ಈ ಕಥೆಯನ್ನು ಇಲ್ಲಿ ಕೇಳಿ:
ಅದೊಂದು ಸಣ್ಣ ರಾಜ್ಯ. ಅಲ್ಲಿನ ದೊರೆಯ ಹೆಸರು ರಾಜಾಧಿರಾಜ. ಆ ರಾಜ್ಯದ ಪಕ್ಕದಲ್ಲೇ ಅವನ ದಾಯಾದಿಗಳ ಇನ್ನೊಂದು ರಾಜ್ಯವಿತ್ತು. ಅದು ಈ ರಾಜ್ಯಕ್ಕಿಂತ ಸ್ವಲ್ಪ ದೊಡ್ಡದು. ಅಲ್ಲಿನ ದೊರೆಯ ಹೆಸರು ಮಾರ್ತಾಂಡ ತೇಜ. ಇಬ್ಬರಿಗೂ ಒಬ್ಬರಿಗೊಬ್ಬರಿಗೆ ಎಣ್ಣೆ-ಸೀಗೆಕಾಯಿ ಸಂಬಂಧ. ಯಾವುದಾದರೂ ಒಂದು ಕಾರಣಕ್ಕೆ ಇನ್ನೊಬ್ಬರ ಮೇಲೆ ದಂಡೆತ್ತಿ ಹೋಗುವುದಕ್ಕೆ ಅವಕಾಶ ಕಾಯುತ್ತಿದ್ದರು. ಆದರೆ ರಾಜಾಧಿರಾಜನಿಗೊಬ್ಬ ಜಾಣ ಮಂತ್ರಿಯಿದ್ದ. ಅವನಿಂದಾಗಿ ಪ್ರತಿ ಬಾರಿಯೂ ಯುದ್ಧ ಹೇಗಾದರೂ ತಪ್ಪುತ್ತಿತ್ತು.
ಅದೊಂದು ದಿನ ಬೆಳಗ್ಗೆ ರಾಜಾಧಿರಾಜ ತನ್ನ ಮಂತ್ರಿಯೊಂದಿಗೆ ಉದ್ಯಾನವನದಲ್ಲಿ ಅಡ್ಡಾಡುತ್ತಿದ್ದ. ಏನೋ ಮಾತನಾಡುತ್ತಾ ಇಬ್ಬರೂ ನದೀ ತೀರದ ಬಳಿ ಬಂದರು. ಬೆಳಗಿನ ಹೊತ್ತಲ್ಲಿ ನದಿ ಪ್ರಶಾಂತವಾಗಿ ಹರಿಯುತ್ತಿತ್ತು. ಅದನ್ನು ನೋಡುತ್ತಿದ್ದ ರಾಜನಿಗೆ ಇದ್ದಕ್ಕಿದ್ದಂತೆ ಒಂದು ಯೋಚನೆ ಮನದಲ್ಲಿ ಬಂತು. ʻಮಂತ್ರಿಗಳೇ, ಈ ನದಿ ಹರಿದು ಮುಂದೆಲ್ಲಿಗೆ ಹೋಗುತ್ತದೆ?ʼ ಎಂದು ಕೇಳಿದ ಅರಸ. ʻಮಹಾಪ್ರಭೂ, ಈ ನೀರು ಪಶ್ಚಿಮದಿಂದ ಪೂರ್ವಕ್ಕೆ ಹರಿದು ನಮ್ಮ ಪಕ್ಕದ ರಾಜ್ಯಕ್ಕೆ ಹೋಗುತ್ತದೆʼ ಎಂದ ಮಂತ್ರಿ. ʻಪಕ್ಕದ ರಾಜ್ಯ ಅಂದರೆ? ಆ ಮೂರ್ಖ ಮಾರ್ತಾಂಡ ತೇಜನ ರಾಜ್ಯಕ್ಕಲ್ಲವೇ?ʼ ಕೋಪದಿಂದ ಕೇಳಿದ ರಾಜ. ʻಹೌದು ಸ್ವಾಮಿ. ನದಿಗಳು ತಮ್ಮ ದಾರಿಯನ್ನು ತಾವೇ ಮಾಡಿಕೊಳ್ಳುತ್ತವೆʼ ಎಂದ ಮಂತ್ರಿ ಅಳುಕಿನಿಂದ. ಮುಂದೇನು ಕಾದಿದೆಯೋ ಎಂದು ಆತನ ಮನಸ್ಸು ಯೋಚಿಸುತ್ತಿತ್ತು. ʻನಿಲ್ಲಿಸಿ! ಆ ಅಯೋಗ್ಯನ ರಾಜ್ಯಕ್ಕೆ ನದಿ ಹರಿದುಹೋಗುವುದನ್ನು ತಡೆಯಿರಿ! ಮಂತ್ರಿಗಳೇ, ನಿಮಗೆ ೨೪ ತಾಸುಗಳ ಅವಧಿ ನೀಡಿದ್ದೇನೆ. ಅಷ್ಟರಲ್ಲಿ ನದಿ ನೀರು ಪಕ್ಕದ ರಾಜ್ಯಕ್ಕೆ ಹೋಗುವುದನ್ನು ನಿಲ್ಲಿಸಿʼ ಎಂದು ಅಬ್ಬರಿಸಿದ ರಾಜ. ಇದೊಳ್ಳೆ ಗ್ರಹಚಾರ ಬಂತಲ್ಲಪ್ಪಾ ಎಂದು ಕಳವಳಗೊಂಡ ಮಂತ್ರಿ.
