ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಲ್ಲಿ ತಪನ್ ಎಂಬ ರೈತನೊಬ್ಬನಿದ್ದ. ಅವನತ್ರ ದೊಡ್ಡದೊಂದು ಬಾಳೆಯ ತೋಟ ಮತ್ತು ಹೊಲವಿತ್ತು. ಅಲ್ಲಿನ ಮಣ್ಣು ಫಲವತ್ತಾಗಿ ಇದ್ದಿದ್ದರಿಂದ ಸಾಕಷ್ಟು ಇಳುವರಿ ಬರ್ತಾ ಇತ್ತು. ಕಷ್ಟಪಟ್ಟು ದುಡೀತಾ ಇದ್ದ ಆತನಿಗೆ ಒಂದು ಸಾರಿ ರಸವಿದ್ಯೆ ಕಲಿಯುವ ಉತ್ಸಾಹ ಮೂಡಿತು. ರಸವಿದ್ಯೆ ಅಥವಾ ಅಲ್‌ಕೆಮಿ (Alchemy) ಅಂದ್ರೆ ಯಾವುದಾದರೂ ಒಂದು ವಸ್ತುವನ್ನು ಚಿನ್ನವನ್ನಾಗಿ ಪರಿವರ್ತನೆ ಮಾಡುವ ವಿದ್ಯೆ. ಇದಕ್ಕಾಗಿ ಚಿತ್ರವಿಚಿತ್ರ ಪ್ರಯೋಗಗಳನ್ನು ಮಾಡುತ್ತಾ ಕಾಲ ಕಳೆಯತೊಡಗಿದ. ಹಲವಾರು ತಿಂಗಳುಗಳು ಉರುಳಿದವು. ಅವನ ಬಾಳೆತೋಟ ಮತ್ತು ಹೊಲವೆಲ್ಲಾ ಹಾಳು ಬಿತ್ತು ಹೊರತಾಗಿ ಚಿನ್ನ ಮಾಡುವುದನ್ನು ಅವನತ್ರ ಕಲಿಯುವುದಕ್ಕಾಗಲಿಲ್ಲ.
ಇದನ್ನೆಲ್ಲಾ ನೋಡಿ ಅವನ ಹೆಂಡತಿಗೆ ಗಾಬರಿಯಾಗತೊಡಗಿತ್ತು. ಈತನ ಹುಚ್ಚು ಹೀಗೆಯೇ ಮುಂದುವರಿದರೆ ತಮ್ಮ ಕುಟುಂಬ ಹಸಿವಿನಿಂದ ಸಾಯಬೇಕಾದೀತು ಎಂದು ಯೋಚಿಸಿದ ಆಕೆ, ತಪನ್‌ನ ತಂದೆಯಲ್ಲಿಗೆ ಹೋಗಿ ವಿಷಯ ತಿಳಿಸಿದಳು. ಅವನಿಗೆ ಹಿಡಿದಿರುವ ಚಿನ್ನ ಮಾಡುವ ಭೂತವನ್ನು ಇಳಿಸಿ, ದುಡಿಯಲು ಹೊಲಕ್ಕೆ ಕಳಿಸಿ ಎಂದು ಕೇಳಿಕೊಂಡಳು. ತಪನ್‌ನ ತಂದೆಗೂ ಚಿಂತೆಯಾಯಿತು. ಇದಕ್ಕೊಂದು ಪರಿಹಾರ ಹುಡುಕಬೇಕೆಂದು ನಿಶ್ಚಯಿಸಿದ ಆತ, ತಪನ್‌ನೊಂದಿಗೆ ಮಾತನಾಡುವುದಾಗಿ ಆಕೆಗೆ ಸಮಾಧಾನ ಮಾಡಿದ. ಎರಡು ದಿನಗಳ ನಂತರ ಆತ, ತಪನ್‌ನ ಮನೆಗೆ ಬಂದ.
