ಬೆಂಗಳೂರು: ಸುಮಾರು ಒಂದು ವರ್ಷದ ಹಿಂದೆ ಆಗಸ್ಟ್ 5, 2021ರಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ದಾಳಿ ನಡೆಸಲಾಗಿತ್ತು. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿತ್ತು. ಈ ದಾಳಿ ನಡೆದ ಒಂದು ವರ್ಷದ ಒಳಗೆ ಈಗ (ಜುಲೈ 5, 2022) ಮತ್ತೊಮ್ಮೆ ಜಮೀರ್ ಅವರ ನಿವಾಸದ ಮೇಲೆ ದಾಳಿ (Zameer ACB Raid) ನಡೆದಿದೆ. ಆದರೆ ಈ ಬಾರಿ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ (Anti corruption bureau-ACB) ದಾಳಿ ನಡೆಸಿದೆ.
2016ರಲ್ಲಿ ಸ್ಥಾಪನೆಗೊಂಡ ಎಸಿಬಿ ತನ್ನ 6 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಶಾಸಕರೊಬ್ಬರ ಮನೆಗೆ ದಾಳಿ ನಡೆಸಿದೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ನಿವಾಸ ಮತ್ತು ಕಚೇರಿಗೆ ಮಂಗಳವಾರ (ಜುಲೈ 5, 2022) ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.
ಕಳೆದ ವರ್ಷ ನಡೆದ ದಾಳಿಯ ವಿವರ ಇಲ್ಲಿದೆ:
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್ 5, 2021ರಂದು ದಾಳಿ ನಡೆಸಿದ್ದರು. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಜಮೀರ್ ಭಾಗಿಯಾಗಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ದಾಳಿ ನಡೆದಿತ್ತು.
ದೆಹಲಿಯಿಂದ ಅಧಿಕಾರಿಗಳ ತಂಡವು ದಾಳಿ ನಡೆಸುವ ಒಂದು ವಾರದ ಮುಂಚಿತವಾಗಿ ಬೆಂಗಳೂರಿಗೆ ಆಗಮಿಸಿತ್ತು. ಜಮೀರ್ ಅಹ್ಮದ್‌ಗೆ ಸಂಬಂಧಿಸಿದ ಮನೆ ಹಾಗೂ ಕಚೇರಿಗಳ ಮೇಲೆ ನಿಗಾ ವಹಿಸಿ, ಸಂಪೂರ್ಣ ಮಾಹಿತಿಯನ್ನು ಕ್ರೋಢೀಕರಿಸಲಾಗಿತ್ತು. ಜಮೀರ್ ಅಹ್ಮದ್ ರಿಚ್ಮಂಡ್ ವೃತ್ತದ ಬಳಿ ಇದ್ದ 90 ಕೋಟಿ ರೂ. ಮೌಲ್ಯದ ತಮ್ಮ ಜಮೀನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಇದು ಅನುಮಾನವನ್ನು ಹೆಚ್ಚಿಸಿತ್ತು.
45ಕ್ಕೂ ಅಧಿಕ ಅಧಿಕಾರಿಗಳ ತಂಡವು ಅಗಸ್ಟ್ 5, 2021ರ ಮುಂಜಾನೆ ಸುಮಾರು 5:30ರ ಹೊತ್ತಿಗೆ ಜಮೀರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಜಮೀರ್ ನಿವಾಸದ ಸುತ್ತಲೂ 200ಕ್ಕೂ ಅಧಿಕ ಸಿಆರ್‌ಪಿಎಫ್ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಭದ್ರತೆ ನೀಡಿದ್ದರು. ಇ.ಡಿ ಅಧಿಕಾರಿಗಳು ಸುಮಾರು 23 ಗಂಟೆಗಳ ಕಾಲ ಸುದೀರ್ಘ ಪರಿಶೀಲನೆ ನಡೆಸಿದ್ದರು.
ಇ.ಡಿ ದಾಳಿಗೆ ಕಾರಣವೇನಾಗಿತ್ತು?
