Site icon Vistara News

ಮಕ್ಕಳ ಕಥೆ | ಏಳು ಬೀಳು ಕಂಡ ವರ್ತಕ

panchatantra story

‌ಈ ಕಥೆಯಲ್ಲಿ ಇಲ್ಲಿ ಆಲಿಸಿ:

https://vistaranews.com/wp-content/uploads/2023/01/panchatantra.mp3

ಇದೊಂದು ಪಂಚತಂತ್ರ ಕಥೆ. ಒಂದೂರಿನಲ್ಲಿ ದಂತಿಲ ಅನ್ನುವ ವರ್ತಕನೊಬ್ಬ ವಾಸವಾಗಿದ್ದ. ಆತ ಆ ಊರಿನ ರಾಜನ ಆಪ್ತರಲ್ಲೊಬ್ಬ. ಬಹಳಷ್ಟು ಸಲಹೆ ಸೂಚನೆಗಳಿಗಾಗಿ ರಾಜ ಅವನನ್ನು ಆಸ್ಥಾನಕ್ಕೆ ಕರೆಸಿಕೊಳ್ಳುತ್ತಿದ್ದ. ಊರಲ್ಲಿಯೂ ದೊಡ್ಡ ಮನುಷ್ಯನೆಂದು ಹೆಸರು ಗಳಿಸಿದ್ದ.

ದಂತಿಲನ ಮಗಳಿಗೆ ಮದುವೆ ನಿಶ್ಚಯವಾಯಿತು. ಅವನಿಗಿದ್ದಿದ್ದು ಒಬ್ಬಳೇ ಮಗಳಾದ್ದರಿಂದ, ಅದ್ಧೂರಿಯಾಗಿ ವಿವಾಹವನ್ನು ನೆರವೇರಿಸಿದ. ರಾಜನಾದಿಯಾಗಿ ಊರಿನ ಪ್ರಮುಖರೆಲ್ಲಾ ಆ ವಿವಾಹಕ್ಕೆ ಆಮಂತ್ರಿತರಾಗಿದ್ದರು. ವಿವಾಹದ ಆರತಕ್ಷತೆಯ ಹೊತ್ತಿಗೆ ಗೋರಂಭ ಎನ್ನುವ ವ್ಯಕ್ತಿಯೊಬ್ಬ ಮದುವೆಮನೆಯಲ್ಲಿ ಕಾಣಿಸಿಕೊಂಡ. ಆತ ರಾಜನ ಅರಮನೆಯ ಕಸ ಗುಡಿಸುವವ. ಆತ ಮದುವೆಗೆ ಬಂದಿದ್ದಕ್ಕೆ ದಂತಿಲನಿಗೆ ಬೇಸರವಿರಲಿಲ್ಲ. ಆದರೆ ಊರಿನ ಮಂತ್ರಿಗಳು, ಸೇನಾಪತಿಗಳು ಕುಳಿತುಕೊಳ್ಳುವ ಸಾಲಿನಲ್ಲೇ ಆತನೂ ಕುಳಿತುಕೊಂಡಿದ್ದು ದಂತಿಲನಿಗೆ ಕೋಪ ತರಿಸಿತ್ತು. ʻಅಬ್ಬಾ ಅವನ ಸೊಕ್ಕೆ! ಅವನನ್ನು ಎಳೆದುಕೊಂಡು ಹೋಗಿ ಹೊರಗೆ ಬಿಸಾಡಿʼ ಎಂದು ತನ್ನ ಸೇವಕರಿಗೆ ಆಜ್ಞಾಪಿಸಿದ.

