Site icon Vistara News

ಮಕ್ಕಳ ಕಥೆ | ಚಂದ್ರು ತಿಂದ ಕಡುಬು

children story

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/01/kadubu.mp3

ಚಂದ್ರುಗೆ ಅವತ್ತು ಶಾಲೆ ರಜೆ. ಬೆಳಗ್ಗೆ ಏಳುತ್ತಿದ್ದಂತೆಯೇ ಅವನ ಕಿತಾಪತಿ ಗೆಳೆಯರ ನಿರೀಕ್ಷೆಯಲ್ಲಿದ್ದ. ಶಾಲೆ ಇರುವಾಗ ಎಷ್ಟು ಎಬ್ಬಿಸಿದರೂ ಎಚ್ಚರವೇ ಆಗದ ಚಂದ್ರುವಿಗೆ, ರಜೆ ದಿನಗಳಲ್ಲಿ ಅದು ಹೇಗೆ ಅಷ್ಟು ಬೇಗ ಎಚ್ಚರವಾಗುತ್ತದೆ ಎಂಬುದು ಅವನಮ್ಮನಿಗೂ ಅರ್ಥವಾಗದ ವಿಷಯವಾಗಿತ್ತು. ಅಂದು ಬೆಳಗ್ಗೆ ಅಮ್ಮ ಅಂಗಳದಲ್ಲಿ ರಂಗೋಲಿ ಹಾಕಿದ ಎರಡೇ ನಿಮಿಷಕ್ಕೆ ಅದರ ಮೇಲೆ, ಚಂದ್ರುವಿನ ಮತ್ತು ಟಾಮಿಯ ಹೆಜ್ಜೆ ಗುರುತುಗಳು ಮೂಡಿದ್ದವು. ʻಚಂದ್ರೂ, ಹೋಗಿ ದೇವರ ಪೂಜೆಗೆ ಹೂ ಕೊಯ್ದುಕೊಂಡು ಬಾರೋʼ ಎಂದರು ಅಮ್ಮ. ಹೂ ಕೊಯ್ಯುವ ಭರದಲ್ಲಿ ಮಾರನೇ ದಿನಕ್ಕೆ ಇಲ್ಲದಂತೆ ಮೊಗ್ಗುಗಳನ್ನೂ ಕೊಯ್ದು ಹಾಕಿದ್ದ ಚಂದ್ರು. ʻಇವತ್ತಿನ್ನು ಹೇಗಪ್ಪಾ ಸುಧಾರಿಸುವುದು! ಯಾಕಾದರೂ ಶಾಲೆಗೆ ರಜೆ ಕೊಡುತ್ತಾರೊ!ʼ ಎಂದು ಗೊಣಗಿಕೊಂಡರು ಅಮ್ಮ. ಅಷ್ಟರಲ್ಲಿ ಅವರಿಗೊಂದು ಉಪಾಯ ಹೊಳೆಯಿತು.

ಚಂದ್ರವಿನ ಅತ್ತೆಯ ಮನೆಯಿರುವುದು ಪಕ್ಕದೂರಿನಲ್ಲಿ. ಅದರ ಮನೆಯಲ್ಲಿವತ್ತು ಯಾವುದೋ ವ್ರತದ ಉದ್ಯಾಪನೆಯಿತ್ತು. ಚಂದ್ರುವಿನ ತಂದೆ ಊರಲ್ಲಿ ಇಲ್ಲದಿದ್ದರಿಂದ, ವ್ರತದ ಉದ್ಯಾಪನೆಗೆ ಇವರ ಮನೆಯಿಂದ ಹೋಗುವವರು ಯಾರೂ ಇರಲಿಲ್ಲ. “ಚಂದ್ರೂ, ಇವತ್ತು ಅತ್ತೆ ಮನೆಗೆ ಹೋಗ್ತೀಯೇನೋ. ಇವತ್ತೇನೋ ವಿಶೇಷ ಅವರ ಮನೆಲ್ಲಿ. ಮೊನ್ನೆ ಮಾವ ಬಂದಿದ್ರು ಕರೆಯೋದಕ್ಕೆ” ಕೇಳಿದರು ಅಮ್ಮ, ಹಗಲಿನ ಒಂದಿಷ್ಟು ಹೊತ್ತು ಚಂದ್ರುವನ್ನು ಸಾಗಹಾಕಿದ್ದರೆ ಒಳ್ಳೇದಿತ್ತು ಎಂದುಕೊಳ್ಳುತ್ತಾ. ಊಟದ ಮನೆಯೆಂದರೆ ಚಂದ್ರುವಿಗೆ ಮಹಾಪ್ರೀತಿ. ಹಾಗಿರುವಾಗ ಅತ್ತೆ ಮನೆಯನ್ನು ಬಿಡುವವನೇ ಅವನು? “ನೆನ್ನೇನೇ ಹೇಳಬಾರದಾ? ಇಷ್ಟೊತ್ತಿಗಾಗಲೇ ಹೊರಟಿರ್ತಿದ್ದೆ!” ಎನ್ನುತ್ತಾ ಲಗುಬಗೆಯಿಂದ ಸ್ನಾನಕ್ಕೆ ಹೋದ ಚಂದ್ರು.

