ಬೆಂಗಳೂರು: ತಿ. ನರಸೀಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣವು (Murder Case) ಆಕಸ್ಮಿಕವಾಗಿದ್ದು, ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಈ ಪ್ರಕರಣದ ಕುರಿತು ಸರ್ಕಾರದ ಉತ್ತರ ನೀಡುವ ಸಮಯದಲ್ಲಿ ಮಾತನಾಡಿದರು.
ಮೊದಲಿಗೆ ಪ್ರಕರಣದ ಕುರಿತು ಗೃಹಸಚಿವ ಡಾ. ಜಿ. ಪರಮೇಶ್ವರ್ ಉತ್ತರ ನೀಡಿದರು. ಹನುಮ ಜಯಂತಿ ಉತ್ಸವ ನಡೆಯುತ್ತಿದ್ದಾಗ, ದೇವಸ್ಥಾನದ ಒಳಗೆ ಬೈಕ್‌ನಲ್ಲಿ ಹೋಗಲು ಆರೋಪಿಗಳು ಮುಂದಾದರು. ಆದರೆ ಉತ್ಸವ ಹೋಗುವವರೆಗೂ ಬೈಕನ್ನು ಒಳಗೆ ಬಿಡುವುದಿಲ್ಲ ಎಂದು ಹನುಮ ಜಯಂತಿ ನಡೆಸುತ್ತಿದ್ದ ರಾಮಾನುಜಂ ಹಾಗೂ ವೇಣುಗೋಪಾಲ್ ತಡೆದರು. ಇದರಿಂದ ಆರೋಪಿಗಳಾದ ಸಂದೇಶ್ ಮತ್ತು ಮಣಿಕಂಠ ಇಬ್ಬರೂ ಕೋಪಗೊಂಡು, ನಾಳೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೊರಟುಹೋದರು.
ಬಾಡಿಗೆಗೆ ತಂದಿದ್ದ ಶಾಮಿಯಾನವನ್ನು ರಾಮಾನುಜಂ ಹಾಗೂ ವೇಣುಗೋಪಾಲ ಹಿಂದಿರುಗಿಸುತ್ತಿದ್ದಾಗ ಸ್ಥಳಕ್ಕೆ ಬಂದ ಆರೋಪಿಗಳು ಜಗಳ ತೆಗೆದು ಹೊಡೆದಿದ್ದಾರೆ. ಅದೇ ಮಾರ್ಗದಲ್ಲಿ ಪೊಲೀಸ್ ವಾಹನ ಬಂದಿದ್ದರಿಂದ ಆರೋಪಿಗಳು ಹೋಗಿದ್ದರು. ರಾತ್ರಿ ಮಾತನಾಡಲು ಸರ್ವೀಸ್ ಸ್ಟೇಷನ್ ಬಳಿ ಬಾ ಎಂದು ಕರೆದಿದ್ದಾರೆ. ಸ್ಟೇಷನ್ ಮುಂದೆ ಬರುತ್ತಿದ್ದಂತೆ ಎಲ್ಲರೂ ಗುಂಪು ಕಟ್ಟಿಕೊಂಡು ಮಾರಕಾಸ್ತ್ರಗಳಿಂದ ಹೊಡೆಯಲು ಆರಂಭಿಸಿದ್ದಾರೆ. ಗಾಜಿನ ಬಾಟಲಿಗಳಿಂದ ಹೊಡೆದು, ಚುಚ್ಚಿದ್ದಾರೆ.
ಈ ಘಟನೆಯು ವೈಯಕ್ತಿಕ ಕಾರಣಗಳಿಂದಾಗಿ ನಡೆದಿದೆ. ಪರಸ್ಪರ ಒಡನಾಟದಿಂದ ಇದ್ದವರಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ಆಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಕುಟುಂಬಸ್ಥರ ಸಂಪರ್ಕದಲ್ಲಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪರಮೇಶ್ವರ್ ಎಂದು ಉತ್ತರಿಸಿದರು.
ಇದನ್ನೂ ಓದಿ: Jain Muni Murder: ಸ್ವಾಮೀಜಿ ಎಂದ ತಕ್ಷಣ ಪ್ರಕರಣ ಬದಲಾಗಲ್ಲ; ಕೊಲೆ ಕೊಲೆ ಅಷ್ಟೆ: ಸಿಬಿಐಗೆ ಕೊಡಲ್ಲ ಎಂದ ಸರ್ಕಾರ
ನಂತರ ಮಾತನಾಡಿದ ಬಸವರಾಜ ಬೊಮ್ಮಾಯಿ, ಹನುಮ ಜಯಂತಿ ವೇಳೆ ಗಲಾಟೆ ನಡೆದಾಗ ಪೊಲೀಸರು ನಿಯಂತ್ರಣ ಮಾಡಬಹುದಾಗಿತ್ತು. ಎರಡೂ ಗುಂಪುಗಳನ್ನು ಸ್ಟೇಷನ್ನಿಗೆ ಕರೆಸಿ ತಡಯಬಹುದಾಗಿತ್ತು. ಆದರೆ ಸಮಾಜಘಾತುಕ ಶಕ್ತಿಗಳಿಗೆ ಪ್ರೇರಣೆ ಸಿಗುವ ರೀತಿ ವಾತಾವರಣ ಇರುವುದರಿಂದ ಕೊಲೆ ಮಾಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಕೊಲೆ ನಡೆದಿರುವುದು ಆಕಸ್ಮಿಕ ಘಟನೆ. ಹನುಮ ಜಯಂತಿ ದಿನ ಬಂದೋಬಸ್ತ್ ಮಾಡಿಲ್ಲದಿದ್ದರೆ ಅಂದೇ ಕೊಲೆ ಆಗಬೇಕಿತ್ತು. ಇಷ್ಟರ ನಂತರವೂ ಎಲ್ಲ ಆಯಾಮಗಳಿಂದಲೂ ಪ್ರಕರಣ ವಿಚಾರಣೆ ನಡೆಸಲಾಗುತ್ತದೆ ಎಂದರು. ಇದರಿಂದ ಸಮಾಧಾನರಾಗದ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾದರು. ಗಲಾಟೆ ಹೆಚ್ಚಾದಾಗ ಸದನವನ್ನು 10 ನಿಮಿಷ ಮುಂದೂಡಲಾಯಿತು.