ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ (ಭಾಗ 1)
ಅದೊಂದು ವಿಚಿತ್ರ ಊರು! ಅಲ್ಲಿ ಎಲ್ಲರೂ ಹಗಲಿನಲ್ಲಿ ಮಲಗಿ ನಿದ್ರೆ ಮಾಡುತ್ತಾರೆ. ಸಂಜೆ ಎದ್ದು ರಾತ್ರಿಯಿಡೀ ಕೆಲಸ ಮಾಡುತ್ತಾರೆ! ಇಂಥ ವಿಚಿತ್ರ ಊರಿನಲ್ಲಿ ಸಿಕ್ಕಿಬಿದ್ದ ಗುರು- ಶಿಷ್ಯರಿಗೆ ಏನಾಯಿತು? ಓದಿ, ಈ ಮಕ್ಕಳ ಕಥೆ.
ಈ ಕಥೆಯನ್ನು ಇಲ್ಲಿ ಕೇಳಿ:
ಶಿಷ್ಯನೊಬ್ಬ ಹತ್ತಾರು ವರ್ಷಗಳಿಂದ ಗುರುವೊಬ್ಬನಲ್ಲಿ ವಿದ್ಯೆ ಕಲೀತಾ ಇದ್ದ. ತನ್ನಲ್ಲಿದ್ದ ವಿದ್ಯೆಯನ್ನೆಲ್ಲಾ ಶಿಷ್ಯನಿಗೆ ಕಲಿಸಿಯಾಯಿತು ಎಂದು ಗುರುವಿಗೆ ಅನಿಸಿದ್ದರಿಂದ, ಆತನನ್ನು ಬಳಿಗೆ ಕರೆದ. ʻವತ್ಸಾ, ಇಂದಿಗೆ ನಿನ್ನ ವಿದ್ಯಾಭ್ಯಾಸ ಸಂಪನ್ನವಾಗಿದೆ. ನೀನಿನ್ನು ನಿನಗಿಷ್ಟ ಬಂದಲ್ಲಿಗೆ ಹೋಗಬಹುದು. ನಾನಿನ್ನು ದೇಶ ಪರ್ಯಟನೆಗೆ ಹೊರಡಲಿದ್ದೇನೆʼ ಎಂದ ಗುರು. ತನ್ನ ವಿದ್ಯಾಭ್ಯಾಸ ಪೂರ್ಣಗೊಂಡಿರುವ ಬಗ್ಗೆ ಶಿಷ್ಯನಿಗೆ ಸಂತೋಷವಾದರೂ, ದೇಶ ಸುತ್ತಲು ಹೊರಟ ಗುರುವಿನ ಹಿಂದೆ ಹೋಗಬೇಕು ಎಂಬ ಹಂಬಲ ಉಂಟಾಯಿತು. ಇದನ್ನೇ ಗುರುಗಳಲ್ಲಿ ತಿಳಿಸಿದ ಆತ. ದೇಶ ಸುತ್ತುವ ಹೊತ್ತಿಗೆ ಶಿಷ್ಯನನ್ನು ಒಡಗೂಡಿಕೊಂಡಿರಲು ಗುರುವಿಗೆ ಯಾವುದೇ ಅಭ್ಯಂತರ ಇರಲಿಲ್ಲ. ಸರಿ, ಇಬ್ಬರೂ ಹೊರಟರು.
ಇಬ್ಬರ ತಿರುಗಾಟ ಆರಂಭವಾಗಿ ಹಲವಾರು ತಿಂಗಳುಗಳು ಸಂದಿದ್ದವು. ಶಿಷ್ಯನಿಗಂತೂ ಒಂದೊಂದು ಅನುಭವವೂ ಹೊಸದೇ. ಹೊಸ ಊರು, ಹೊಸ ಭಾಷೆ, ಹೊಸ ಹೊಸ ಬದುಕುಗಳು ಆತನಿಗೆ ಗುರುಕುಲದಲ್ಲಿ ದೊರೆಯದ ಪಾಠವನ್ನು ಕಲಿಸುತ್ತಿದ್ದವು. ಹಾಗೇ ಸುತ್ತುತ್ತಾ ಇಬ್ಬರೂ ಒಂದು ಹೊಸ ಊರಿಗೆ ಬರುವಷ್ಟರಲ್ಲಿ ನಡು ಮಧ್ಯಾಹ್ನವಾಗಿತ್ತು. ವಾಡಿಕೆಯ ಹಾಗೆ, ಊರಾಚೆಯ ಆಲದ ಮರದಡಿಯಲ್ಲಿ ತಂಗಿದರು. ಗುರುವು ಒಲೆ ಹೂಡಿ ಬೆಂಕಿ ಮಾಡಲು ಒಣಕಾಷ್ಠಗಳನ್ನು ಆರಿಸುತ್ತಿದ್ದ. ಒಂದಿಷ್ಟು ಅಕ್ಕಿ-ಬೇಳೆಗಳನ್ನು ತರುವುದಕ್ಕೆ ಶಿಷ್ಯ ಊರೊಳಗೆ ಹೋದ.
ಸೂರ್ಯ ನೆತ್ತಿಯ ಮೇಲೆ ಬಂದಿದ್ದರೂ ಇಡೀ ಊರಿನಲ್ಲಿ ಜನರ ಸುಳಿವೇ ಇರಲಿಲ್ಲ. ಎಲ್ಲರ ಮನೆಯ ಕಿಟಕಿ ಬಾಗಿಲುಗಳೂ ಮುಚ್ಚಿದ್ದವು. ತಟ್ಟಿದರೆ ಯಾರೂ ಬಾಗಿಲು ತೆರೆಯಲಿಲ್ಲ. ಹಾಗೆಂದು ಅದೇನು ಹಾಳು ಬಿದ್ದ ಊರಲ್ಲ, ಎಲ್ಲರ ಮನೆಯ ಮುಂದೆ ರಂಗೋಲೆಗಳಿದ್ದವು, ಅಂಗಳದಲ್ಲಿ ಹೂವಿನ ಗಿಡಗಳು ಬಾಡದೆ ನಗುತ್ತಿದ್ದವು. ಬೀದಿಯ ನಾಯಿಗಳೂ ಏಳಲಾರದೆ ಬಿದ್ದುಕೊಂಡಿದ್ದವು. ಹಾಗಾದರೆ ಜನರೆಲ್ಲಾ ಎಲ್ಲಿ ಹೋದರು? ಮಕ್ಕಳ ಧ್ವನಿಯೂ ಕೇಳುತ್ತಿಲ್ಲವಲ್ಲ ಎಂದು ಸೋಜಿಗವಾಯ್ತು ಶಿಷ್ಯನಿಗೆ. ಎಲ್ಲಿಯೂ ಒಂದು ಕಾಳು ಅಕ್ಕಿ ದೊರೆಯದೆ ನಿರಾಸೆಯಿಂದ ಮರಳಿದ ಶಿಷ್ಯ.
ಬೆಂಕಿ ಸಿದ್ಧಪಡಿಸಿಕೊಂಡು ಕಾಯುತ್ತಿದ್ದ ಗುರುವಿಗೆ ಶಿಷ್ಯನ ಖಾಲಿ ಕೈ ಕಂಡು ಅಚ್ಚರಿಯಾಯ್ತು. ʻಭಿಕ್ಷೆಯನ್ನು ನೀನೇ ಕೇಳಲಿಲ್ಲವೋ ಅಥವಾ ಕೇಳಿದರೂ ಯಾರೂ ನೀಡಲಿಲ್ಲವೋ?ʼ ವಿಚಾರಿಸಿದ ಗುರು. ಆಗ ಆ ವಿಚಿತ್ರ ಊರಿನ ವಿಷಯವನ್ನು ತಿಳಿಸಿದ ಶಿಷ್ಯ. ʻನಮ್ಮ ಜೋಳಿಗೆಯಲ್ಲಿ ಆಪತ್ಕಾಲಕ್ಕೆಂದು ಇಟ್ಟುಕೊಂಡಿದ್ದ ಒಂದೆರಡು ಗಡ್ಡೆ-ಗೆಣಸುಗಳನ್ನು ಸುಟ್ಟು ತಿಂದು, ಸಂಜೆಯೊಳಗೆ ಪಕ್ಕದೂರಿಗೆ ಹೋಗೋಣ. ಈ ಊರಿನ ಸಹವಾಸ ಸರಿಯಿಲ್ಲʼ ಎಂದ ಗುರು. ಶಿಷ್ಯನಿಗೂ ಹೌದೆನಿಸಿತು. ಹೊಟ್ಟೆ ತುಂಬಿದ ಮೇಲೆ ನೆರಳಲ್ಲಿ ಸಣ್ಣಗೆ ತೂಕಡಿಸಿ, ನಂತರ ಹೊರಟರಾಯಿತು ಎಂದು ಇಬ್ಬರೂ ಅಲ್ಲಿಯೇ ಒರಗಿದರು. ಆದರೆ ದಣಿದ ದೇಹಗಳಿಗೆ ಜೋರಾಗಿಯೇ ನಿದ್ದೆ ಹತ್ತಿ, ಏಳುವಷ್ಟರಲ್ಲಿ ಸಂಜೆಯಾಗಿತ್ತು. ಅಷ್ಟರಲ್ಲಿ ಅವರಿಗೆ ಹಿಂದೆಂದೂ ಆಗದಂಥ ವಿಚಿತ್ರವೊಂದು ಅನುಭವಕ್ಕೆ ಬರತೊಡಗಿತು.
ಇದನ್ನೂ ಓದಿ: ಮಕ್ಕಳ ಕಥೆ: ಚತುರ ನರಿ ಮತ್ತು ಪೆದ್ದ ಹೆಗ್ಗಣ
ಇಡೀ ಊರಿನ ತುಂಬಾ ಜನರಿದ್ದರು. ಅವರೆಲ್ಲಾ ಕತ್ತಲಾಗುತ್ತಿದ್ದ ಆ ಹೊತ್ತಿಗೆ, ಹಲ್ಲುಜ್ಜಿ ಮುಖ ತೊಳೆಯುತ್ತಿದ್ದರು; ಮನೆ ಮುಂದೆ ನೀರು ಹಾಕಿ ಗುಡಿಸಿ ರಂಗೋಲೆ ಹಾಕುತ್ತಿದ್ದರು; ಹಸುಗಳ ಹಾಲು ಕರೆಯುತ್ತಿದ್ದರು; ಹುಲ್ಲಿನ ಹೊರೆ ಹೊತ್ತು ತರುತ್ತಿದ್ದರು; ಅಂತೂ ಎಲ್ಲರೂ ಆಗ ತಾನೇ ಎದ್ದು ಬೆಳಗಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಂತೆ ಕಾಣುತ್ತಿತ್ತು. ಇದೆಂಥಾ ಊರು ಎಂಬುದೇ ಅರ್ಥವಾಗದೇ ಗುರು-ಶಿಷ್ಯರಿಬ್ಬರೂ ನೋಡುತ್ತಿದ್ದಂತೆ ಮಕ್ಕಳು ಕೈಯಲ್ಲಿ ದೊಂದಿ ಬೆಳಕು ಹಿಡಿದು ಶಾಲೆಗೆ ಹೋಗತೊಡಗಿದರು! ಇದನ್ನು ಕಂಡ ಶಿಷ್ಯ ಬಿದ್ದೂಬಿದ್ದು ನಗತೊಡಗಿದ.