ಎಲ್ಲರೆದುರು ಅವಮಾನ ಆಗಿದ್ದರಿಂದ ಕೋಪಗೊಂಡ ಗೋರಂಭ, ಇದಕ್ಕೆ ಪ್ರತೀಕಾರ ಮಾಡಬೇಕೆಂದು ಎಣಿಸಿದ. ಆದರೆ ಶ್ರೀಮಂತನೂ ಪ್ರಭಾವಿಯೂ ಆದ ದಂತಿಲನನ್ನು ನೇರಾನೇರ ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂಬುದು ಅವನಿಗೂ ತಿಳಿದಿತ್ತು. ಅದಕ್ಕೊಂದು ಉಪಾಯ ಮಾಡಿದ. ಅಂದು ಬೆಳಗ್ಗೆ ರಾಜಭವನದ ನೆಲ ಒರೆಸುತ್ತಾ ಇರುವಾಗ, ರಾಜನಿಗೆ ಕೇಳುವಂತೆ ತನ್ನಷ್ಟಕ್ಕೆ ಜೋರಾಗಿ ಗೊಣಗಿಕೊಳ್ಳತೊಡಗಿದ. “ಎಷ್ಟು ಸೊಕ್ಕು ಆ ದಂತಿಲನಿಗೆ. ಊರಿನ ರಾಣಿಗಿಂತ ತನ್ನ ಹೆಂಡತಿಯೇ ಸುಂದರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ” ಎಂದು ಆತ ಮಣಮಣ ಮಾಡಿದ್ದು ರಾಜನ ಕಿವಿಗೆ ಬಿತ್ತು. ʻಏಯ್‌! ಬಾಯಿಲ್ಲಿ. ಏನು ಹೇಳುತ್ತಿದ್ದೀಯ ಎಂಬ ಜ್ಞಾನವಾದರೂ ಉಂಟೋ ನಿನಗೆ?ʼ ಕೇಳಿದ ರಾಜ. ʻಕ್ಷಮಿಸಬೇಕು ಮಹಾಸ್ವಾಮಿ. ನಿನ್ನೆ ರಾತ್ರಿ ಸರಿಯಾಗಿ ನಿದ್ದೆಯಿರಲಿಲ್ಲ. ಹಾಗಾಗಿ ಬೆಳಗ್ಗೆಯೂ ನಿದ್ದೆಗಣ್ಣಲ್ಲಿ ಏನೇನೋ ಮಾತಾಡಿಬಿಡುತ್ತೇನೆ ನಾನು. ತಾವು ಅದನ್ನೆಲ್ಲಾ ಮನಸ್ಸಿಗೆ ಹಾಕಿಕೊಳ್ಳಬಾರದುʼ ಎಂದು ಹೇಳಿದ ಗೋರಂಭ ವಿನೀತನಾಗಿ.

ಆದರೆ ಗೋರಂಭನ ಮಾತೇ ರಾಜನ ಮನದಲ್ಲಿ ಕೊರೆಯುತ್ತಿತ್ತು. ನಿದ್ದೆಗಣ್ಣಲ್ಲಿ ಗೋರಂಭ ಸತ್ಯವನ್ನೇ ಹೇಳಿರಬೇಕು ಎನಿಸಿತು. ʻನನ್ನ ರಾಣಿಯ ಬಗ್ಗೆ ಕೇವಲವಾಗಿ ಮಾತಾಡುತ್ತಾನೆ ಎಂದರೆ ಎಷ್ಟು ಸೊಕ್ಕಿರಬೇಡ ಆತನಿಗೆʼ ಎಂದು ಯೋಚಿಸಿದ ರಾಜ, ʻಇನ್ನು ಮೇಲೆ ದಂತಿಲನ ಅರಮನೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅವನನ್ನು ಹಾಗೆಯೇ ಮರಳಿ ಕಳುಹಿಸಿʼ ಎಂದು ಆದೇಶಿಸಿದ. ಮಾತ್ರವಲ್ಲ, ಆತನನ್ನು ಆಸ್ಥಾನದ ಸಲಹಾಕಾರನ ಸ್ಥಾನದಿಂದಲೂ ಕಿತ್ತು ಹಾಕಿದ. ಮಾರನೇ ದಿನ ಎಂದಿನಂತೆ ಆಸ್ಥಾನಕ್ಕೆ ಬಂದ ದಂತಿಲನಿಗೆ ಪ್ರವೇಶವೇ ದೊರೆಯಲಿಲ್ಲ. ಇದನ್ನು ನೋಡಲೆಂದೇ ಕಾಯುತ್ತಿದ್ದ ಗೋರಂಭ, ʻಮಾಡಿದ್ದುಣ್ಣೋ ಮಹರಾಯʼ ಎಂದು ಜೋರಾಗಿ ಹೇಳುತ್ತಾ ಹೋದ. ಇವೆಲ್ಲವೂ ಗೋರಂಭನದೇ ಕಿತಾಪತಿ ಎಂಬುದು ದಂತಿಲನಿಗೆ ಅರಿವಾಯಿತು.

