ರಾಮನಗರ: ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯಲ್ಲಿ ಸಹೋದರರ ಕೌಟುಂಬಿಕ ಗಲಾಟೆ ವೇಳೆ ಯೂತ್ ಕಾಂಗ್ರೆಸ್ ಅಧ್ಯಕ್ಷನಿಂದ ಮಚ್ಚಿನಿಂದ ಹಲ್ಲೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ದಾಳಿಗೊಳಗಾದವರು ಕೊಲೆ ಯತ್ನ (Murder Attempt) ಆರೋಪ ಮಾಡಿದ್ದಾರೆ.
ವೀರೇಗೌಡ (35) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಮಾಗಡಿ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಸಂಗಡಿಗರಿಂದ ಗಲಾಟೆ ನಡೆದಿದೆ. ಮಲ್ಲಿಕಾರ್ಜುನ ಹಾಗೂ ವೀರೇಗೌಡ ಎಂಬ ಸಹೋದರರ ನಡುವೆ ಕೌಟುಂಬಿಕ ಕಲಹ ಇತ್ತು. ಇದರ ಬಗ್ಗೆ ಮಾತುಕತೆ ನಡೆಸುವಾಗ ಗಲಾಟೆ ತೀವ್ರವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಆಗ ಮಲ್ಲಿಕಾರ್ಜುನ ಸೀದಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಗೆ ಕರೆ ಮಾಡಿ ಹುಡುಗರ ಜತೆ ಬರುವಂತೆ ಕರೆ ಮಾಡಿದ್ದಾನೆ.
ಹುಡುಗರ ಜತೆ ಲಾಂಗು, ದೊಣ್ಣೆ ಸಹಿತ ಬಂದ ಪ್ರವೀಣ್, ಏಕಾಏಕಿ ವೀರೇಗೌಡನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ವೀರೇಗೌಡ ಎಂಬುವವರಿಗೆ ತಲೆ ಭಾಗಕ್ಕೆ ಮಚ್ಚಿನಿಂದ ಹೊಡೆಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: PM Modi: ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ರದ್ದು; ಇದು ಮೋದಿ ಭೇಟಿ ಎಫೆಕ್ಟ್
ಸ್ಥಳಕ್ಕೆ ಮಾಗಡಿ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಹಾಗೂ ಮಾಗಡಿ ತಾಲೂಕಿನ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಸೇರಿ ಹಲವರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ.