Site icon Vistara News

ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ (ಭಾಗ 1)

guru shisya

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/03/ShishyaKalitaPaata-Part1-1.mp3

ಶಿಷ್ಯನೊಬ್ಬ ಹತ್ತಾರು ವರ್ಷಗಳಿಂದ ಗುರುವೊಬ್ಬನಲ್ಲಿ ವಿದ್ಯೆ ಕಲೀತಾ ಇದ್ದ. ತನ್ನಲ್ಲಿದ್ದ ವಿದ್ಯೆಯನ್ನೆಲ್ಲಾ ಶಿಷ್ಯನಿಗೆ ಕಲಿಸಿಯಾಯಿತು ಎಂದು ಗುರುವಿಗೆ ಅನಿಸಿದ್ದರಿಂದ, ಆತನನ್ನು ಬಳಿಗೆ ಕರೆದ. ʻವತ್ಸಾ, ಇಂದಿಗೆ ನಿನ್ನ ವಿದ್ಯಾಭ್ಯಾಸ ಸಂಪನ್ನವಾಗಿದೆ. ನೀನಿನ್ನು ನಿನಗಿಷ್ಟ ಬಂದಲ್ಲಿಗೆ ಹೋಗಬಹುದು. ನಾನಿನ್ನು ದೇಶ ಪರ್ಯಟನೆಗೆ ಹೊರಡಲಿದ್ದೇನೆʼ ಎಂದ ಗುರು. ತನ್ನ ವಿದ್ಯಾಭ್ಯಾಸ ಪೂರ್ಣಗೊಂಡಿರುವ ಬಗ್ಗೆ ಶಿಷ್ಯನಿಗೆ ಸಂತೋಷವಾದರೂ, ದೇಶ ಸುತ್ತಲು ಹೊರಟ ಗುರುವಿನ ಹಿಂದೆ ಹೋಗಬೇಕು ಎಂಬ ಹಂಬಲ ಉಂಟಾಯಿತು. ಇದನ್ನೇ ಗುರುಗಳಲ್ಲಿ ತಿಳಿಸಿದ ಆತ. ದೇಶ ಸುತ್ತುವ ಹೊತ್ತಿಗೆ ಶಿಷ್ಯನನ್ನು ಒಡಗೂಡಿಕೊಂಡಿರಲು ಗುರುವಿಗೆ ಯಾವುದೇ ಅಭ್ಯಂತರ ಇರಲಿಲ್ಲ. ಸರಿ, ಇಬ್ಬರೂ ಹೊರಟರು.

ಇಬ್ಬರ ತಿರುಗಾಟ ಆರಂಭವಾಗಿ ಹಲವಾರು ತಿಂಗಳುಗಳು ಸಂದಿದ್ದವು. ಶಿಷ್ಯನಿಗಂತೂ ಒಂದೊಂದು ಅನುಭವವೂ ಹೊಸದೇ. ಹೊಸ ಊರು, ಹೊಸ ಭಾಷೆ, ಹೊಸ ಹೊಸ ಬದುಕುಗಳು ಆತನಿಗೆ ಗುರುಕುಲದಲ್ಲಿ ದೊರೆಯದ ಪಾಠವನ್ನು ಕಲಿಸುತ್ತಿದ್ದವು. ಹಾಗೇ ಸುತ್ತುತ್ತಾ ಇಬ್ಬರೂ ಒಂದು ಹೊಸ ಊರಿಗೆ ಬರುವಷ್ಟರಲ್ಲಿ ನಡು ಮಧ್ಯಾಹ್ನವಾಗಿತ್ತು. ವಾಡಿಕೆಯ ಹಾಗೆ, ಊರಾಚೆಯ ಆಲದ ಮರದಡಿಯಲ್ಲಿ ತಂಗಿದರು. ಗುರುವು ಒಲೆ ಹೂಡಿ ಬೆಂಕಿ ಮಾಡಲು ಒಣಕಾಷ್ಠಗಳನ್ನು ಆರಿಸುತ್ತಿದ್ದ. ಒಂದಿಷ್ಟು ಅಕ್ಕಿ-ಬೇಳೆಗಳನ್ನು ತರುವುದಕ್ಕೆ ಶಿಷ್ಯ ಊರೊಳಗೆ ಹೋದ.

