ಬೆಂಗಳೂರು: ಝಿಯೂ ಹೋಮ್ಸ್ (Ziyu Homes Scam) ಹೆಸರಲ್ಲಿ ಮನೆ ಮಾಲೀಕರು ಮತ್ತು ಭೋಗ್ಯಕ್ಕೆ ಇರುವವರನ್ನು ಏಕಕಾಲಕ್ಕೆ ವಂಚನೆ ಮಾಡುತ್ತಿದ್ದ ಝಿಯೂ ಹೋಮ್ಸ್ ಕಂಪನಿ ಮಾಲೀಕ ಅಹ್ಮದ್ ಅಲಿ ಬೇಗ್ ಮತ್ತು ಮುಯಿನಾ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮನೆ ಮತ್ತು ಫ್ಲ್ಯಾಟ್‌ಗಳನ್ನು ಝಿಯೂ ಸಂಸ್ಥೆ ಬಾಡಿಗೆಗೆ ಪಡೆದು ಅಗ್ರಿಮೆಂಟ್ ಮಾಡಿಕೊಳ್ಳುತ್ತಿತ್ತು. ಆದರೆ, ಆ ಮನೆಗಳನ್ನು ಬೇರೊಬ್ಬರಿಗೆ ಭೋಗ್ಯಕ್ಕೆ ನೀಡಿ ಕೋಟ್ಯಂತರ ರೂ. ವಂಚನೆ ಮಾಡಿದ್ದರಿಂದ ಕಂಪನಿ ಮಾಲೀಕ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ.
ಪೂರ್ವ ವಿಭಾಗದಲ್ಲಿ ಬರುವ ನೂರಾರು ಮನೆ ಮಾಲೀಕರಿಗೆ ದಂಪತಿ ವಂಚನೆ ಮಾಡಿದ್ದಾರೆ. 15-20 ಸಾವಿರ ರೂ.ಗಳಿಗೆ ಮನೆ ಬಾಡಿಗೆಗೆ ಪಡೆಯುತ್ತಿದ್ದ ಝಿಯೂ ಹೋಮ್ಸ್, ಬೇರೊಬ್ಬರಿಗೆ 15-20 ಲಕ್ಷಕ್ಕೆ ಭೋಗ್ಯಕ್ಕೆ ಹಾಕಿ ವಂಚನೆ ಮಾಡುತ್ತಿತ್ತು. ಮನೆ ಮಾಲೀಕರು ಬಾಡಿಗೆಗೆ ಕೊಟ್ಟಿದ್ದೇವೆ ಎಂದು ಸುಮ್ಮನೆ ಇರುತ್ತಿದ್ದರು. ಅದರೆ, ಒಂದೆರಡು ತಿಂಗಳು ಬಾಡಿಗೆ ಕೊಟ್ಟು ನಂತರ ಬಾಡಿಗೆ ಕೊಡುತ್ತಿರಲಿಲ್ಲ. ಮಾಲೀಕರು ಮನೆ ಬಳಿ ಹೋಗಿ ನೋಡಿದಾಗ ಅವರಿಗೆ ಶಾಕ್ ಆಗುತ್ತಿತ್ತು. ಯಾಕೆಂದರೆ ಮನೆಯಲ್ಲಿ ಬೇರೆ ಯಾರೋ ವ್ಯಕ್ತಿಗಳು ವಾಸವಿರುತ್ತಿರುವುದು ಕಂಡುಬರುತ್ತಿತ್ತು.