ʻಕತ್ತಲಾಯಿತು. ಇನ್ನೀಗ ಪಕ್ಕದೂರಿಗೆ ನಡೆಯಲು ಆಗುವುದಿಲ್ಲ. ಈ ಊರಲ್ಲಿರುವುದು ಮನುಷ್ಯರೊ ದೆವ್ವಗಳೋ ನೋಡಿಕೊಂಡು ಬಾ. ಸಿಕ್ಕರೆ ಒಂದಿಷ್ಟು ಅಕ್ಕಿ-ಬೇಳೆ ಹಿಡಿದು ತಾʼ ಎಂದು ಶಿಷ್ಯನಿಗೆ ಹೇಳಿದ ಗುರು. ಊರೊಳಗೆ ಹೋದ ಶಿಷ್ಯನಿಗೆ ಇನ್ನಷ್ಟು ಅಚ್ಚರಿಗಳು ಕಾದಿದ್ದವು. ಅಂಗಡಿಗಳಲ್ಲಿ ಎಲ್ಲದಕ್ಕೂ ಒಂದೇ ಬೆಲೆ… ಅಂದರೆ ನೀರಿನ ಬೆಲೆಯೇ ಹಾಲಿಗೂ; ಅನ್ನದ ಬೆಲೆಯೇ ಚಿನ್ನಕ್ಕೂ! ದುಬಾರಿ ಎಂಬುದು ಯಾವುದೂ ಇಲ್ಲ, ಎಲ್ಲವೂ ಅಗ್ಗ. ತಮ್ಮ ಜೋಳಿಗೆಯ ತುಂಬಾ ಅಕ್ಕಿ-ಬೇಳೆಗಳನ್ನು ಹೊತ್ತು ತಂದ ಶಿಷ್ಯನನ್ನು ಕಂಡು ಗುರುವಿಗೆ ಸಿಟ್ಟು ಬಂತು. ʻಮೂರ್ಖ! ನಾವೇನು ಓಡಾಡುವ ಗೋದಾಮುಗಳೇ, ಇವನ್ನೆಲ್ಲಾ ಹೊತ್ತು ತಿರುಗಲು? ಒಂದೆರಡು ದಿನಗಳಿಗೆ ಆಗುವಷ್ಟು ಮಾತ್ರವೇ ಇರಿಸಿಕೊಳ್ಳುವವರು ನಾವು. ದೇಶಾಂತರ ತಿರುಗುವವರ ನಿಯಮಗಳನ್ನು ಮರೆತೆಯಾ?ʼ ಎಂದು ಕೇಳಿದ. ಆ ಊರಿನ ಮಾರುಕಟ್ಟೆಯ ವೈಚಿತ್ರ್ಯವನ್ನು ವಿವರಿಸಿದ ಶಿಷ್ಯ, ಎಲ್ಲವೂ ಅತೀ ಅಗ್ಗವಾಗಿರುವುದರಿಂದ ಇಷ್ಟೊಂದು ತಂದಿರುವುದಾಗಿ ತಿಳಿಸಿದ. ಆದರೆ ಗುರುವಿಗೆ ಸಮಾಧಾನ ಇರಲಿಲ್ಲ. ʻಯಾಕೋ ಈ ಊರು ಕ್ಷೇಮವಲ್ಲ ಎನಿಸುತ್ತಿದೆ. ಇಲ್ಲಿಯ ರಾಜ ಮೂರ್ಖನಿರಬೇಕು. ಹಾಗಾಗಿ ನಾಳೆ ಬೆಳಗಾಗುತ್ತಿದ್ದಂತೆ ಹೊರಡುವುದು ಒಳ್ಳೆಯದುʼ ಎಂಬ ಗುರುವಿನ ಮಾತಿಗೆ ಅರೆ ಮನಸ್ಸಿನಿಂದ ಶಿಷ್ಯ ಸಮ್ಮತಿಸಿದ. ಇಬ್ಬರೂ ಅಡುಗೆ ಮಾಡಿ, ಉಂಡು, ಮಲಗಿದರು.
ಇದನ್ನೂ ಓದಿ: ಮಕ್ಕಳ ಕಥೆ: ವರ್ತಕ ಮತ್ತು ಜಾಣ ಗಿಳಿ
ಲೋಕಕ್ಕೆಲ್ಲಾ ಬೆಳಗಾಗುತ್ತಿದ್ದಂತೆಯೇ, ಆ ಊರಿನವರ ಪಾಲಿಗೆ ಕತ್ತಲಾಗಿತ್ತು. ಒಂದೊಂದೇ ಮನೆಗಳಲ್ಲಿ ರಾತ್ರಿಯ ದೀಪ ಆರುತ್ತಿದ್ದಂತೆ, ಕಿಟಕಿ- ಬಾಗಿಲುಗಳು ಮುಚ್ಚಿದವು. ಎಲ್ಲರೂ ಮಲಗಿದರು. ಅಲ್ಲಿಂದ ಹೊರಡುವುದಕ್ಕೆ ಗುರು ಸಿದ್ಧನಾಗುತ್ತಿದ್ದಂತೆ, ಶಿಷ್ಯ ಹೇಳಿದ- ʻಗುರುಗಳೇ. ಇಂಥ ಊರನ್ನು ನಾನೆಲ್ಲಿಯೂ ಕಂಡಿದ್ದಿಲ್ಲ. ಹಾಗಾಗಿ ಇನ್ನೊಂದಿಷ್ಟು ದಿನ ಇಲ್ಲಿಯೇ ಇರಬೇಕಂದು ಆಸೆಯಾಗುತ್ತಿದೆ ನನಗೆ. ಹೇಗಿದ್ದರೂ ಇನ್ನೊಂದು ತಿಂಗಳಿಗೆ ಮಳೆಗಾಲ. ಅಷ್ಟರಲ್ಲಿ ಯಾವ ಊರು ತಲುಪಬೇಕು ಎಂಬುದನ್ನು ಈಗಾಗಲೇ ನಿಶ್ಚಯಿಸಿದ್ದೀರಲ್ಲಾ. ನಾನು ನೇರ ಅಲ್ಲಿಯೇ ನಿಮ್ಮನ್ನು ಕೂಡಿಕೊಳ್ಳುತ್ತೇನೆʼ ಈ ಬಗ್ಗೆ ಗುರುವಿಗೆ ಸ್ವಲ್ಪ ಅಸಮಾಧಾನವಾದರೂ ಆತ ಹೆಚ್ಚೇನೂ ಮಾತಾಡಲಿಲ್ಲ. ಬದಲಿಗೆ, ʻಸರಿ, ಆಪತ್ತು ಎದುರಾದರೆ ನೆನೆ ನನ್ನನ್ನುʼ ಎಂದು ಹೇಳಿ ಅಲ್ಲಿಂದ ಹೊರಟುಹೋದ.
ಶಿಷ್ಯನಿಗೆ ಏನಾದರೂ ಆಪತ್ತು ಒದಗಿತೇ?- ಓದಿ ಮುಂದಿನ ಭಾಗದಲ್ಲಿ!
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಮುಗ್ಧ ಶಿಷ್ಯರು ಮತ್ತು ಕುದುರೆ ಮೊಟ್ಟೆ
ಒಬ್ಬರು ಗುರು. ಅವರಿಗೆ ಹಲವಾರು ಪೆದ್ದು ಶಿಷ್ಯರು. ಎಷ್ಟು ಪೆದ್ದರು ಎಂದರೆ ಕುಂಬಳಕಾಯಿಯನ್ನೇ ಕುದುರೆಯ ಮೊಟ್ಟೆ ಎಂದು ತಿಳಿಯುವವರು! ಇಂಥ ಶಿಷ್ಯರಿಂದ ಏನಾಯಿತು? ಪಾಠ ಕಲಿತರೇ? ಓದಿ, ಈ ಮಕ್ಕಳ ಕಥೆ.
ಈ ಕಥೆಯನ್ನು ಇಲ್ಲಿ ಕೇಳಿ:
ಗುರುವೊಬ್ಬ ನದಿಯಂಚಿನಲ್ಲಿ ಆಶ್ರಮ ನಿರ್ಮಿಸಿಕೊಂಡಿದ್ದ. ಆತನ ಬಳಿ ಹಲವಾರು ಶಿಷ್ಯರು ವಿದ್ಯೆ ಕಲಿಯುವುದಕ್ಕಾಗಿ ಅಂತೆವಾಸಿ (ಆಶ್ರಮವಾಸಿ)ಗಳಾಗಿದ್ದರು. ಹಲವಾರು ವರ್ಷಗಳ ಕಾಲ ಅವರೆಲ್ಲ ಅಲ್ಲಿಯೇ ತಂಗಿ ವಿದ್ಯೆ ಕಲಿಯುತ್ತಿದ್ದರೂ, ಕಲಿಯುವಲ್ಲಿ ಶಿಷ್ಯರ ಗಮನ ಸಾಲದು ಎಂದು ಗುರುವಿಗೆ ಪದೇಪದೆ ಅನಿಸುತ್ತಿತ್ತು.
