆಪ್ತ, ಪೊಲೀಸರಿಂದ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಆರೋಪ: ಯುವಕ ಆತ್ಮಹತ್ಯೆ

Suicides In India belagavi bailahongala

ಬೆಳಗಾವಿ: ಇಲ್ಲಿನ ಕ್ಯಾಂಪ್‌ ಠಾಣಾ ವ್ಯಾಪ್ತಿಯ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಬರೆದಿದ್ದ ಡೆತ್‌ ನೋಟ್‌ನಲ್ಲಿ ಬಿಜೆಪಿ ನಾಯಕ ರಮೇಶ್‌ ಜಾರಕಿಹೊಳಿ ಆಪ್ತ ಪ್ರಥ್ವಿ ಸಿಂಗ್‌, ಕ್ಯಾಂಪ್‌ ಠಾಣೆಯ ಪಿಎಸ್‌ಐ ತನಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಅವರ ಕಾಟ ಸಹಿಸಲಾಗದೆ ಸಾಯುತ್ತಿದ್ದೇನೆ ಎಂದು ಬರೆದಿದ್ದಾನೆ.

ಬೆಳಗಾವಿ ತಾಲೂಕಿನ ಮಚ್ಛೆಯ ನೆಹರು ನಗರದಲ್ಲಿ ಘಟನೆ ನಡೆದಿದ್ದು, ೨೮ ವರ್ಷದ ಸಾವಿಯೋ ಪಿಳೈ ಸಾವಿಗೆ ಶರಣಾದ ಯುವಕ. ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಆಗಿರುವ ಪ್ರಥ್ವಿ ಸಿಂಗ್‌ ಹೆಸರು ಡೆತ್‌ ನೋಟ್‌ನಲ್ಲಿರುವುದರಿಂದ ಹೆಚ್ಚು ಗಮನ ಸೆಳೆದಿದೆ.

ಯಾಕೆ ಈ ಬ್ಲ್ಯಾಕ್‌ಮೇಲ್‌?
ಸಾವಿಯೋ ಪಿಳೈಗೆ ಕ್ಯಾಂಪ್‌ ಠಾಣಾ ವ್ಯಾಪ್ತಿಯ ಪರಿಶಿಷ್ಟ ಮಹಿಳೆಯೊಬ್ಬಳ ಜತೆ ಅಕ್ರಮ ಸಂಬಂಧವಿತ್ತೆಂದು ಹೇಳಲಾಗಿದೆ. ತುಂಬ ಕಾಲ ಚೆನ್ನಾಗಿದ್ದ ಅವರ ನಡುವೆ ವೈಮನಸ್ಯ ಹುಟ್ಟಿಕೊಂಡು ಮನಸ್ತಾಪವಾಗಿ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಅದಾದ ಬಳಿಕ ಕೇಸು ಇತ್ಯರ್ಥದ ಹೆಸರಿನಲ್ಲಿ ಹಣಕ್ಕಾಗಿ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಎಂದು ಪಿಳೈ ಡೆತ್‌ ನೋಟ್‌ನಲ್ಲಿ ಬರೆದಿದ್ದಾನೆ.

ಡೆತ್‌ ನೋಟ್‌ನಲ್ಲಿ ಪ್ರಥ್ವಿ ಸಿಂಗ್‌, ಪಿಎಸ್‌ಐ ಉಮೇಶ್‌ ಕಾಂಬ್ಳೆ ಮತ್ತು ಬಸು ಎಂಬವರ ಹೆಸರಿದೆ. ಪ್ರಥ್ವಿ ಸಿಂಗ್‌, ಕಾಂಬ್ಳೆ ಮತ್ತು ರೇಣುಕಾ ಕಾಂಬ್ಳೆ ಮೂವರೂ ಸೇರಿಕೊಂಡು ನನ್ನನ್ನು ಟ್ರ್ಯಾಪ್‌ ಮಾಡಿದ್ದಾರೆ. ಆಕೆಯನ್ನು ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದಾರೆ. ನನ್ನನ್ನು ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ. ಪಿಎಸ್‌ಐ ಮತ್ತು ಪ್ರಥ್ವಿ ಸಿಂಗ್‌ ಹಣಕ್ಕಾಗಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಪೀಡಿಸುತ್ತಿದ್ದಾರೆ. ಈಗಾಗಲೇ ೧.೫ ಲಕ್ಷ ರೂ. ಕಿತ್ತುಕೊಂಡಿದ್ದಾರೆ. ಇನ್ನೂ ಹಣ ಕೊಡಬೇಕು. ಕೊಡದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಬದುಕುವ ದಾರಿ ಕಾಣದೆ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾನೆ.

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Blackmail ಗೆ ಬೇಸತ್ತು ಸೆಲೂನ್‌ ಉದ್ಯೋಗಿ ಯುವಕ ಆತ್ಮಹತ್ಯೆ, video honey trap ಶಂಕೆ

Exit mobile version