Site icon Vistara News

ಮಕ್ಕಳ ಕಥೆ | ಕುಶಲ ಕಲಿತ ಕೊತ್ವಾಲ ವಿದ್ಯೆ

children story theif

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/11/Chor-KothwalStory-1.mp3

ಒಂದಾನೊಂದು ಊರಿನಲ್ಲಿ ದಂಡಪಾಣಿ ಅನ್ನುವ ಗುರುವೊಬ್ಬನಿದ್ದ. ಅವನ ಹತ್ತಿರ ವಿದ್ಯೆ ಕಲಿಯುವುದಕ್ಕಾಗಿ ಯಾವ್ಯಾವುದೋ ಊರಿನಿಂದ ಶಿಷ್ಯಂದಿರು ಬರುತ್ತಿದ್ದರು. ಕೆಲವೊಮ್ಮೆ ಅಕ್ಕ-ಪಕ್ಕದ ರಾಜ್ಯಗಳಿಂದ ಬರುವುದೂ ಇತ್ತು. ಆತ ಕಲಿಸಿಕೊಡುತ್ತಿದ್ದ ೬೪ ವಿದ್ಯೆಗಳಲ್ಲಿ ಚೋರ ವಿದ್ಯೆಯೂ ಒಂದಾಗಿತ್ತು. ಅದನ್ನು ಕಲಿಸಿದ ನಂತರ, ಕಳ್ಳರನ್ನು ಹಿಡಿಯುವ ವಿದ್ಯೆಯನ್ನೂ ಆತ ತನ್ನ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ.

ಒಮ್ಮೆ ಕುಶಲ ಎಂಬ ತರುಣನೊಬ್ಬ ಗುರು ದಂಡಪಾಣಿಯಲ್ಲಿ ವಿದ್ಯಾರ್ಥಿಯಾಗಿ ಬಂದ. ಅವನಿಗೆ ತಾನೊಬ್ಬ ದೊಡ್ಡ ಕೊತ್ವಾಲನಾಗಬೇಕು, ಕುಖ್ಯಾತ ಕಳ್ಳರನ್ನೆಲ್ಲಾ ಹಿಡಿದು ಸೆರೆಮನೆಗೆ ತಳ್ಳಬೇಕು, ನಾಡಿನ ಜನರೆಲ್ಲ ಹೆದರಿಕೆಯಿಲ್ಲದೆ ಬದುಕುವಂತಾಗಬೇಕು ಎಂಬ ಆಸೆಯಿತ್ತು. ಈಗ ಬಯಕೆಯನ್ನು ಕೇಳಿ, ಅವನಿಗೆ ವಿದ್ಯೆ ಕಲಿಸಲು ದಂಡಪಾಣಿ ಒಪ್ಪಿಕೊಂಡ. “ಕಳ್ಳನನ್ನು ಹಿಡಿಯಬೇಕೆಂದರೆ ಮೊದಲು ನಾವು ಕಳ್ಳರಾಗಬೇಕು! ಅಂದರೆ, ಕಳ್ಳರಂತೆ ಯೋಚಿಸಲು ಬರಬೇಕು ನಮಗೆ. ಆಗ ಮಾತ್ರ ಕಳ್ಳರ ಜಾಡು ಅರ್ಥವಾಗುತ್ತದೆ” ಎಂದ ಗುರು. ಶಿಷ್ಯನಿಗೆ ಅದು ಸತ್ಯ ಎನಿಸಿತು.