ಪಕ್ಕದೂರಿನ ಅತ್ತೆ ಮನೆ ಇವರ ಮನೆಯಿಂದ ಅರ್ಧ ತಾಸಿನ ನಡಿಗೆಯ ಹಾದಿ. ಅಲ್ಲಿಗೆ ಹೋಗುವಾಗ ನಡುವೆ ಸಣ್ಣದೊಂದು ತೊರೆಯನ್ನು ದಾಟಬೇಕಿತ್ತು. ಅದರಲ್ಲಿ ಮಕ್ಕಳಿಗೆ ಆಡುವಷ್ಟು ನೀರು ಇದ್ದೇಇರ್ತಿತ್ತು. ಅತ್ತೆ ಮನೆಗೆ ಹೋದಮೇಲೆ ಇಲ್ಲೊಂದಿಷ್ಟು ಮಕ್ಕಳು ಆಡುವುದಕ್ಕೆ ಸಿಗುತ್ತಿದ್ದರು. ಹಾಗಾಗಿ ಹೆಚ್ಚು ತಡಮಾಡದೆ, ಅಮ್ಮ ಕೊಟ್ಟ ಇಡ್ಲಿಯನ್ನು ಹೊಟ್ಟೆಗಿಳಿಸಿಕೊಂಡು ಚಂದ್ರು ಹೊರಟಿದ್ದ. ಹಾದಿಯಲ್ಲಿ ಸಿಕ್ಕ ತೊರೆಯಲ್ಲಿ ಮನಸ್ಸು ತುಂಬುವಷ್ಟು ನೀರಾಟ ಆಡಿದ. ಜೊತೆಗೊಂದಿಷ್ಟು ಮಕ್ಕಳೂ ಸೇರಿಕೊಂಡಿದ್ದರಿಂದ ಅಲ್ಲಿ ಸಮಯ ಹೋಗಿದ್ದೇ ತಿಳಿಯಲಿಲ್ಲ ಚಂದ್ರುವಿಗೆ. ʻಅಯ್ಯಯ್ಯೋ! ಬಿಸಿಲು ನೆತ್ತಿಗೆ ಬಂತಲ್ಲಾ. ಹೊತ್ತಾಯಿತುʼ ಎನ್ನುತ್ತಾ ಗಡಿಬಿಡಿಯಿಂದಲೇ ಗೆಳೆಯರನ್ನು ಬೀಳ್ಕೊಂಡು ಅತ್ತೆ ಮನೆಗೆ ಹೋದ.

ಇದನ್ನೂ ಓದಿ | ಮಕ್ಕಳ ಕಥೆ | ಮುಲಾನ್ ಎಂಬ ವೀರ‌ ತರುಣಿ

ಮನೆಯ ಅಂಗಳಕ್ಕೆ ಬರುತ್ತಿದ್ದಂತೆಯೇ ಒಳಗಿನಿಂದ ಘಮ್ಮನೆ ಪರಿಮಳ ಬರುತ್ತಿತ್ತು. ನೀರಾಟ ಆಡಿ ಬಂದಿದ್ದರಿಂದ ಚಂದ್ರುವಿನ ಹೊಟ್ಟೆಯೂ ಚುರ್ ಎನ್ನುತ್ತಿತ್ತು. ಅವನನ್ನು ಕಾಣುತ್ತಿದ್ದಂತೆಯೇ ಸಂತೋಷದಿಂದ ಒಳಗೆ ಕರೆದ ಅತ್ತೆ, ʻಅಯ್ಯೋ ಮರೀ! ಈ ಬಿಸಿಲಲ್ಲಿ ಒಬ್ಬನೇ ಬಂದೆಯೇನೋ? ತಂಪಾಗಿ ಮಜ್ಜಿಗೆ ಕೊಡ್ಲಾ?ʼ ಎನ್ನುತ್ತಾ ಅವನಿಗೆ ಉಪಚಾರ ಮಾಡಿದರು. ಮುಂದಿನ ಸ್ವಲ್ಪವೇ ಹೊತ್ತಿನಲ್ಲಿ ಊಟಕ್ಕೆ ಎಲೆ ಹಾಕಿದರು.

