Site icon Vistara News

ಮಕ್ಕಳ ಕಥೆ | ಕಿಟ್ಟಿಯ ಹೊಟ್ಟೆಯಿಂದ ಬಂದ ಗಿಳಿ

children story

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/11/KittiHotteyaGili.mp3

ಕಿಟ್ಟಿ ತನ್ನ ಮಗಳು ತುಂಟಿಯೊಂದಿಗೆ ಮನೆಯ ಹತ್ತಿರ ವಾಕಿಂಗ್‌ ಮಾಡುತ್ತಿದ್ದ. ಸುಮಾರು ಹೊತ್ತು ವಾಕಿಂಗ್‌ ಮಾಡಿ, ತುಂಟಿಯನ್ನು ಅಲ್ಲೇ ಆಟವಾಡಲು ಬಿಟ್ಟು, ತಾನೊಂದು ಕಲ್ಲಿನ ಮೇಲೆ ಕುಳಿತ. ಅಷ್ಟೆ, ಇದ್ದಕ್ಕಿದ್ದ ಹಾಗೆ ಕೆಮ್ಮಲು ಪ್ರಾರಂಭಿಸಿದ. ಎಷ್ಟು ಕೆಮ್ಮಿದರೂ ಕಡಿಮೆಯಾಗದೆ, ಗಂಟಲೆಲ್ಲ ಉರಿಯತೊಡಗಿತು. ʻಅರೆ! ಇಷ್ಟು ಹೊತ್ತು ಚನ್ನಾಗೇ ಇದ್ದೆನಲ್ಲ, ಇದ್ದಕ್ಕಿದ್ದಂತೆ ಇದೇನಾಯಿತು?ʼ ಎನಿಸಿತು ಕಿಟ್ಟಿಗೆ. ಅವನ ಜೊತೆಗಿದ್ದ ಮಗಳು ತುಂಟಿಗೂ ಗಾಬರಿಯಾಯಿತು. ಕೆಮ್ಮೀಕೆಮ್ಮಿ ಅಂತೂ ಅವನ ಗಂಟಲಿನಿಂದ ಏನೋ ಹೊರಗೆ ಬಂದ ಮೇಲೆ ಕೆಮ್ಮು ನಿಂತಿತು. ನೋಡಿದರೆ ಅದೊಂದು ಹಸಿರು ಪುಕ್ಕದ ಸಣ್ಣ ಭಾಗದಂತಿತ್ತು. ʻಇದೇನಪ್ಪಾ ಇದು! ಗಿಳಿ ಪುಕ್ಕ ಇದ್ದಂಗಿದೆ?ʼ ಎಂದಳು ತುಂಟಿ. ಅವನಿಗೂ ಹೌದು ಎನಿಸಿತು. ಆದರೆ ಇದು ತನ್ನ ಗಂಟಲನ್ನು ಸೇರಿದ್ದು ಹೇಗೆ ಎಂದು ಸೋಜಿಗವಾಯಿತು. ʻಗಿಳಿ ತಿಂದ್ಯಾ?ʼ ಕೀಟಲೆಯಿಂದ ಕೇಳಿದಳು ತುಂಟಿ. ʻಏಯ್‌ ಸುಮ್ನಿರೆ! ಏನೇನೋ ಹೇಳಬೇಡʼ ಮಗಳಿಗೆ ಗದರಿದ ಕಿಟ್ಟಿ. ಸಂಜೆಯಾಗುತ್ತಿತ್ತು, ಇಬ್ಬರೂ ಮನೆಯತ್ತ ಹೊರಟರು.