ಒಮ್ಮೆ ಆ ಶಿಷ್ಯರಿಗೆ ತಮ್ಮ ಗುರುವಿಗಾಗಿ ಏನಾದರೂ ವಿಶೇಷವಾದ ವಸ್ತುವೊಂದನ್ನು ತರಬೇಕು ಎಂದು ಬಯಕೆಯಾಯಿತು. ಬಾಲ್ಯದಲ್ಲೇ ಆಶ್ರಮಕ್ಕೆ ಬಂದಿದ್ದ ಹೆಚ್ಚಿನವರು, ಸುತ್ತಲಿನ ನದಿ, ಕಾಡು, ಕಾಡಂಚಿನ ಒಂದೆರಡು ಊರುಗಳನ್ನು ಬಿಟ್ಟು ಹೆಚ್ಚು ಪ್ರಪಂಚ ನೋಡಿದವರೇ ಅಲ್ಲ. ಹಾಗಾಗಿ ಅವರಲ್ಲೇ ಸ್ವಲ್ಪ ಅನುಭವಿಯಾದ ಇಬ್ಬರು ಶಿಷ್ಯರನ್ನು ತಮ್ಮ ಮುಖಂಡರೆಂದು ಉಳಿದೆಲ್ಲಾ ಶಿಷ್ಯರು ಆರಿಸಿ, ಗುರುವಿಗೆ ವಿಶೇಷ ಕಾಣಿಕೆ ತರುವ ಹೊಣೆಯನ್ನು ವಹಿಸಿದರು. ಆ ಇಬ್ಬರು ಶಿಷ್ಯರು ಕಾಣಿಕೆಯನ್ನು ಅರಸುತ್ತಾ ಹೊರಟರು.
ಹತ್ತಾರು ಊರುಗಳನ್ನು ಸುತ್ತಿದರೂ ಅವರಿಗೆ ಬೇಕಾದ ವಸ್ತುಗಳು ದೊರೆಯಲಿಲ್ಲ. ಅದಕ್ಕಿಂತ ದೊಡ್ಡ ಸಮಸ್ಯೆಯೆಂದರೆ, ತಮಗೇನು ಬೇಕು- ತಾವೇನನ್ನು ಅರಸುತ್ತಿದ್ದೇವೆ ಎಂಬುದೇ ಅವರಿಗೆ ಸರಿಯಾಗಿ ಗೊತ್ತಿರಲಿಲ್ಲ. ಹಾಗಾಗಿ ಹುಡುಕುವುದು ಇನ್ನಷ್ಟು ಕಷ್ಟವಾಗುತ್ತಿತ್ತು. ಯಾವುದೋ ಒಂದೂರಿನ ಒಂದು ಸಂತೆಗೆ ಹೋದಾಗ ಅವರಿಗೆ ಬೃಹತ್ ಗಾತ್ರದ ಕುಂಬಳ ಕಾಯೊಂದು ಕಣ್ಣಿಗೆ ಬಿತ್ತು. ಅವರ ಪಾಲಿಗೆ ಕುಂಬಳ ಕಾಯಿಯೇ ಹೊಸ ತರಕಾರಿಯಾಗಿತ್ತು. ಅದರಲ್ಲೂ ಇಷ್ಟು ದೊಡ್ಡ ಗಾತ್ರದ ಯಾವುದೇ ತರಕಾರಿಯನ್ನೂ ಅವರು ನೋಡಿರಲಿಲ್ಲ. ಗುರುವಿನ ಆಶ್ರಮದ ಹಿತ್ತಲಲ್ಲಿ ಬೆಳೆಯುವ ಒಂದಿಷ್ಟು ತರಕಾರಿಗಳು ಮಾತ್ರವೇ ಅವರಿಗೆ ಪರಿಚಿತವಾಗಿದ್ದವು. ತಮ್ಮತಮ್ಮಲ್ಲೇ ಎಷ್ಟು ಚರ್ಚಿಸಿದರೂ ಅಷ್ಟು ದೊಡ್ಡ ಗಾತ್ರದ್ದು ಏನಿರಬಹುದು ಎಂಬುದು ಅವರಿಗೆ ಬಗೆಹರಿಯಲಿಲ್ಲ. ಹಾಗಾಗಿ ಅಂಗಡಿಯಾತನ ಬಳಿಗೇ ಹೋಗಿ ಕೇಳುವುದು ಎಂದು ನಿರ್ಧರಿಸಿದರು.
ಬೆಳಗಿನಿಂದ ಸಂತೆಯಲ್ಲಿ ಸರಿಯಾಗಿ ವ್ಯಾಪಾರವಾಗದೇ ಸ್ವಲ್ಪ ಸಿಟ್ಟಿನಲ್ಲೇ ಇದ್ದ ಅಂಗಡಿಯಾತ. ಹೀಗಿರುವಾಗ ಶಿಷ್ಯರಿಬ್ಬರು ಬಂದು, ʻನಮಸ್ಕಾರ ಸ್ವಾಮಿ! ನಿಮ್ಮ ಎಡಗಡೆ ಪಕ್ಕದಲ್ಲಿ ಇದೆಯಲ್ಲ, ಆ ದೊಡ್ಡ ಗಾತ್ರದ್ದು- ಅದೇನು?ʼ ಎಂದು ಕೇಳಿದರು. ಮೊದಲೇ ಸಿಟ್ಟಿನಲ್ಲಿದ್ದ ಅಂಗಡಿಯವನಿಗೆ ಈಗಂತೂ ರೇಗಿಹೋಯಿತು. ʻಅದಾ? ಕುದುರೆ ಮೊಟ್ಟೆ! ತಗೊಳಿ ಬೇಕಾದ್ರೆʼ ಎಂದ. ಶಿಷ್ಯರು ಇದನ್ನು ನಿಜಕ್ಕೂ ನಂಬಿದರು! ಮಾತ್ರವಲ್ಲ, ಸಂತೋಷದಿಂದ ಕುಣಿದಾಡಿದರು. ಅವರು ಹುಡುಕುತ್ತಿದ್ದ ಅಪೂರ್ವವಾದ ವಸ್ತು ಅವರಿಗೆ ಸಿಕ್ಕಿತ್ತು.
ʻಈ ಕುದುರೆ ಮೊಟ್ಟೆಗೆಷ್ಟು ಹಣ?ʼ ಎಂದು ಕೇಳುತ್ತಿದ್ದಂತೆ ಅಂಗಡಿಯಾತನಿಗೆ ಸಿಟ್ಟಿನ ನಡುವೆಯೂ ನಗುಬಂತು. ಆದರೂ ಇವರ ಮೂರ್ಖತನವನ್ನು ತನ್ನ ಲಾಭಕ್ಕೆ ಉಯೋಗಿಸಿಕೊಂಡ ಆತ, ಆ ಕುಂಬಳ ಕಾಯಿಗೆ ದುಪ್ಪಟ್ಟು ದರ ಹೇಳಿ ಮಾರಾಟ ಮಾಡಿದ. ಇಬ್ಬರೂ ಅದನ್ನು ಹೊತ್ತು ಖುಷಿಯಿಂದ ಆಶ್ರಮದತ್ತ ಹೆಜ್ಜೆ ಹಾಕಿದರು.
ದಾರಿಯಲ್ಲಿ ಅವರು ಕಾಡೊಂದನ್ನು ದಾಟಬೇಕಿತ್ತು. ದೊಡ್ಡ ಕುಂಬಳಕಾಯಿಯನ್ನು ಹಿಡಿದು ಇಬ್ಬರಿಗೂ ಕೈ ನೋಯಲಾರಂಭಿಸಿತ್ತು. ಅದನ್ನೊಂದು ಮರದಡಿಗೆ ಇಟ್ಟುಕೊಂಡು ವಿಶ್ರಮಿಸಿಕೊಳ್ಳಲು ಕುಳಿತರು. ಅಷ್ಟರಲ್ಲಿ ಒಬ್ಬಾತನಿಗೆ ಸಂಶಯವೊಂದು ಬಂತು. ʻಈ ಮೊಟ್ಟೆಯಿಂದ ಕುದುರೆ ಮರಿ ಬರುವುದಕ್ಕೆ ಇನ್ನೆಷ್ಟು ದಿನ ಬೇಕು ಅಂತಲೇ ಕೇಳಲಿಲ್ಲವಲ್ಲ!ʼ ಎಂದ ಇನ್ನೊಬ್ಬನಲ್ಲಿ. ʻಛೇ! ಹೌದಲ್ಲೋ! ಆದರೆ… ಇದಕ್ಕೆ ಕಾವು ಕೊಡುವುದು ಹೇಗೆ? ಕಾವೇ ಕೊಡದೆ ಮರಿ ಹೇಗೆ ಬರುತ್ತದೆ?ʼ ಎಂದು ಇನ್ನೊಬ್ಬ ಪೇಚಾಡಿಕೊಂಡ. ಇಬ್ಬರಿಗೂ ತಾವೆಂಥ ತಪ್ಪು ಮಾಡಿದೆವು ಎನಿಸಿತು. ಇರಲಿ, ಇವೆಲ್ಲಾ ವಿಷಯಗಳು ಗುರುಗಳಿಗೆ ಗೊತ್ತಿರಬಹುದು ಎಂದು ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಂಡು ಹೊರಟರು.
ಆಶ್ರಮದಿಂದ ಹೊರಟು ಮೂರ್ನಾಲ್ಕು ದಿನಗಳೇ ಕಳೆದಿದ್ದವು. ಅವರು ಇಟ್ಟುಕೊಂಡಿದ್ದ ಬುತ್ತಿಯೆಲ್ಲಾ ಎಂದೋ ಖರ್ಚಾಗಿತ್ತು. ಹಸಿವೆ, ದಣಿವು, ಬಾಯಾರಿಕೆಯಿಂದ ಬಳಲಿದ್ದ ಅವರಿಗೆ ಈ ದೊಡ್ಡ ಕುಂಬಳ ಕಾಯಿ ಹೊತ್ತು ನಡೆಯುವುದು ಕಷ್ಟವಾಗುತ್ತಿತ್ತು. ಕಾಡು ದಾರಿಯಲ್ಲಿ ಹೆಜ್ಜೆ ಹಾಕುವುದೂ ಸುಲಭವಿರಲಿಲ್ಲ. ಇಳಿಜಾರಿನಲ್ಲಿ ಪೊದೆಗಳ ನಡುವೆ ದಾರಿ ಮಾಡಿಕೊಂಡು ನಡೆಯುವಾಗ ಅಚಾನಕ್ಕಾಗಿ ಕುಂಬಳ ಕಾಯಿ ಇವರ ಕೈಯಿಂದ ಕೆಳಗೆ ಬಿತ್ತು. ಇಳಿಯುವ ದಾರಿಯಾದ್ದರಿಂದ, ಬಿದ್ದ ಕುಂಬಳಕಾಯಿ ಉರುಳುತ್ತಾ ಹೊರಟು ಹೋಯಿತು. ದಾರಿಯಲ್ಲಿನ ಬೇರುಗಳನ್ನೆಲ್ಲಾ ತರಚಿಕೊಂಡು ಉರುಳೀ… ಉರುಳಿ, ಒಂದು ಮರಕ್ಕೆ ಢಿಕ್ಕಿ ಹೊಡೆದು ನಿಂತಿತು. ಇವರಿಬ್ಬರೂ ಲಘುಬಗೆಯಿಂದ ಎದ್ದೂಬಿದ್ದು ಓಡೋಡುತ್ತಾ ಬಂದು ನೋಡಿದರೆ, ಕುಂಬಳ ಕಾಯಿ ಮೂರ್ನಾಲ್ಕು ತುಂಡುಗಳಾಗಿ ಒಡೆದು ಹೋಗಿತ್ತು!
