ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಿನ ರಾಜನಿಗೆ ಆನೆಗಳೆಂದರೆ ಬಹಳ ಪ್ರೀತಿ. ತನ್ನ ಅರಮನೆಯಲ್ಲಿ ಹಲವಾರು ಆನೆಗಳನ್ನು ಜತನದಿಂದ ಸಾಕಿಕೊಂಡಿದ್ದ. ತನ್ನ ಪಟ್ಟದಾನೆಗಂತೂ ಚಂದದ ಲಾಯವೊಂದನ್ನು ಮಾಡಿ, ಅದರ ದೇಖರೇಖಿಗೆ ಪ್ರತ್ಯೇಕ ಜನರನ್ನು ಇರಿಸಿದ್ದ. ಆದರೆ ಉಳಿದೆಲ್ಲಾ ಆನೆಗಳಿಂದ ದೂರ ಇರಿಸಿದ್ದರಿಂದ ಪಟ್ಟದಾನೆಗೆ, ಪಾಪ, ಬೇಸರವಾಗುತ್ತಿತ್ತು. ತನ್ನ ಜೊತೆಗೆ ಯಾರಾದರೂ ಇದ್ದರೆ ಒಳ್ಳೆಯದು ಎನಿಸುತ್ತಿತ್ತು. ಅದರ ದೇಖರೇಖಿಗೆ ಜನರಿದ್ದರೂ ಅವರ್ಯಾರೂ ಆನೆಯೊಂದಿಗೆ ವಿಶೇಷ ಮಾತನಾಡುತ್ತಿರಲಿಲ್ಲ.
ಒಂದು ದಿನ ಪುಟ್ಟ ನಾಯಿಮರಿಯೊಂದು ಅಲ್ಲೇ ಅಡ್ಡಾಡುತ್ತಿತ್ತು. ಅದರ ತಾಯಿಯೂ ಜೊತೆಗಿರದೆ, ಪಾಪದ ಮರಿ ಹಸಿದಿತ್ತು. ಆನೆಗೆ ಹಾಕಿದ್ದ ಆಹಾರದಲ್ಲಿ ಸ್ವಲ್ಪ ಮಿಕ್ಕಿದ್ದನ್ನು ಕಂಡು, ಹೆದರುತ್ತಲೇ ಆನೆಯ ಲಾಯಕ್ಕೆ ಬಂತು ಆ ಮರಿ. ಪುಟ್ಟ ಮರಿಯೊಂದು ತಾನು ತಿಂದುಳಿದ ಆಹಾರ ನೆಕ್ಕುತ್ತಿರುವುದನ್ನು ಕಂಡು ಆನೆಗೂ ಕನಿಕರ ಬಂತು. ತಾನು ಜೋರಾಗಿ ಉಸಿರಾಡಿದರೆ ಹಾರಿ ಹೋಗುವಂತಿರುವ ಈ ಮರಿಗೆ ಇಷ್ಟು ಹತ್ತಿರ ಬಂದು ಆಹಾರ ತಿನ್ನುವಷ್ಟು ಧೈರ್ಯವಿದೆಯಲ್ಲಾ ಎಂದು ಸೋಜಿಗವೂ ಆಯಿತು ಆನೆಗೆ. ಮಾರನೇ ದಿನವೂ ಮಿಕ್ಕ ಆಹಾರ ತಿನ್ನುವುದಕ್ಕೆಂದು ಮರಿ ಬಂತು. ಅದರ ಮಾರನೇಯದ ದಿನವೂ ಬಂತು. ಹೀಗೆ ನಾಯಿಮರಿ ದಿನಾ ಆನೆಯ ಲಾಯಕ್ಕೆ ಬಂದು, ಆನೆ ಮಿಗಿಸಿದ್ದ ಆಹಾರವನ್ನು ತಿನ್ನಲಾರಂಭಿಸಿತು. ಇಬ್ಬರಲ್ಲೂ ಒಂಥರಾ ಸ್ನೇಹ ಬೆಳೆಯಿತು. ಊಟದ ನಂತರ ಎರಡೂ ಸುಮ್ಮನೆ ಮುಖಾಮುಖಿ ಕುಳಿತುಕೊಳ್ಳುತ್ತಿದ್ದವು. ಹಾಗೆ ಕುಳಿತಿದ್ದ ಆನೆಯ ಕಾಲುಗಳ ಮೇಲೆಲ್ಲಾ ನಾಯಿಮರಿ ಮರ ಏರಿದಂತೆ ಹತ್ತಿಳಿಯುತ್ತಿತ್ತು. ಒಂದು ದಿನ ನಾಯಿಮರಿ ಬರದಿದ್ದರೆ ಆನೆಗೆ ಏನೋ ಬೇಸರ; ನಾಯಿಮರಿಗೂ ಆನೆಯ ಸುತ್ತಲೂ ಕುಣಿದಾಡದಿದ್ದರೆ ಏನೋ ಕಳೆದುಹೋದಂತೆನಿಸುತ್ತಿತ್ತು.