ಮನೆ ತಲುಪುತ್ತಿದ್ದಂತೆಯೇ, ನೇರ ತನ್ನಮ್ಮ ಪುಟ್ಟಿಯ ಬಳಿಗೋಡಿದ ತುಂಟಿ, ʻಏನು ಗೊತ್ತೇನಮ್ಮಾ, ಇವತ್ತು ಅಪ್ಪನ ಹೊಟ್ಟೆಯಿಂದ ದೊಡ್ಡದೊಂದು ಗಿಳಿ ಪುಕ್ಕ ಹೊರಗೆ ಬಂತುʼ ಎಂದಳು ದೊಡ್ಡ ಕಣ್ಣು ಬಿಟ್ಟುಕೊಂಡು. ಗಿಳಿಪುಕ್ಕ! ಪುಟ್ಟಿಗೆ ಅರ್ಥವೇ ಆಗಲಿಲ್ಲ. ʻಅದೇನು ಸರಿಯಾಗಿ ಹೇಳೆʼ ಎಂದಳು ಮಗಳಿಗೆ. ಅಪ್ಪ ಕೆಮ್ಮಿದ ಕಥೆಯನ್ನೆಲ್ಲಾ ಹೇಳಿದ ತುಂಟಿ, ಕಡೆಗೆ ದೊಡ್ಡದೊಂದು ಗಿಳಿ ಪುಕ್ಕವೇ ಅಪ್ಪನ ಹೊಟ್ಟೆಯಿಂದ ಹೊರಬಂತು ಎಂದೆಲ್ಲಾ ಕಥೆ ಕಟ್ಟಿದಳು. ನಂಬಲಾರದ ಪುಟ್ಟಿ, ನೇರ ಕಿಟ್ಟಿಯ ಬಳಿಗೆ ಹೋಗಿ, ʻಏನ್ರೀ… ಇವತ್ತು ನೀವು ಕೆಮ್ಮಿದಾಗ ಗಿಳಿಪುಕ್ಕ…ʼ ಎನ್ನುತ್ತಿದ್ದಂತೆ, ಅವಳ ಮಾತನ್ನು ಅರ್ಧಕ್ಕೆ ತುಂಡರಿಸಿದ ಕಿಟ್ಟಿ, ʻಹೂ, ಹೂ. ನಿನ್ನ ಮಗಳು ವರದಿ ಒಪ್ಪಿಸಿದ್ದಾಳೇಂತ ಆಯ್ತಲ್ಲʼ ಎನ್ನುತ್ತಾ ತನ್ನ ಕೆಲಸದಲ್ಲಿ ಮಗ್ನನಾದ. ಪೂರ್ತಿ ವಿಷಯ ಇಬ್ಬರೂ ಒಬ್ಬರಿಗೊಬ್ಬರು ಹೇಳಲಿಲ್ಲ!

ಅಮ್ಮನಿಗೆ ಹೀಗೆ ಏನೇನೋ ಕಥೆ ಹೇಳಿದ ತುಂಟಿ ಅದನ್ನು ಮರೆತು ತನ್ನ ಕೆಲಸದಲ್ಲಿ ಲೀನವಾದಳು. ಆದರೆ ಪುಟ್ಟಿಗೆ ಈ ವಿಷಯ ಎಷ್ಟೊಂದು ಬೆರಗು ಹುಟ್ಟಿಸಿತ್ತು ಎಂದರೆ ಅದನ್ನು ಅಕ್ಕಪಕ್ಕದವರಲ್ಲೆಲ್ಲಾ ಹೇಳಿಕೊಂಡಳು. ʻಎಂಥಾ ವಿಚಿತ್ರ ಅಂತೀರೀ! ಹೊಟ್ಟೆಯಿಂದ ಒಂದಿಡೀ ಗಿಳಿ ಹೊರಗೆ ಬಂತಂತೆ ಕಣ್ರೀ! ನಮ್‌ ತುಂಟಿ ನೋಡಿದ್ದಾಳಂತೆʼ ಎಂದೆಲ್ಲಾ ಕಥೆಗೆ ರೆಕ್ಕೆ-ಪುಕ್ಕ ಕಟ್ಟಿದಳು.  ಬರೀ ಪುಕ್ಕದ ಒಂದು ಸಣ್ಣ ತುಂಡು ಇದೀಗ ಇಡೀ ಗಿಳಿಯಾಗಿ ಕಿಟ್ಟಿಯ ಹೊಟ್ಟೆಯಿಂದ ಹೊರಗೆ ಬಂದಿತ್ತು. ಬಂದ ಮೇಲೆ ಆ ಗಿಳಿ ಸುಮ್ಮನಿರೋದಕ್ಕೆ ಸಾಧ್ಯವೇ? ಊರಲ್ಲೆಲ್ಲಾ ಕಿಟ್ಟಿ ಹೊಟ್ಟೆಯ ಗಿಳಿ ಹಾರಾಡತೊಡಗಿತು! ಎಲ್ಲರ ಬಾಯಲ್ಲೂ ಇದೇ ಸುದ್ದಿ, ಇದರದ್ದೇ ವರ್ಣನೆ. ಎಲ್ಲರೂ ತಾವೇ ಗಿಳಿಯನ್ನು ಕಂಡವರಂತೆ ಮಾತನಾಡತೊಡಗಿದ್ದರು. ʻತುಂಬಾ ಚಿಕ್ಕದಲ್ವಂತೆ, ಸುಮಾರು ದೊಡ್ಡದಾಗೇ ಇತ್ತಂತೆʼ ಎಂದು ಒಬ್ಬರು ಹೇಳಿದರೆ, ʻಕೊಕ್ಕು ಎಷ್ಟು ಕೆಂಪಗಿತ್ತಂತೆ ಗೊತ್ತಾ?ʼ ಎಂದು ಇನ್ನೊಬ್ಬರು ವರ್ಣಿಸುತ್ತಿದ್ದರು. ವಿಷಯ ಊರೆಲ್ಲಾ ಹರಡುವಷ್ಟರಲ್ಲಿ ಕಿಟ್ಟಿಯ ಹೊಟ್ಟೆಯಿಂದ ದೊಡ್ಡದೊಂದು ಗಿಳಿಹಿಂಡೇ ಹೊರಬಂತು ಎಂತು ಸುದ್ದಿಯಾಗಿತ್ತು!

