Site icon Vistara News

ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ- ಭಾಗ 2

guru shisya

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/03/ShishyaKalitaPaata-Part2-1.mp3

ಗುರುವಿನಿಂದ ಬೀಳ್ಕೊಂಡ ಶಿಷ್ಯನಿಗೆ ಆ ಊರಿನಲ್ಲಿ ಪುಷ್ಕಳವಾಗಿ ಭೋಜನ ಸಿಗುತಿತ್ತು. ಎಲ್ಲವೂ ಅಗ್ಗ, ಎಲ್ಲರೂ ಕೈ ಬಿಚ್ಚಿ ದಾನ ಮಾಡುವವರೇ. ಹಾಗಾಗಿ ದೇಹಕ್ಕೆ ಹೆಚ್ಚು ಶ್ರಮವಿಲ್ಲದೆ ತಿಂದೂ ಉಂಡೂ, ಕಾಷ್ಠದಂತಿದ್ದ ದೇಹ ಕೆಲವೇ ದಿನಗಳಲ್ಲಿ ದಷ್ಟಪುಷ್ಟವಾಯಿತು.

ಈ ಕಥೆಯ ಮೊದಲ ಭಾಗವನ್ನು ಇಲ್ಲಿ ಓದಿ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ (ಭಾಗ 1)

ಮಳೆಗಾಲ ಸಮೀಪಿಸುವುದಕ್ಕೆ ಕೆಲವೇ ದಿನಗಳು ಬಾಕಿದ್ದವು. ಇನ್ನು ನಾಲ್ಕಾರು ದಿನಗಳಲ್ಲಿ ಆ ಊರಿನಿಂದ ಹೊರಡಬೇಕಿತ್ತು ಆತನಿಗೆ. ಅಷ್ಟರಲ್ಲಿ ಅದೊಂದು ದಿನ ಭಾರೀ ಮಳೆ ಬಂತು. ಮಳೆಯ ರಭಸಕ್ಕೆ ಆ ಊರಿನ ಶ್ರೀಮಂತ ವಣಿಕನೊಬ್ಬನ ಮನೆಯ ಗೋಡೆ ಕುಸಿದು ಬಿದ್ದು, ಆತನ ಮಡದಿ ತೀರಿಕೊಂಡಳು. ತನ್ನ ಮನೆ ಕಟ್ಟಿದ ಮೇಸ್ತ್ರಿ ಸರಿಯಾಗಿ ಕೆಲಸ ಮಾಡದೆ ಇಂಥ ಅನಾಹುತವಾಯಿತು ಎಂದು ಆ ವರ್ತಕ ಊರಿನ ರಾಜನಲ್ಲಿ ದೂರಿತ್ತ. ವಿಷಯದ ವಿಚಾರಣೆ ಮಾಡುತ್ತಿದ್ದ ಮಂತ್ರಿ, ಆ ಮೇಸ್ತ್ರಿಯನ್ನು ಕರೆಸಿದ. ʻಮಹಾಸ್ವಾಮಿ, ಇದರಲ್ಲಿ ನನ್ನದೇನೂ ತಪ್ಪಿಲ್ಲ, ನಾನು ಸರಿಯಾಗೇ ಮನೆ ಕಟ್ಟಿದ್ದೇನೆ, ಇಟ್ಟಿಗೆಯೇ ಚನ್ನಾಗಿರಲಿಲ್ಲʼ ಎಂದ ಮೇಸ್ತ್ರಿ. ಇಟ್ಟಿಗೆ ಭಟ್ಟಿಯವನನ್ನು ಕರೆಸಲಾಯಿತು. ʻಇಲ್ಲಪ್ಪ, ನನ್ನ ಭಟ್ಟಿಯ ಇಟ್ಟಿಗೆಯಲ್ಲಿ ಯಾವುದೇ ದೋಷವಿಲ್ಲ. ನಾನು ಸರಿಯಾಗಿಯೇ ಇಟ್ಟಿಗೆ ಮಾಡಿದ್ದೇನೆ. ಇದಕ್ಕೆ ತಂದ ಮಣ್ಣು ಸರಿಯಾಗಿರಲಿಲ್ಲʼ ಎಂದ ಭಟ್ಟಿಯವ.