ಎಲ್ಲರೊಂದಿಗೆ ಊಟಕ್ಕೆ ಕುಳಿತ ಚಂದ್ರುವಿಗೆ ಅತ್ತೆಯೇ ವಿಶೇಷ ಉಪಚಾರ ಮಾಡಿ ಬಡಿಸಿದರು. ಅದರಲ್ಲಿ ಅರ್ಧಚಂದ್ರಾಕೃತಿಯ ಸಿಹಿ ತಿಂಡಿಯೊಂದು ಚಂದ್ರುವಿಗೆ ಬಹಳ ಹಿಡಿಸಿತು. ʻಅತ್ತೆ, ಇದೇನು?ʼ ಬಾಳೆಯಲ್ಲಿದ್ದ ಆ ಸಿಹಿಯನ್ನು ತೋರಿಸಿ ಕೇಳಿದ ಚಂದ್ರು. ʻಇದ್ಯಾಕೋ ಚಂದ್ರು, ಮೊದಲು ತಿಂದಿದ್ದು ಮರೆತು ಬಿಟ್ಟಿದೀಯೇನೋ- ಅದು ಕಡುಬು ಕಣೋ. ಬೇಕಿದ್ರೆ ಇನ್ನೊಂದೆರಡು ಹಾಕಿಸ್ಕೋʼ ಎಂದರು ಅತ್ತೆ. ದಾಕ್ಷಿಣ್ಯವಿಲ್ಲದಂತೆ ಸರೀ ಊಟ ಕತ್ತರಿಸಿದ ಚಂದ್ರು. ಸಂಜೆಯ ಹೊತ್ತಿಗೆ ಅತ್ತೆಯ ಮನೆಯವರಿಂದ ಬೀಳ್ಕೊಂಡು ಮನೆಗೆ ಹೊರಟ. ಹೊರಡುವಾಗ ಆ ಸಿಹಿಯ ಹೆಸರನ್ನ ಮತ್ತೆ ಅತ್ತೆಯಲ್ಲಿ ಕೇಳಿ ತಿಳಿದುಕೊಂಡ.

ದಾರಿಯುದ್ದಕ್ಕೂ ʻಕಡುಬು ಕಡುಬು ಕಡುಬುʼ ಎಂದೇ ಉರು ಹಚ್ಚಿಕೊಂಡು ಹೊರಟಿದ್ದ ಚಂದ್ರು. ಮನೆಗೆ ಹೋದ ಮೇಲೆ ಅದನ್ನು ತನ್ನಮ್ಮನಿಗೆ ಹೇಳಿ ಮಾಡಿಸಿಕೊಂಡು ತಿನ್ನಬೇಕೆಂದು ಅವನಿಗೆ ಆಸೆಯಾಗಿ ಹೋಗಿತ್ತು. ದಾರಿಯಲ್ಲಿ ತೊರೆಬಂತು. ಸಂಜೆ ಹೊತ್ತಾಗಿದ್ದರಿಂದ ನೀರಿನಲ್ಲಿ ಮೀನುಗಳು ಚಿನ್ನಾಟವಾಡುತ್ತಿದ್ದವು. ತಾನೂ ಅವುಗಳ ಜೊತೆಗೆ ಆಟ ಶುರು ಮಾಡಿದ ಚಂದ್ರು, ಕಲ್ಲೊಂದರ ಮೇಲೆ ಕಾಲಿಟ್ಟು ʻಡುಬುಕ್‌ʼ ಎಂದು ಜಾರಿ ಬಿದ್ದ. ನೀರಿನಿಂದ ಮೇಲೇಳುವಷ್ಟರಲ್ಲಿ ಹಾಳಾದ ತಿಂಡಿಯ ಹೆಸರು ಮರೆತು ಹೋಗಬೇಕೆ!

ಇದನ್ನೂ ಓದಿ | ಮಕ್ಕಳ ಕಥೆ | ಬಾವಿಯ ನೀರು ಯಾರದ್ದು?