ಈ ನೀರನ್ನು ನಿಲ್ಲಿಸಿದ್ದೇ ಆದರೆ ಮಾರ್ತಾಂಡ ತೇಜ ಯುದ್ಧ ಸಾರುತ್ತಾನೆ. ರಾಜಾಧಿರಾಜನಿಗಿಂತ ಆತನ ರಾಜ್ಯ ಮತ್ತು ಸೇನೆ- ಎರಡೂ ದೊಡ್ಡದು. ಹಾಗಾಗಿ ಈ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬಾರದು ಎಂದು ನಿರ್ಧರಿಸಿದ ಮಂತ್ರಿ. ಇದಕ್ಕಾಗಿ ಉಪಾಯವೊಂದನ್ನು ಯೋಚಿಸಿ, ಅರಮನೆಯ ಪ್ರಹರಿಯನ್ನು ಗುಟ್ಟಾಗಿ ಕರೆಸಿದ. ಈಗಿನಂತೆ ಗಡಿಯಾರಗಳಿಲ್ಲದ ಆ ಕಾಲದಲ್ಲಿ ಪ್ರತಿ ತಾಸಿಗೊಮ್ಮೆ ಗಂಟೆ ಬಾರಿಸುವ ಕೆಲಸ ಆ ಪ್ರಹರಿಯದಾಗಿತ್ತು. ರಾತ್ರಿಯ ಹೊತ್ತು ಗಂಟೆ ಬಾರಿಸುವಾಗ ಪ್ರತಿ ತಾಸಿನ ಬದಲು ಪ್ರತಿ ಅರ್ಧ ತಾಸಿಗೆ ಗಂಟೆ ಬಾರಿಸಬೇಕೆಂದು ಮಂತ್ರಿ ಆದೇಶ ನೀಡಿದ. ಮಾತ್ರವಲ್ಲ, ಈ ವಿಷಯವನ್ನು ಯಾರಿಗೂ ತಿಳಿಸಕೂಡದು ಎಂದೂ ಆಜ್ಞೆ ಮಾಡಿದ.
ರಾತ್ರಿಯಾಯಿತು. ಎಂದಿನಂತೆ ರಾಜ ತನ್ನ ಶಯ್ಯಾಗಾರವನ್ನು ಸೇರಿ, ಬೆಚ್ಚಗೆ ಮಲಗಿದ. ಪ್ರಹರಿ ಗಂಟೆ ಬಾರಿಸುತ್ತಿದ್ದ- ತಾಸಿನ ಬದಲು ಅರ್ಧ ತಾಸಿಗೆ. ಒಂದು, ಎರಡು, ಮೂರು, ನಾಲ್ಕು, ಐದು, ಆರು ಗಂಟೆಯಾಯಿತು. ಬೆಳಗಾಯಿತು ಎಂಬಂತೆ ರಾಜ ಎದ್ದ. ಹೊರಗೆ ನೋಡಿದರೆ ಸಂಪೂರ್ಣ ಕತ್ತಲೆ! ಅರೆ, ಇದೇನಾಯಿತು. ಆರು ಗಂಟೆಯಾದರೂ ಇನ್ನೂ ಬೆಳಕಾಗಿಲ್ಲವಲ್ಲ ಎಂದು ರಾಜನಿಗೆ ಗೊಂದಲವಾಯಿತು. ಮಂತ್ರಿಗೆ ಕರೆ ಕಳುಹಿಸಿದ. ಚತುರ ಮಂತ್ರಿಯೂ ಇದನ್ನೇ ನಿರೀಕ್ಷಿಸುತ್ತಿದ್ದ.