ಇದನ್ನೂ ಓದಿ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ- ಭಾಗ 2
ಇಲ್ಲಿಗೇ ಮುಗಿಯಲಿಲ್ಲ- ಈ ಎಲ್ಲಾ ಗದ್ದಲಕ್ಕೆ ಬೆದರಿ ಅಡಗಿದ್ದ ಜಿಂಕೆಯೊಂದು, ಕುಂಬಳ ಕಾಯಿ ಢಿಕ್ಕಿ ಹೊಡೆದಿದ್ದ ಮರದ ಹಿಂದಿನ ಪೊದೆಯಿಂದ ಓಡಿಹೋಯಿತು. ಪೊದೆಯಿಂದ ಓಡಿದ್ದೇನು ಎಂಬುದು ಸ್ಪಷ್ಟವಾಗಿ ಕಾಣದೆ ಇದ್ದಿದ್ದರಿಂದ, ಮೊಟ್ಟೆಯೊಡೆದು ಕುದುರೆ ಮರಿಯೇ ಹೊರಬಂದು ಕಾಡಿನಲ್ಲಿ ಓಡಿಹೋಯಿತು ಎಂದು ಇಬ್ಬರೂ ಭಾವಿಸಿದರು!
ಕೈಯಲ್ಲಿದ್ದ ಹಣವೂ ಖರ್ಚಾಗಿ, ಮೊಟ್ಟೆಯೂ ಒಡೆದುಹೋಗಿ, ಕುದುರೆ ಮರಿಯೂ ಪರಾರಿಯಾಗಿ- ಇದೆಂಥಾ ಅವಸ್ಥೆಯಾಯಿತು, ಆಶ್ರಮದ ಉಳಿದ ಶಿಷ್ಯರ ಕೈಯಿಂದ ಪೆಟ್ಟು ತಿನ್ನಬೇಕಾದೀತು ಎಂದು ಹೆದರಿ ಇಬ್ಬರೂ ಗೋಳಾಡತೊಡಗಿದರು. ಎಷ್ಟು ಅತ್ತರೂ ಮುಂದಿನ ದಾರಿಯೇನು ಎಂಬುದು ತಿಳಿಯಲಿಲ್ಲ ಅವರಿಗೆ. ಕುಂಬಳ ಕಾಯಿಯ ತುಂಡುಗಳನ್ನೇ ಹೊತ್ತು ಆಶ್ರಮದತ್ತ ನಡೆಯತೊಡಗಿದರು. ಅದನ್ನು ಗುರುಗಳ ಎದುರಿಗೇ ಇಟ್ಟು, ನಡೆದ ವಿಷಯವನ್ನೆಲ್ಲಾ ವಿವರಿಸಿದರು.
ತನ್ನ ಶಿಷ್ಯರ ಗುರುಭಕ್ತಿಯನ್ನು ಕಂಡು ಗುರುವಿಗೆ ಸಂತೋಷವಾದರೂ, ಅವರ ಪೆದ್ದುತನವನ್ನು ಕಂಡು ಚಿಂತೆಯೂ ಆಯಿತು. ಹೀಗೇ ಆದರೆ ಇವರೆಲ್ಲಾ ಲೋಕದಲ್ಲಿ ಬದುಕುವುದು ಹೇಗೆ ಎಂದು ಯೋಚಿಸಿದ ಗುರುಗಳು, ಆಶ್ರಮದ ಎಲ್ಲಾ ಶಿಷ್ಯರನ್ನೂ ಬಳಿಗೆ ಕರೆದು, ಎಲ್ಲರ ಕೈಯಲ್ಲೂ ನಾಲ್ಕಾರು ಕುಂಬಳಬೀಜಗಳನ್ನು ಇರಿಸಿ, ಆಶ್ರಮದ ಸುತ್ತಲಿನ ಪ್ರದೇಶದಲ್ಲಿ ಬಿತ್ತುವಂತೆ ತಿಳಿಸಿದರು. ಕೆಲವೇ ದಿನಗಳಲ್ಲಿ ಬೀಜಗಳು ಮೊಳಕೆಯೊಡೆದು, ಬಳ್ಳಿಗಳಾಗಿ ಸುತ್ತೆಲ್ಲಾ ಹಬ್ಬಿದವು. ಇನ್ನೊಂದು ತಿಂಗಳಲ್ಲಿ ಕಾಯಿಗಳನ್ನೂ ಬಿಡಲಾರಂಭಿಸಿದಾಗ ಶಿಷ್ಯಂದಿರಿಗೆಲ್ಲಾ ಅಚ್ಚರಿಯಾಯಿತು. ಇನ್ನೂ ಹಲವಾರು ತಿಂಗಳುಗಳವರೆಗೆ ಆಶ್ರಮದ ಎಲ್ಲರಿಗೂ ಸಾಕಾಗುವಷ್ಟು ಕುಂಬಳಕಾಯಿಗಳು ಬಿಟ್ಟದ್ದವು.
ಸಂತೆಯಲ್ಲಿನ ವ್ಯಾಪಾರಿಯ ಮಾತಿಗೆ ಮರುಳಾದ ಶಿಷ್ಯರ ಮುಗ್ಧತೆಗೆ ಈ ಮೂಲಕ ತಿಳುವಳಿಕೆ ಹೇಳಿದ್ದ ಗುರು. ತರಕಾರಿಯನ್ನು ಕುದುರೆಮೊಟ್ಟೆ ಎಂದು ನಂಬಿಕೊಂಡ ತಮ್ಮ ಮೂರ್ಖತನಕ್ಕೆ ನಾಚಿಕೊಂಡ ಶಿಷ್ಯರಿಗೆ, ಕಲಿಕೆಯತ್ತ ಗಮನ ಸಾಲದು ಅಂತ ಗುರುಗಳು ಹೇಳೋದೇಕೆ ಎನ್ನೋದು ಅರ್ಥವಾಗಿತ್ತು. ಆನಂತರದಿಂದ ಕಲಿಯುವ ಕಡೆಗೆ ಹೆಚ್ಚಿನ ಗಮನ ನೀಡತೊಡಗಿದರು.
ಇದನ್ನೂ ಓದಿ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ (ಭಾಗ 1)
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ- ಭಾಗ 2
ಆ ಊರಿನಲ್ಲಿ ಎಲ್ಲರೂ ಹಗಲು ಮಲಗುವವರು, ರಾತ್ರಿ ಓಡಾಡುವವರು. ಇದಕ್ಕೆ ಕಾರಣ ಅಲ್ಲಿನ ತಿಕ್ಕಲು ರಾಜ ಮತ್ತು ಮಂತ್ರಿ. ಅಲ್ಲಿ ಸಿಕ್ಕಿಬಿದ್ದ ಶಿಷ್ಯನಿಗೆ ಏನಾಯಿತು? ಓದಿ, ಈ ಮಕ್ಕಳ ಕಥೆ.
ಈ ಕಥೆಯನ್ನು ಇಲ್ಲಿ ಕೇಳಿ:
ಗುರುವಿನಿಂದ ಬೀಳ್ಕೊಂಡ ಶಿಷ್ಯನಿಗೆ ಆ ಊರಿನಲ್ಲಿ ಪುಷ್ಕಳವಾಗಿ ಭೋಜನ ಸಿಗುತಿತ್ತು. ಎಲ್ಲವೂ ಅಗ್ಗ, ಎಲ್ಲರೂ ಕೈ ಬಿಚ್ಚಿ ದಾನ ಮಾಡುವವರೇ. ಹಾಗಾಗಿ ದೇಹಕ್ಕೆ ಹೆಚ್ಚು ಶ್ರಮವಿಲ್ಲದೆ ತಿಂದೂ ಉಂಡೂ, ಕಾಷ್ಠದಂತಿದ್ದ ದೇಹ ಕೆಲವೇ ದಿನಗಳಲ್ಲಿ ದಷ್ಟಪುಷ್ಟವಾಯಿತು.
ಈ ಕಥೆಯ ಮೊದಲ ಭಾಗವನ್ನು ಇಲ್ಲಿ ಓದಿ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ (ಭಾಗ 1)
ಮಳೆಗಾಲ ಸಮೀಪಿಸುವುದಕ್ಕೆ ಕೆಲವೇ ದಿನಗಳು ಬಾಕಿದ್ದವು. ಇನ್ನು ನಾಲ್ಕಾರು ದಿನಗಳಲ್ಲಿ ಆ ಊರಿನಿಂದ ಹೊರಡಬೇಕಿತ್ತು ಆತನಿಗೆ. ಅಷ್ಟರಲ್ಲಿ ಅದೊಂದು ದಿನ ಭಾರೀ ಮಳೆ ಬಂತು. ಮಳೆಯ ರಭಸಕ್ಕೆ ಆ ಊರಿನ ಶ್ರೀಮಂತ ವಣಿಕನೊಬ್ಬನ ಮನೆಯ ಗೋಡೆ ಕುಸಿದು ಬಿದ್ದು, ಆತನ ಮಡದಿ ತೀರಿಕೊಂಡಳು. ತನ್ನ ಮನೆ ಕಟ್ಟಿದ ಮೇಸ್ತ್ರಿ ಸರಿಯಾಗಿ ಕೆಲಸ ಮಾಡದೆ ಇಂಥ ಅನಾಹುತವಾಯಿತು ಎಂದು ಆ ವರ್ತಕ ಊರಿನ ರಾಜನಲ್ಲಿ ದೂರಿತ್ತ. ವಿಷಯದ ವಿಚಾರಣೆ ಮಾಡುತ್ತಿದ್ದ ಮಂತ್ರಿ, ಆ ಮೇಸ್ತ್ರಿಯನ್ನು ಕರೆಸಿದ. ʻಮಹಾಸ್ವಾಮಿ, ಇದರಲ್ಲಿ ನನ್ನದೇನೂ ತಪ್ಪಿಲ್ಲ, ನಾನು ಸರಿಯಾಗೇ ಮನೆ ಕಟ್ಟಿದ್ದೇನೆ, ಇಟ್ಟಿಗೆಯೇ ಚನ್ನಾಗಿರಲಿಲ್ಲʼ ಎಂದ ಮೇಸ್ತ್ರಿ. ಇಟ್ಟಿಗೆ ಭಟ್ಟಿಯವನನ್ನು ಕರೆಸಲಾಯಿತು. ʻಇಲ್ಲಪ್ಪ, ನನ್ನ ಭಟ್ಟಿಯ ಇಟ್ಟಿಗೆಯಲ್ಲಿ ಯಾವುದೇ ದೋಷವಿಲ್ಲ. ನಾನು ಸರಿಯಾಗಿಯೇ ಇಟ್ಟಿಗೆ ಮಾಡಿದ್ದೇನೆ. ಇದಕ್ಕೆ ತಂದ ಮಣ್ಣು ಸರಿಯಾಗಿರಲಿಲ್ಲʼ ಎಂದ ಭಟ್ಟಿಯವ.
