Site icon Vistara News

ಚಡ್ಡಿಗೆ ಅಷ್ಟೊಂದು ಪವರಾ? ಚಡ್ಡಿ ಏನು ರಾಷ್ಟ್ರಧ್ವಜವೇ ಎಂದು ಪ್ರಶ್ನಿಸಿದ ಕಾಂಗ್ರೆಸ್‌

congress protest

ಬೆಂಗಳೂರು: ಕಾಂಗ್ರೆಸ್‌ ವಿದ್ಯಾರ್ಥಿ ಘಟಕ NSUI ರಾಜ್ಯ ಘಟಕ ಅಧ್ಯಕ್ಷ ಕೀರ್ತಿ ಗಣೇಶ್‌ ಬಂಧನವನ್ನು ವಿರೋಧಿಸಿ ಯುವ ಕಾಂಗ್ರೆಸ್‌ನಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಆರ್‌ಎಸ್‌ಎಸ್‌ನ ಸಮವಸ್ತ್ರ ಚಡ್ಡಿ ಸುಡಲು ಮುಂದಾಗಿದ್ದ ಕೀರ್ತಿ ಅವರನ್ನು ಬಂಧಿಸಿದ್ದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಮಾತನಾಡಿ, ಈ ಚಡ್ಡಿ ಸುಟ್ಟಿದ್ದಕ್ಕೆ ಎಷ್ಟು ಜನರನ್ನು ಬಂಧಿಸುತ್ತೀರಿ? ಮೊದಲು ಮುಸ್ಲಿಮರನ್ನು ಹೊಡೆದರು, ಆಮೇಲೆ ದಲಿತರು, ಬಳಿಕ ಕ್ರಿಶ್ಚಿಯನ್ನರನ್ನು ಹೊಡೆದರು. ಆರ್‌ಎಸ್‌ಎಸ್‌ನವರು ಬಸವಣ್ಣ, ಕುವೆಂಪು ಅವರನ್ನೂ ಬಿಟ್ಟಿಲ್ಲ. ಸಂವಿಧಾನದ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಚಡ್ಡಿಯಲ್ಲಿ ಅಷ್ಟೊಂದು ಪವರ್ ಇದೆಯಾ ಎಂದು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ನಲಪಾಡ್‌ ಆಕ್ರೋಶ ಹೊರಹಾಕಿದರು.

ಆ ಚಡ್ಡಿಯಲ್ಲಿ ದೇಶವನ್ನು ಹೊಡೆಯುವಂಥ ಪವರ್ ಇದೆಯೇ ಎಂದು ಪ್ರಶ್ನಿಸಿದ ನಲಪಾಡ್‌, ಒಂದು ಚಡ್ಡಿ ಸುಟ್ಟಿದ್ದಕ್ಕೆ ಕೀರ್ತಿ ಗಣೇಶ್ ಅರೆಸ್ಟ್ ಮಾಡಿದ್ದೀರಿ, ನಾವು ಎಲ್ಲ ಜಿಲ್ಲೆಗಳಲ್ಲಿ ಚಡ್ಡಿ ಸುಡುತ್ತೇವೆ. ಅವಾಗ ಎಷ್ಟು ಜನರನ್ನು ಅರೆಸ್ಟ್ ಮಾಡುತ್ತೀರಾ? ನಾವು ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆ, ಪೊಲೀಸರು ಎಷ್ಟು ಜನರನ್ನು ಬಂಧಿಸುತ್ತೀರಿ ನೋಡುತ್ತೇವೆ ಎಂದು ಸವಾಲು ಹಾಕಿದರು.

ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಸಚಿವರೇ ಮೊದಲು ರಾಜೀನಾಮೆ ಕೊಡಿ. ಈ ಚಡ್ಡಿ ಸುಟ್ಟಿದ್ದಕ್ಕೆ ಯಾಕೆ ಇಷ್ಟೊಂದು ಟೆನ್ಷನ್ ಆಗಿದ್ದೀರಿ? ನೀವು ಈಗ ಪ್ಯಾಂಟ್ ತಾನೇ ಹಾಕೋದು? ಆದರೆ ನಿಮ್ಮ ಯೋಚನೆಗಳು ಯಾವತ್ತೂ ಬದಲಾಗುವುದಿಲ್ಲ. ಕೀರ್ತಿ ಗಣೇಶ್ ಏನು ಬಾಂಬ್ ತಗೊಂಡು ಹೋಗಿದ್ದರಾ? ಇಲ್ಲವೇ ರಾಷ್ಟ್ರಧ್ವಜ ಸುಟ್ಟಿದ್ದರೇ? ಚಡ್ಡಿ ಏನು ರಾಷ್ಟ್ರಧ್ವಜವೇ? ನೀವು ನಿಜವಾಗಿಯೂ ದೇಶಭಕ್ತರು ಆಗಿದ್ರೆ, ಆ ರೋಹಿತ್‌ ಚಕ್ರತೀರ್ಥನನ್ನು ಜೈಲಿಗೆ ಹಾಕಿ ಎಂದು ಶ್ರೀನಿವಾಸ್ ಒತ್ತಾಯಿಸಿದರು.

ಗೃಹಸಚಿವರ ನಿವಾಸ ಮುತ್ತಿಗೆಗೆ ಯತ್ನ
ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರತಿಭಟನಾ ಸ್ಥಳದಲ್ಲೇ ತಡೆದ ಪೊಲೀಸರು, ರಾಷ್ಟ್ರೀಯ ಯೂತ್ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಸೇರಿ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಇದನ್ನೂ ಓದಿ | ‌Congress ಚಿಂತನಾ ಶಿಬಿರ | ಆಂತರಿಕ ವಿಚಾರ ಬಾಯಿ ಬಿಟ್ಟರೆ ತಕ್ಕ ಶಾಸ್ತಿ ಎಂದ ಡಿಕೆಶಿ

Exit mobile version