ಬಹು ದಿನಗಳ ನಂತರ ಬಂದ ತಂದೆಯನ್ನು ನೋಡಿ ತಪನ್‌ಗೆ ಆನಂದವಾಗಿತ್ತು. ಕರೆದು, ಕುಳ್ಳಿರಿಸಿ, ಉಪಚರಿಸಿದ. ಹೀಗೆಯೇ ಮಾತಾಡುತ್ತಾ ರಸವಿದ್ಯೆಯ ಬಗ್ಗೆ ತಪನ್ ಪ್ರಸ್ತಾಪ ಮಾಡಿದ. ತನ್ನ ಪ್ರಾಯದ ದಿನಗಳಲ್ಲಿ ತಾನೂ ಅದನ್ನು ಮಾಡಿದ್ದೆ ಎಂದು ಹೇಳಿದ ತಂದೆ. ತಪನ್ ಕುತೂಹಲ ಹೆಚ್ಚಾಯಿತು. ಅದನ್ನು ತನಗೂ ಕಲಿಸಿಕೊಡಿ ಎಂದು ತಂದೆಯಲ್ಲಿ ಕೇಳಿಕೊಂಡ. ʻಕಲಿಸಿಕೊಡಬಹುದು. ಆದರೆ ಇದಕ್ಕೆ ಬೇಕಾಗುವ ವಸ್ತುಗಳನ್ನು ಸಂಗ್ರಹಿಸುವುದೇ ಕಷ್ಟ. ನಿನ್ನಿಂದ ಆಗುವುದಿಲ್ಲ ಬಿಡುʼ ಎಂದ ತಂದೆ. ಎಷ್ಟು ಕಷ್ಟವಾದರೂ ಸರಿ, ತನಗದನ್ನು ಕಲಿಯಲೇ ಬೇಕು ಎಂದ ಮಗ. ʻಹಾಗಾದರೆ ಕೇಳು, ಆಯಸ್ಸು ತೀರಿದ ಬಾಳೆಯ ಮರಗಳನ್ನು ಒಣಗಿಸಿ- ಸುಟ್ಟು, ಅದರ ಬೂದಿಯನ್ನು ಸಂಗ್ರಹಿಸಬೇಕು. ಒಂದು ಬಾಳೆಯ ಮರದಿಂದ ಕೇವಲ ಒಂದು ಗ್ರಾಂ ಬೂದಿ ಉಪಯೋಗಿಸಬಹುದು. ಇಂಥದ್ದು ಒಂದು ಕೆ.ಜಿ. ಬೂದಿ ತಂದುಕೊಡು. ಉಳಿದ ಬೂದಿಯನ್ನು ನಿನ್ನ ತೋಟ-ಗದ್ದೆಗಳಿಗೇ ಚೆಲ್ಲಬೇಕಾಗುತ್ತದೆ. ಮುಂದಿನದ್ದು ಆಮೇಲೆ ಹೇಳುತ್ತೇನೆʼ ಎಂದ ತಂದೆ.