ಮಣ್ಣು ತಂದ ವ್ಯಕ್ತಿಯನ್ನು ಕರೆಸಲಾಯಿತು. ʻಮಹಾಸ್ವಾಮಿ, ನಾನು ಮಣ್ಣು ಸರಿಯಾಗಿಯೇ ತಂದಿದ್ದೇನೆ. ಊರಾಚೆಯ ದಿಬ್ಬದಿಂದ ಆ ದಿನ ಮಣ್ಣು ಹೊರುವಾಗ, ಮಣ್ಣಿಯ ಬುಟ್ಟಿಯನ್ನು ತಲೆ ಮೇಲೆ ಇರಿಸುವುದಕ್ಕೆಂದು ಅಲ್ಲೇ ಆಲದ ಮರದ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಸಹಾಯಕ್ಕೆ ಕರೆದಿದ್ದೆ. ಅವನಿಂದಲೇ ಇದೆಲ್ಲಾ ಆಗಿದ್ದುʼ ಎಂದ ಮಣ್ಣು ತಂದವ. ಊರಾಚೆಯ ಆಲದ ಮರದ ಕೆಳಗೆ ಮಲಗಿದ್ದ ಶಿಷ್ಯ ಆತನಿಗೆ ಮಣ್ಣು ಹೊರುವುದಕ್ಕೆ ಸಹಾಯ ಮಾಡಿದ್ದು ನಿಜವಾಗಿತ್ತು. ಆದರೆ ಎಲ್ಲಿಂದೆಲ್ಲಿಯ ಸಂಬಂಧ!
ಶಿಷ್ಯನನ್ನು ಎಳೆದೊಯ್ದರು ರಾಜನ ಭಟರು. ರಾಜನ ಆಸ್ಥಾನಕ್ಕೆ ತನ್ನನ್ನು ಯಾಕಾಗಿ ಎಳೆದೊಯ್ಯುತ್ತಿದ್ದಾರೆ, ವಿಷಯವೇನು ಎಂಬುದೇ ಶಿಷ್ಯನಿಗೆ ಗೊತ್ತಿರಲಿಲ್ಲ. ಶಿಷ್ಯನನ್ನು ಕಾಣುತ್ತಿದ್ದಂತೆ, ʻಇವನೇ ಆ ದಿನ ನನ್ನ ತಲೆ ಮೇಲೆ ಮಣ್ಣಾಕಿದ್ದು!ʼ ಎಂದು ಕೂಗಿದ ಮಣ್ಣು ಹೊರುವವ. ʻಏಯ್ ಯುವಕ, ಈ ವ್ಯಕ್ತಿಯ ತಲೆಗೆ ಮಣ್ಣಿನ ಬುಟ್ಟಿ ಹೊರಿಸಿದ್ದು ನೀನೆಯೋ?ʼ ಕೇಳಿದ ಮಂತ್ರಿ. ʻಹೌದು ಮಹಾಸ್ವಾಮಿ, ಬುಟ್ಟಿ ಭಾರವಿದೆ. ಸ್ವಲ್ಪ ಎತ್ತಿ ತಲೆ ಮೇಲಿಟ್ಟು ಕೊಡಿ ಎಂದು ಈತನೇ ನನ್ನನ್ನು ಕೇಳಿದ್ದʼ ಎಂದು ನಿಜವನ್ನೇ ಹೇಳಿದ ಶಿಷ್ಯ. ಕೆಲಸ ಕೆಡುವುದಕ್ಕೆ ಅಷ್ಟು ಸಾಕಿತ್ತು!
ವರ್ತಕನ ಮನೆಯ ಗೋಡೆ ಬಿದ್ದು, ಆತನ ಹೆಂಡತಿ ತೀರಿಕೊಳ್ಳುವುದಕ್ಕೆ, ಶಿಷ್ಯ ತಲೆಯ ಮೇಲೆ ಮಣ್ಣು ಬುಟ್ಟಿ ಹೊರಿಸಿದ್ದೇ ಕಾರಣ ಎಂದು ರಾಜಾಸ್ಥಾನದಲ್ಲಿ ನಿರ್ಧಾರವಾಯಿತು. ಇದಕ್ಕೆ ಶಿಕ್ಷೆಯಾಗಿ ಶಿಷ್ಯನ ತಲೆಯನ್ನೂ ಕಡಿಯಬೇಕು ಎಂದು ರಾಜ ತೀರ್ಮಾನ ನೀಡಿದ. ʻಅಯ್ಯೋ ದೇವರೆ! ಇದೆಂಥ ಆಪತ್ತಿನಲ್ಲಿ ಸಿಲುಕಿದೆ ನಾನು. ಈ ಊರು ಕ್ಷೇಮವಲ್ಲ ಎಂದು ಗುರುಗಳು ಮೊದಲೇ ಹೇಳಿದ್ದರಲ್ಲ. ಕೇಳಬೇಕಿತ್ತು ಅವರ ಮಾತನ್ನು. ಸುಮ್ಮನೆ ಪ್ರಾಣ ಕಳೆದುಕೊಳ್ಳಬೇಕಲ್ಲʼ ಎಂದು ಶೋಕಿಸುತ್ತಿದ್ದ ಶಿಷ್ಯನಿಗೆ ʻಆಪತ್ತಿನಲ್ಲಿ ನೆನೆʼ ಎಂಬ ಗುರುವಿನ ಮಾತು ನೆನಪಾಯಿತು. ಅಂತೆಯೇ ಮಾಡಿದ ಆತ. ಶಿಷ್ಯನನ್ನು ವಧಾಸ್ಥಾನಕ್ಕೆ ಎಳೆದೊಯ್ಯಲಾಯಿತು. ಅಲ್ಲಿ ಆತನಿಗೆ ಮೊದಲು ಎದುರಾದವನೇ ಗುರು!
ಆತನ ಬಳಿ ಬಂದ ಗುರು, ತಾನೇನು ಮಾಡುತ್ತೇನೋ ನೀನೂ ಅದನ್ನೇ ಮಾಡು ಎಂದಷ್ಟೇ ಹೇಳಿ, ʻನಿಲ್ಲಿಸಿ, ಈ ವಧೆಯನ್ನು ಈಗಲೇ ನಿಲ್ಲಿಸಿʼ ಎಂದು ಕೂಗಿದ. ಎಲ್ಲರೂ ಅಚ್ಚರಿಯಿಂದ ಗುರುವಿನತ್ತಲೇ ನೋಡಿದರು. ತಕ್ಷಣ ಶಿಷ್ಯನತ್ತ ತಿರುಗಿನ ಗುರುವು, ʻಪಾಪಿ! ನನಗೆ ಗೊತ್ತು ನಿನ್ನ ಕಿತಾಪತಿ. ಅದನ್ನು ತಡೆಯುವುದಕ್ಕಾಗಿಯೇ ಇಲ್ಲಿಗೆ ಬಂದವ ನಾನು. ನಾನಿರುವಂತೆ ಅದು ಹೇಗೆ ನೀನು ಗಲ್ಲಿಗೇರುತ್ತೀಯೇ! ಮೊದಲು ನಾನು, ನಂತರ ನೀನು- ತಿಳಿದುಕೊʼ ಎಂದು ಗದರಿದ. ಅದನ್ನೇ ಮಾಡುವಂತೆ ಮತ್ತೆ ಕಣ್ಸನ್ನೆಯಲ್ಲಿ ಶಿಷ್ಯನಿಗೂ ಹೇಳಿದ. ಗುರುವಿನ ಸನ್ನೆಗೆ ಚುರುಕಾದ ಶಿಷ್ಯ, ʻಅದೆಲ್ಲಾ ಸಾಧ್ಯವಿಲ್ಲ, ಮೊದಲು ನಾನು- ನಂತರ ನೀವುʼ ಎಂದ. ʻಮುಚ್ಚೋಬಾಯಿ! ನನ್ನೆದುರೇ ಮಾತಾಡುವಷ್ಟು ಧೈರ್ಯವೇನೋ ನಿನಗೆ? ನನಗಿಂತ ಮೊದಲು ಅದು ಹೇಗೆ ನಿನ್ನನ್ನು ಗಲ್ಲಿಗೆ ಹಾಕುತ್ತಾರೆ ನಾನೂ ನೋಡುತ್ತೇನೆʼ ಎನ್ನುತ್ತಾ, ಶಿಷ್ಯನ ಕೈ ಕೋಳವನ್ನು ಬಿಚ್ಚಿ ತಾನು ಹಾಕಿಕೊಳ್ಳಲು ಹವಣಿಸಿದ ಗುರು. ʻಸುಮ್ನಿರಿ ಗುರುಗಳೇ, ಇದು ನನ್ನ ಕೈಗೆ ಹಾಕಿದ್ದು. ಮುಟ್ಟಿದರೆ ಹುಟ್ಟಿಲ್ಲವೆನಿಸಿ ಬಿಡುತ್ತೇನೆʼ ಎಂದು ಅಬ್ಬರಿಸಿದ ಶಿಷ್ಯ. ಈಗಂತೂ ಅವರಿಬ್ಬರೂ ಹೊಡೆದಾಡುವ ಹಂತಕ್ಕೆ ಬಂದರು. ಇದೇನು ನಡೆಯುತ್ತಿದೆ ಎಂಬುದೇ ರಾಜ ಮತ್ತು ಮಂತ್ರಿಗೆ ಅರ್ಥವಾಗಲಿಲ್ಲ.
