ಬೆಂಗಳೂರು: ಕಾಂಗ್ರೆಸ್ ಶಾಸದಕ ಬಿ.ಜಡ್. ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರ ದಳದ(ಎಸಿಬಿ) ಅಧಿಕಾರಿಗಳು ದಾಳಿ (Zameer ACB Raid) ನಡೆಸಿ ಶಾಕ್ ನೀಡಿದ್ದಾರೆ. ಶಾಸಕ ಜಮೀರ್ ಅಹ್ಮದ್, ಅವರ ಬೆಂಬಲಿಗರು ಹಾಗೂ ರಾಜಕೀಯ ವಲಯಕ್ಕೆ ಇದು ಅಚ್ಚರಿಯಾದರೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸೋಮವಾರ ಸಂಜೆಯೇ ಜಮೀರ್ ಅಹಮದ್ ಮನೆ ಮೇಲಿನ ದಾಳಿ ವಿಚಾರ ತಿಳಿದಿತ್ತು.
ಭ್ರಷ್ಟಾಚಾರ ನಿಗ್ರಹ ದಳವನ್ನು ರಚನೆ ಮಾಡಿದ್ದು 2016ರ ಮಾರ್ಚ್ 15ರಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ. ಅದಾಗಲೆ ಲೋಕಾಯುಕ್ತ ಸಂಸ್ಥೆ ಕರ್ನಾಟಕದಲ್ಲಿ ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿತ್ತು. ಈ ಸಂಸ್ಥೆಯನ್ನು ದುರ್ಬಲಗೊಳಿಸುವ ಸಲುವಾಗಿ ಎಸಿಬಿ ಸ್ಥಾಪನೆ ಮಾಡಲಾಯಿತು ಎಂಬ ಆರೋಪ ಕೇಳಿಬಂದಿತ್ತು. ಏಕೆಂದರೆ ಲೋಕಾಯುಕ್ತ ಸಂಸ್ಥೆಗೆ ಅಲ್ಲಿವರೆಗೆ ಇದ್ದ, ದಾಳಿ ಮತ್ತು ತನಿಖೆ ಅಧಿಕಾರವನ್ನು ಕಿತ್ತು ಎಸಿಬಿಗೆ ನೀಡಲಾಗಿತ್ತು.
ಎಸಿಬಿ ರಚನೆ ಆದೇಶದ 5ನೇ ಅಂಶದ ಪ್ರಕಾರ, ʻಸಾರ್ವಜನಿಕ ನೌಕರನು ತನ್ನ ಅಧಿಕೃತ ಕಾರ್ಯನಿರ್ವಹಣೆಯಲ್ಲಿ ಕೈಗೊಳ್ಳುವ ನಿರ್ಧಾರ ಅಥವಾ ಮಾಡುವ ಶಿಫಾರಸುಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು ನೇಮಕಾತಿ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ತನಿಖೆ ಪ್ರಾರಂಭಿಸಲು ಅವಕಾಶ ಇರುವುದಿಲ್ಲʼ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಎಸಿಬಿ ಸಂಸ್ಥೆಯು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನದಲ್ಲಿ ಬರುತ್ತದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಿಎಂ ಬಸವರಾಜ ಬೊಮ್ಮಾಯಿ ಅವರ ವ್ಯಾಪ್ತಿಗೆ ಬರುತ್ತದೆ.
ಸೀಮಂತ್‌ಕುಮಾರ್ ಸಿಂಗ್ ಭೇಟಿ
ಎಸಿಬಿ ಎಡಿಜಿಪಿ ಸೀಮಂತ್‌ಕುಮಾರ್ ಸಿಂಗ್ ಸೋಮವಾರ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆರ್‌ಟಿ ನಗರ ನಿವಾಸದಲ್ಲಿ ಭೇಟಿ ಮಾಡಿದರು. 545 ಪಿಎಸ್‌ಐ ನೇಮಕ ಕುರಿತು ಸೋಮವಾರ ಮದ್ಯಾಹ್ನವಷ್ಟೆ ಬಂಧನವಾಗಿದ್ದ ಎಡಿಜಿಪಿ ರ‍್ಯಾಂಕ್ ಅಧಿಕಾರಿ ಹಾಗೂ ಈ ಹಿಂದೆ ಪೊಲೀಸ್ ನೇಮಕಾತಿ ಹೊಣೆ ಹೊತ್ತಿದ್ದ ಅಮೃತ್ ಪಾಲ್ ಕುರಿತು ಮಾಹಿತಿ ನೀಡಲು ತೆರಳಿದ್ದರು ಎನ್ನಲಾಗಿತ್ತು. ಆದರೆ ಅಸಲಿಗೆ ಸಿಎಂ ನಿವಾಸದಲ್ಲಿ ಸೋಮವಾರ ಸಂಜೆ ಚರ್ಚೆಯಾಗಿದ್ದು ಜಮೀರ್ ಅಹಮದ್ ಮನೆ ಮೇಲಿನ ದಾಳಿ ವಿಚಾರ ಎನ್ನಲಾಗಿದೆ.
ಜಾರಿ ನಿರ್ದೇಶನಾಲಯದಿಂದ ಬಂದ ಮಾಹಿತಿ ಆಧಾರದಲ್ಲಿ ಜಮೀರ್ ಮನೆ ಮೇಲೆ ಎಸಿಬಿ ದಾಳಿ ನಡೆಸುವ ಕುರಿತು ಸಿಎಂ ಬೊಮ್ಮಾಯಿ ಅನುಮತಿಯನ್ನು ನೀಡಿದ್ದರು. ಅದರ ಆಧಾರದಲ್ಲಿ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ | ACB raid| ಮೊದಲ ಬಾರಿಗೆ ಹಾಲಿ ಶಾಸಕ ಜಮೀರ್ ಮನೆಗೆ ಎಸಿಬಿ ಭರ್ಜರಿ ದಾಳಿ, ಬೆಂಬಲಿಗರ ಪ್ರತಿಭಟನೆ