ಗುರುವಿನ ಪಾಠವನ್ನು ಶ್ರದ್ಧೆಯಿಂದ ಕಲಿಯುತ್ತಿದ್ದ ಕುಶಲ, ಕಳ್ಳತನವೂ ಸೇರಿದಂತೆ, ಎಲ್ಲವನ್ನೂ ಅರೆದು ಅರಗಿಸಿಕೊಂಡ. ವರ್ಷಗಳ ನಂತರ, ಗುರುಕುಲ ವಾಸ ಮುಗಿಸಿ ಹೊರಗೆ ಹೋಗುವ ದಿನ ಕುಶಲನ ಪಾಲಿಗೆ ಬಂತು. ʻಇನ್ನೇನಾದರೂ ಕಲಿಯುವುದು ಉಳಿದುಹೋಯಿತೇ ಗುರುಗಳೇ?ʼ ಕುಶಲ ಕೇಳಿದ. ʻಹೌದೌದು! ಕಾಲಯಮನ ಬಳಿ ನಿನ್ನನ್ನು ನಾನೀಗ ಕಳಿಸುವವನಿದ್ದೇನೆʼ ಎಂದ ಗುರು. ʻಕಾಲಯಮ! ಹಾಗೆಂದರೆ…?ʼ ಕುಶಲನ ಕುತೂಹಲ ಹೆಚ್ಚಿತು. ʻನಮ್ಮ ರಾಜಧಾನಿಯ ಮುಖ್ಯ ಕೊತ್ವಾಲನನ್ನು ಕರೆಯುವುದೇ ಕಾಲಯಮ ಎಂದು. ಅವನ ಕಣ್ಣಿಗೆ ಮಣ್ಣೆರಚುವುದು ಹುಡುಗಾಟವಲ್ಲ. ಅಂಥವನಲ್ಲಿ ನೀನು ಪಾಠ ಕಲಿತರೆ, ನಿನ್ನ ಶಿಕ್ಷಣ ಪೂರ್ತಿಯಾದಂತೆ. ಉಳಿದ ಪಾಠವನ್ನು ನಿನಗೆ ಬದುಕೇ ಕಲಿಸುತ್ತದೆ. ಹೋಗಿ ಬಾ, ಒಳ್ಳೆಯದಾಗಲಿʼ ಎಂದು ಗುರು ದಂಡಪಾಣಿ ಆಶೀರ್ವದಿಸಿದ. ʻನೆನಪಿರಲಿ, ಸುಮ್ಮನೆ ಹೋಗಿ ಕೇಳಿದರೆ ಕಾಲಯಮ ಏನನ್ನೂ ಹೇಳಿಕೊಡುವವನಲ್ಲ. ಅವನ ಮನೆಯಿಂದ ಏನಾದರೂ ಕದ್ದು, ಅದನ್ನು ಮುಚ್ಚಿಡು. ಆನಂತರ ನಿನ್ನ ಕಲಿಕೆ ಆರಂಭವಾಗುತ್ತದೆʼ ಎಂದು ದಂಡಪಾಣಿ ತನ್ನ ಶಿಷ್ಯನಿಗೆ ಕಿವಿಮಾತು ಹೇಳಿ ಕಳುಹಿಸಿದ್ದ. ಗುರುಗಳ ಮಾತಿನಂತೆ ರಾಜಧಾನಿಯತ್ತ ನಡೆದ ಕುಶಲ.

ಕಾಲಯಮನ ಮನೆಯನ್ನು ತಲುಪಿದಾಗ ಮುಸ್ಸಂಜೆಯಾಗಿತ್ತು. ತಾನು ಗುರು ದಂಡಪಾಣಿಯ ಶಿಷ್ಯ ಎಂದು ಪರಿಚಯಿಸಿಕೊಂಡ ಕುಶಲನಿಗೆ ಒಳ್ಳೆಯ ಸತ್ಕಾರ ದೊರೆಯಿತು ಮುಖ್ಯ ಕೊತ್ವಾಲನ ಮನೆಯಲ್ಲಿ. ʻನಿಮ್ಮಂತೆಯೇ ಕೊತ್ವಾಲನಾಗಿ ಹೆಸರು ಮಾಡಬೇಕೆಂಬ ಆಸೆʼ ಎಂದು ಕುಶಲ ಹೇಳುತ್ತಿದ್ದಂತೆಯೇ ಜೋರಾಗಿ ನಕ್ಕ ಕಾಲಯಮ, ʻಕಳ್ಳರನ್ನು ಹಿಡಿಯುವುದು ಆಮೇಲೆ. ಮೊದಲು ನೀನೆಷ್ಟು ಚಾಣಾಕ್ಷ ಕಳ್ಳ ಎಂಬುದನ್ನು ನೋಡಬೇಕಲ್ಲʼ ಎಂದು ಹೇಳಿದ. ಅಂದು ರಾತ್ರಿ ತಮ್ಮೊಂದಿಗೇ ಇರುವಂತೆ ಕುಶಲನನ್ನು ಒತ್ತಾಯಿಸಿ, ಪ್ರೀತಿಯಿಂದ ಊಟ ಬಡಿಸಿದ ಕಾಲಯಮ. ತುಂಬಾ ಸುಂದರವಾದ ಚಿನ್ನದ ಹರಿವಾಣದಲ್ಲಿ ಕುಶಲನಿಗೆ ಊಟ ಬಡಿಸಲಾಗಿತ್ತು. ಊಟದ ರುಚಿಯ ಜೊತೆಗೆ, ಆ ಹರಿವಾಣದ ಕಲಾತ್ಮಕತೆಯನ್ನೂ ಕುಶಲ ಬಾಯಿ ತುಂಬಾ ಹೊಗಳಿದ. ʻಇಂಥದ್ದು ಒಂದೇ ಇರುವುದು ನನ್ನ ಬಳಿ. ಇನ್ನೊಂದು ಇದ್ದಿದ್ದರೆ ಇದನ್ನು ನಿನಗೇ ಕೊಡುತ್ತಿದ್ದೆʼ ಎಂದ ಕಾಲಯಮ. ಆತನ ಮಾತನ್ನು ಕೇಳಿದ ಕುಶಲನಿಗೆ ಕದ್ದರೆ ಇದನ್ನೇ ಕದಿಯಬೇಕು ಎಂದೆನಿಸಿತು. ಆತನ ಮುಖವನ್ನೇ ಕುತೂಹಲದಿಂದ ನಿರೀಕ್ಷಿಸಿದ ಕಾಲಯಮ.

