ಈ ಕಥೆಯನ್ನು ಇಲ್ಲಿ ಕೇಳಿ:
ಮಾಧವ ಒಬ್ಬ ಧಾರಾಳಿ ಮನುಷ್ಯ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನೋ ಹಂಗೆ ಕೈಯಲ್ಲಿ ಕಾಸಿಲ್ಲದಿದ್ದರೂ ಅತಿಥಿಗಳ ಉಪಚಾರ ಮಾತ್ರ ಮಾಡದೆ ಬಿಡುತ್ತಿರಲಿಲ್ಲ. ಅವನ ಹೆಂಡತಿ ಮಮತಾಳಿಗೆ ಮನೆಗೆ ಬರುವ ಅತಿಥಿಗಳನ್ನು ಸುಧಾರಿಸಿ ಸಾಕಾಗಿ ಹೋಗಿತ್ತು. ಅವಳೇನು ಕೆಟ್ಟ ಬುದ್ಧಿಯವಳಲ್ಲ, ಪಾಪ- ಒಳ್ಳೆಯವಳೇ. ಆದರೆ ಮನೆಯಲ್ಲಿ ಹೆಚ್ಚಿನ ಸಂಪತ್ತು ಇಲ್ಲದೇ ಹೋದಾಗ ಮನೆ ತುಂಬಾ ಜನರನ್ನು ಕರೆದುಕೊಂಡು ಊಟ ಹಾಕು ಅಂದರೆ, ಅವಳಾದರೂ ಏನು ಮಾಡಬೇಕು ಹೇಳಿ?
“ಅಲ್ಲ ಕಣ್ರೀ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಂತೆ. ಹೀಗೆ ದಿನಾ ಮನೆಗೆ ಅತಿಥಿಗಳನ್ನ ಕರ್ಕೊಂಡು ಬರ್ತಾ ಇದ್ರೆ ಎಲ್ಲಿಂದ ಮಾಡಿ ಹಾಕಬೇಕು ನಾನು? ನಾಳೆ ನಮಗೇ ಕಷ್ಟ ಬಂದ್ರೆ ಇವರೆಲ್ಲಾ ಬರುತ್ತಾರೇನು ನಮ್ಮ ಸಹಾಯಕ್ಕೆ?” ಅಂತ ಕೇಳಿದಳು ಮಮತಾ. “ಅಯ್ಯೋ, ಹಂಗನ್ನಬಾರದು ಕಣೆ! ಅತಿಥಿಗಳು ಅಂದ್ರೆ ದೇವರ ಸಮಾನ. ಅವರ ಆಶೀರ್ವಾದ ಇದ್ದಷ್ಟಕ್ಕೂ ನಮಗೇ ಒಳ್ಳೇದು” ಅನ್ನೋದು ಮಾಧವನ ಉತ್ತರವಾಗಿತ್ತು. ತಾವಾಗೇ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸೋದು ಸರಿ. ಆದರೆ ಹೀಗೆ ಪ್ರತಿದಿನ ಹುಡುಕಿಕೊಂಡು ಅತಿಥಿಗಳನ್ನು ಕರೆತರುವ ಮಾಧವನ ಚಾಳಿ ಮಮತಾಳಿಗೆ ಬೇಸರ ತರಿಸಿತ್ತು.
