ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಲ್ಲಿ ತಂದೆ ಮತ್ತು ಮಗ ಕತ್ತೆ ಮರಿಯೊಂದನ್ನು ಸಾಕುತ್ತಿದ್ದರು. ತಮ್ಮ ಹೊಲದ ದುಡಿಮೆಯ ಸಮಯ ಬಿಟ್ಟರೆ ಉಳಿದ ಸಮಯವನ್ನು ಕತ್ತೆ ಮರಿಯ ಪಾಲನೆಗೆಂದೇ ಮೀಸಲಿಟ್ಟಿದ್ದರು. ಕಾಲಕ್ರಮೇಣ ಮರಿ ಕತ್ತೆ ಬೆಳೆದು ದೊಡ್ಡದಾಯಿತು. ಗಟ್ಟಿಮುಟ್ಟಾದ, ಮಿರಿಮಿರಿ ಮಿಂಚುವ ಕತ್ತೆಯಾಗಿ ರೂಪುಗೊಂಡಿತು. ಈ ಅಪ್ಪ-ಮಗನಿಗೆ ಕೃಷಿಯ ಕೆಲಸಕ್ಕೆ ಕತ್ತೆಯ ಅಗತ್ಯವೇನಿರಲಿಲ್ಲ. ಹಾಗಾಗಿ ಅದನ್ನು ಮಾರಾಟ ಮಾಡೋಣ ಎಂದು ಯೋಚಿಸಿದರು.
“ನೋಡು ಮಗನೇ, ನಮ್ಮೂರಿನ ಎಲ್ಲಾ ರೈತರ ಹತ್ತಿರವೂ ಕೃಷಿ ಕೆಲಸಕ್ಕೆ ಬೇಕಾದ ಪ್ರಾಣಿಗಳಿವೆ. ಹಾಗಾಗಿ ಈ ಕತ್ತೆ ನಮ್ಮೂರಲ್ಲಿ ಮಾರಾಟ ಆಗೋದಿಲ್ಲ. ಆದರೂ ಒಳ್ಳೆಯ ಬೆಲೆ ಹುಟ್ಟೋದಿಲ್ಲ. ಹಾಗಾಗಿ ಇದನ್ನು ಪಕ್ಕದೂರಿನ ಸಂತೆಗೆ ತೆಗೆದುಕೊಂಡು ಹೋದರೆ ಒಳ್ಳೆ ಬೆಲೆ ಬರಬಹುದು” ಅಂದ ತಂದೆ. ಮಗನಿಗೂ ಹೌದೆನ್ನಿಸಿತು. ಮರುದಿನ ಬೆಳಗ್ಗೆಯೇ ಇಬ್ಬರೂ ಆ ಕತ್ತೆಯನ್ನು ಹೊಡೆದುಕೊಂಡು ಪಕ್ಕದೂರಿನ ಸಂತೆಗೆ ಹೊರಟರು. ದಾರಿಯಲ್ಲಿ ನಡೆಯುವಾಗ ಮಗನ ಕಾಲಿಗೆ ಮುಳ್ಳೊಂದು ಚುಚ್ಚಿತು. ನೋವಿನಿಂದ ನರಳುತ್ತಿದ್ದ ಅವನಿಗೆ, ದಾರಿಯ ಪಕ್ಕದಲ್ಲಿದ್ದ ಹೊಲದ ರೈತ ಮುಳ್ಳು ತೆಗೆಯುವುದಕ್ಕೆ ನೆರವು ನೀಡಿದ. “ಮುಳ್ಳು ಚುಚ್ಚಿ ನೋವಾಗಿರುವ ಕಾಲನ್ನು ಎಳಕೊಂಡು ಅಷ್ಟು ದೂರ ನಡೆಯೋದು ಕಷ್ಟ. ಕತ್ತೆ ಇದೆಯಲ್ಲ, ಮೇಲೆ ಕೂತ್ಕೊಂಡು ಹೋಗಿ” ಎಂದು ಆತನ ಮಗನಿಗೆ ಸಲಹೆ ನೀಡಿದ. ತಂದೆ-ಮಗನಿಗೆ ಹೌದೆನಿಸಿತು. ಮಗ ಕತ್ತೆ ಮೇಲೆ ಕೂತ್ಕೊಂಡ, ಪ್ರಯಾಣ ಮುಂದುವರಿಯಿತು.
