Site icon Vistara News

ಮಕ್ಕಳ ಕಥೆ: ಮಧುಕರ ಮತ್ತು ಅಜ್ಜ

lone man children story

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/04/MadhuAjja.mp3

ಮಧುಕರ ಆ ಊರಿನಲ್ಲಿ ಎಲ್ಲರಿಗೂ ಬೇಕಾದವನು. ಊರಲ್ಲಿ ವಯಸ್ಸಾದವರಿಗೆ ಪೇಟೆಯಿಂದ ದಿನಸಿ, ತಂದು ಕೊಡುವುದು, ರೋಗಿಗಳಿಗಾಗಿ ವೈದ್ಯರಿಂದ ಔಷಧಿ ತರುವುದು, ಅಮ್ಮಂದಿರಿಗಾಗಿ ಅವರ ಮಕ್ಕಳನ್ನು ಶಾಲೆಗೆ ಬಿಟ್ಟುಬರುವುದು, ಕೈಲಾಗದವರಿಗೆ ಸೌದೆ ಒಡೆದು ಕೊಡುವುದು, ಹಸು- ಕರುಗಳಿಗೆ ಸಣ್ಣ-ಪುಟ್ಟ ರೋಗಗಳು ಬಂದರೆ ಮದ್ದು ಕೊಡುವುದು- ಹೀಗೆ ಬಹಳಷ್ಟು ಕೆಲಸಗಳನ್ನು ಆತ ಮಾಡುವಂಥವನು. ಎಲ್ಲರಿಗೂ ಎಲ್ಲಾ ಆಪತ್ತಿನ ಸಂದರ್ಭಗಳಲ್ಲೂ ನೆನಪಾಗುವುದು ಮಧುಕರನೇ.

ಅಪ್ಪ-ಅಮ್ಮ ಯಾರೂ ಇಲ್ಲದೆ ಒಂಟಿಯಾಗಿ ಬೆಳೆದಿದ್ದ ಆತ. ತನ್ನದು ಅಂತ ಒಂದು ಪುಟ್ಟ ಮನೆಯನ್ನು ಮಧುಕರ ಕಟ್ಟಿಕೊಂಡಿದ್ದ. ಆ ಮನೆಯಲ್ಲಿ ಒಂದು ದೇವರ ಫೋಟೊ, ನಾಲ್ಕಾರು ಪಾತ್ರೆಗಳು, ಒಂದು ಬಿಂದಿಗೆ, ಇನ್ನೊಂದು ಬಕೆಟ್ಟು ಮತ್ತು ಮಧುಕರನ ಮೂರ್ನಾಲಕು ಜೊತೆ ಬಟ್ಟೆಗಳನ್ನು ಬಿಟ್ಟರೆ ಇನ್ನೇನೂ ಇರಲಿಲ್ಲ. ಹಾಗಾಗಿ ಅವನ ಮನೆಯ ಬಾಗಿಲಿಗೆ ಬೀಗವೂ ಇರಲಿಲ್ಲ, ಕಾರಣ ಕದಿಯುವಂಥದ್ದು ಆ ಮನೆಯಲ್ಲಿ ಏನೂ ಇರಲೇ ಇಲ್ಲ. ಹಾಗಾಗಿ ತಕ್ಕಮಟ್ಟಿಗೆ ಸಂತೋಷದಲ್ಲೇ ದಿನ ಕಳೆಯುತ್ತಿದ್ದ ಆತ.