ಇಬ್ಬರನ್ನೂ ಕಾವಲು ಭಟರು ತಡೆದು ನಿಲ್ಲಿದರು. ಹೀಗೇಕೆ ಹೊಡೆದಾಡುತ್ತಿದ್ದೀರಿ ಎಂದು ಹೇಳಿದ ರಾಜ. ʻಮಹಾಸ್ವಾಮಿ, ನಿಮ್ಮಲ್ಲಿ ಮುಚ್ಚುಮರೆಯೇನು? ಜ್ಯೋತಿಷ್ಯ ಶಾಸ್ತ್ರವನ್ನೆಲ್ಲಾ ಬಲ್ಲ ಗುರು ನಾನು. ಇಂದಿನ ಈ ವಧೆಯ ಮುಹೂರ್ತ ಬಹಳ ಒಳ್ಳೆಯದು. ಮೊದಲಿಗೆ ಗಲ್ಲಿಗೇರುವವರು ಈ ಊರಿನ ರಾಜನಾಗಿ ಮತ್ತೆ ಹುಟ್ಟುತ್ತಾರೆ. ನಂತರ ಗಲ್ಲಿಗೇರುವವರು ಮಂತ್ರಿಯಾಗಿ ಇಲ್ಲಿಯೇ ಹುಟ್ಟುತ್ತಾರೆ. ನನಗಿದು ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗಿ ಮೊದಲು ನನ್ನನ್ನು ಗಲ್ಲಿಗೆ ಹಾಕಿ. ನಂತರ ಶಿಷ್ಯನನ್ನು ಹಾಕಿ. ನನಗೆ ಇಲ್ಲಿನ ರಾಜನಾಗಬೇಕೆಂದು ಆಸೆಯಿದೆʼ ಎಂದು ಭಿನ್ನವಿಸಿಕೊಂಡ.
ರಾಜ-ಮಂತ್ರಿ ಇಬ್ಬರೂ ಮುಖ-ಮುಖ ನೋಡಿಕೊಂಡರು. ತಕ್ಷಣ ಗಲ್ಲುಗಂಬದತ್ತ ಓಡಿದ ರಾಜ; ತಡ ಮಾಡದೆ ಮಂತ್ರಿಯೂ ಅವನ ಬೆನ್ನಿಗೆ ಹೋದ. ಇಬ್ಬರೂ ಸ್ಪರ್ಧೆಯ ಮೇಲೆ ನೇಣಿನ ಕುಣಿಕೆಗೆ ಕೊರಳು ನೀಡಿದರು. ಅಲ್ಲಿಗೆ ಮೂರ್ಖ ರಾಜ ಮತ್ತು ಪೆದ್ದ ಮಂತ್ರಿ ಆಡಳಿತ ಕೊನೆಗೊಂಡಿತು. ಗುರು-ಶಿಷ್ಯರೇ ಆ ಊರಿನ ರಾಜ-ಮಂತ್ರಿಗಳಾಗಿ ನೇಮಕಗೊಂಡರು. ಲೋಕದ ನಿಯಮದಂತೆ ಊರಿನಲ್ಲಿ ಬೆಳಗು-ಸಂಜೆ ಆಗತೊಡಗಿತು. ಊರಿನ ಜನ ನೆಮ್ಮದಿಯಿಂದ ಬದುಕಿದರು.
ಇದನ್ನೂ ಓದಿ: ಮಕ್ಕಳ ಕಥೆ: ಚತುರ ನರಿ ಮತ್ತು ಪೆದ್ದ ಹೆಗ್ಗಣ
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಚತುರ ನರಿ ಮತ್ತು ಪೆದ್ದ ಹೆಗ್ಗಣ
ನರಿಯ ಮನೆಯಿಂದ ಬಾವಿ ದೂರದಲ್ಲಿತ್ತು. ಕುಡಿಯುವ ನೀರು ತರಲು ತ್ರಾಸವಾಗುತ್ತಿತ್ತು. ಮನೆ ಪಕ್ಕದಲ್ಲಿಯೇ ಬಾವಿ ತೋಡತೊಡಗಿತು. ಅದೇನು ಸುಲಭವೇ? ಆದರೂ ಜಾಣ ನರಿ ಅದನ್ನು ಸುಲಭ ಮಾಡಿಕೊಂಡಿತು. ಹೇಗೆ? ಓದಿ, ಈ ಮಕ್ಕಳ ಕಥೆ.
ಈ ಕಥೆಯನ್ನು ಇಲ್ಲಿ ಓದಿ:
ನರಿಯೊಂದು ಹೊಸದಾಗಿ ಮನೆ ಕಟ್ಟಿಕೊಂಡಿತ್ತು. ಮನೆ ಕಟ್ಟುವುದಕ್ಕಾಗಿ ಪ್ರಶಸ್ತವಾದ ಸ್ಥಳವನ್ನೂ ಅದು ಆರಿಸಿಕೊಂಡಿದ್ದರಿಂದ ಮನೆಯೊಳಗೆ ಗಾಳಿ, ಬೆಳಕು ಎಲ್ಲವೂ ಚೆನ್ನಾಗಿತ್ತು- ನೀರೊಂದು ಹೊರತು ಪಡಿಸಿ. ಹೌದು, ನೀರು ತರುವುದಕ್ಕೆ ಬಿಂದಿಗೆ ಹಿಡಿದು ಅರ್ಧ ಮೈಲು ದೂರ ನಡೆಯಬೇಕಿತ್ತು ನರಿಗೆ. ಹೋಗುವಾಗ ಖಾಲಿ ಬಿಂದಿಗೆ ಹಿಡಿದು ನಡೆದುಬಿಡುವುದು ಕಷ್ಟವಲ್ಲ. ಬರುವಾಗ ತುಂಬಿದ ಬಿಂದಿಗೆ ಹೊತ್ತು ತರಬೇಕಲ್ಲ! ಛೇ… ಈ ನೀರಿನ ಸಮಸ್ಯೆಗೆ ಏನು ಮಾಡುವುದು ಎಂದು ಯೋಚಿಸಿತು ನರಿ. ಅದಕ್ಕೊಂದು ಉಪಾಯ ಹೊಳೆಯಿತು- ಬಾವಿ ತೋಡಿದರಾಯ್ತು!
ಹಾರೆ, ಗುದ್ದಲಿಯಂಥ ಸಲಕರಣೆಗಳನ್ನೆಲ್ಲಾ ತಂದ ನರಿ, ಬಾವಿ ತೋಡುವ ಜಾಗವನ್ನೂ ಗುರುತು ಮಾಡಿಕೊಂಡಿತು. ಬೆಳಗಿನಿಂದ ಸಂಜೆಯವರೆಗೆ ತೋಡಿದರೂ, ಬಾವಿಯಲ್ಲ- ಚಿಕ್ಕದೊಂದು ಹೊಂಡವೂ ಸೃಷ್ಟಿಯಾಗಲಿಲ್ಲ. ಹಠ ಬಿಡದ ನರಿ, ಮಾರನೇ ದಿನ ಮತ್ತದರ ಮಾರನೇ ದಿನವೂ ಬಾವಿ ತೋಡಿತು. ಊಹುಂ, ಒಂದು ನರಿ ಮುಳುಗುವಷ್ಟು ಆಳವನ್ನೂ ತೋಡಲಾಗಲಿಲ್ಲ ಅದಕ್ಕೆ. ʻಈಗೇನಪ್ಪಾ ಮಾಡುವುದು? ಬಾವಿ ತೋಡಲೇ ಆಗುತ್ತಿಲ್ಲ. ಆದರೆ ನೀರಿಗಂತೂ ವ್ಯವಸ್ಥೆಯಾಗಬೇಕು. ದಿನವೂ ಅಷ್ಟು ದೂರದಿಂದ ನೀರು ಹೊತ್ತು ತರಲಾಗದು. ಅಥವಾ ಅದಕ್ಕಾಗಿ ಈ ಮನೆಯನ್ನು ಎತ್ತಿಕೊಂಡು ಹೋಗಿ ನದಿಯ ದಂಡೆಯ ಮೇಲೆ ಇಡುವುದೂ ಅಸಾಧ್ಯವಾದ ಮಾತು. ಏನು ಮಾಡ್ಲಿʼ ಎಂದು ಚಿಂತಿಸುತ್ತಾ ಕುಳಿತಿತ್ತು ನರಿ. ಆಗಲೇ ಅದರ ಕಣ್ಣಿಗೊಂದು ಹೆಗ್ಗಣ ಕಂಡಿತು.
ಏನನ್ನೋ ತುಂಬಾ ಗಡಿಬಿಡಿಯಿಂದ ಆ ಹೆಗ್ಗಣ ಹುಡುಕುತ್ತಿತ್ತು. ಒಮ್ಮೆ ಆಚೆ, ಮತ್ತೆ ಈಚೆ, ಹಿಂದೆ, ಮುಂದೆ- ತಲೆ ಕೆಳಗಾಗಿ ಉರುಳುತ್ತಿತ್ತು. ʻಏನಾಯ್ತು ಹೆಗ್ಗಣ್ಣಾ? ಯಾಕಿಂಗಾಡ್ತಿದ್ದೀಯ? ಏನಾದರೂ ಕಳೆದು ಹೋಯಿತಾ?ʼ ಕೇಳಿತು ನರಿ. ʻಹೌದು ನರಿಯಣ್ಣ. ಅಲ್ಲ, ಬೆಳಗಿನಿಂದ ನನ್ನ ಜೊತೆಗೇ ಇತ್ತಪ್ಪ. ಈಗ ನೋಡಿದರೆ ಇಲ್ಲ! ಎಲ್ಲಿ ಹುಡುಕಿದರೂ ಕಾಣಿಸ್ತಿಲ್ಲʼ ಎಂದು ಮತ್ತೆ ಹುಡುಕತೊಡಗಿತು ಹೆಗ್ಗಣ.
ʻಅದೇನು ಸರಿಯಾಗಿ ಹೇಳಬಾರದೇ ಹೆಗ್ಗಣ್ಣ. ಹುಡುಕೋದಕ್ಕೆ ಬೇಕಿದ್ರೆ ನಾನೂ ಸಹಾಯ ಮಾಡ್ತೀನಿʼ ಎಂದಿತು ನರಿ.