ಮಣ್ಣು ತಂದ ವ್ಯಕ್ತಿಯನ್ನು ಕರೆಸಲಾಯಿತು. ʻಮಹಾಸ್ವಾಮಿ, ನಾನು ಮಣ್ಣು ಸರಿಯಾಗಿಯೇ ತಂದಿದ್ದೇನೆ. ಊರಾಚೆಯ ದಿಬ್ಬದಿಂದ ಆ ದಿನ ಮಣ್ಣು ಹೊರುವಾಗ, ಮಣ್ಣಿಯ ಬುಟ್ಟಿಯನ್ನು ತಲೆ ಮೇಲೆ ಇರಿಸುವುದಕ್ಕೆಂದು ಅಲ್ಲೇ ಆಲದ ಮರದ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಸಹಾಯಕ್ಕೆ ಕರೆದಿದ್ದೆ. ಅವನಿಂದಲೇ ಇದೆಲ್ಲಾ ಆಗಿದ್ದುʼ ಎಂದ ಮಣ್ಣು ತಂದವ. ಊರಾಚೆಯ ಆಲದ ಮರದ ಕೆಳಗೆ ಮಲಗಿದ್ದ ಶಿಷ್ಯ ಆತನಿಗೆ ಮಣ್ಣು ಹೊರುವುದಕ್ಕೆ ಸಹಾಯ ಮಾಡಿದ್ದು ನಿಜವಾಗಿತ್ತು. ಆದರೆ ಎಲ್ಲಿಂದೆಲ್ಲಿಯ ಸಂಬಂಧ!

ಶಿಷ್ಯನನ್ನು ಎಳೆದೊಯ್ದರು ರಾಜನ ಭಟರು. ರಾಜನ ಆಸ್ಥಾನಕ್ಕೆ ತನ್ನನ್ನು ಯಾಕಾಗಿ ಎಳೆದೊಯ್ಯುತ್ತಿದ್ದಾರೆ, ವಿಷಯವೇನು ಎಂಬುದೇ ಶಿಷ್ಯನಿಗೆ ಗೊತ್ತಿರಲಿಲ್ಲ. ಶಿಷ್ಯನನ್ನು ಕಾಣುತ್ತಿದ್ದಂತೆ, ʻಇವನೇ ಆ ದಿನ ನನ್ನ ತಲೆ ಮೇಲೆ ಮಣ್ಣಾಕಿದ್ದು!ʼ ಎಂದು ಕೂಗಿದ ಮಣ್ಣು ಹೊರುವವ. ʻಏಯ್‌ ಯುವಕ, ಈ ವ್ಯಕ್ತಿಯ ತಲೆಗೆ ಮಣ್ಣಿನ ಬುಟ್ಟಿ ಹೊರಿಸಿದ್ದು ನೀನೆಯೋ?ʼ ಕೇಳಿದ ಮಂತ್ರಿ. ʻಹೌದು ಮಹಾಸ್ವಾಮಿ, ಬುಟ್ಟಿ ಭಾರವಿದೆ. ಸ್ವಲ್ಪ ಎತ್ತಿ ತಲೆ ಮೇಲಿಟ್ಟು ಕೊಡಿ ಎಂದು ಈತನೇ ನನ್ನನ್ನು ಕೇಳಿದ್ದʼ ಎಂದು ನಿಜವನ್ನೇ ಹೇಳಿದ ಶಿಷ್ಯ. ಕೆಲಸ ಕೆಡುವುದಕ್ಕೆ ಅಷ್ಟು ಸಾಕಿತ್ತು!