ಸೂರ್ಯ ನೆತ್ತಿಯ ಮೇಲೆ ಬಂದಿದ್ದರೂ ಇಡೀ ಊರಿನಲ್ಲಿ ಜನರ ಸುಳಿವೇ ಇರಲಿಲ್ಲ. ಎಲ್ಲರ ಮನೆಯ ಕಿಟಕಿ ಬಾಗಿಲುಗಳೂ ಮುಚ್ಚಿದ್ದವು. ತಟ್ಟಿದರೆ ಯಾರೂ ಬಾಗಿಲು ತೆರೆಯಲಿಲ್ಲ. ಹಾಗೆಂದು ಅದೇನು ಹಾಳು ಬಿದ್ದ ಊರಲ್ಲ, ಎಲ್ಲರ ಮನೆಯ ಮುಂದೆ ರಂಗೋಲೆಗಳಿದ್ದವು, ಅಂಗಳದಲ್ಲಿ ಹೂವಿನ ಗಿಡಗಳು ಬಾಡದೆ ನಗುತ್ತಿದ್ದವು. ಬೀದಿಯ ನಾಯಿಗಳೂ ಏಳಲಾರದೆ ಬಿದ್ದುಕೊಂಡಿದ್ದವು. ಹಾಗಾದರೆ ಜನರೆಲ್ಲಾ ಎಲ್ಲಿ ಹೋದರು? ಮಕ್ಕಳ ಧ್ವನಿಯೂ ಕೇಳುತ್ತಿಲ್ಲವಲ್ಲ ಎಂದು ಸೋಜಿಗವಾಯ್ತು ಶಿಷ್ಯನಿಗೆ. ಎಲ್ಲಿಯೂ ಒಂದು ಕಾಳು ಅಕ್ಕಿ ದೊರೆಯದೆ ನಿರಾಸೆಯಿಂದ ಮರಳಿದ ಶಿಷ್ಯ.

ಬೆಂಕಿ ಸಿದ್ಧಪಡಿಸಿಕೊಂಡು ಕಾಯುತ್ತಿದ್ದ ಗುರುವಿಗೆ ಶಿಷ್ಯನ ಖಾಲಿ ಕೈ ಕಂಡು ಅಚ್ಚರಿಯಾಯ್ತು. ʻಭಿಕ್ಷೆಯನ್ನು ನೀನೇ ಕೇಳಲಿಲ್ಲವೋ ಅಥವಾ ಕೇಳಿದರೂ ಯಾರೂ ನೀಡಲಿಲ್ಲವೋ?ʼ ವಿಚಾರಿಸಿದ ಗುರು. ಆಗ ಆ ವಿಚಿತ್ರ ಊರಿನ ವಿಷಯವನ್ನು ತಿಳಿಸಿದ ಶಿಷ್ಯ. ʻನಮ್ಮ ಜೋಳಿಗೆಯಲ್ಲಿ ಆಪತ್ಕಾಲಕ್ಕೆಂದು ಇಟ್ಟುಕೊಂಡಿದ್ದ ಒಂದೆರಡು ಗಡ್ಡೆ-ಗೆಣಸುಗಳನ್ನು ಸುಟ್ಟು ತಿಂದು, ಸಂಜೆಯೊಳಗೆ ಪಕ್ಕದೂರಿಗೆ ಹೋಗೋಣ. ಈ ಊರಿನ ಸಹವಾಸ ಸರಿಯಿಲ್ಲʼ ಎಂದ ಗುರು. ಶಿಷ್ಯನಿಗೂ ಹೌದೆನಿಸಿತು. ಹೊಟ್ಟೆ ತುಂಬಿದ ಮೇಲೆ ನೆರಳಲ್ಲಿ ಸಣ್ಣಗೆ ತೂಕಡಿಸಿ, ನಂತರ ಹೊರಟರಾಯಿತು ಎಂದು ಇಬ್ಬರೂ ಅಲ್ಲಿಯೇ ಒರಗಿದರು. ಆದರೆ ದಣಿದ ದೇಹಗಳಿಗೆ ಜೋರಾಗಿಯೇ ನಿದ್ದೆ ಹತ್ತಿ, ಏಳುವಷ್ಟರಲ್ಲಿ ಸಂಜೆಯಾಗಿತ್ತು. ಅಷ್ಟರಲ್ಲಿ ಅವರಿಗೆ ಹಿಂದೆಂದೂ ಆಗದಂಥ ವಿಚಿತ್ರವೊಂದು ಅನುಭವಕ್ಕೆ ಬರತೊಡಗಿತು.