ʻಬೆಳಗಿನಿಂದ ನನ್ನ ಜೊತೆಗೇ ಇದ್ದ ನೆರಳು, ಈಗ ಸ್ವಲ್ಪ ಹೊತ್ತಿನಲ್ಲಿ ಕಳೆದುಹೋಯ್ತು! ಎಲ್ಲಿ ಹುಡುಕಿದರೂ ಸಿಗ್ತಿಲ್ಲ. ಅದಿಲ್ಲದೆ ಮನೆಗೆ ಹೋಗುವುದು ಹೇಗೆ ನರಿಯಣ್ಣಾ? ಬಿಟ್ಟು ಬಂದ್ರೆ ಅಮ್ಮ ಬೈತಾಳೆʼ ಎಂದು ಅಳು ಮುಖ ಮಾಡಿತು ಹೆಗ್ಗಣ. ಅದರ ಮಾತಿಗೆ ಮೊದಲಿಗೆ ನರಿಗೆ ನಗು ಬಂತು. ನಡುಮಧ್ಯಾಹ್ನದ ಹೊತ್ತಿನಲ್ಲಿ ನೆರಳು ಕಾಣುವುದಿಲ್ಲ ಎಂಬುದೂ ಈ ಹೆಗ್ಗಣಕ್ಕೆ ತಿಳಿಯಬಾರದೇ ಎಂದು ಯೋಚಿಸಿತು ನರಿ. ಆದರೆ ಅದರ ಮನದಲ್ಲೊಂದು ಉಪಾಯವೂ ಹೊಳೆಯಿತು.
ಇದನ್ನೂ ಓದಿ: ಮಕ್ಕಳ ಕಥೆ: ವರ್ತಕ ಮತ್ತು ಜಾಣ ಗಿಳಿ
ʻಅಯ್ಯೋ ಹೆಗ್ಗಣ್ಣಾ! ಅದನ್ನ ಅಷ್ಟೆಲ್ಲಾ ಹುಡುಕುತ್ತಾ ಇದ್ದೀಯ? ನೇರ ಬಂದು ನನ್ನನ್ನೇ ಕೇಳಿದ್ರೆ ಹೇಳಿರತಿದ್ದೆ. ನೋಡು, ಅಲ್ಲೊಂದು ಹೊಂಡ ಕಾಣ್ತಿದೆಯಲ್ವಾ? ಅದರ ಒಳಗೆ ಬಿದ್ದೋಗಿದೆ ನಿನ್ನ ನೆರಳು. ಆ ಹೊಂಡ ಪೂರ್ತಿ ಅಗೆದು ಅದನ್ನು ಹೊರಗೆ ತೆಗೀಬೇಕು. ಬೇಕಿದ್ರೆ ನಾನೂ ಸಹಾಯ ಮಾಡ್ತೀನಿ ನಿಂಗೆ. ಬಾʼ ಎನ್ನುತ್ತಾ ತಾನು ಬಾವಿ ತೋಡಲು ಪ್ರಯತ್ನಿಸುತ್ತಿದ್ದ ಹೊಂಡದ ಬಳಿಗೆ ಹೆಗ್ಗಣವನ್ನು ನರಿ ಕರೆದೊಯ್ದಿತು.
ಹಿಂದೆ ಮುಂದೆ ಆಲೋಚನೆ ಮಾಡದ ಹೆಗ್ಗಣ, ನೇರ ಗುಂಡಿಯೊಳಗೆ ಬಿತ್ತು! ಪುರುಸೊತ್ತಿಲ್ಲದಂತೆ ಗುಂಡಿಯನ್ನು ಆಳಕ್ಕೆ ತೋಡತೊಡಗಿತು. ನರಿಯೂ ತನ್ನ ಗುದ್ದಲಿಯೊಂದಿಗೆ ಬಂತು. ಎರಡೂ ಸೇರಿ ತೋಡ್ತಾ ತೋಡ್ತಾ, ಮಧ್ಯಾಹ್ನದಿಂದ ಸಂಜೆಯಾಗುತ್ತಾ ಬಂತು. ಬಾವಿ ಸುಮಾರು ಆಳಕ್ಕೆ ಹೋಗಿತ್ತು.
ʻಹೆಗ್ಗಣ್ಣಾ, ನೀನೀಗ ಈ ಬಾವಿಯ ಮೇಲೆ ಹೋದರೆ ಅಲ್ಲಿ ಸಿಗುತ್ತದೆ ನಿನಗೆ ನೆರಳು. ಬೇಕಿದ್ರೆ ನೀನೇ ನೋಡುʼ ಎನ್ನುತ್ತಾ ಬಾವಿಯ ಮೇಲೆ ಹತ್ತಿತು ನರಿ. ಹೆಗ್ಗಣವೂ ಮೇಲೆ ಬಂತು. ನೋಡಿದರೆ- ಹೌದು! ನೆರಳು ಮತ್ತೆ ತನ್ನ ಪಕ್ಕದಲ್ಲೇ ಇದೆ. ತನ್ನ ನೆರಳು ತನಗೆ ಮರಳಿ ದೊರಕಿದ್ದಕ್ಕೆ ಹೆಗ್ಗಣದ ಸಂತೋಷಕ್ಕೆ ಪಾರವೇ ಇಲ್ಲ. ʻಧನ್ಯವಾದಗಳು ನರಿಯಣ್ಣ. ನಿನ್ನಿಂದಾಗಿ ಇವತ್ತು ನಮ್ಮಮ್ಮನತ್ರ ಒದೆ ತಿನ್ನೋದು ಉಳೀತುʼ ಎನ್ನುತ್ತಾ ಖುಷಿಯಿಂದ ಮನೆಗೆ ತೆರಳಿತು ಹೆಗ್ಗಣ.
ಮಾರನೇ ದಿನಕ್ಕೆ ನರಿ ತಾನೊಬ್ಬನೇ ಬಾವಿಯನ್ನು ಇನ್ನಷ್ಟು ಆಳಕ್ಕೆ ತೋಡುವಷ್ಟರಲ್ಲಿ ನೀರು ಬಂತು. ನೀರಿಗಾಗಿ ದೂರ ಹೋಗುವುದು ತಪ್ಪಿದ್ದಕ್ಕೆ ನೆಮ್ಮದಿಯಿಂದ ನರಿ ತನ್ನ ಮನೆಯಲ್ಲಿ ವಾಸಮಾಡತೊಡಗಿತು.
ಇದನ್ನೂ ಓದಿ: ಮಕ್ಕಳ ಕಥೆ: ಧೈರ್ಯವಂತ ರಾಜಕುಮಾರಿ
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ವರ್ತಕ ಮತ್ತು ಜಾಣ ಗಿಳಿ
ಪರ್ಷಿಯಾ ದೇಶದ ಒಬ್ಬ ವರ್ತಕನ ಬಳಿ ಭಾರತದ ಒಂದು ಗಿಳಿಯಿತ್ತು. ಅದು ಭಾರತದಲ್ಲಿದ್ದ ತನ್ನ ಸೋದರ ಗಿಳಿಗೆ ವರ್ತಕನ ಮೂಲಕ ಒಂದು ಸಂದೇಶ ಕಳಿಸಿತು. ಅದೇನು? ಮುಂದೇನಾಯಿತು? ಓದಿ, ಈ ಮಕ್ಕಳ ಕಥೆ.
ಈ ಕಥೆಯನ್ನು ಇಲ್ಲಿ ಕೇಳಿ:
ಪರ್ಷಿಯಾ ದೇಶದಲ್ಲಿ ಒಬ್ಬ ಶ್ರೀಮಂತ ವರ್ತಕನಿದ್ದ. ಆತನಿಗೆ ಒಂದು ಮುದ್ದಾದ ಹಸಿರು ಬಣ್ಣದ ಗಿಳಿಯನ್ನು ಯಾರೋ ಉಡುಗೊರೆಯಾಗಿ ಕೊಟ್ಟರು. ಚಟಪಟನೆ ಅರಳು ಹುರಿದಂತೆ ಮಾತಾಡುತ್ತಿದ್ದ ಆ ಗಿಳಿ, ಮನೆಗೆ ಬರುತ್ತಿದ್ದ ಹಾಗೆ ಅವನಿಗೆ ತುಂಬ ಪ್ರಿಯವೆನಿಸಿತು. ಅದಕ್ಕಾಗಿ ಒಂದು ಬಂಗಾರದ ಪಂಜರವನ್ನು ಮಾಡಿಸಿ, ದಿನವೂ ಅದಕ್ಕೆ ಮೆಣಸಿನ ಕಾಯಿ ತಿನ್ನಿಸುತ್ತಿದ್ದ. ಮನೆಯ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದ ಆ ಗಿಳಿ, ಕೆಲವೊಮ್ಮೆ ತನ್ನಷ್ಟಕ್ಕೇ ಹಾಡುತ್ತಿತ್ತು. ಆದರೆ ಒಮ್ಮೊಮ್ಮೆ ಎಷ್ಟು ಮಾತಾಡಿಸಿದರೂ ಪ್ರತಿಕ್ರಿಯೆ ನೀಡದೆ ಸುಮ್ಮನಿರುತ್ತಿತ್ತು.
ಒಂದು ಬಾರಿ ಭಾರತಕ್ಕೆ ಪ್ರಯಾಣ ಮಾಡುವ ಸಂದರ್ಭ ವರ್ತಕನ ಪಾಲಿಗೆ ಬಂತು. ʻಭಾರತದಿಂದ ನಿಮಗೆಲ್ಲ ಏನು ತರಲಿ?ʼ ಎಂದು ಮನೆಮಂದಿಯನ್ನೆಲ್ಲಾ ಕೇಳಿದ ವರ್ತಕ. ʻನನಗೆ ಅಲ್ಲಿಂದ ಚಂದದ ರೇಷ್ಮೆ ವಸ್ತ್ರ ತನ್ನಿʼ ಎಂದು ಕೇಳಿದಳು ಹೆಂಡತಿ. ʻನನಗೆ ಸುಂದರ ಆಟಿಕೆ ಬೇಕುʼ ಎಂದಳು ಮಗಳು. ಸುಮ್ಮನೆ ಎಲ್ಲರ ಮಾತು ಕೇಳುತ್ತಿದ್ದ ಗಿಳಿಯತ್ತ ತಿರುಗಿ, ʻನಿನಗೇನು ಬೇಕು?ʼ ಕೇಳಿದ ವರ್ತಕ.