ಇದನ್ನೂ ಓದಿ | ಮಕ್ಕಳ ಕಥೆ | ಚಂದ್ರು ತಿಂದ ಕಡುಬು

ಅದೇ ದಿನ ಗೋರಂಭನನ್ನು ತನ್ನ ಮನೆಗೆ ಕರೆಸಿದ ದಂತಿಲ. ಅವನಲ್ಲಿ ಕ್ಷಮೆ ಕೇಳಿ, ನಾನಾ ರೀತಿಯ ತಿಂಡಿ-ತಿನಿಸು-ಉಡುಗೊರೆಗಳನ್ನು ನೀಡಿದ ದಂತಿಲನ ಬಗ್ಗೆ ಗೋರಂಭನ ಕೋಪ ಕಡಿಮೆಯಾಯಿತು. ʻಗೆಳೆಯ, ನಿನ್ನನ್ನು ಕ್ಷಮಿಸಿದ್ದೇನೆ. ನಿನ್ನ ಮಗಳ ಮದುವೆಯ ದಿನದಂದು, ನನಗಲ್ಲದ ಸ್ಥಾನದಲ್ಲಿ ನಾನು ಕುಳಿತುಕೊಳ್ಳಬಾರದಿತ್ತು. ಹಾಗಾಗಿ ಇದರಲ್ಲಿ ತಪ್ಪು ನನ್ನದೂ ಇದೆ. ರಾಜನ ಆಸ್ಥಾನದಲ್ಲಿ ನಿನಗಿದ್ದ ಸ್ಥಾನವನ್ನು ಮರಳಿ ಕೊಡಿಸುತ್ತೇನೆʼ ಎಂದು ಹೇಳಿ ತೆರಳಿದ ಗೋರಂಭ. ಮಾರನೇ ದಿನ ಎಂದಿನಂತೆ ರಾಜಭವನದ ಸ್ವಚ್ಛತೆಯಲ್ಲಿ ತೊಡಗಿದ್ದವನು, ರಾಜನಿಗೆ ಕೇಳುವಂತೆಯೇ ಜೋರಾಗಿ ತನ್ನಷ್ಟಕ್ಕೆ ಗೊಣಗಿದ- ʻಎಂಥಾ ಕಾಲ ಬಂತು! ಕೈಗೆ ಬದಲು ಕಾಲಲ್ಲಿ ಊಟ ಮಾಡುತ್ತಾನಲ್ಲ ನಮ್ಮ ರಾಜ!ʼ. ಈ ಮಾತು ಕಿವಿಗೆ ಬೀಳುತ್ತಿದ್ದಂತೆ ಕೆಂಡಾಮಂಡಲವಾದ ರಾಜ, ʻಏಯ್‌ ಅವಿವೇಕಿ! ಬಾಯಿಲ್ಲಿ. ಏನೆಂದೆ…ಹೇಳು ಇನ್ನೊಮ್ಮೆ,…ನಿನ್ನ ಚರ್ಮ ಸುಲಿಯುತ್ತೇನೆʼ ಎಂದು ಆರ್ಭಟಿಸಿದ. ರಾಜನೆದುರು ಕೈಮುಗಿದ ಗೋರಂಭ, ʻಮಹಾಪರಾಧವಾಯಿತು ಪ್ರಭೂ. ನಿನ್ನೆ ರಾತ್ರಿ ನಿದ್ದೆಗೆಟ್ಟಿದ್ದರ ಪರಿಣಾಮವಿದು. ಕೆಲವೊಮ್ಮೆ ನನಗೇ ತಿಳಿಯದಂತೆ ಹೀಗೆ ಏನೇನೋ ಹೇಳಿಬಿಡುತ್ತೇನೆ. ತಾವು ಅದನ್ನೆಲ್ಲಾ ಮನಸ್ಸಿಗೆ ಹಾಕಿಕೊಳ್ಳಬಾರದುʼ ಎಂದು ಹೇಳಿದ.

ಈ ಮೂರ್ಖನ ಮಾತನ್ನು ನಂಬಿ ತಾನೆಂಥ ಕೆಲಸ ಮಾಡಿದೆ ಎನಿಸಿತು ರಾಜನಿಗೆ. ದಂತಿಲನ ವಿಷಯದಲ್ಲಿ ಹೀಗೆ ಏನೇನೋ ಆಡಿದ್ದ ಮಾತನ್ನು ತಾನು ನಂಬಬಾರದಿತ್ತು ಎನಿಸಿತು ಅರಸನಿಗೆ. ತಕ್ಷಣವೇ ಆಸ್ಥಾನದ ಸಲಹೆಗಾರನ ಸ್ಥಾನವನ್ನು ಮತ್ತೆ ನೀಡಿದ ಅರಸ, ಗೌರವದಿಂದ ದಂತಿಲನನ್ನು ಸಭೆಗೆ ಕರೆಸಿಕೊಂಡ.

ಇದನ್ನೂ ಓದಿ | ಮಕ್ಕಳ ಕಥೆ | ಮೂರ್ಖ ರಾಜ ಮತ್ತು ಚತುರ ಮಂತ್ರಿ

Exit mobile version