ವರ್ತಕನ ಮನೆಯ ಗೋಡೆ ಬಿದ್ದು, ಆತನ ಹೆಂಡತಿ ತೀರಿಕೊಳ್ಳುವುದಕ್ಕೆ, ಶಿಷ್ಯ ತಲೆಯ ಮೇಲೆ ಮಣ್ಣು ಬುಟ್ಟಿ ಹೊರಿಸಿದ್ದೇ ಕಾರಣ ಎಂದು ರಾಜಾಸ್ಥಾನದಲ್ಲಿ ನಿರ್ಧಾರವಾಯಿತು. ಇದಕ್ಕೆ ಶಿಕ್ಷೆಯಾಗಿ ಶಿಷ್ಯನ ತಲೆಯನ್ನೂ ಕಡಿಯಬೇಕು ಎಂದು ರಾಜ ತೀರ್ಮಾನ ನೀಡಿದ. ʻಅಯ್ಯೋ ದೇವರೆ! ಇದೆಂಥ ಆಪತ್ತಿನಲ್ಲಿ ಸಿಲುಕಿದೆ ನಾನು. ಈ ಊರು ಕ್ಷೇಮವಲ್ಲ ಎಂದು ಗುರುಗಳು ಮೊದಲೇ ಹೇಳಿದ್ದರಲ್ಲ. ಕೇಳಬೇಕಿತ್ತು ಅವರ ಮಾತನ್ನು. ಸುಮ್ಮನೆ ಪ್ರಾಣ ಕಳೆದುಕೊಳ್ಳಬೇಕಲ್ಲʼ ಎಂದು ಶೋಕಿಸುತ್ತಿದ್ದ ಶಿಷ್ಯನಿಗೆ ʻಆಪತ್ತಿನಲ್ಲಿ ನೆನೆʼ ಎಂಬ ಗುರುವಿನ ಮಾತು ನೆನಪಾಯಿತು. ಅಂತೆಯೇ ಮಾಡಿದ ಆತ. ಶಿಷ್ಯನನ್ನು ವಧಾಸ್ಥಾನಕ್ಕೆ ಎಳೆದೊಯ್ಯಲಾಯಿತು. ಅಲ್ಲಿ ಆತನಿಗೆ ಮೊದಲು ಎದುರಾದವನೇ ಗುರು!

ಆತನ ಬಳಿ ಬಂದ ಗುರು, ತಾನೇನು ಮಾಡುತ್ತೇನೋ ನೀನೂ ಅದನ್ನೇ ಮಾಡು ಎಂದಷ್ಟೇ ಹೇಳಿ, ʻನಿಲ್ಲಿಸಿ, ಈ ವಧೆಯನ್ನು ಈಗಲೇ ನಿಲ್ಲಿಸಿʼ ಎಂದು ಕೂಗಿದ. ಎಲ್ಲರೂ ಅಚ್ಚರಿಯಿಂದ ಗುರುವಿನತ್ತಲೇ ನೋಡಿದರು. ತಕ್ಷಣ ಶಿಷ್ಯನತ್ತ ತಿರುಗಿನ ಗುರುವು, ʻಪಾಪಿ! ನನಗೆ ಗೊತ್ತು ನಿನ್ನ ಕಿತಾಪತಿ. ಅದನ್ನು ತಡೆಯುವುದಕ್ಕಾಗಿಯೇ ಇಲ್ಲಿಗೆ ಬಂದವ ನಾನು. ನಾನಿರುವಂತೆ ಅದು ಹೇಗೆ ನೀನು ಗಲ್ಲಿಗೇರುತ್ತೀಯೇ! ಮೊದಲು ನಾನು, ನಂತರ ನೀನು- ತಿಳಿದುಕೊʼ ಎಂದು ಗದರಿದ. ಅದನ್ನೇ ಮಾಡುವಂತೆ ಮತ್ತೆ ಕಣ್ಸನ್ನೆಯಲ್ಲಿ ಶಿಷ್ಯನಿಗೂ ಹೇಳಿದ. ಗುರುವಿನ ಸನ್ನೆಗೆ ಚುರುಕಾದ ಶಿಷ್ಯ, ʻಅದೆಲ್ಲಾ ಸಾಧ್ಯವಿಲ್ಲ, ಮೊದಲು ನಾನು- ನಂತರ ನೀವುʼ ಎಂದ. ʻಮುಚ್ಚೋಬಾಯಿ! ನನ್ನೆದುರೇ ಮಾತಾಡುವಷ್ಟು ಧೈರ್ಯವೇನೋ ನಿನಗೆ? ನನಗಿಂತ ಮೊದಲು ಅದು ಹೇಗೆ ನಿನ್ನನ್ನು ಗಲ್ಲಿಗೆ ಹಾಕುತ್ತಾರೆ ನಾನೂ ನೋಡುತ್ತೇನೆʼ ಎನ್ನುತ್ತಾ, ಶಿಷ್ಯನ ಕೈ ಕೋಳವನ್ನು ಬಿಚ್ಚಿ ತಾನು ಹಾಕಿಕೊಳ್ಳಲು ಹವಣಿಸಿದ ಗುರು. ʻಸುಮ್ನಿರಿ ಗುರುಗಳೇ, ಇದು ನನ್ನ ಕೈಗೆ ಹಾಕಿದ್ದು. ಮುಟ್ಟಿದರೆ ಹುಟ್ಟಿಲ್ಲವೆನಿಸಿ ಬಿಡುತ್ತೇನೆʼ ಎಂದು ಅಬ್ಬರಿಸಿದ ಶಿಷ್ಯ. ಈಗಂತೂ ಅವರಿಬ್ಬರೂ ಹೊಡೆದಾಡುವ ಹಂತಕ್ಕೆ ಬಂದರು. ಇದೇನು ನಡೆಯುತ್ತಿದೆ ಎಂಬುದೇ ರಾಜ ಮತ್ತು ಮಂತ್ರಿಗೆ ಅರ್ಥವಾಗಲಿಲ್ಲ.