ಹಾಗೆಯೇ ಕೆಲವು ತಿಂಗಳು ಕಳೆದವು. ಇಬ್ಬರ ನಡುವಿನ ಸ್ನೇಹ ಗಾಢವಾಗಿತ್ತು. ಮೊದಲಿಗೆ ಸಣ್ಣ ಮರಿಯಾಗಿದ್ದಿದ್ದು ಈಗ ಬಲಿಷ್ಠ ನಾಯಿಯಾಗಿತ್ತು. ಊರಲ್ಲಿ ಎಲ್ಲೇ ಸುತ್ತುವುದಕ್ಕೆ ಹೋದರೂ, ಊಟದ ಸಮಯಕ್ಕೆ ಅದು ಆನೆಯ ಬಳಿ ಬಂದೇಬರುತ್ತಿತ್ತು. ಊಟದ ನಂತರ ಆನೆಯ ಪಕ್ಕದಲ್ಲೇ ತೂಕಡಿಸುತ್ತಿತ್ತು. ಆನೆಯಂತೂ ನಾಯಿ ತನ್ನ ಮನೆಯಲ್ಲಿದ್ದಷ್ಟೂ ಹೊತ್ತು ಬಹಳ ಸಂತೋಷದಿಂದ ಇರುತ್ತಿತ್ತು. ಆನೆಯ ಮಾವುತ ಇದನ್ನು ಆರಂಭದಿಂದಲೂ ನೋಡುತ್ತಿದ್ದ. ಈ ಪ್ರಾಣಿಗಳ ಸ್ನೇಹ ಅವನಿಗೊಂದು ಮೋಜಿನ ಮಾತಾಗಿತ್ತು.
ಆನೆಯ ಲಾಯದಲ್ಲಿದ್ದ ಈ ನಾಯಿಯನ್ನು ಕಂಡ ರೈತನೊಬ್ಬ, ತನ್ನ ಹೊಲ ಕಾಯುವುದಕ್ಕೆ ಇಂಥದ್ದೇ ಬಲಿಷ್ಠ ನಾಯಿಯನ್ನು ಹುಡುಕುತ್ತಿರುವುದಾಗಿ ಮಾವುತನಲ್ಲಿ ಹೇಳಿದ. ಮಾತ್ರವಲ್ಲ, ಅದನ್ನು ಮಾರಾಟ ಮಾಡಿದರೆ- ಕೊಂಡುಕೊಳ್ಳುವೆ ಎಂದೂ ತಿಳಿಸಿದ. ಅದೇನು ಮಾವುತನ ನಾಯಿಯಲ್ಲ, ಆತ ಅದನ್ನು ಸಾಕಲೂ ಇಲ್ಲ. ಆದರೆ ಅದೆಲ್ಲಾ ರೈತನಿಗೆ ಗೊತ್ತಿಲ್ಲವಲ್ಲ. ʻಹಣ ಬರುವುದಾದರೆ ಯಾಕೆ ಬೇಡʼ ಎಂದು ಯೋಚಿಸಿದ ಮಾವುತ, ತನ್ನದಲ್ಲದ ಆ ನಾಯಿಯನ್ನು ರೈತನಿಗೆ ಮಾರಾಟ ಮಾಡಿಬಿಟ್ಟ. ಹಲವಾರು ತಿಂಗಳುಗಳಿಂದ ಆನೆಯ ಪ್ರೀತಿಯ ಮಿತ್ರನಾಗಿದ್ದ ನಾಯಿ ಈಗ ರೈತನ ಪಾಲಾಯಿತು.