ಇದನ್ನೂ ಓದಿ | ಮಕ್ಕಳ ಕಥೆ | ಸಿಟ್ಟಿನ ರಾಜ ಕಲಿತ ಪಾಠ
ಅಪ್ಪನ ಮಾತಿನಂತೆ ಕೆಲಸ ಆರಂಭಿಸಿದ ತಪನ್. ಹಾಳು ಬಿದ್ದಿದ್ದ ಬಾಳೆ ತೋಟವನ್ನೆಲ್ಲಾ ನೆಲಸಮ ಮಾಡಿ, ಒಣಗಿಸಿ, ಬೂದಿ ಸಂಗ್ರಹಿಸಿದ. ಉಳಿದ ಬೂದಿಯನ್ನು ಮತ್ತೆ ಮಣ್ಣಿಗೇ ಸುರಿದ. ಮತ್ತೆ ಬಾಳೆ ಸಸಿ ನೆಟ್ಟ. ಕೆಲಸಕ್ಕೆ ಬಾರದ ಪ್ರಯೋಗಗಳಿಗಿಂತ ದುಡಿಯುವುದೇ ಅವನಿಗೆ ಇಷ್ಟವಾಗತೊಡಗಿತು. ಹೊಲವನ್ನೂ ಹಸನು ಮಾಡಿದ. ಬೆಳೆ ತೆಗೆದ. ಇತ್ತ ಬಾಳೆ ತೋಟದಲ್ಲೂ ಬಿಡುವಿಲ್ಲದೆ ದುಡೀತಾ ಇದ್ದ. ಶ್ರಮಕ್ಕೆ ತಕ್ಕ ಇಳುವರಿಯೂ ಬರತೊಡಗಿತ್ತು. ಆದರೆ ಇವನ ಗಮನ ಇದ್ದಿದ್ದು ತಂದೆಯ ಮಾತಿನ ಮೇಲೆ ಮಾತ್ರ. ಸುಮಾರು ಎರಡು ವರ್ಷಗಳ ನಂತರ ತಂದೆ ಹೇಳಿದಷ್ಟು ಬೂದಿ ಸಂಗ್ರಹವಾಯಿತು. ಅದನ್ನು ತೆಗೆದುಕೊಂಡು ಹೋಗಿ ಅಪ್ಪನಿಗೆ ನೀಡಿದ.
ಆ ಬೂದಿಯೊಂದಿಗೆ ಒಳಗೆ ಹೋದ ಅಪ್ಪ ಹೊರಗೆ ಬರುವಾಗ ಪೆಟ್ಟಿಗೆಯೊಂದಿಗೆ ಬಂದಿದ್ದ. ಅಪ್ಪ ನೀಡಿದ ಆ ಪೆಟ್ಟಿಗೆಯನ್ನು ತೆಗೆದು ನೋಡಿದರೆ… ಬಂಗಾರದ ನಾಣ್ಯಗಳು, ಒಡವೆಗಳು ಅದರಲ್ಲಿದ್ದವು! ʻಇದನ್ನು ನನಗೂ ಕಲಿಸಿಕೊಡಿ ಅಪ್ಪʼ ಎಂದು ತಂದೆಗೆ ದುಂಬಾಲು ಬಿದ್ದ ತಪನ್. ʻಈ ಚಿನ್ನವನ್ನು ಮಾಡಿದ್ದು ನಾನಲ್ಲ, ನೀನೆ! ಕಳೆದೆರಡು ವರ್ಷಗಳಿಂದ ಬಿಡುವಿಲ್ಲದೆ ದುಡಿಯುತ್ತಿದ್ದೆ ನೀನು. ನೀನೇ ದುಡಿದ ಹಣದಿಂದ ತಂದ ಬಂಗಾರವಿದು. ಕಸವನ್ನು ರಸ ಮಾಡುವ ವಿದ್ಯೆ ನಿನ್ನಲ್ಲಿಯೇ ಇದೆ. ನಿನಗೆ ಗೊತ್ತಿರಲಿಲ್ಲ, ಅಷ್ಟೆʼ ಎಂದ ತಂದೆ. ಯಾವುದೋ ಹಾಳು ವಿದ್ಯೆಯ ಹಿಂದೆ ಹೋಗಿ, ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದೆನಲ್ಲ. ತಂದೆ ಹೇಳಿಕೊಟ್ಟ ಪಾಠವೇ ಚನ್ನಾಗಿದೆ ಎಂದುಕೊಂಡ ತಪನ್ ಬಂಗಾರದೊಂದಿಗೆ ಸಂತೋಷದಿಂದ ಮನೆಗೆ ಮರಳಿದ.
ಇದನ್ನೂ ಓದಿ | ಮಕ್ಕಳ ಕಥೆ | ದೇವರ ಮುಡಿಗೆ ಯಾರ ತಾವರೆ?