ಇಬ್ಬರನ್ನೂ ಕಾವಲು ಭಟರು ತಡೆದು ನಿಲ್ಲಿದರು. ಹೀಗೇಕೆ ಹೊಡೆದಾಡುತ್ತಿದ್ದೀರಿ ಎಂದು ಹೇಳಿದ ರಾಜ. ʻಮಹಾಸ್ವಾಮಿ, ನಿಮ್ಮಲ್ಲಿ ಮುಚ್ಚುಮರೆಯೇನು? ಜ್ಯೋತಿಷ್ಯ ಶಾಸ್ತ್ರವನ್ನೆಲ್ಲಾ ಬಲ್ಲ ಗುರು ನಾನು. ಇಂದಿನ ಈ ವಧೆಯ ಮುಹೂರ್ತ ಬಹಳ ಒಳ್ಳೆಯದು. ಮೊದಲಿಗೆ ಗಲ್ಲಿಗೇರುವವರು ಈ ಊರಿನ ರಾಜನಾಗಿ ಮತ್ತೆ ಹುಟ್ಟುತ್ತಾರೆ. ನಂತರ ಗಲ್ಲಿಗೇರುವವರು ಮಂತ್ರಿಯಾಗಿ ಇಲ್ಲಿಯೇ ಹುಟ್ಟುತ್ತಾರೆ. ನನಗಿದು ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗಿ ಮೊದಲು ನನ್ನನ್ನು ಗಲ್ಲಿಗೆ ಹಾಕಿ. ನಂತರ ಶಿಷ್ಯನನ್ನು ಹಾಕಿ. ನನಗೆ ಇಲ್ಲಿನ ರಾಜನಾಗಬೇಕೆಂದು ಆಸೆಯಿದೆʼ ಎಂದು ಭಿನ್ನವಿಸಿಕೊಂಡ.

ರಾಜ-ಮಂತ್ರಿ ಇಬ್ಬರೂ ಮುಖ-ಮುಖ ನೋಡಿಕೊಂಡರು. ತಕ್ಷಣ ಗಲ್ಲುಗಂಬದತ್ತ ಓಡಿದ ರಾಜ; ತಡ ಮಾಡದೆ ಮಂತ್ರಿಯೂ ಅವನ ಬೆನ್ನಿಗೆ ಹೋದ. ಇಬ್ಬರೂ ಸ್ಪರ್ಧೆಯ ಮೇಲೆ ನೇಣಿನ ಕುಣಿಕೆಗೆ ಕೊರಳು ನೀಡಿದರು. ಅಲ್ಲಿಗೆ ಮೂರ್ಖ ರಾಜ ಮತ್ತು ಪೆದ್ದ ಮಂತ್ರಿ ಆಡಳಿತ ಕೊನೆಗೊಂಡಿತು. ಗುರು-ಶಿಷ್ಯರೇ ಆ ಊರಿನ ರಾಜ-ಮಂತ್ರಿಗಳಾಗಿ ನೇಮಕಗೊಂಡರು. ಲೋಕದ ನಿಯಮದಂತೆ ಊರಿನಲ್ಲಿ ಬೆಳಗು-ಸಂಜೆ ಆಗತೊಡಗಿತು. ಊರಿನ ಜನ ನೆಮ್ಮದಿಯಿಂದ ಬದುಕಿದರು.

ಇದನ್ನೂ ಓದಿ: ಮಕ್ಕಳ ಕಥೆ: ಚತುರ ನರಿ ಮತ್ತು ಪೆದ್ದ ಹೆಗ್ಗಣ

Exit mobile version