ಇದನ್ನೂ ಓದಿ | ಮಕ್ಕಳ ಕಥೆ | ಕುಶಲ ಕಲಿತ ಕೊತ್ವಾಲ ವಿದ್ಯೆ
ಮೊದಲೊಂದೆರಡು ದಿನ ನಾಯಿಯ ನಿರೀಕ್ಷೆಯಲ್ಲೇ ಇತ್ತು ಆನೆ. ಊಹುಂ, ನಾಯಿ ಬರಲಿಲ್ಲ. ಬೇಸರದಿಂದ ಮಂಕಾದ ಆನೆ ಊಟ-ತಿಂಡಿ ಮಾಡುವುದನ್ನು ನಿಲ್ಲಿಸಿತು. ಆನೆಗೆ ಎಷ್ಟು ಇಷ್ಟದ ಊಟವನ್ನು ಮಾವುತ ತಂದು ಕೊಟ್ಟರೂ, ಊಟದ ಸಮಯಕ್ಕೆ ನಾಯಿಯ ನೆನಪಾಗಿ ಆನೆ ಉಪವಾಸ ಇರುತ್ತಿತ್ತು. ಹಸಿದ ಹೊಟ್ಟೆಯಲ್ಲಿ ನಿದ್ದೆಯೂ ಬರುತ್ತಿರಲಿಲ್ಲ ಅದಕ್ಕೆ. ದಿನದಿಂದ ದಿನಕ್ಕೆ ಆನೆ ಕೃಶವಾಗತೊಡಗಿತು. ರಾಜನಿಗೆ ಬಹಳ ಪ್ರೀತಿಯ ಆನೆಯಾಗಿದ್ದರಿಂದ, ಮಾವುತ ಹೆದರುತ್ತಲೇ ಈ ವಿಷಯವನ್ನು ಅರಮನೆಗೆ ತಿಳಿಸಿದ. ವೈದ್ಯರು ಬಂದು ಆನೆಯ ತಪಾಸಣೆ ಮಾಡಿದರು. ಅವರಿಗೆ ಯಾವ ರೋಗವೂ ಕಾಣಲಿಲ್ಲ. “ಮಹಾಪ್ರಭೂ, ಆನೆಯ ದೇಹಕ್ಕೆ ಯಾವ ರೋಗವೂ ಇಲ್ಲ. ಆದರೆ ಅದರ ಮನಸ್ಸನ್ನು ಏನೋ ಬಾಧಿಸುತ್ತಿದೆ. ಅದೇನೆಂದು ತಿಳಿಯದ ಹೊರತು, ಆನೆಯ ಆರೋಗ್ಯ ಸುಧಾರಿಸುವುದಿಲ್ಲ” ಎಂದರು ವೈದ್ಯರು.
ಮಾವುತನನ್ನು ಕರೆದು ವಿಚಾರಿಸಿದ ರಾಜ. ಆದರೆ ತನ್ನದೇ ತಪ್ಪಿನಿಂದ ಇದೆಲ್ಲವೂ ಆಗಿರುವುದರಿಂದ ಹೆದರಿದ ಮಾವುತ ನಾಯಿಯ ವಿಷಯವಾಗಿ ಬಾಯೇ ಬಿಡಲಿಲ್ಲ. ಆನೆಯ ಚಾಕರಿ ಮಾಡುತ್ತಿದ್ದ ಉಳಿದವರನ್ನು ವಿಚಾರಿಸಿದಾಗ, ನಾಯಿಯೊಂದನ್ನು ಆನೆ ಬಹಳ ಹಚ್ಚಿಕೊಂಡಿತ್ತು ಎಂಬುದು ತಿಳಿಯಿತು. ಅರಮನೆಯ ಆನೆಲಾಯದಿಂದ ನಾಯಿ ತೆಗೆದುಕೊಂಡು ಹೋದವರು ಕೂಡಲೇ ಅದನ್ನು ಹಿಂದಿರುಗಿಸಬೇಕು ಎಂದು ರಾಜ್ಯದೆಲ್ಲೆಡೆ ಡಂಗುರ ಹೊಡೆಸಲಾಯಿತು. ವಿಷಯ ತಿಳಿದ ರೈತ ಅದನ್ನು ಕೂಡಲೇ ಹಿಂದಿರುಗಿಸಿದ. ಮಾತ್ರವಲ್ಲ, ಅದನ್ನು ಮಾವುತನಿಂದ ತಾನು ಖರೀದಿಸಿದ್ದಾಗಿಯೂ ತಿಳಿಸಿದ. ತನ್ನದಲ್ಲದ ನಾಯಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಿದ್ದಕ್ಕೆ ಮಾವುತನ ಮುಖ ಕಪ್ಪಿಟ್ಟಿತು.
ಇದೀಗ ನಾಯಿ ಮತ್ತೆ ಆನೆಯ ಲಾಯ ಸೇರಿತ್ತು. ಗೆಳೆಯರಿಬ್ಬರೂ ಸೇರಿ ಖುಷಿಯಿಂದ ಉಣ್ಣುತ್ತಿದ್ದರು, ಆಡುತ್ತಿದ್ದರು, ಮಲಗುತ್ತಿದ್ದರು. ಮಾಡಿದ್ದ ತಪ್ಪಿಗೆ ಶಿಕ್ಷೆಯಾಗಿ ಆನೆಯ ಚಾಕರಿಯ ಜೊತೆಜೊತೆಗೆ ನಾಯಿಯ ಚಾಕರಿಯನ್ನೂ ಮಾಡುವಂತೆ ಮಾವುತನಿಗೆ ರಾಜ ಆಜ್ಞೆ ಮಾಡಿದ್ದ.
ಇದನ್ನೂ ಓದಿ | ಮಕ್ಕಳ ಕಥೆ | ಕಿಟ್ಟಿಯ ಹೊಟ್ಟೆಯಿಂದ ಬಂದ ಗಿಳಿ