ಐಎಂಎ ಹಗರಣದಲ್ಲಿ ಜಮೀರ್ ಅವರು ಭಾಗಿಯಾಗಿದ್ದು ಶಂಕೆಯಾಗಿತ್ತು. ಈ ಹಗರಣದಲ್ಲಿ ಸುಮಾರು 500 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪಡೆದಿರುವ ಆರೋಪ ಇವರ ಮೇಲಿತ್ತು. ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್‌ನಿಂದ ಬೇನಾಮಿಯಾಗಿ ಹಣ ಪಡೆದುಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ಅಲ್ಲದೆ, ಅರಮನೆಯಂತಹ ಮನೆ ನಿರ್ಮಿಸಿದ್ದು, ಮಗಳ ಮದುವೆಗೆ ಸುಮಾರು 9 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದ ಬಗ್ಗೆ ವರದಿಯಾಗಿತ್ತು. ಸಾಕಷ್ಟು ಜನರಿಗೆ ಯತೇಚ್ಛವಾಗಿ ಹಣವನ್ನು ದಾನ ಮಾಡುತ್ತಿದ್ದ ಮಾಹಿತಿಯಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಜಮೀರ್ ನಿವಾಸದ ಮೇಲೆ ದಾಳಿ ನಡೆಸಿತ್ತು.
ಎಲ್ಲೆಲ್ಲಿ ದಾಳಿ ನಡೆದಿತ್ತು?
ಜಮೀರ್ ಅವರಿಗೆ ಸಂಬಂಧಿಸಿದ ಸಕಲ ಆಸ್ತಿಗಳ ಮೇಲೆ ಅಂದು ಇ.ಡಿ ದಾಳಿ ನಡೆದಿತ್ತು. ಒಟ್ಟು 6 ಜಾಗದಲ್ಲಿ ದಾಳಿ ನಡೆಸಲಾಗಿತ್ತು.
1. ರಾಜಧಾನಿಯ ಕಂಟೋನ್ಮೆಂಟ್ ಬಳಿ ಇರುವ ಬಂಬೂ ಬಜಾರ್‌ನಲ್ಲಿನ ಬೃಹತ್ ಬಂಗಲೆ
2. ಕಲಾಸಿಪಾಳ್ಯದಲ್ಲಿನ ನ್ಯಾಷನಲ್ ಟ್ರಾವೆಲ್ಸ್ ಕಚೇರಿ
3. ಯುಬಿ ಸಿಟಿಯಲ್ಲಿನ ಫ್ಲ್ಯಾಟ್
4. ವಸಂತನಗರದಲ್ಲಿನ ಹಳೆಯ ಮನೆ
5. ಸದಾಶಿವನಗರದ ಫ್ಲ್ಯಾಟ್ ಹಾಗೂ ಅತಿಥಿಗೃಹ
6. ಕೋಲ್ಸ್‌ಪಾರ್ಕ್‌ನಲ್ಲಿನ ಕಚೇರಿ
ಈ ಹಿಂದಿನ ದಾಳಿ ಬಗ್ಗೆ ಜಮೀರ್ ಹಾಗೂ ಇತರ ರಾಜಕಾರಣಿಗಳ ಪ್ರತಿಕ್ರಿಯೆ ಏನಿತ್ತು?
ಜಮೀರ್: ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರು ಕೇಳಿದ ಪ್ರಶ್ನಗೆಳಿಗೆ ನಾನು ಉತ್ತರ ನೀಡಿದ್ದೇನೆ. ಅವರು ಕೇಳಿದ ಎಲ್ಲ ಮಾಹಿತಿಗಳನ್ನು ನೀಡಿದ್ದೇನೆ. ದಾಖಲೆಗಳನ್ನು ಪರಿಶೀಲಿಸಿದ ಇ.ಡಿ. ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಜಮೀರ್ ತಿಳಿಸಿದ್ದರು.
ಸಿದ್ದರಾಮಯ್ಯ: ಜಮೀರ್ ಅವರ ನಿವಾಸದ ಮೇಲೆ ನಡೆದ ಇ.ಡಿ ದಾಳಿ ರಾಜಕೀಯ ಪ್ರೇರಿತ. ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದರು.
ಡಿ.ಕೆ ಶಿವಕುಮಾರ್: ಈ ದಾಳಿ ಕಾಂಗ್ರೆಸ್ ಮುಖಂಡರನ್ನು ಹೆದರಿಸುವ ಉದ್ದೇಶದಿಂದ ಮಾಡಲಾಗಿದೆ. ಕಾಂಗ್ರೆಸ್ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂದು ಡಿಕೆಶಿ ಆರೋಪಿಸಿದ್ದರು. ಅಲ್ಲದೆ, ಬಿಜೆಪಿಯವರು ಆಪರೇಷನ್ ಕಮಲ ಹಾಗೂ ಹೊಸ ಸರ್ಕಾರ ರಚಿಸಲು ಹಣ ಖರ್ಚು ಮಾಡುವಾಗ ಜಾರಿ ನಿರ್ದೇಶನಾಲಯ ಎಲ್ಲಿತ್ತು? ಎಂದು ಪ್ರಶ್ನಿಸಿದ್ದರು.