ಸರಿ ರಾತ್ರಿಯ ಹೊತ್ತಿನಲ್ಲಿ ತನ್ನ ಹಾಸಿಗೆಯಿಂದ ಎದ್ದ ಕುಶಲ, ಬೆಕ್ಕಿನಂತೆ ನಿಶ್ಶಬ್ದವಾಗಿ ಅಡುಗೆಮನೆಗೆ ಬಂದ. ಆ ಹರಿವಾಣ ಅಲ್ಲೆಲ್ಲೂ ಕಾಣಲಿಲ್ಲ. ಎಲ್ಲಾ ಕೋಣೆಗಳಲ್ಲೂ ಅದನ್ನು ಹುಡುಕುತ್ತಾ ಬಂದ, ಉಹು, ಎಲ್ಲಿಯೂ ಸಿಗಲಿಲ್ಲ. ಕೊನೆಯದಾಗಿ ಕಾಲಯಮನ ಕೋಣೆಯೊಳಗೆ ಅಡಿಯಿಟ್ಟ. ಅಲ್ಲೊಂದು ವಿಚಿತ್ರ ಅವನ ಕಣ್ಣಿಗೆ ಬಿತ್ತು. ಮೊಸರು-ಬೆಣ್ಣೆಗಳನ್ನು ನೇತಾಡಿಸುವ ನೆಲುವಿನಲ್ಲಿ ಆ ಚಿನ್ನದ ಹರಿವಾಣವನ್ನು ತೂಗು ಹಾಕಲಾಗಿತ್ತು. ಆ ನೆಲುವು ಕಾಲಯಮನ ಮುಖಕ್ಕೆ ನೇರವಾಗಿ ಸೂರಿಗೆ ನೇತಾಡುತ್ತಿತ್ತು. ಅದರ ಹತ್ತಿರ ಹೋದಂತೆ ಕುಶಲನಿಗೆ ಅರ್ಥವಾಗಿದ್ದು, ಆ ಹರಿವಾಣದಲ್ಲಿ ನೀರು ತುಂಬಿಸಿಡಲಾಗಿದೆ ಎಂಬುದು! ನೆಲುವು ಒಂದಂಗುಲ ಸರಿದರೂ ಕಾಲಯಮನ ಮುಖದ ಮೇಲೆಯೇ ನೀರು ಬೀಳುತ್ತಿತ್ತು. ಕೊತ್ವಾಲನ ಚಾಣಾಕ್ಷತೆಗೆ ʻಭಲಾ!ʼ ಎಂದುಕೊಂಡ ಕುಶಲ, ಇನ್ನೂ ಚಾಣಾಕ್ಷತೆಯಿಂದ ತನ್ನ ಕೆಲಸ ಮುಗಿಸಿ, ನಿರುಮ್ಮಳವಾಗಿ ಮಲಗಿಕೊಂಡ.

ಇದನ್ನೂ ಓದಿ | ಮಕ್ಕಳ ಕಥೆ | ಬೇಡದ ಅತಿಥಿಗಳ ಕಾಟ ತಪ್ಪಿದ್ದು ಹೇಗೆ?