ಇದನ್ನೂ ಓದಿ: ಮಕ್ಕಳ ಕಥೆ: ಚತುರ ನರಿ ಮತ್ತು ಪೆದ್ದ ಹೆಗ್ಗಣ

ಇಡೀ ಊರಿನ ತುಂಬಾ ಜನರಿದ್ದರು. ಅವರೆಲ್ಲಾ ಕತ್ತಲಾಗುತ್ತಿದ್ದ ಆ ಹೊತ್ತಿಗೆ, ಹಲ್ಲುಜ್ಜಿ ಮುಖ ತೊಳೆಯುತ್ತಿದ್ದರು; ಮನೆ ಮುಂದೆ ನೀರು ಹಾಕಿ ಗುಡಿಸಿ ರಂಗೋಲೆ ಹಾಕುತ್ತಿದ್ದರು; ಹಸುಗಳ ಹಾಲು ಕರೆಯುತ್ತಿದ್ದರು; ಹುಲ್ಲಿನ ಹೊರೆ ಹೊತ್ತು ತರುತ್ತಿದ್ದರು; ಅಂತೂ ಎಲ್ಲರೂ ಆಗ ತಾನೇ ಎದ್ದು ಬೆಳಗಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಂತೆ ಕಾಣುತ್ತಿತ್ತು. ಇದೆಂಥಾ ಊರು ಎಂಬುದೇ ಅರ್ಥವಾಗದೇ ಗುರು-ಶಿಷ್ಯರಿಬ್ಬರೂ ನೋಡುತ್ತಿದ್ದಂತೆ ಮಕ್ಕಳು ಕೈಯಲ್ಲಿ ದೊಂದಿ ಬೆಳಕು ಹಿಡಿದು ಶಾಲೆಗೆ ಹೋಗತೊಡಗಿದರು! ಇದನ್ನು ಕಂಡ ಶಿಷ್ಯ ಬಿದ್ದೂಬಿದ್ದು ನಗತೊಡಗಿದ.

ʻಕತ್ತಲಾಯಿತು. ಇನ್ನೀಗ ಪಕ್ಕದೂರಿಗೆ ನಡೆಯಲು ಆಗುವುದಿಲ್ಲ. ಈ ಊರಲ್ಲಿರುವುದು ಮನುಷ್ಯರೊ ದೆವ್ವಗಳೋ ನೋಡಿಕೊಂಡು ಬಾ. ಸಿಕ್ಕರೆ ಒಂದಿಷ್ಟು ಅಕ್ಕಿ-ಬೇಳೆ ಹಿಡಿದು ತಾʼ ಎಂದು ಶಿಷ್ಯನಿಗೆ ಹೇಳಿದ ಗುರು. ಊರೊಳಗೆ ಹೋದ ಶಿಷ್ಯನಿಗೆ ಇನ್ನಷ್ಟು ಅಚ್ಚರಿಗಳು ಕಾದಿದ್ದವು. ಅಂಗಡಿಗಳಲ್ಲಿ ಎಲ್ಲದಕ್ಕೂ ಒಂದೇ ಬೆಲೆ… ಅಂದರೆ ನೀರಿನ ಬೆಲೆಯೇ ಹಾಲಿಗೂ; ಅನ್ನದ ಬೆಲೆಯೇ ಚಿನ್ನಕ್ಕೂ! ದುಬಾರಿ ಎಂಬುದು ಯಾವುದೂ ಇಲ್ಲ, ಎಲ್ಲವೂ ಅಗ್ಗ. ತಮ್ಮ ಜೋಳಿಗೆಯ ತುಂಬಾ ಅಕ್ಕಿ-ಬೇಳೆಗಳನ್ನು ಹೊತ್ತು ತಂದ ಶಿಷ್ಯನನ್ನು ಕಂಡು ಗುರುವಿಗೆ ಸಿಟ್ಟು ಬಂತು. ʻಮೂರ್ಖ! ನಾವೇನು ಓಡಾಡುವ ಗೋದಾಮುಗಳೇ, ಇವನ್ನೆಲ್ಲಾ ಹೊತ್ತು ತಿರುಗಲು? ಒಂದೆರಡು ದಿನಗಳಿಗೆ ಆಗುವಷ್ಟು ಮಾತ್ರವೇ ಇರಿಸಿಕೊಳ್ಳುವವರು ನಾವು. ದೇಶಾಂತರ ತಿರುಗುವವರ ನಿಯಮಗಳನ್ನು ಮರೆತೆಯಾ?ʼ ಎಂದು ಕೇಳಿದ. ಆ ಊರಿನ ಮಾರುಕಟ್ಟೆಯ ವೈಚಿತ್ರ್ಯವನ್ನು ವಿವರಿಸಿದ ಶಿಷ್ಯ, ಎಲ್ಲವೂ ಅತೀ ಅಗ್ಗವಾಗಿರುವುದರಿಂದ ಇಷ್ಟೊಂದು ತಂದಿರುವುದಾಗಿ ತಿಳಿಸಿದ. ಆದರೆ ಗುರುವಿಗೆ ಸಮಾಧಾನ ಇರಲಿಲ್ಲ. ʻಯಾಕೋ ಈ ಊರು ಕ್ಷೇಮವಲ್ಲ ಎನಿಸುತ್ತಿದೆ. ಇಲ್ಲಿಯ ರಾಜ ಮೂರ್ಖನಿರಬೇಕು. ಹಾಗಾಗಿ ನಾಳೆ ಬೆಳಗಾಗುತ್ತಿದ್ದಂತೆ ಹೊರಡುವುದು ಒಳ್ಳೆಯದುʼ ಎಂಬ ಗುರುವಿನ ಮಾತಿಗೆ ಅರೆ ಮನಸ್ಸಿನಿಂದ ಶಿಷ್ಯ ಸಮ್ಮತಿಸಿದ. ಇಬ್ಬರೂ ಅಡುಗೆ ಮಾಡಿ, ಉಂಡು, ಮಲಗಿದರು.