ಇದನ್ನೂ ಓದಿ | ಮಕ್ಕಳ ಕಥೆ | ಬಾಳೆ ಬಂಗಾರ | ಬುದ್ಧಿ ಕಲಿತ ತಪನ್
ಮನೆಗೆ ಬರುವವರ ಸಂಖ್ಯೆ ಮೊದಲೆಲ್ಲಾ ಒಂದು ಎರಡು ಇದ್ದರೆ ಈಗ ಮೂರೋ ನಾಲ್ಕೋ ಆಗಿತ್ತು. ಇನ್ನೂ ಹೆಚ್ಚುವ ಸಂಭವವೂ ಕಾಣಿಸುತ್ತಿತ್ತು. ಇದು ಹೀಗೆಯೇ ಮುಂದುವರಿದರೆ ಮಾಧವ ದುಡಿದು ತರುವುದು ಮನೆಗೆ ಯಾವುದಕ್ಕೂ ಸಾಕಾಗುವುದಿಲ್ಲ ಎಂಬುದು ಮಮತಾಳಿಗೆ ಖಾತ್ರಿ ಆಗಿತ್ತು. ಆದರೆ ಮಾಡುವುದೇನು? ಎಷ್ಟೇ ಹೇಳಿದರೂ ಈತನಿಗೆ ಅರ್ಥವೇ ಆಗುವುದಿಲ್ಲವಲ್ಲ ಎಂದು ಚಿಂತಿಸಿದಳು. ಕಡೆಗೊಂದು ವಿಚಿತ್ರ ಉಪಾಯ ಹೊಳೆಯಿತು ಆಕೆಗೆ. ಮಾರನೇ ದಿನವೇ ಅದನ್ನು ಕಾರ್ಯರೂಪಕ್ಕೆ ತಂದಳು. ಏನಾಯಿತೂಂದರೆ;
ಅಂದು ಬೆಳಗ್ಗೆಯೇ ಕೆಲಸಕ್ಕೆಂದು ಮನೆಯಿಂದ ಹೊರಡುವಾಗ ಮಾಧವ ಹೇಳಿದ್ದ, ಇಂದು ಮಧ್ಯಾಹ್ನ ಊಟಕ್ಕೆ ನಾಲ್ವರು ಬರುವವರಿದ್ದಾರೆ. ಅವರು ಊಟಕ್ಕೆ ಬರುವಷ್ಟರಲ್ಲಿ ತಾನೂ ಬರುತ್ತೇನೆ ಸಿದ್ಧಮಾಡಿ ಇರಿಸು ಎಂಬುದಾಗಿ. ಆಗಂತೂ ತಿಂಗಳ ಕೊನೆ. ಇನ್ನೊಂದೆರಡು ದಿನವೆಂದರೆ ಮನೆಯಲ್ಲಿ ಅಕ್ಕಿ-ಬೇಳೆ ಎಲ್ಲಾ ಖಾಲಿಯಾಗುತ್ತದೆ. ಹೀಗೆ ದುಂದು ವೆಚ್ಚ ಮಾಡುತ್ತಿದ್ದರೆ ಸುಖವಿಲ್ಲ ಎಂದೆಣಿಸಿದ ಮಮತಾ, ಇಬ್ಬರಿಗಾಗುವಷ್ಟು ಮಾತ್ರವೇ ಅಡುಗೆ ಮಾಡಿದಳು. ದೊಡ್ಡ ಒನಕೆಯನ್ನು ಚನ್ನಾಗಿ ಸಿಂಗರಿಸಿ, ಅರಿಶಿನ-ಕುಂಕುಮ ಎಲ್ಲಾ ಹಚ್ಚಿ ಮನೆಜಗುಲಿಯ ಮಧ್ಯದಲ್ಲಿ ತಂದಿರಿಸಿದಳು. ಬರಬೇಕಾಗಿದ್ದ ನಾಲ್ವರು ಅತಿಥಿಗಳು ಬಂದರು. ʻಬನ್ನಿ ಬನ್ನಿ, ನಿಮ್ಮ ಸ್ನೇಹಿತರೂ ಇನ್ನೇನು ಮನೆಗೆ ಬರುತ್ತಾರೆʼ ಎನ್ನುತ್ತಾ ಅವರನ್ನು ಆ ಒನಕೆಯ ಸುತ್ತ ಕುಳ್ಳಿರಿಸಿದಳು.
ಇದನ್ನೂ ಓದಿ | ಮಕ್ಕಳ ಕಥೆ | ಸಂಜೀವ ಮತ್ತು ಹಸಿದ ಭೂತ
ಅತಿಥಿಗಳಿಗೆ ಒನಕೆ ಅಲಂಕಾರ ಕಂಡು ಸೋಜಿಗವಾಗಿ, ʻಇದೇನು ಹೀಗಿದೆ?ʼ ಎಂದು ಕೇಳಿದರು. ʻಅದಾ, ನಮ್ಮನೆಯಲ್ಲಿ ಒಂದು ವ್ರತ ಮಾಡುತ್ತಿದ್ದೀವಿ. ಅತಿಥಿ ಮುಸಲಾಘಾತ ವ್ರತ ಅಂತ. ಈ ಒನಕೆ ಪೂಜೆ ಮಾಡಿ ಬಂದ ಅತಿಥಿಗಳಿಗೆ ಅದರ ಪ್ರಸಾದ ಕೊಡಬೇಕು. ಅಂದರೆ ಸತ್ಕಾರದ ಅಂಗವಾಗಿ ತಲೆಯ ಮೇಲೆ ಮೂರು ಸಾರಿ ಬಾರಿಸಬೇಕು. ತಲೆ ಒಡೆಯುವ ಹಾಗಲ್ಲ, ಸ್ವಲ್ಪ ನಿಧಾನಕ್ಕೆ. ಆನಂತರ ಅವರಿಗೆ ಊಟ ಬಡಿಸಬೇಕುʼ ಎಂದು ವಿವರಿಸಿದಳು ಮಮತಾ. ಬಂದ ಅತಿಥಿಗಳಿಗೆ ಜೀವವೇ ಬಾಯಿಗೆ ಬಂದಂತಾಯ್ತು. ʻಇವರ ಊಟವೇ ಬೇಡ, ಬದುಕಿದ್ದರೆ ಬೆಲ್ಲವನ್ನಾದರೂ ಬೇಡಿ ತಿಂದೇನುʼ ಎಂದು ಕಾಲಿಗೆ ಬುದ್ಧಿ ಹೇಳಿದರು. ಅಷ್ಟರಲ್ಲಿ ಮಾಧವ ಬಂದ.