“ಏನದರ ಹೆಸರು…? ಡುಬುಕ್‌ ಅಂತ ಬೀಳುವಷ್ಟರಲ್ಲಿ ಮರೆತೇ ಹೋಯಿತಲ್ಲ, ಡುಬುಕ್- ಅಲ್ಲ, ಡುಬ್ಕು, ಡುಬು ಹಾಂ!! ಡುಬುಕು, ಹೌದು- ಡುಬುಕು” ಅಂತ ಹೆಸರು ನೆನಪಿಸಿಕೊಂಡ ಆತ, ಅದನ್ನೇ ಉರುಹಚ್ಚಿಕೊಂಡು ಮನೆಯತ್ತ ನಡೆದ. ಮನೆಗೆ ಬಂದಾಗ ಅವನ ಬಾಯಲ್ಲಿ ʻಡುಬುಕು ಡುಬುಕುʼ ಎಂತಲೇ ಮಣಗುಟ್ಟಿಕೊಳ್ಳುತ್ತಿದ್ದ. “ಅತ್ತೆ ಮನೆಯಲ್ಲಿ ಎಲ್ಲರೂ ಚನ್ನಾಗಿದ್ದಾರೇನೋ?” ಕೇಳಿದರು ಅಮ್ಮ. ʻಹೂಂ ಹೂಂʼ ಎನ್ನುತ್ತಾ, “ಅಮ್ಮ, ಮತ್ತೆ… ಅತ್ತೆ ಮನೆಯಲ್ಲಿ ಡುಬುಕು ಮಾಡಿದ್ರು, ಎಷ್ಟು ಚನ್ನಾಗಿತ್ತೂಂತೀಯ. ನೀನು ಮಾಡಮ್ಮ” ಎಂದ ಚಂದ್ರು.

“ಡುಬುಕು! ಏನೋ ಹಾಗಂದ್ರೇ?” ಕೇಳಿದರು ಅಮ್ಮ. ತನಗೆ ತಿಳಿದಂತೆ ಚಂದ್ರು ಅದರ ವರ್ಣನೆ ಮಾಡುತ್ತಾ, ʻಅದೇ ಕಣಮ್ಮ- ಡುಬುಕುʼ ಎಂದ ಮತ್ತೆ ಮತ್ತೆ. ಅಮ್ಮ ತನಗೆ ನೆನಪಾದ ಸಿಹಿ ತಿಂಡಿಗಳ ಹೆಸರನ್ನೆಲ್ಲಾ ಹೇಳಿದರು. ʻಉಹು, ಅವೆಲ್ಲಾ ಅಲ್ಲ- ಡುಬುಕು. ಎಷ್ಟೇಳಿದ್ರೂ ಅರ್ಥವೇ ಆಗಬಾರದಾʼ ಅಂದ ಚಂದ್ರು. ಕೋಪದಿಂದ ಅವನ ಮುಸುಡಿಗೊಂದು ಕೊಟ್ಟರು ಅಮ್ಮ. ʻಹೋ…ʼ ಎಂದು ಅತ್ತ ಚಂದ್ರು. ಅಮ್ಮನಿಗೆ ಪಾಪ ಎನಿಸಿತು. “ಬಾರೋ ಪಾಪಚ್ಚಿ. ಸುಮ್ನೆ ಪೆಟ್ಟು ತಿಂದ್ಯಲ್ಲಾ ನನ್ನ ಕೈಯಲ್ಲಿ. ಮೂತಿ ನೋಡು, ಒಳ್ಳೆ ಕಡುಬಿನ ಥರಾ ಊದಿಕೊಂಡ್ತಲ್ಲ” ಎನ್ನುತ್ತಾ ಆತನ ಕಣ್ಣೊರೆಸಿದರು ಅಮ್ಮ.

“ಅದೇ ಅದೇ- ಕಡುಬು! ಅದ್ನೇ ಮಾಡಿದ್ರು ಅತ್ತೆ ಮನೆಲ್ಲಿ. ನೀನೂ ಮಾಡಮ್ಮ” ಎಂದ ಚಂದ್ರು. “ಅಯ್ಯೋ ನನ್ನ ಬಂಗಾರ! ಕಡುಬು ಬೇಕಾ! ನಾಳೇನೆ ಮಾಡಿ ಕೊಡ್ತೀನಿರು” ಎಂದರು ಅಮ್ಮ ಚಂದ್ರುವನ್ನು ಅಪ್ಪಿಕೊಂಡು. ಕಣ್ಣು ತುಂಬಾ ನೀರು ತುಂಬಿಕೊಂಡ ಚಂದ್ರು ಸಂತೋಷದಿಂದ ನಕ್ಕ.

ಇದನ್ನೂ ಓದಿ | ಮಕ್ಕಳ ಕಥೆ | ಮೂವರು ಜಾಣ ಸೊಸೆಯರು

Exit mobile version