ಹೆಚ್.ಡಿ. ಕುಮಾರಸ್ವಾಮಿ: ಜಮೀರ್ ನಿವಾಸದ ಮೇಲೆ ನಡೆದ ಇ.ಡಿ ದಾಳಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುವುದು ನಿರಂತರವಾಗಿ ನಡೆಯುತ್ತದೆ. ಈಗಲೂ ಅದು ಮುಂದುವರಿದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು.
ಬಸವರಾಜ್ ಬೊಮ್ಮಾಯಿ: ಈ ದಾಳಿ ನಡೆಯುವ ಹೊತ್ತಿಗೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೇರಿ ಕೇವಲ ಒಂದು ವಾರವಾಗಿತ್ತು. ಜುಲೈ 28, 2021ರಂದು ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. “ಈ ದಾಳಿ ರಾಜಕೀಯ ಪ್ರೇರಿತ ಅಲ್ಲ. ಅಕ್ರಮ ಮಾಡಿರುವ ಮನೆ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತವೆ. ಅಧಿಕಾರಿಗಳು ತಮಗೆ ದೊರೆತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸುತ್ತಾರೆ” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯಿಸಿದ್ದರು.
ಏನಿದು ಐಎಂಎ ಹಗರಣ?
ಐಎಂಎ (IMA) ಎಂದರೆ ಐ ಮಾನಿಟರಿ ಅಡ್ವೈಸರಿ (I Monitory Advisory) ಎಂಬ ಒಂದು ಹೂಡಿಕೆ ಸಂಸ್ಥೆ. ಇದನ್ನು ಸ್ಥಾಪಿಸಿದ್ದು ಮೊಹಮ್ಮದ್ ಮನ್ಸೂರ್ ಖಾನ್. ಬೆಂಗಳೂರಿನ ಮೂಲದ ಈ ಸಂಸ್ಥೆಯು ಚಿನ್ನಾಭರಣ, ರಿಯಲ್ ಎಸ್ಟೇಟ್, ಫಾರ್ಮಸಿ, ದಿನಸಿ, ಆಸ್ಪತ್ರೆ ಹಾಗೂ ಪ್ರಕಾಶನದಲ್ಲಿ ಕೂಡ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿತ್ತು.
ಈ ಸಂಸ್ಥೆಯಲ್ಲಿ ಸುಮಾರು ೬೬,೦೦೦ಕ್ಕೂ ಹೆಚ್ಚು ಜನ ವಂಚಿತರಾಗಿದ್ದು, ಸಾವಿರಾರು ಕೋಟಿ ರೂಪಾಯಿಗಳನ್ನು ಗುಳುಂ ಮಾಡಲಾಗಿತ್ತು. ಒಟ್ಟಾರೆಯಾಗಿ ೪೦೦೦ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಈ ಸಂಸ್ಥೆಯು ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದು, ಅದರಲ್ಲಿ ೧೪೦೦ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಲಾಭಾಂಶ ರೂಪದಲ್ಲಿ ನೀಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲದೆ, ದೊಡ್ಡ ದೊಡ್ಡ ನಾಯಕರ, ಅಧಿಕಾರಿಗಳ ಕುತ್ತಿಗೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಮನ್ಸೂರ್ ಖಾನ್‌ರನ್ನು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಮಾಡಿದ ಒಂದು ವಿಡಿಯೊ ಸಂದೇಶದಲ್ಲಿ ಜಮೀರ್ ಅಹ್ಮದ್ ಹಾಗೂ ಬೇಗ್ ಅವರ ಹೆಸರನ್ನು ಮನ್ಸೂರ್ ಖಾನ್ ಉಲ್ಲೇಖಿಸಿದ್ದರು. ಈ ಕಾರಣದಿಂದ ಜಮೀರ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಲಾಗಿತ್ತು. ಈ ಪ್ರಕರಣದ ಕುರಿತು ತನಿಖೆ ಇನ್ನೂ ಜಾರಿಯಲ್ಲಿದೆ.
ಇದನ್ನೂ ಓದಿ: Zameer ACB Raid | ₹15 ಕೋಟಿ ಜಾಗದಲ್ಲಿ ₹100 ಕೋಟಿ ಬಂಗಲೆ: ಜಮೀರ್ಗೆ ಇದೇ ಮುಳುವಾಯ್ತಾ?