ಇದನ್ನೂ ಓದಿ: ಮಕ್ಕಳ ಕಥೆ: ವರ್ತಕ ಮತ್ತು ಜಾಣ ಗಿಳಿ

ಲೋಕಕ್ಕೆಲ್ಲಾ ಬೆಳಗಾಗುತ್ತಿದ್ದಂತೆಯೇ, ಆ ಊರಿನವರ ಪಾಲಿಗೆ ಕತ್ತಲಾಗಿತ್ತು. ಒಂದೊಂದೇ ಮನೆಗಳಲ್ಲಿ ರಾತ್ರಿಯ ದೀಪ ಆರುತ್ತಿದ್ದಂತೆ, ಕಿಟಕಿ- ಬಾಗಿಲುಗಳು ಮುಚ್ಚಿದವು. ಎಲ್ಲರೂ ಮಲಗಿದರು. ಅಲ್ಲಿಂದ ಹೊರಡುವುದಕ್ಕೆ ಗುರು ಸಿದ್ಧನಾಗುತ್ತಿದ್ದಂತೆ, ಶಿಷ್ಯ ಹೇಳಿದ- ʻಗುರುಗಳೇ. ಇಂಥ ಊರನ್ನು ನಾನೆಲ್ಲಿಯೂ ಕಂಡಿದ್ದಿಲ್ಲ. ಹಾಗಾಗಿ ಇನ್ನೊಂದಿಷ್ಟು ದಿನ ಇಲ್ಲಿಯೇ ಇರಬೇಕಂದು ಆಸೆಯಾಗುತ್ತಿದೆ ನನಗೆ. ಹೇಗಿದ್ದರೂ ಇನ್ನೊಂದು ತಿಂಗಳಿಗೆ ಮಳೆಗಾಲ. ಅಷ್ಟರಲ್ಲಿ ಯಾವ ಊರು ತಲುಪಬೇಕು ಎಂಬುದನ್ನು ಈಗಾಗಲೇ ನಿಶ್ಚಯಿಸಿದ್ದೀರಲ್ಲಾ. ನಾನು ನೇರ ಅಲ್ಲಿಯೇ ನಿಮ್ಮನ್ನು ಕೂಡಿಕೊಳ್ಳುತ್ತೇನೆʼ ಈ ಬಗ್ಗೆ ಗುರುವಿಗೆ ಸ್ವಲ್ಪ ಅಸಮಾಧಾನವಾದರೂ ಆತ ಹೆಚ್ಚೇನೂ ಮಾತಾಡಲಿಲ್ಲ. ಬದಲಿಗೆ, ʻಸರಿ, ಆಪತ್ತು ಎದುರಾದರೆ ನೆನೆ ನನ್ನನ್ನುʼ ಎಂದು ಹೇಳಿ ಅಲ್ಲಿಂದ ಹೊರಟುಹೋದ.

ಶಿಷ್ಯನಿಗೆ ಏನಾದರೂ ಆಪತ್ತು ಒದಗಿತೇ?- ಓದಿ ಮುಂದಿನ ಭಾಗದಲ್ಲಿ!

Exit mobile version