ಒಂದು ಸಾರಿ ಊರಿನ ಯಾವುದೋ ಮದುವೆ ಮನೆಯಲ್ಲಿ ತೋರಣ ಕಟ್ಟಿ, ಚಪ್ಪರ ಹಾಕುವುದಕ್ಕೆ ಅಂತ ಮಧುಕರ ಹೋಗಿದ್ದ. ಅಲ್ಲಿ ಆತ ಎಷ್ಟೊಂದು ಕೆಲಸ ಮಾಡಿದರೂ, ಅವನ ಯೋಗಕ್ಷೇಮ ಕೇಳುವವರೇ ಯಾರೂ ಇರಲಿಲ್ಲ. ಬಿಸಿಲಲ್ಲಿ ಕೆಲಸ ಮಾಡಿ ದಣೀತಾ ಇದ್ದರೂ, ಮಜ್ಜಿಗೆಯನ್ನೋ ಅಥವಾ ಪಾನಕವನ್ನೋ ಕೊಡುವವರೂ ಇರಲಿಲ್ಲ. ಹಾಗಂತ ಉಳಿದೆಲ್ಲರಿಗೂ ಅಲ್ಲಿ ಭರ್ಜರಿ ಉಪಚಾರವೇ ನಡೆದಿತ್ತು. ಮದುವೆಮನೆಯ ಕೆಲಸ ಎಲ್ಲ ಆದ ಮೇಲೆ, ಮಧುಕರನಿಗೊಂದಿಷ್ಟು ದುಡ್ಡು ಕೊಟ್ಟು ಕಳಿಸಿಬಿಟ್ಟರು ಆ ಮನೆಯವರು.

ʻಛೇ! ಇದೆಂಥಾ ಜೀವನ ನನ್ನದುʼ ಎಂದೆನಿಸಿತು ಮಧುಕರನಿಗೆ. ʻಇವರ ಮನೆಯ ಮದುವೆ ತೋರಣ, ಚಪ್ಪರ ಕಟ್ಟುವುದರಿಂದ ಹಿಡಿದು, ಅಡುಗೆ ಭಟ್ಟರಿಗೆ ತರಕಾರಿ ಹೆಚ್ಚಿಕೊಡುವುದು, ಊಟಕ್ಕೆ ಎಲೆ ಹಾಕುವುದು, ಬಡಿಸುವುದು, ಮುಸುರೆ ತೊಳೆಯುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನೂ ಮಾಡಿದ್ದೇನೆ. ಆದರೂ ಅಂತಃಕರಣದಿಂದ ಮಾತಾಡಿಸಲಿಲ್ಲವಲ್ಲ. ಎಲ್ಲರಿಗೂ ನಾನು ಮಾಡುವ ಕೆಲಸ ಬೇಕು, ನಾನು ಮಾತ್ರ ಯಾರಿಗೂ ಬೇಡ. ನನ್ನ ಸಲುವಾಗಿ ಕೆಲಸ ಮಾಡುವವರು ಯಾರೂ ಇಲ್ಲʼ ಎಂದು ಬೇಸರದಿಂದ ಅಳುತ್ತಾ ಮನೆಯಲ್ಲಿ ಮಲಗಿಬಿಟ್ಟ ಮಧುಕರ.

ಆತನ ನೆರೆಮನೆಯಲ್ಲಿ ಅಜ್ಜನೊಬ್ಬ ವಾಸಿಸುತ್ತಿದ್ದ. ಆತನೂ ಮಧುಕರನಿಂದ ಲೆಕ್ಕವಿಲ್ಲದಷ್ಟು ಬಾರಿ ನೆರವು ಕೇಳಿದವನೇ ಆಗಿದ್ದ. ಒಂದೆರಡು ದಿನಗಳಿಂದ ಮಧುಕರ ಮನೆಯಿಂದ ಹೊರಗೆ ಬಂದಿಲ್ಲ ಎಂಬುದನ್ನು ಗಮನಿಸಿದ ಆತ, ಮೆಲ್ಲನೆ ಹೋಗಿ ಆತನ ಮನೆಯ ಬಾಗಿಲು ನೂಕಿದ. ಹಿಂದಿನ ದಿನದಿಂದ ಏನನ್ನೂ ತಿನ್ನದೆಯೇ ಮಲಗಿದ್ದ ಆತನನ್ನು ಎಬ್ಬಿಸಿ, ʻಇದ್ಯಾಕೆ ಹೀಗೆ ಮಲಗಿದ್ದೀಯ ಮಧು? ಆರೋಗ್ಯ ಚನ್ನಾಗಿಲ್ವೇನೊ?ʼ ಎಂದು ಅಕ್ಕರೆಯಿಂದ ಕೇಳಿದ. ತನ್ನ ಮನಸ್ಸಿನ ವೇದನೆಯನ್ನೆಲ್ಲಾ ತೋಡಿಕೊಂಡ ಮಧು.