ಬೆಳಗಾಯಿತು. ನಿತ್ಯಕರ್ಮಗಳನ್ನು ಮುಗಿಸಿದ ಕುಶಲನನ್ನು ಉಪಾಹಾರಕ್ಕೆ ಕರೆದ ಕಾಲಯಮ. ಉಪಾಹಾರವನ್ನು ಅವನಿಗೆ ಬಡಿಸಿದ್ದು ಅದೇ ಹರಿವಾಣದಲ್ಲಿ! ಥಟ್ಟನೆ ಕಾಲಯಮನ ಕಾಲಿಗೆ ಬಿದ್ದ ಕುಶಲ, ʻಗುರುವೇ, ಈ ಕುಶಲತೆಯನ್ನು ನನಗೂ ಕಲಿಸಿಕೊಡಿ. ಈ ಹರಿವಾಣವನ್ನು ಹೇಗೆ ಹುಡುಕಿದಿರಿ?ʼ ಎಂದು ಕೇಳಿದ. ʻಹುಡುಗಾ, ನಿನ್ನ ಹೆಸರಿಗೆ ತಕ್ಕಂತೆ ಸಾಕಷ್ಟು ಕುಶಲನೇ ಆಗಿದ್ದಿ ನೀನೂ ಸಹ. ಮೊದಲು ನೀರು ತುಂಬಿದ್ದ ಹರಿವಾಣವನ್ನು ಅಷ್ಟು ಚಾಕಚಕ್ಯತೆಯಿಂದ ಕದ್ದೆಯಲ್ಲ, ಹೇಗೆ ಎಂಬುದನ್ನು ತಿಳಿಸುʼ ಎಂದ ಕಾಲಯಮ ನಗುತ್ತಾ. ʻನಿಮ್ಮ ಮನೆಯಾಚೆ ಬೆಳೆದಿದ್ದ ಬಿದಿರನ್ನು ಕೊಯ್ದು, ಕೊಳವೆಯಂತೆ ಮಾಡಿ, ಹರಿವಾಣದಲ್ಲಿದ್ದ ನೀರನ್ನೆಲ್ಲಾ ಮೊದಲು ಹೀರಿದೆ. ಆನಂತರ ಕೆಲಸ ಸುಲಭವಾಯಿತುʼ ಎಂದು ವಿವರಿಸಿದ ಕುಶಲ. ಈ ಕಥೆಯ ಮುಂದಿನ ಭಾಗವನ್ನು ಕಾಲಯಮ ವಿಸ್ತರಿಸಿದ.

ʻಬೆಳಗ್ಗೆದ್ದು ನೋಡಿದಾಗ ಹರಿವಾಣ ಇರಲಿಲ್ಲ. ಶಹಬ್ಬಾಸ್‌ ಎನಿಸಿತು ನಿನ್ನ ಬಗ್ಗೆ. ಆದರೆ ಎಂಥಾ ಚಾಲಾಕಿ ಕಳ್ಳನಾದರೂ ಸುಳಿವು ಬಿಟ್ಟೇಬಿಡುತ್ತಾನೆ ಎಂಬಂತೆ, ನೀ ಮಲಗಿದ್ದ ಕೋಣೆಗೆ ಬಂದೆ. ಮೈಮರೆತು ನಿದ್ರಿಸುತ್ತಿದ್ದ ನಿನ್ನನ್ನು ವಿವರವಾಗಿ ಗಮನಿಸಿದೆ. ನಿನ್ನ ವಸ್ತ್ರಗಳು ಮಂಡಿಯ ಮೇಲಿನವರೆಗೆ ಒದ್ದೆಯಾಗಿದ್ದ ಗುರುತಿತ್ತು. ಹಾಗಾದರೆ ಮನೆಯಾಚೆಯ ಕೆರೆಯಲ್ಲೇ ಹರಿವಾಣವನ್ನು ಬಚ್ಚಿಟ್ಟಿದ್ದೀಯ ಎಂಬುದು ಖಾತ್ರಿಯಾಗಿತ್ತು. ಸುಮಾರು ಅದೇ ಮಟ್ಟದ ನೀರಿನವರೆಗೆ ನಡೆದು ಹೋಗಿ, ನಂತರ ಮುಳುಗಿ ಹುಡುಕಿದೆ. ಹರಿವಾಣವೀಗ ನಿನ್ನ ಕೈಯಲ್ಲಿದೆʼ ಎಂದ ಕಾಲಯಮ ಎಂಬ ಚಾಣಾಕ್ಷ.

ʻಗುರು ದಂಡಪಾಣಿಯವರು ನನ್ನನ್ನು ನಿಮ್ಮಲ್ಲಿಗೆ ಕಳಿಸಿದ್ದೇಕೆ ಎಂಬುದು ಅರ್ಥವಾಗಿದೆ. ನಿಮ್ಮಿಂದ ಬಹಳಷ್ಟು ಕಲಿತೆ ಕೊತ್ವಾಲರೇʼ ಎಂದ ಕುಶಲ, ಅಲ್ಲಿಂದ ಹೊರಟ.

ಇದನ್ನೂ ಓದಿ | ಮಕ್ಕಳ ಕಥೆ | ರಾಜನಿಗೆ ರಜನಿ ತೋರಿಸಿದ ಸುಳ್ಳಿನ ರುಚಿ

Exit mobile version