ಈ ಬಗ್ಗೆ ಹೆಣ್ಣೂರು, ಬಾಣಸವಾಡಿ ಸೇರಿ ಹಲವು ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು. ಸುಮಾರು ನಲವತ್ತಕ್ಕೂ ಹೆಚ್ಚು ಮನೆ ಮಾಲೀಕರಿಂದ ದೂರು ದಾಖಲಿಸಿದ್ದರಿಂದ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಸಿಸಿಬಿ ಅಧಿಕಾರಿಗಳಿಂದ ಹೈದರಾಬಾದ್‌ನಲ್ಲಿ ಅಹ್ಮದ್ ಅಲಿ ಬೇಗ್ ಮತ್ತು ಪತ್ನಿ ಮುಯಿನಾಳನ್ನು ಬಂಧಿಸಿದ್ದಾರೆ. ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ | Road Accident : ಪ್ರತ್ಯೇಕ ಕಡೆಗಳಲ್ಲಿ ಅಪಘಾತ; ಓವರ್ ಸ್ಪೀಡ್ ಯಡವಟ್ಟು, ಪ್ರಾಣಕ್ಕೆ ತಂತು ಕುತ್ತು
ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಕಾಮುಕನನ್ನು ಥಳಿಸಿದ ಸಾರ್ವಜನಿಕರು
ಚಿಕ್ಕೋಡಿ: ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ (Physical Abuse) ಯತ್ನಿಸಿದ ಕಾಮುಕನನ್ನು ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಯಬಾಗ ಪಟ್ಟಣದ ಕೈರಕೋಡಿ ನಿವಾಸಿ ಸುನೀಲ್ ದೀಪಾಳೆ ಎಂಬಾತನಿಂದ ಕೃತ್ಯ ನಡೆದಿದೆ.
ಸುನೀಲ್ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಪಟ್ಟಣದ ಕಂಚರವಾಡಿ ರೋಡ್ ಕಡೆಯಿಂದ ತೆರಳುತ್ತಿದ್ದಳು. ಈ ವೇಳೆ ಬಾಲಕಿಗೆ ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಮೇಲೆ ಕೂರಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶದ ಕಡೆಗೆ ಕರೆದ್ಯೊಯಲು ಯತ್ನಿಸಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕಿ ಗಾಡಿ ನಿಲ್ಲಿಸಲು ಹೇಳಿದ್ದಾಳೆ. ಆದರೆ ನಿಲ್ಲಸದೇ ಇದ್ದಾಗ ಬಾಲಕಿ ಕಿರುಚಾಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿದ್ದಾರೆ.
ಕೂಡಲೇ ಸುನೀಲ್‌ನನ್ನು ಹಿಡಿದುಕೊಂಡ ಸ್ಥಳೀಯರು ಅತ್ಯಾಚಾರಕ್ಕೆ ಯತ್ನಿಸಿದ್ದು ತಿಳಿಯುತ್ತಿದ್ದಂತೆ ಧರ್ಮದೇಟು ನೀಡಿ ರಾಯಬಾಗ ಪೊಲೀಸ್‌ರಿಗೆ ಒಪ್ಪಿಸಿದ್ದಾರೆ. ಆರೋಪಿಗೆ ರಾಯಬಾಗ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Love Case : ಪ್ರೀತಿಗೆ ಪೋಷಕರ ವಿರೋಧ; ಒಬ್ಬರಿಗೊಬ್ಬರು ತಬ್ಬಿಕೊಂಡು ನೇಣಿಗೆ ಶರಣಾದ ಪ್ರೇಮಿಗಳು
ಹೊಸಕೋಟೆಯಲ್ಲಿ ಬಾಲ್ಯ ವಿವಾಹಕ್ಕೆ ಯತ್ನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕನಕ ಭವನದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ. 15 ವರ್ಷದ ಬಾಲಕಿಗೆ ಮದುವೆ ಮಾಡಲು ಪೋಷಕರು ಮುಂದಾಗಿದ್ದರು. ಆರತಕ್ಷತೆ ಮುಗಿಸಿ ಮದುವೆಗೆ ಅರಿಶಿನ ಶಾಸ್ತ್ರ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಅಧಿಕಾರಿಗಳು ಮದುವೆ ನಿಲ್ಲಿಸಿದ್ದಾರೆ.
ಹೊಸಕೋಟೆ ನಗರದ ಕನಕ ಭವನದಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮೀ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಮದುವೆ ನಿಲ್ಲಿಸಿ, ಬಾಲಕಿಯನ್ನು ವಶಕ್ಕೆ ಪಡೆದು ಮಹಿಳಾ ಕೇಂದ್ರಕ್ಕೆ ಕರೆತಂದಿದ್ದಾರೆ. ಪೋಷಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