ಇದನ್ನೂ ಓದಿ: ಮಕ್ಕಳ ಕಥೆ: ಮುಗ್ಧ ಶಿಷ್ಯರು ಮತ್ತು ಕುದುರೆ ಮೊಟ್ಟೆ

ʻಅಷ್ಟೇ ತಾನೆ! ಅದಕ್ಕೆಲ್ಲಾ ಇಷ್ಟೊಂದು ಬೇಸರ ಮಾಡಿಕೊಂಡ್ರೆ ಹೇಗೆ? ಯಾರೂ ನಿನ್ನ ಕಾಳಜಿ ಮಾಡೋದಿಲ್ಲ ಅಂತೀಯಲ್ಲ, ಈಗ ನಾನಿಲ್ವಾ ನಿನ್ನ ಕಷ್ಟ-ಸುಖಕ್ಕೆ? ಯಾರೂ ನಿನಗಾಗಿ ಕೆಲಸ ಮಾಡಲ್ಲ ಅಂದೆಯಲ್ಲ, ದಿನಾ ಅನ್ನ ಉಣ್ಣುವಷ್ಟು ದುಡೀತೀಯಲ್ವಾ?ʼ ಕೇಳಿದ ಅಜ್ಜ.

ʻಉಣ್ಣೋದಕ್ಕೆ ಇದ್ರೆ ಸಾಕಾ?ʼ ಬೇಸರದಿಂದ ಕೇಳಿದ ಮಧು.

ʻನೀನು ಉಣ್ಣೋದಕ್ಕೆ ಅಂತ ಯಾರೋ ಗೊತ್ತಿಲ್ಲದ ರೈತ ಬೆಳೆ ಬೆಳೀತಾನಲ್ಲ, ಅವನು ನಿನಗಾಗಿ ಕೆಲಸ ಮಾಡೋದಿಲ್ವಾ? ಹಾಕ್ಕೋತೀಯಲ್ಲಾ ಬಟ್ಟೆನಾ- ಅದೇನು ನೀನು ನೇಯ್ದಿದ್ದಾ ಅಥವಾ ನೀನು ಹೊಲಿದಿದ್ದಾ? ಯಾರೋ ನೇಕಾರರು, ದರ್ಜಿಗಳು ನಿನಗಾಗಿ ಇದನ್ನೆಲ್ಲಾ ಮಾಡಲಿಲ್ವಾ? ನಿನಗೆ ಬೇಕಾದ ದಿನಸಿಗಳನ್ನೆಲ್ಲಾ ಅಂಗಡಿಯಿಂದ ತರುತ್ತೀಯಲ್ಲಾ- ನಿನಗಾಗಿ ಅಂಗಡಿಯಾತ ಅದನ್ನೆಲ್ಲಾ ದಾಸ್ತಾನು ಮಾಡಲಿಲ್ಲವಾ? ನೋಡು, ಎಷ್ಟೊಂದು ಜನ ದುಡೀತಾರೆ ನಿನ್ನ ಸಲುವಾಗಿ! ಸುಮ್ಮನೆ ಬೇಸರ ಮಾಡಬಾರದುʼ ಎಂದ ಅಜ್ಜ.

ಮಧುವಿನ ಮುಖದಲ್ಲಿ ಮಂದಹಾಸ ಮಿನುಗಿತು. ಆತ ಅಜ್ಜನನ್ನು ಪ್ರೀತಿಯಿಂದ ಅಪ್ಪಿಕೊಂಡ.

ಮಕ್ಕಳ ಕಥೆ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ- ಭಾಗ 2

Exit mobile version