Site icon Vistara News

Murder Case: ಯುವ ಬ್ರಿಗೇಡ್‌ ಸದಸ್ಯನ ಕೊಲೆ ; 6 ಆರೋಪಿಗಳು ಅರೆಸ್ಟ್‌, ಒಬ್ಬ ಬಿಜೆಪಿ ಪಾಲಿಕೆ ಸದಸ್ಯೆ ತಮ್ಮ!

Yuva brigade activist murder accused

ಮೈಸೂರು: ತಿ.ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್‌ ಕಾರ್ಯಕರ್ತ (Yuva Brigade activist murder) ವೇಣುಗೋಪಾಲ ನಾಯಕ (Venugopal Nayak) ಕೊಲೆ ಪ್ರಕರಣ (Murder case) ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ನಡುವೆಯೇ ಪೊಲೀಸರು ಪ್ರಕರಣದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ (Six accused arrested). ಬಂಧಿತರ ಪೈಕಿ ಒಬ್ಬಾತ ಮೈಸೂರು ಮಹಾನಗರ ಪಾಲಿಕೆ ಸದಸ್ಯೆಯ ತಮ್ಮನೇ ಆಗಿರುವುದು ಬೆಳಕಿಗೆ ಬಂದಿದೆ.

ಜುಲೈ 8ರಂದು ತಿ. ನರಸೀಪುರದಲ್ಲಿ ನಡೆದ ಹನುಮ ಜಯಂತಿ ಆಚರಣೆಯ (Hanuma Jayanti) ವೇಳೆ ಹುಟ್ಟಿಕೊಂಡ ಸಣ್ಣ ವಿವಾದವೊಂದು ಬೆಳೆದು ಜುಲೈ 9ರಂದು (ಭಾನುವಾರ) ಕೊಲೆಯಲ್ಲಿ ಅಂತ್ಯಗೊಂಡಿತ್ತು. ವೇಣುಗೋಪಾಲ ನಾಯಕ ಅವರನ್ನು ರಾಜಿ ಮಾತುಕತೆಗಾಗಿ ಕರೆದು ಬಾಟಲಿಯಿಂದ ಕೊಲೆ ಮಾಡಲಾಗಿತ್ತು. ಈ ವಿಚಾರದಲ್ಲಿ ಹಲವಾರು ವಾದಗಳು ಕೇಳಿಬಂದಿದ್ದವು. ಒಂದು ಕಡೆ ವಾಹನ ಪಾರ್ಕಿಂಗ್‌ ವಿಚಾರದಲ್ಲಿ, ವಾಹನ ನಿಲ್ಲಿಸಲು ಅವಕಾಶ ನೀಡದ್ದಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿತ್ತು. ಇನ್ನೊಂದು ಕಡೆ ಮೃತ ವೇಣುಗೋಪಾಲ ನಾಯಕ ಅವರ ಪತ್ನಿ ಪೂರ್ಣಿಮಾ ಅವರ ಪ್ರಕಾರ, ಹನುಮಜಯಂತಿ ಮೆರವಣಿಗೆಯ ವೇಳೆ ಭಾರತ ಮಾತೆಯ ಫೋಟೊ ಜತೆಗೆ ಪುನೀತ್‌ ರಾಜ್‌ ಕುಮಾರ್‌ ಫೋಟೊ ಇಡಲು ಕೆಲವರು ಮುಂದಾಗಿದ್ದರು. ಅದನ್ನು ವೇಣುಗೋಪಾಲ ನಾಯಕ ಆಕ್ಷೇಪಿಸಿ ಅವಕಾಶ ನೀಡಿರಲಿಲ್ಲ. ಇದೇ ಕಾರಣಕ್ಕೆ ವಿವಾದ ಬೆಳೆದು ಮಾತುಕತೆಗೆ ಕರೆದು ಕೊಲೆ ಮಾಡಿದ್ದಾರೆ.

ಈ ನಡುವೆ ಯುವ ಬ್ರಿಗೇಡ್‌ ಮುಖ್ಯಸ್ಥರಾಗಿರುವ ಚಕ್ರವರ್ತಿ ಸೂಲಿಬೆಲೆ ಅವರು ಈ ಕೊಲೆಯ ಹಿಂದೆ ಕಾಂಗ್ರೆಸ್‌ ಕೈವಾಡವಿದೆ ಎಂದು ಆರೋಪಿಸಿದ್ದರು. ಆರೋಪಿಗಳಲ್ಲಿ ಒಬ್ಬಾತ ಸಚಿವ ಎಚ್‌.ಸಿ. ಮಹದೇವಪ್ಪ ಅವರಿಗೆ ಅಭಿನಂದನೆ ಹೇಳಿರುವ ಪೋಸ್ಟರ್‌ ಮತ್ತು ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಜತೆಗಿರುವ ಚಿತ್ರಗಳ ಆಧಾರದಲ್ಲಿ ಇದು ಕಾಂಗ್ರೆಸ್‌ನವರ ಕೃತ್ಯ ಎಂದು ಆಪಾದಿಸಲಾಗಿತ್ತು. ಅದರ ನಡುವೆಯೇ ಆರೋಪಿಗಳಲ್ಲಿ ಇಬ್ಬರು ಹನುಮ ಜಯಂತಿ ಮೆರವಣಿಗೆಯ ವಾಹನ ಚಲಾಯಿಸುತ್ತಿದ್ದ ಚಿತ್ರಗಳೂ ಹರಿದಾಡಿದ್ದವು.