ಇದನ್ನೂ ಓದಿ | ಮಕ್ಕಳ ಕಥೆ | ಚಂದ್ರು ತಿಂದ ಕಡುಬು
ʻಇದೇನು ಮಂತ್ರಿಗಳೇ! ಗಂಟೆ ಆರಾದರೂ ಇನ್ನೂ ಬೆಳಕು ಹರಿದಿಲ್ಲʼ ಎಂದು ವ್ಯಾಕುಲದಿಂದ ಹೇಳಿದ ರಾಜ. ʻಸೂರ್ಯ ಇನ್ನೂ ನಮ್ಮ ರಾಜ್ಯವನ್ನು ಪ್ರವೇಶ ಮಾಡಿಲ್ಲ ಪ್ರಭೂ. ನಮ್ಮ ರಾಜ್ಯಕ್ಕೆ ಬರುವುದು ಕೊಂಚ ಅನುಮಾನʼ ಎಂದು ರಾಗ ಎಳೆದ ಮಂತ್ರಿ. ʻಅನುಮಾನವೇ! ಯಾಕೆ? ಏನಾಯಿತು?ʼ ಕೇಳಿದ ಅರಸ ಗಾಬರಿಯಿಂದ. ʻಏನೆಂದು ಹೇಳುವುದು ಜೀಯಾ… ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ನದಿಯನ್ನು ನಾವು ನಿಲ್ಲಿಸಿದ ಕೂಡಲೇ ಕೋಪಗೊಂಡ ಮಾರ್ತಾಂಡ ತೇಜ, ಪೂರ್ವದಿಂದ ಪಶ್ಚಿಮಕ್ಕೆ ಬರುವ ಸೂರ್ಯನನ್ನು ತಡೆಹಿಡಿದಿದ್ದಾನೆ. ನೋಡಿದರೆ ನಾವು ಕತ್ತಲೆಯಲ್ಲೇ ದಿನ ಕಳೆಯಬೇಕಾಗಬಹುದುʼ ಎಂದು ಭಾರೀ ದುಃಖ ನಟಿಸಿದ ಮಂತ್ರಿ ಮಹಾಶಯ.
ರಾಜನಿಗೀಗ ಪರಿಸ್ಥಿತಿ ಅರ್ಥವಾಯಿತು. ಪ್ರಕೃತಿ ಸಂಪತ್ತನ್ನು ಎಲ್ಲರೊಂದಿಗೂ ಹಂಚಿಕೊಂಡರಷ್ಟೇ ಕ್ಷೇಮ ಎಂಬುದು ಅರಿವಾಯಿತು. ʻಹೂಂ, ಸರಿ. ನದಿಯ ನೀರನ್ನು ಪಕ್ಕದ ರಾಜ್ಯಕ್ಕೆ ಹೋಗಲು ಬಿಡಿ. ಇಲ್ಲದಿದ್ದರೆ ನಮ್ಮ ರಾಜ್ಯವೇ ಕತ್ತಲಲ್ಲಿ ನರಳಬೇಕಾದೀತುʼ ಎಂದು ಆದೇಶಿಸಿದ ರಾಜಾಧಿರಾಜ. ʻಆಗಲಿ ಮಹಾಸ್ವಾಮಿ. ಮುಂದಿನ ವ್ಯವಸ್ಥೆ ಈಗಲೇ ಆಗಲಿದೆ. ಅಲ್ಲಿವರೆಗೆ ತಾವು ವಿಶ್ರಮಿಸಿʼ ಎಂದು ವಿನಯದಿಂದ ಹೇಳಿದ ಮಹಾಮಂತ್ರಿ. ರಾಜ ನಿಶ್ಚಿಂತೆಯಿಂದ ಮಲಗಿದ.
ಇನ್ನೆರಡು ತಾಸಿಗೆ ಎಂದಿನಂತೆಯೇ ಬೆಳಗಾಗಿತ್ತು. ಎಲ್ಲವೂ ಸರಿಯಾಯಿತು, ತಡವಾದರೂ ಸರಿ, ಸೂರ್ಯ ಹುಟ್ಟಿಬಂದ ಎಂದು ರಾಜನಿಗೆ ಸಂತೋಷವಾಯಿತು. ಯುದ್ಧ ತಪ್ಪಿತಲ್ಲ ಎಂದು ಮಂತ್ರಿಯ ಮನಸ್ಸು ಹಗುರವಾಗಿತ್ತು.
ಇದನ್ನೂ ಓದಿ | ಮಕ್ಕಳ ಕಥೆ | ಮೂವರು ಜಾಣ ಸೊಸೆಯರು