ʻಇದೇನು ಹೊರಟೇಬಿಟ್ಟಿರಿ?ʼ ಎಂಬ ಆತನ ಪ್ರಶ್ನೆಗೆ ಅವರು ಉತ್ತರಿಸದೇ ಓಡುತ್ತಿದ್ದರು. ಆಗಿದ್ದೇನು ಎಂದು ಮಮತಾಳನ್ನು ಕೇಳಿದ ಮಾಧವ. ʻಈ ಒನಕೆ ಬೇಕು ಎಂದರು ಅತಿಥಿಗಳು. ಅದನ್ನ ಹೇಗೆ ಕೊಡೋದು? ನನ್ನ ತಾಯಿ ಕೊಟ್ಟ ಬಳುವಳಿ, ಹಾಗೆಲ್ಲ ಕೊಡಲಾಗದು ಅಂದೆ. ಅಷ್ಟಕ್ಕೆ ಎದ್ದು ಹೊರಟೇಬಿಟ್ಟರುʼ ಎಂದಳು ಮಮತಾ. ʻಛೇ! ಅತಿಥಿ ಎಂದರೆ ದೇವರಿಗೆ ಸಮ ಅನ್ನೋದು ಗೊತ್ತಿಲ್ವಾ ನಿಂಗೆ? ಕೊಡಬೇಕಿತ್ತು ಅದನ್ನು. ನಾನಾದರೂ ಕೊಟ್ಟು ಬರುತ್ತೇನೆʼ ಎನ್ನುತ್ತಾ ಆ ಒನಕೆ ಹಿಡಿದು ಅವರ ಬೆನ್ನಿಗೆ ಓಡತೊಡಗಿದ ಮಾಧವ.
ಮೊದಲೇ ಹೆದರಿದ್ದ ಅತಿಥಿಗಳ ಮೇಲೆ ಈಗಂತೂ ಹಾವೆಸೆದ ಹಾಗೆ ಆಗಿತ್ತು. ಹೊಡೆಯುವುದಕ್ಕೇ ಈತ ತಮ್ಮ ಬೆನ್ನಟ್ಟು ಬರುತ್ತಿದ್ದಾನೆ ಎಂದು ಭಾವಿಸಿದ ಅತಿಥಿಗಳು ಅಂಗೈಯಲ್ಲಿ ಜೀವ ಹಿಡಿದು ಓಡತೊಡಗಿದರು. ಮಾಧವನೂ ಜೋರಾಗಿಯೇ ಬೆನ್ನಟ್ಟುತ್ತಿದ್ದ. ಅಂತೂ ಇಡೀ ಊರೆಲ್ಲಾ ಇವರದ್ದೇ ಮೆರವಣಿಗೆ. ಏನಂತೆ, ಯಾಕಂತೆ ಎಂದೆಲ್ಲ ಊರ ಜನ ಕೇಳಿಕೊಳ್ಳತೊಡಗಿದರು. ವಿಷಯ ಎಲ್ಲರಿಗೂ ತಿಳಿಯಿತು. ಏನಾದರೂ ಸರಿ, ಮಾಧವನ ಮನೆಗೆ ಊಟಕ್ಕೆ ಮಾತ್ರ ಹೋಗಬಾರದು ಎಂಬುದು ಊರೆಲ್ಲಾ ಸುದ್ದಿಯಾಯಿತು. ಅಂತೂ ದಿನ ಬೆಳಗಾದರೆ ಊಟಕ್ಕೆ ಬರುವ ಅತಿಥಿಗಳ ಕಾಟದಿಂದ ಜಾಣೆ ಮಮತಾ ತಪ್ಪಿಸಿಕೊಂಡಳು.
ಇದನ್ನೂ ಓದಿ | ಮಕ್ಕಳ ಕಥೆ | ರಾಜನಿಗೆ ರಜನಿ ತೋರಿಸಿದ ಸುಳ್ಳಿನ ರುಚಿ