Site icon Vistara News

Young mans suicide | ಗಾಂಜಾ ಸೇವನೆಯ ಸುಳ್ಳು ಆರೋಪದಿಂದ ನೊಂದು ಸಾವಿಗೆ ಶರಣಾದ ಫೋಟೊಗ್ರಾಫರ್‌

ಮೈಸೂರು ಅಭಿಷೇಕ್‌ ಆತ್ಮಹತ್ಯೆ

ಮೈಸೂರು: ಗಾಂಜಾ ಸೇವನೆಯ ಸುಳ್ಳು ಆರೋಪದಿಂದ ಮನ ನೊಂದ ಮೈಸೂರಿನ ಫೋಟೊಗ್ರಾಫರ್‌ ಒಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಭಿಷೇಕ್‌ ಎಂಬ ಯುವ ಫೋಟೊಗ್ರಾಫರ್‌ ನೇಣು ಬಿಗಿದುಕೊಂಡು (Young mans suicide) ಮೃತಪಟ್ಟಿದ್ದಾರೆ. ಮೈಸೂರಿನ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅವರು ಡೆತ್‌ ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದು, ತನ್ನ ಸಾವಿನ ಕಾರಣವನ್ನು ವಿವರಿಸಿದ್ದಾರೆ. ಇತ್ತೀಚೆಗೆ ಅವರು ಗಾಂಜಾ ಸೇವನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದರು. ಇದು ಅವರ ಮನಸ್ಸಿಗೆ ತುಂಬಾ ಘಾಸಿಯುಂಟು ಮಾಡಿತ್ತು. ತಾನು ತಪ್ಪು ಮಾಡಿಲ್ಲದಿದ್ದರೂ ವಿಚಾರಣೆ ಮಾಡಿದ ಪೊಲೀಸರ ಕ್ರಮಕ್ಕೆ ಅಭಿಷೇಕ್ ಬೇಸತ್ತಿದ್ದರು. ಜತೆಗೆ ಸಾಮಾಜಿಕವಾಗಿಯೂ ಕೆಲವರು ಅವರ ಬಗ್ಗೆ ಆಡಿಕೊಂಡಿದ್ದು, ಅವರಿಗೆ ನೋವುಂಟು ಮಾಡಿತ್ತು ಎಂದು ಹೇಳಲಾಗಿದೆ.

ಆವತ್ತು ನಡೆದಿದ್ದೇನು ಎನ್ನುವ ಬಗ್ಗೆ ಅವರೇ ಬರೆದಿಟ್ಟಿದ್ದಾರೆ.

ʻʻನನಗೆ ಸ್ನೇಹಿತನೊಬ್ಬನಿಗೆ ಕೊಟ್ಟಿದ್ದ ಸಾಲವನ್ನು ವಾಪಸ್‌ ಕೇಳಲು ಹೋಗಿದ್ದೆ. ಅವನು ಹೇಳಿದ ಸ್ಥಳಕ್ಕೆ ಹೋದಾಗ ಅಲ್ಲಿ ಕೆಲವರು ಗಾಂಜಾ ಸೇವನೆ ಮಾಡಿದ್ದರು. ಆ ಸಮಯದಲ್ಲಿ ಆ ಸ್ಥಳಕ್ಕೆ ಪೊಲೀಸರು ಬಂದರು. ನನ್ನನ್ನೂ ಅವರೊಂದಿಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ನಾನು ಗಾಂಜಾ ಸೇವಿಸಿಲ್ಲ. ನಾನು ಸಾಲದ ಹಣ ಕೇಳಲು ಬಂದಿದ್ದೆ. ಅವನೇ ಇಲ್ಲಿಗೆ ಬಾ ಅಂದಿದ್ದ ಎಂದು ವಿವರಿಸಿದೆ. ಆದರೆ, ಅವರು ನೀನು ಗಾಂಜಾ ವ್ಯಸನಿ ಎಂದು ಕೀಳಾಗಿ ನೋಡಿ ಹೀಯಾಳಿಸಿದರು. ಬದುಕಿನ ಮೌಲ್ಯಗಳನ್ನು ಇಟ್ಟುಕೊಂಡು ಬೆಳೆದವನು ನಾನು. ನನ್ನಿಂದ ಈ ರೀತಿ ಜೀವಿಸಲು ಸಾಧ್ಯವಿಲ್ಲ. ಈ ತರಹದ ದೂರುಗಳು ಸಹಿಸಲು ಅಸಾಧ್ಯ. ಹೀಗಾಗಿ..ʼʼ ಎಂದು ಅಭಿಷೇಕ್‌ ಡೆತ್‌ ನೋಟ್‌ನಲ್ಲಿ ಬರೆದಿದ್ದಾರೆ.

ʻʻʻನನ್ನನ್ನು ದಯವಿಟ್ಟು ಕ್ಷಮಿಸಿ, ಏನೇ ಕಷ್ಟ ಬಂದರೂ ಇರುವರೆಗೆ ಹೇಡಿತನ ಮಾಡದೆ ಇದ್ದಿದ್ದಕ್ಕೆ ನನಗೆ ಸಿಕ್ಕ ಪ್ರತಿಫಲ ಇದು. ಕೊಲೆಯಾದ ಸ್ಥಳದಲ್ಲಿ ಇದ್ದ ಮಾತ್ರಕ್ಕೆ ಯಾರೂ ಕೊಲೆಗಾರ ಆಗುವುದಿಲ್ಲ. ಇನ್ನೊಂದು ಜನ್ಮ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. I AM VERY SORRY MOM DADʼʼ- ಹೀಗೆ ನೋವಿನ ಪತ್ರವನ್ನು ಬರೆದಿಟ್ಟಿದ್ದಾರೆ. ನಡೆದ ಸತ್ಯ ಘಟನೆಯನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಿ ಅಭಿಷೇಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿಷೇಕ್‌ ಬಗ್ಗೆ ತಿಳಿದವರು ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಪೊಲೀಸರು ದುಡುಕಿನಿಂದ ವರ್ತಿಸಿದರು ಎನ್ನುವ ಜತೆಗೇ ಅಭಿಷೇಕ್‌ ಕೂಡಾ ಇದನ್ನೆಲ್ಲ ಎದುರಿಸಬಹುದಿತ್ತು. ಸಾವಿನ ತೀರ್ಮಾನ ಬೇಕಿರಲಿಲ್ಲ ಎಂಬ ಅಭಿಪ್ರಾಯವಿದೆ. ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide Case: ಒಂಟಿ ಮನೆಯಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರ ಆತ್ಮಹತ್ಯೆ; ಮಾನಸಿಕ ಖಿನ್ನತೆ ಶಂಕೆ

Exit mobile version