ಇದನ್ನೂ ಓದಿ | ಮಕ್ಕಳ ಕಥೆ | ಬೇಡದ ಅತಿಥಿಗಳ ಕಾಟ ತಪ್ಪಿದ್ದು ಹೇಗೆ?

ʻಅಂಕಲ್, ಇನ್ನೊಂದು ಹಿಂಡು‌ ಗಿಳಿಗಳು ಯಾವಾಗ ಬರತ್ತೇ? ಗಿಳಿ ಸಾಕೋದು ಅಂದ್ರೆ ನಮಗಿಷ್ಟʼ ಎನ್ನುತ್ತಾ ಒಂದಿಷ್ಟು ಮಕ್ಕಳು ಕಿಟ್ಟಿಯ ಬಳಿ ಬಂದರು. ಮೊದಲಿಗೆ ಅವರ ಮಾತೇ ಕಿಟ್ಟಿಗೆ ಅರ್ಥವಾಗಲಿಲ್ಲ. ಈತನ ಹೊಟ್ಟೆಯಿಂದ ಗಿಳಿಹಿಂಡುಗಳು ಹೊರಬರುವ ಕಥೆಯನ್ನು ಮಕ್ಕಳೇ ಕಿಟ್ಟಿಗೆ ತಿಳಿಸಿದರು. ವಿಷಯ ತಿಳಿದ ಕಿಟ್ಟಿ ಹೌಹಾರಿದ. ರಸ್ತೆ ಮೇಲೆ ಓಡಾಡುವಾಗ ಜನ ತನ್ನನ್ನೇಕೆ ವಿಚಿತ್ರವಾಗಿ ನೋಡುತ್ತಿದ್ದಾರೆ, ಯಾಕೆ ಏನೋ ಗುಸುಗುಸು ಮಾತಾಡಿಕೊಳ್ಳುತ್ತಿದ್ದಾರೆ ಎನ್ನುವುದು ಅವನಿಗೀಗ ಅರ್ಥವಾಗಿತ್ತು. ಕೆಮ್ಮೇನು ಲೋಕದಲ್ಲಿ ಯಾರಿಗೂ ಬರುವುದಿಲ್ಲವೇ? ಇಷ್ಟು ಸಣ್ಣ ವಿಷಯವೀಗ ಅವಾಂತರವಾಗುತ್ತಿದೆಯಲ್ಲ ಎಂದು ಬೇಸರವಾಯಿತು ಕಿಟ್ಟಿಗೆ. ತನ್ನ ಬೇಸರ ಶಮನಕ್ಕಾಗಿ ತನ್ನ ಒಬ್ಬ ಬುದ್ಧಿವಂತ ಮಿತ್ರನ ಬಳಿಗೆ ಹೋದ. ಇವನ ಕಥೆಯನ್ನೆಲ್ಲಾ ಕೇಳಿದ ಮಿತ್ರ, “ಒಂದು ಕೆಲಸ ಮಾಡು. ನಮ್ಮನೆಯಿಂದ ಹೊರಗೆ ಹೋಗುತ್ತಿದ್ದಂತೆ ನಿನ್ನೆದುರು ಮೊದಲು ಸಿಗುವ ಮೂವರಿಗೆ ʻಆಲಿಬಾಬಾ ಹೋಗ್ಬಿಟ್ರಂತೆʼ ಅಂತ ಹೇಳಿಹೋಗು. ನಾಡಿದ್ದು ನಮ್ಮ ಬಡಾವಣೆಯ ರಾಜ್ಯೋತ್ಸವ ಸಮಾರಂಭ ಇದೆಯಲ್ಲ, ಅಲ್ಲಿ ನಾನು ಮಾತಾಡ್ತೀನಿ. ಅಲ್ಲಿ ಏನಾಗತ್ತೆ ನೋಡು” ಎಂದ ಮಿತ್ರ. ಅವನ ಉದ್ದೇಶವೇನು ಅನ್ನೋದು ಕಿಟ್ಟಿಗೆ ತಿಳಿಯದಿದ್ದರೂ, ಸ್ನೇಹಿತನ ಮಾತಿನಲ್ಲಿ ನಂಬಿಕೆಯಿಟ್ಟು ಅವನು ಹೇಳಿದಂತೆಯೇ ಮಾಡಿದ.