ಸ್ವಲ್ಪ ದೂರ ನಡೆಯುವಷ್ಟರಲ್ಲಿ ಎದುರಿನಿಂದ ಮೂವರು ದಾರಿಹೋಕರು ಎದುರಾದರು. ಕತ್ತೆಯೊಂದಿಗಿದ್ದ ಇವರನ್ನು ವಿಚಿತ್ರವಾಗಿ ನೋಡಿ, “ಎಂಥಾ ಕಾಲ ಬಂತು! ವಯಸ್ಸಾದ ತಂದೆಯನ್ನು ನಡೆಸಿಕೊಂಡು, ಪ್ರಾಯದ ಮಗ ಕತ್ತೆ ಮೇಲೆ ಏರಿ ಹೋಗ್ತಾ ಇದ್ದಾನೆ. ಸ್ವಲ್ಪನಾದ್ರೂ ಬುದ್ಧಿ ಬೇಡವೇ?” ಎನ್ನುತ್ತಾ ಮುಂದೆ ಸಾಗಿದರು. ಮಗನಿಗೆ ಅವರ ಮಾತು ಹೌದೆನಿಸಿತು. ತಾನು ಕತ್ತೆಯ ಮೇಲಿಂದ ಇಳಿದು, ತಂದೆಯನ್ನು ಕೂರಿಸಿದ. ನೋವಾದ ಕಾಲನ್ನು ಕುಂಟುತ್ತಾ ನಡೆಯತೊಡಗಿದ. ನದಿಗೆ ನೀರು ತರಲು ಹೋಗಿದ್ದ ಮಹಿಳೆಯರ ಗುಂಪೊಂದು ಇವರಿಗೆ ಎದುರಾಯಿತು. “ಕಾಲವೇ ಸರಿಯಿಲ್ಲ! ಕುಂಟ್ತಾ ಇರುವವರನ್ನ ನಡೆಸಿಕೊಂಡು, ಕಾಲು ಸರಿ ಇರುವವರು ಕತ್ತೆ ಮೇಲೆ ಕೂತಿದ್ದಾರೆ. ಮನುಷ್ಯತ್ವವೇ ಇಲ್ಲ” ಎಂದು ಗೊಣಗುತ್ತಾ ಹೋಯಿತು ಆ ಮಹಿಳೆಯರ ಗುಂಪು. ಅವರ ಮಾತು ಸರಿ ಎನಿಸಿತು ತಂದೆಗೆ. ಮಗನನ್ನೂ ಕತ್ತೆಯ ಮೇಲೆ ಕೂರಿಸಿಕೊಂಡು ಮುಂದಿನೂರಿನತ್ತ ಪ್ರಯಾಣ ಬೆಳೆಸಿದ.
ನಡು ಮಧ್ಯಾಹ್ನದ ಹೊತ್ತು, ಸೂರ್ಯ ನೆತ್ತಿಯ ಮೇಲೆ ಸುಡುತ್ತಿದ್ದ. ಪಕ್ಕದೂರಿನ ಸಂತೆಯಿಂದ ಮರಳಿ ಬರುತ್ತಿದ್ದ ನಾಲ್ವರು ಇವರಿಗೆ ಎದುರಾದರು. ಸಂತೆ ಮುಗಿಸಿ, ಬಿಸಿಲಲ್ಲಿ ಬಸವಳಿದು ಬರುತ್ತಿದ್ದ ಅವರು ತಂದೆ-ಮಗನನ್ನು ನೋಡಿ ಕೋಪದಿಂದ ಕೇಳಿದರು- “ನೀವೇನು ಮನುಷ್ಯರೋ ಕತ್ತೆಗಳೋ? ಈ ಪಾಪದ ಪ್ರಾಣಿಯ ಮೇಲೆ ಇಬ್ಬರೂ ಕುಳಿತು ಬರುತ್ತಿದ್ದೀರಲ್ಲ, ನೋಡಿ ಹೇಗೆ ಬಸವಳಿದಿದೆ ಬಿಸಿಲಲ್ಲಿ, ಸ್ವಲ್ಪ ನೀರಾದರೂ ಕುಡಿಸಿ ಅದಕ್ಕೆ” ಅವರ ಮಾತು ಸತ್ಯ ಎನಿಸಿತು ಅಪ್ಪ-ಮಗನಿಗೆ.
ತಂದೆ ಹೇಳಿದ- “ನೋಡು ಮಗನೆ, ಏನು ಮಾಡಿದರೂ ಲೋಕದ ಜನರನ್ನು ಮೆಚ್ಚಿಸುವುದಕ್ಕೆ ಸಾಧ್ಯವಿಲ್ಲ. ಮನೆಯಿಂದ ಹೊರಟು ಪಕ್ಕದೂರಿನ ಸಂತೆಗೆ ಬರುವಷ್ಟರಲ್ಲಿ ಎದುರು ಸಿಕ್ಕವರೆಲ್ಲಾ ತಲೆಗೊಂದೊಂದು ಮಾತಾಡಿದರು. ಅವರ ಮಾತನ್ನೆಲ್ಲಾ ಕೇಳುತ್ತಾ ಬಂದರೆ ನಮ್ಮ ತಲೆಯೂ ಹಾಳಾಗುತ್ತದೆ. ಆದ್ದರಿಂದ ನಮಗೆ ಹೇಗೆ ಸರಿ ಎನಿಸಿದುವುದೋ ಹಾಗೆಯೇ ಮಾಡೋಣ” ಮಗನೂ ಒಪ್ಪಿ ತಲೆಯಾಡಿಸಿದ. ಬೆಳಗ್ಗೆ ಮನೆಯಿಂದ ಹೊರಡುವಾಗ ಇದ್ದಂತೆಯೇ, ಅಪ್ಪ-ಮಗ-ಕತ್ತೆ ಮೂವರೂ ತಂತಮ್ಮ ಕಾಲುಗಳ ನೆರವಿನಿಂದ ನಡೆದುಕೊಂಡು ಸಂತೆಯತ್ತ ಹೋದರು.
ಇದನ್ನೂ ಓದಿ | ಮಕ್ಕಳ ಕಥೆ | ರಾಜನಿಗೆ ರಜನಿ ತೋರಿಸಿದ ಸುಳ್ಳಿನ ರುಚಿ