ಗದಗ: ರಾಮಮಂದಿರದ (Ram Mandir) ಮೇಲೆ ಪಾಕಿಸ್ತಾನ ಧ್ವಜ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೊ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮುಸ್ಲಿಂ ಯುವಕನನ್ನು ಆಕ್ಷೇಪಾರ್ಹ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ತೌಜುದ್ದೀನ್ ದಫೇದಾರ್ ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮದ ಸಂಕೇತವಿರುವ ಧ್ವಜದ ಚಿತ್ರ ಹಾಕಿ ಬಾಬರಿ ಮಸೀದಿ ಎಂದು ಬರೆದು ಯುವಕ ಶೇರ್ ಮಾಡಿದ್ದ. ಹೀಗಾಗಿ ತಕ್ಷಣ ತೌಜುದ್ದೀನ್‌ನನ್ನು ಗಜೇಂದ್ರಗಡ ಪೊಲೀಸರು ಭಾನುವಾರ ರಾತ್ರಿ ವಶಕ್ಕೆ ಪಡೆದಿದ್ದರು. ಆದರೆ, ಇದೀಗ ಆತನನ್ನು ಬಂಧಿಸಲಾಗಿದ್ದು, ಆತನಿಗೆ ಯಾವುದಾದರೂ ಸಂಘಟನೆ ಜತೆ ಸಂಬಂಧವಿದೆಯೇ ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಎಸ್‌ಪಿ ಬಾಬಾಸಾಬ್ ನೇಮಗೌಡ ಪ್ರತಿಕ್ರಿಯಿಸಿ, ಆರೋಪಿಯನ್ನು ಕಸ್ಟಡಿಗೆ ಪಡೆದಿದ್ದು, ಆತ ಗದಗ ಜಿಲ್ಲೆಯ ಸ್ಥಳೀಯ ನಿವಾಸಿಯಾಗಿದ್ದಾನೆ. ಆತ ಯಾವುದಾದರೂ ಸಂಘಟನೆಗೆ ಸೇರಿದವನಾ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Vijayapura News: ಶಾಲೆಯ ಗೋಡೆ ಕಲ್ಲು ಕುಸಿದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ
ವಿಚಾರಣೆ ವೇಳೆ ಆರೋಪಿಯು ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ನೋಡಿದ್ದೆ ಹಾಗೂ ಆಕಸ್ಮಿಕವಾಗಿ ಅದನ್ನು ಹಂಚಿಕೊಂಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೋಮುಗಲಭೆ ಸೃಷ್ಟಿಸಲು ಸಂಚು ಹೂಡಿದ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದು ಸಂಘಟನೆಗಳು ಒತ್ತಾಯಿಸಿವೆ.