“ಭಾರತದಲ್ಲಿ ನಿಮಗೆ ಹಸಿರು ಗಿಳಿಗಳು ಕಂಡರೆ, ಅವರ ಬಳಿ ಹೋಗಿ ʼನಾನು ಇಲ್ಲಿದ್ದೇನೆ ಮತ್ತು ಚಿನ್ನದ ಪಂಜರದಲ್ಲಿ ಒಬ್ಬಳೇ ಇದ್ದೇನೆʼ ಎಂದು ತಿಳಿಸಿ. ಅಷ್ಟು ಹೇಳಿದರೆ ಸಾಕು” ಎಂದಿತು ಗಿಳಿ. ವರ್ತಕ ಭಾರತಕ್ಕೆ ಪ್ರಯಾಣ ಬೆಳೆಸಿದ.
ಭಾರತದಲ್ಲಿನ ತನ್ನೆಲ್ಲಾ ಕೆಲಸಗಳನ್ನು ಮುಗಿಸಿದ ಮೇಲೆ, ಮಡದಿ ಮತ್ತು ಮಗಳು ಕೇಳಿದ ವಸ್ತುಗಳನ್ನೆಲ್ಲಾ ಖರೀದಿಸಿದ ಆತ. ಗಿಳಿಯ ಕೋರಿಕೆಯಂತೆ ಸಮೀಪದ ಉದ್ಯಾನವನಕ್ಕೆ ತೆರಳಿದ. ಅಲ್ಲಿ ಹಸಿರು ಗಿಳಿಗಳ ಹಿಂಡೊಂದು ಕಲರವ ಮಾಡುತ್ತಿತ್ತು. ಅವುಗಳ ಬಳಿಗೆ ತೆರಳಿದ ವರ್ತಕ, “ಗಿಳಿಗಳೇ, ನಿಮ್ಮ ಸಹೋದರಿ ಗಿಳಿಯಿಂದ ಸಂದೇಶವೊಂದನ್ನು ನಾನು ತಂದಿದ್ದೇನೆ” ಎಂದ. ಆಗ ಎಲ್ಲಾ ಗಿಳಿಗಳೂ ತಮ್ಮ ಗಲಾಟೆ ಬಿಟ್ಟು ಆತನ ಮಾತಿನೆಡೆಗೆ ಗಮನ ನೀಡಿದವು.
“ನಿಮ್ಮ ಜೊತೆಗಾರ್ತಿಯನ್ನು ಭಾರತದಲ್ಲಿ ಹಿಡಿದು ಪರ್ಷಿಯಾಗೆ ಕರೆದೊಯ್ಯಲಾಗಿದೆ. ಅವಳೀಗ ನನ್ನ ಜೊತೆ ಇದ್ದಾಳೆ ಮತ್ತು ಕ್ಷೇಮವಾಗಿದ್ದಾಳೆ. ಅವಳೊಂದು ಸುಂದರವಾದ ಬಂಗಾರ ಪಂಜರದಲ್ಲಿ ಒಬ್ಬಳೇ ಹಾಡುತ್ತಿರುತ್ತಾಳೆ” ಎಂದೆಲ್ಲಾ ವಿವರಿಸಿದ ವರ್ತಕ.
ಅದನ್ನು ಕೇಳುತ್ತಿದ್ದಂತೆ ಎಲ್ಲಾ ಗಿಳಿಗಳೂ ಸಂತೋಷಪಟ್ಟರೆ, ಒಂದು ಗಿಳಿ ಮಾತ್ರ ಗಡಗಡನೇ ನಡುಗಿ, ಗಿರ್ರನೆ ತಿರುಗಿ ಮಗುಚಿ ಬಿತ್ತು. ಉಳಿದೆಲ್ಲಾ ಗಿಳಿಗಳೂ ಶೋಕಿಸತೊಡಗಿದವು. ʻಛೇ! ಇವರ ಜೊತೆಗಾತಿ ಕ್ಷೇಮವಾಗಿದ್ದಾಳೆ ಎಂಬ ಸುದ್ದಿಯನ್ನು ಮಾತ್ರವೇ ನಾ ಹೇಳಿದ್ದು. ಅಷ್ಟಕ್ಕೇ ಈ ಗಿಳಿ ಸತ್ತೇ ಹೋಯಿತಲ್ಲಾʼ ಎಂದು ಬೇಸರಿಸಿದ ವರ್ತಕ. ಆದರೆ ಏನು ಮಾಡುವುದಕ್ಕೂ ತೋಚದೆ ಅಲ್ಲಿಂದ ಮರಳಿದ.
ಮನೆಗೆ ಹಿಂದಿರುಗಿದ ಆತ ತನ್ನ ಹೆಂಡತಿ ಮತ್ತು ಮಗಳಿಗೆ ಅವರ ಉಡುಗೊರೆಗಳನ್ನು ನೀಡಿದ. ತಮ್ಮ ಉಡುಗೊರೆಗಳನ್ನು ಕಂಡು ಅವರಿಗೆಲ್ಲಾ ಸಂತೋಷವಾಯಿತು. ʻನನ್ನ ಸಂದೇಶ ತಲುಪಿಸಿದಿರಾ?ʼ ಕೇಳಿತು ಗಿಳಿ. “ಹೌದು. ಆದರೆ ನನ್ನ ಮಾತು ಕೇಳಿದ ತಕ್ಷಣ ಅಲ್ಲಿದ್ದ ಗಿಳಿಯೊಂದು ಗಡಗಡನೇ ನಡುಗಿ, ಗಿರ್ರನೆ ತಿರುಗಿ ಮಗುಚಿ ಬಿತ್ತು. ಬಹುಶಃ ಸತ್ತೇ ಹೋಗಿರಬೇಕು ಅದು. ಆದರೆ ಅದಕ್ಕೆ ಆಘಾತವಾಗುವಂಥ ಏನನ್ನೂ ನಾನು ಹೇಳಲಿಲ್ಲ” ಎಂದು ಸಪ್ಪೆ ಮುಖ ಮಾಡಿದ ವರ್ತಕ.
ಇದನ್ನೂ ಓದಿ: ಮಕ್ಕಳ ಕಥೆ: ಧೈರ್ಯವಂತ ರಾಜಕುಮಾರಿ
ಆತನ ಈ ಮಾತಿಗೆ ಕ್ಷಣಕಾಲ ಗಿಳಿ ಮೌನವಾಯಿತು. ನಂತರ ಇದ್ದಕ್ಕಿದ್ದಂತೆ ಗಡಗಡನೇ ನಡುಗಿ, ಗಿರ್ರನೆ ತಿರುಗಿ ಮಗುಚಿ ಬಿತ್ತು. ಈಗಂತೂ ವರ್ತಕನಿಗೆ ನಿಜಕ್ಕೂ ಆಘಾತವಾಯಿತು. ʻಅರೆ! ಇದೇನಾಗುತ್ತಿದೆ? ಅಂಥದ್ದೇನು ಹೇಳಿದೆ ನಾನು!ʼ ಎಂದು ಗಾಬರಿಗೊಂಡು ಗಿಳಿಯನ್ನು ಪಂಜರದಿಂದ ಹೊರತೆಗೆದ. ಗಿಳಿ ನಿಶ್ಚಲವಾಗಿತ್ತು. ಅದನ್ನು ಮಣ್ಣು ಮಾಡೋಣ ಎಂದು ಗಿಳಿಯನ್ನು ತನ್ನ ಉದ್ಯಾನವನಕ್ಕೆ ತಂದು, ಅದನ್ನೊಂದು ಕಲ್ಲು ಬೆಂಚಿನ ಮೇಲಿಟ್ಟು ಗುಂಡಿ ತೋಡಿದ. ಆ ಗುಂಡಿಯೊಳಗೆ ಹಾಕುವುದಕ್ಕೆಂದು ನೋಡಿದರೆ, ಗಿಳಿಯಿಲ್ಲ! ಅದಾಗಲೇ ಹಾರಿ ಹೋಗಿ ಸಮೀಪದ ಮರದ ಮೇಲೆ ಕುಳಿತುಕೊಂಡಿತ್ತು. ಗಿಳಿ ಬದುಕಿರುವುದನ್ನು ಕಂಡು ವರ್ತಕನಿಗೆ ಸಂತೋಷವಾಯಿತು. ʻನಿನಗೇನಾಗಿತ್ತು? ಯಾಕೆ ಹಾಗೆ ಬಿದ್ದೆ?ʼ ಎಂದಾತ ಗಿಳಿಯನ್ನು ಕೇಳಿದ.
“ನನಗೇನೂ ಆಗಿರಲಿಲ್ಲ. ಆದರೆ ಪಂಜರದ ಬದುಕು ನನಗೆ ಬೇಕಿರಲಿಲ್ಲ. ಅದಕ್ಕಾಗಿಯೇ ಭಾರತದಲ್ಲಿರುವ ನನ್ನ ಜೊತೆಗಾರರಿಗೆ ಸಂದೇಶ ಕಳುಹಿಸಿದ್ದೆ. ಆ ಗಿಳಿಯು ತನ್ನ ವರ್ತನೆಯ ಮೂಲಕ ನನಗೆ ಮರಳಿ ಸಂದೇಶವನ್ನು ಕಳುಹಿಸಿತ್ತು. ಅದು ಹೇಳಿದಂತೆಯೇ ಮಾಡಿದ್ದಕ್ಕೆ ನಿನ್ನ ಪಂಜರದಿಂದ ಹೊರಬರಲು ನನಗೆ ಸಾಧ್ಯವಾಯಿತು. ಚಿನ್ನದ್ದಾದರೂ ಅದು ಪಂಜರವೇ ತಾನೆ! ನನಗೆ ನೀಲಾಕಾಶವೇ ಮನೆ” ಎಂದಿತು ಗಿಳಿ.
“ನೀನು ಪಂಜರದಲ್ಲಿ ಬಂಧಿಯಾಗಿದ್ದೆ ಎಂಬುದೇ ನನಗೆ ಅರಿವಾಗಲಿಲ್ಲ. ಆಗಲಿ, ಹಾರು ನಭಕ್ಕೆ. ನನಗೇನೂ ಬೇಸರವಿಲ್ಲ. ಆಗಾಗ ಬಂದು ಮಾತಾಡಿ ಹೋಗು” ಎನ್ನುತ್ತಾ ರೆಕ್ಕೆಬಿಚ್ಚಿದ್ದ ಗಿಳಿಯತ್ತ ಕೈಬೀಸಿದ ವರ್ತಕ.
ಇದನ್ನೂ ಓದಿ: ಮಕ್ಕಳ ಕಥೆ: ಭೂಮಿಯಲ್ಲಿ ಸಿಕ್ಕಿದ ನಿಧಿ ರಕ್ಷಿಸಿಕೊಂಡ ಬಡವ
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್10 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!