Site icon Vistara News

Mysore dasara | ಅದ್ಧೂರಿ ಅಲ್ಲ, ಅಧ್ವಾನದ ದಸರಾ; ಗಣ್ಯರ ಗೈರಿನಿಂದ ಯುವ ದಸರಾ ಮುಂದೂಡಿಕೆ

Mysore dasara

ಮೈಸೂರು: ಈ ಬಾರಿ ದಸರಾ ಉತ್ಸವವನ್ನು (Mysore dasara) ಅದ್ಧೂರಿಯಾಗಿ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ದಸರಾ ಉತ್ಸವ ಅಧ್ವಾನ, ಅವ್ಯವಸ್ಥೆಗಳ ಬೀಡಾಗಿದೆ ಎಂಬ ಆರೋಪ ಕೇಳಿಬಂದಿದೆ.

ಉದ್ಘಾಟನೆ ಬೆನ್ನಲ್ಲೇ ದಸರಾ ಉತ್ಸವ ಮಂಕಾಗಿದೆ. ಕಾರ್ಯಕ್ರಮ ಉದ್ಘಾಟನೆ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಜತೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಹೊರಟಿದ್ದಾರೆ. ಹಾಗೆಯೇ ಗಣ್ಯರ ಗೈರು ಹಿನ್ನೆಲೆಯಲ್ಲಿ ಯುವ ದಸರಾ ಒಂದು ದಿನ ಮುಂದೂಡಿಕೆಯಾಗಿದೆ. ನಟ ಕಿಚ್ಚ ಸುದೀಪ್ ಯುವ ದಸರಾ ಉದ್ಘಾಟಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಅವರು ಆಗಮಿಸಿಲ್ಲ. ಅದೇ ರೀತಿ ಚಲನಚಿತ್ರೋತ್ಸವ ಉದ್ಘಾಟನೆಗೆ ನಟ ಶಿವರಾಜಕುಮಾರ್ ಆಗಮಿಸಬೇಕಿತ್ತು. ಆದರೆ, ಅವರೂ ಕೂಡ ಭಾಗವಹಿಸಿಲ್ಲ.

ಗಣ್ಯಾತಿಗಣ್ಯರ ಗೈರು ಹಾಜರಿಯಿಂದ ಹಲವು ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ. ಹೆಲಿ ರೈಡ್, ಏರ್ ಶೋ, ಜಲಕ್ರೀಡೆ, ಪುಸ್ತಕ ಮೇಳ, ಚಿತ್ರ ಸಂತೆ ಸೇರಿ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಕೈಬಿಟ್ಟಿದ್ದು, ಚಿತ್ರ ನಟರನ್ನು ಕರೆತರುವಲ್ಲಿ ದಸರಾ ಆಯೋಜಕರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಕುಸ್ತಿ ಪಂದ್ಯಾವಳಿ ಉದ್ಘಾಟನೆಗೆ ಸಾಕ್ಷಿ ಮಲ್ಲಿಕ್ ಗೈರು
ನಾಡ ಕುಸ್ತಿ ಉದ್ಘಾಟನೆಗೆ ಅಂತಾರಾಷ್ಟ್ರೀಯ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಆಗಮಿಸಬೇಕಿತ್ತು. ಆದರೆ ಅವರ ಗೈರಿನಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಲಾಗಿದೆ. ಕೊಲ್ಲಾಪುರ ಹಾಗೂ ಹರಿಯಾಣ ಮೂಲದ ರಾಷ್ಟ್ರೀಯ ಕುಸ್ತಿಪಟುಗಳ ಪಂದ್ಯದಲ್ಲಿ ರೆಫ್ರಿಯಾಗಿ ಶಾಸಕ ನಾಗೇಂದ್ರ ಭಾಗಿಯಾಗಿದ್ದು ಕಂಡುಬಂತು.

ಕುಸ್ತಿ ಪಂದ್ಯಾವಳಿಗೆ ದೇಶದ ಮೂಲೆ ಮೂಲೆಗಳಿಂದ ಕುಸ್ತಿಪಟುಗಳು ಆಗಮಿಸುತ್ತಿದ್ದಾರೆ. ಕುಸ್ತಿಯಲ್ಲಿ ಗೆದ್ದವರಿಗೆ ವಿವಿಧ ವಿಭಾಗಗಳಲ್ಲಿ ದಸರಾ ಕಿಶೋರ, ದಸರಾ ಕುಮಾರ ಹಾಗೂ ದಸರಾ ಕಂಠೀರವ ಪ್ರಶಸ್ತಿ ಹಾಗೂ ಟ್ರೋಫಿ ಸಿಗಲಿದೆ. ಈವರೆಗೆ 40ಕ್ಕೂ ಹೆಚ್ಚು ಜೋಡಿ‌ ಕುಸ್ತಿ ಪಟುಗಳ ಹೆಸರು ನೋಂದಣಿಯಾಗಿದೆ. ಸೋಮವಾರದಿಂದ ಏಳು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ಇದನ್ನೂ ಓದಿ | Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Exit mobile version