ಬೆಂಗಳೂರು: ಬೆಂಗಳೂರು ಮೂಲದ ಆನ್ಲೈನ್ ಬ್ರೋಕರೇಜ್ ಸಂಸ್ಥೆ ಜೆರೋಧಾ (Zerodha) ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ (Nithin Kamath, Nikhil Kamath) 2023ರ ಹಣಕಾಸು ವರ್ಷದಲ್ಲಿ 195.4 ಕೋಟಿ ರೂ.ಗಳನ್ನು ಪರಿಹಾರವಾಗಿ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಕಾಮತ್ ಸಹೋದರರು ಜೆರೋಧಾ ಪೂರ್ಣಾವಧಿ ನಿರ್ದೇಶಕರೂ ಹೌದು. ಈ ಪೈಕಿ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ತಮ್ಮ ವಾರ್ಷಿಕ ವೇತನವಾಗಿ ತಲಾ 72 ಕೋಟಿ ರೂ. ಪಡೆದುಕೊಂಡಿದ್ದಾರೆ.
ಅತ್ಯಧಿಕ ಸಂಭಾವನೆ
ಈ ಮೂಲಕ ಭಾರತದ ಸ್ಟಾರ್ಟ್ಅಪ್ ಸಂಸ್ಥಾಪಕರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆದುಕೊಂಡವರು ಎನ್ನುವ ಹೆಗ್ಗಳಿಕೆಗೆ ಕಾಮತ್ ಸಹೋದರರು ಪಾತ್ರರಾಗಿದ್ದಾರೆ. ಓಯೋದ ರಿತೇಶ್ ಅಗರ್ವಾಲ್ 2023ರ ಹಣಕಾಸು ವರ್ಷದಲ್ಲಿ 12 ಕೋಟಿ ರೂ.ಗಳ ವೇತನದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸಿಇಒ ನಿತಿನ್ ಕಾಮತ್ ಅವರ ಪತ್ನಿ ಮತ್ತು ಕಂಪನಿಯ ಪೂರ್ಣಾವಧಿ ನಿರ್ದೇಶಕಿ ಸೀಮಾ ಪಾಟೀಲ್ ಈ ವರ್ಷ 36 ಕೋಟಿ ರೂ. ವೇತನ ಪಡೆದುಕೊಂಡಿದ್ದಾರೆ.
ಇದೇ ಅವಧಿಯಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಣು ಮಾಧವ್ ಒಟ್ಟು 15.4 ಕೋಟಿ ರೂ.ಗಳ ಪ್ಯಾಕೇಜ್ ಪಡೆದಿದ್ದಾರೆ. ಕಂಪೆನಿಯು ನೌಕರರಿಗಾಗಿ ಈ ವರ್ಷ 623 ಕೋಟಿ ರೂ.ಗಳನ್ನು ವಿನಿಯೋಗಿಸಿದೆ. ಆ ಪೈಕಿ 380 ಕೋಟಿ ರೂ.ಗಳನ್ನು ನಿರ್ದೇಶಕರ ವೇತನವಾಗಿ ನೀಡಲಾಗಿದೆ. ಉಳಿದ 236 ಕೋಟಿ ರೂ.ಗಳನ್ನು ನಗದಾಗಿ ಎಂಪ್ಲಾಯ್ ಸ್ಟಾಕ್ ಓನರ್ಶಿಪ್ ಪ್ಲ್ಯಾನ್ಸ್ (ESOPs)ಗೆ ಉಪಯೋಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಮೂಲದ ಈ ಟೆಕ್ ದೈತ್ಯ ಸಂಸ್ಥೆಯ ಉದ್ಯೋಗಿಗಳ ಪ್ರಯೋಜನ ವೆಚ್ಚವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 35.7ರಷ್ಟು ಗಮನಾರ್ಹ ಹೆಚ್ಚಳವನ್ನು ದಾಖಲಿಸಿದೆ. ಇದಕ್ಕಾಗಿ ಈ ವರ್ಷ 623 ಕೋಟಿ ರೂ. ವಿನಿಯೋಗಿಸಲಾಗಿದೆ. ಕಳೆದ ವರ್ಷ ಇದಕ್ಕಾಗಿ 459 ಕೋಟಿ ರೂ. ಖರ್ಚು ಮಾಡಲಾಗಿತ್ತು. ಜೆರೋಧಾ ಭಾರತದ ಅತ್ಯಂತ ಲಾಭದಾಯಕ ಸ್ಟಾರ್ಟ್ ಅಪ್ಗಳ ಪೈಕಿ ಪ್ರಮುಖವಾದುದು.
ಲಾಭದಲ್ಲಿ ಏರಿಕೆ
ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪೆನಿಯ ನಿವ್ವಳ ಲಾಭ ಈ ವರ್ಷ ಶೇ. 39ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ 2,094 ಕೋಟಿ ರೂ. ಇದ್ದರೆ ಈ ವರ್ಷ 2,907 ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಂಪನಿಯ ಮೌಲ್ಯ 30,000 ಕೋಟಿ ರೂ. ಇದು ವಾರ್ಷಿಕ ಲಾಭದ ಅಂದಾಜು 10 ಪಟ್ಟು. ಇತ್ತೀಚಿನ ದಿನಗಳಲ್ಲಿ ಸತತ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಮಾರುಕಟ್ಟೆಯಲ್ಲಿ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಈ ಬ್ರೋಕರೇಜ್ ಸಂಸ್ಥೆಯನ್ನು 2010ರಲ್ಲಿ ಸ್ಥಾಪಿಸಲಾಗಿತ್ತು. ಕಂಪನಿಯು ಪ್ರಸ್ತುತ ದೇಶದಲ್ಲಿ ಎರಡನೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದನ್ನು 65 ಲಕ್ಷಕ್ಕೂ ಹೆಚ್ಚು ಮಂದಿ ಬಳಸುತ್ತಿದ್ದಾರೆ. ಮೊದಲ ಸ್ಥಾನದಲ್ಲಿ 66.30 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿರುವ Groww ಇದೆ.
ಇದನ್ನೂ ಓದಿ: NR Narayana Murthy: “70 ಅಲ್ಲ, 90 ಗಂಟೆ ಕೆಲಸ…ʼʼ ನಾರಾಯಣ ಮೂರ್ತಿ ಇನ್ನೊಂದು ಬಾಂಬ್