ಊರಲ್ಲೀಗ ʻಆಲಿಬಾಬಾ ತೀರ್ಕೊಂಡ್ರಂತೆʼ ಎನ್ನುವ ಹೊಸ ಸುದ್ದಿ ಹರಿದಾಡುತ್ತಿತ್ತು. ʻಎಷ್ಟೊಳ್ಳೆ ಮನುಷ್ಯ, ಪಾಪ! ಹಿಂಗಾಗಬಾರದಿತ್ತುʼ ಎಂದು ಕೆಲವರು ಹೇಳಿದರೆ, ʻಮೊನ್ನೆ ತಾನೆ ಮಾರ್ಕೆಟ್ಟಲ್ಲಿ ನೋಡಿದ್ದೆ. ಆಗ್ಲೇ ಹೋಗ್ಬಿಟ್ರಾ?ʼ ಎಂದರು ಹಲವರು. ತಮಗೂ ಅವರಿಗೂ ಎಷ್ಟೊಂದು ಸ್ನೇಹವಿತ್ತು ಎಂದೆಲ್ಲಾ ಕೊಂಡಾಡಿದರು. ಅಂತೂ ತಮಗೆ ತೋಚಿದಂತೆ ಎಲ್ಲರೂ ಆಲಿಬಾಬಾ ಬಗ್ಗೆ ಮಾತಾಡಿದರು. ಇದಿಷ್ಟರ ನಡುವೆಯೇ ಬಡಾವಣೆಯ ರಾಜ್ಯೋತ್ಸವ ಸಮಾರಂಭ ಬಂತು. ಈ ಸಂದರ್ಭದಲ್ಲಿ ಮಾತಾಡಿದ ಕಿಟ್ಟಿಯ ಸ್ನೇಹಿತ, ʻಆಲಿಬಾಬಾ ಎಷ್ಟು ಜನಕ್ಕೆ ಪರಿಚಯ?ʼ ಎಂದು ಕೇಳಿದ. ಸಭೆಯಲ್ಲಿ ಕುಳಿತ ಬಹುತೇಕ ಮಂದಿ ಕೈಯೆತ್ತಿದರು. ʻ೪೦ ಕಳ್ಳರ ಕಥೆಯಲ್ಲಿ ಬರುವ ಆಲಿಬಾಬಾನ ಬಗ್ಗೆ ನಾನು ಹೇಳಿದ್ದು! ಅವನನ್ನು ಬಿಟ್ರೆ ಬೇರೆ ಯಾವ ಆಲಿಬಾಬಾನೂ ಇಲ್ಲ, ಯಾರೂ ತೀರ್ಕೊಂಡಿಲ್ಲʼ ಎಂದ ಆತ ಕಿಟ್ಟಿಯ ಹೊಟ್ಟೆಯಿಂದ ಸಹ ಯಾವ ಗಿಳಿಯೂ ಬರಲಿಲ್ಲ ಎಂದು ಜನರ ಮೂರ್ಖತನದ ಬಗ್ಗೆ ಹೇಳಿದ. ಕುಳಿತವರೆಲ್ಲರಿಗೂ ತಮ್ಮ ತಪ್ಪೇನು ಅನ್ನೋದು ಅರಿವಾಯಿತು. ಕಿಟ್ಟಿಯ ಬಳಿ ಕ್ಷಮೆ ಕೇಳಿದರು. ಅಂದಿನಿಂದ ಕಿಟ್ಟಿಗೆ ಊರಲ್ಲಿ ಗಿಳಿ ಕಾಟ ತಪ್ಪಿತು.

ಇದನ್ನೂ ಓದಿ | ಮಕ್ಕಳ ಕಥೆ | ಕುಶಲ ಕಲಿತ ಕೊತ್ವಾಲ ವಿದ್ಯೆ

Exit mobile version