Site icon Vistara News

Zomato Rest Point: ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ ರೆಸ್ಟ್‌ ಪಾಯಿಂಟ್‌ ಸ್ಥಾಪಿಸಿದ ಜೊಮ್ಯಾಟೊ, ಏನಿದರ ವಿಶೇಷ?

Zomato Resting Points In Bengaluru

Zomato launches south India's first resting point in Bengaluru

ಬೆಂಗಳೂರು: ಸ್ವಿಗ್ಗಿ, ಜೊಮ್ಯಾಟೊ ಸೇರಿ ಯಾವುದೇ ಫುಡ್‌ ಡೆಲಿವರಿ ಬಾಯ್‌ಗಳು ಮಹಾ ನಗರಗಳ ಟ್ರಾಫಿಕ್‌, ಮಳೆ, ಚಳಿ, ಬಿಸಿಲು ಎನ್ನದೆ, ಹಗಲು-ರಾತ್ರಿ ಎನ್ನದೆ ಫುಡ್‌ ಡೆಲಿವರಿ ಮಾಡುತ್ತಾರೆ. ಇದನ್ನು ಗಮನಿಸಿದ ಜೊಮ್ಯಾಟೊ ಕಂಪನಿಯು ಈಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜೊಮ್ಯಾಟೊ ನೌಕರರು ಡ್ಯೂಟಿಯ ಮಧ್ಯೆ ಕೆಲ ಸಮಯ ವಿಶ್ರಾಂತಿ ಮಾಡಲು ನಗರಗಳಲ್ಲಿ ರೆಸ್ಟಿಂಗ್‌ ಪಾಯಿಂಟ್ಸ್‌ (Zomato Rest Point) ನಿರ್ಮಿಸುತ್ತಿದೆ. ಅದರಲ್ಲೂ, ದಕ್ಷಿಣ ಭಾರತದಲ್ಲೇ ಮೊದಲ ರೆಸ್ಟಿಂಗ್‌ ಪಾಯಿಂಟ್‌ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿರುವುದು ಮಹತ್ವದ ವಿಚಾರವಾಗಿದೆ.

ರಾಜ್ಯ ರಾಜಧಾನಿಯ ವೆಗಾ ಸಿಟಿ ಮಾಲ್‌ನಲ್ಲಿ ದಕ್ಷಿಣ ಭಾರತದ ಮೊದಲ ರೆಸ್ಟಿಂಗ್‌ ಪಾಯಿಂಟ್‌ಗೆ ಜೊಮ್ಯಾಟೊ ಚಾಲನೆ ನೀಡಿದೆ. ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಕೂಡ ಭಾಗವಹಿಸಿ, ಜೊಮ್ಯಾಟೊ ಸಿಬ್ಬಂದಿಗೆ ಶುಭ ಕೋರಿದರು. ಇನ್ನು ಮುಂದೆ, ಜೊಮ್ಯಾಟೊ ಡೆಲಿವರಿ ಬಾಯ್‌ಗಳು ಬಿಡುವಿನ ಮಧ್ಯೆ ರೆಸ್ಟ್‌ ಪಾಯಿಂಟ್‌ಗಳಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದುಕೊಂಡು, ಮತ್ತೆ ಡ್ಯೂಟಿಗೆ ಹಾಜರಾಗಬಹುದಾಗಿದೆ.

ತೇಜಸ್ವಿ ಸೂರ್ಯ ಟ್ವೀಟ್‌

“ಜೊಮ್ಯಾಟೊ ಹಾಗೂ ವೆಗಾಸಿಟಿ ಸಹಯೋಗದಲ್ಲಿ ದಕ್ಷಿಣ ಭಾರತದ ಮೊದಲ ರೆಸ್ಟಿಂಗ್‌ ಪಾಯಿಂಟ್‌ ಸ್ಥಾಪಿಸಿದೆ. ಕುಡಿಯುವ ನೀರು, ಸ್ವಚ್ಛ ಶೌಚಾಲಯ ಸೇರಿ ಹಲವು ಸೌಕರ್ಯಗಳು ಇಲ್ಲಿವೆ. ಇದರಿಂದ ಡೆಲಿವರಿ ಪಾರ್ಟ್‌ನರ್‌ಗಳು ತುಸು ವಿಶ್ರಾಂತಿ ಪಡೆದು, ಉಲ್ಲಸಿತ ಮನಸ್ಸಿನಿಂದ ಸರಿಯಾದ ಸಮಯಕ್ಕೆ ಫುಡ್‌ ಡೆಲಿವರಿ ಮಾಡಬಹುದಾಗಿದೆ” ಎಂದು ಚಾಲನೆ ಬಳಿಕ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದಾರೆ.

ರೆಸ್ಟ್‌ ಪಾಯಿಂಟ್ಸ್‌ನಲ್ಲಿ ಏನೆಲ್ಲ ಸೌಲಭ್ಯ?

ಫುಡ್‌ ಡೆಲಿವರಿ ಮಾಡುವಾಗ ತುಸು ಬಿಡುವು ಸಿಕ್ಕರೆ, ಮಳೆ ಬಂದರೆ ವಿಶ್ರಾಂತಿ ಪಡೆಯಲು ರೆಸ್ಟ್‌ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ, ಈ ಪಾಯಿಂಟ್‌ಗಳಲ್ಲಿ ಉಚಿತ ವೈಫೈ, ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ಚಾರ್ಜಿಂಗ್‌ ಪಾಯಿಂಟ್‌, ಕುಳಿತು ವಿಶ್ರಾಂತಿ ಪಡೆಯಲು ಆಸನದ ವ್ಯವಸ್ಥೆ ಇದೆ. ಪ್ರಥಮ ಚಿಕಿತ್ಸೆ ಪೆಟ್ಟಿಗೆ (First Aid Box) ಕೂಡ ಲಭ್ಯವಿದೆ.

ಇದನ್ನೂ ಓದಿ: 2000 Notes Withdrawn: ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ಬರೀ 2 ಸಾವಿರ ರೂ. ನೋಟು; ಇದು ನೋಟು ವಾಪಸ್‌ ಎಫೆಕ್ಟ್

ಕಳೆದ ಫೆಬ್ರವರಿಯಲ್ಲಿಯೇ ಕಂಪನಿಯು ರೆಸ್ಟ್‌ ಪಾಯಿಂಟ್‌ಗಳ ಸ್ಥಾಪನೆ ಕುರಿತು ಘೋಷಣೆ ಮಾಡಿತ್ತು. ಹಾಗೆಯೇ, ಬೇರೆ ಸಂಸ್ಥೆಯ ಫುಡ್ ಡೆಲಿವರಿ ಬಾಯ್‌ಗಳು ಕೂಡ ಇಲ್ಲಿ ತುಸು ವಿಶ್ರಾಂತಿ ಪಡೆದು ಹೋಗಬಹುದು ಎಂದು ಘೋಷಿಸಿತ್ತು. ಈಗ ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ರೆಸ್ಟ್‌ ಪಾಯಿಂಟ್‌ ಸ್ಥಾಪಿಸಲಾಗಿದ್ದು, ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಿಸಲಾಗುತ್ತದೆ ಎಂದು ತಿಳಿದುಬಂದಿದೆ.

Exit mobile version