ಬಂಧಿತ ಆರೋಪಿಗಳು ಇವರು

ಆರು ಆರೋಪಿಗಳು ಅರೆಸ್ಟ್‌

ಕೊಲೆ ನಡೆದ ಜಾಗದಲ್ಲಿನ ಮಾಹಿತಿ ಮತ್ತು ಇತರ ಸಂಗತಿಗಳನ್ನು ಆಧರಿಸಿ ಪೊಲೀಸರು ಆರು ಮಂದಿಯನ್ನು ಆರೋಪಿಗಳೆಂದು ಗುರುತಿಸಿದ್ದರು. ಈ ಎಲ್ಲ ಆರು ಮಂದಿಯನ್ನು ಈಗ ಬಂಧಿಸಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಕೊಲೆಗೆ ಸಂಬಂಧಿಸಿ ಎರಡು ತಂಡಗಳನ್ನು ರಚಿಸಿ ಹಂತಕರ ಬೆನ್ನು ಬಿದ್ದಿದ್ದರು. ಪ್ರಕರಣದ A1 ಮತ್ತು A2 ಆರೋಪಿಗಳೆಂದು ಗುರುತಿಸಲಾದ ಮಣಿಕಂಠ ಅಲಿಯಾಸ್ ಕೊಳೆ ಮಣಿ, ಸಂದೇಶನನ್ನು ಸೋಮವಾರವೇ ಬಂಧಿಸಲಾಗಿತ್ತು.

ಮಂಗಳವಾರ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. A3 ಅನಿಲ್, A4 ಶಂಕರ್ ಅಲಿಯಾಸ್ ತುಪ್ಪ, A5 ಮಂಜು ಹಾಗೂ A6 ಹ್ಯಾರಿಸ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Double Murder : ಜೈನ ಮುನಿ, ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆ ತನಿಖೆಗೆ ಬಿಜೆಪಿಯಿಂದ 2 ಟೀಮ್‌

ಸತ್ಯಶೋಧನೆಗೆ ಇಳಿದ ಬಿಜೆಪಿಗೆ ಆರಂಭದಲ್ಲೇ ಶಾಕ್‌

ಈ ನಡುವೆ, ಪ್ರಕರಣದಲ್ಲಿ ಬಂಧಿತ ವ್ಯಕ್ತಿಗಳಲ್ಲಿ ಒಬ್ಬ ಪ್ರಕರಣದ ಆರೋಪಿಯೊಬ್ಬ ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆಯ ತಮ್ಮ ಎಂಬ ಸತ್ಯ ಬಹಿರಂಗವಾಗಿದೆ. A4 ಆರೋಪಿ ಶಂಕರ್ @ ತುಪ್ಪ ಬಿಜೆಪಿ ಪಾಲಿಕೆ ಸದಸ್ಯೆ ತಮ್ಮನಾಗಿದ್ದಾನೆ. ಇದು ಕೊಲೆಯನ್ನು ಕಾಂಗ್ರೆಸ್‌ ತಲೆಗೆ ಕಟ್ಟುವ ಬಿಜೆಪಿ ಪ್ರಯತ್ನಕ್ಕೆ ಹಿನ್ನಡೆ ಆದಂತಾಗಿದೆ.

ಬಿಜೆಪಿ ಈ ಘಟನೆಗೆ ಸಂಬಂಧಿಸಿ ಸತ್ಯಶೋಧನೆ ನಡೆಸಲು ತಿ. ನರಸೀಪುರಕ್ಕೆ ಒಂದು ತಂಡ ಕಳುಹಿಸಲು ನಿರ್ಧರಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಮೇಲುಸ್ತುವಾರಿಯ ಈ ತಂಡದಲ್ಲಿ ಮಾಜಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಸಂಸದ ಪ್ರತಾಪಸಿಂಹ, ಶಾಸಕ ಶ್ರೀವತ್ಸ ಸೇರಿದಂತೆ 10 ಮಂದಿ ಸದಸ್ಯರಿದ್ದಾರೆ. ಇದೀಗ ಈ ಕೊಲೆಯಲ್ಲಿ ಬಿಜೆಪಿ ಸದಸ್ಯೆಯ ತಮ್ಮನೇ ಇರುವುದು ಸತ್ಯಶೋಧನೆಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

Exit mobile version