Site icon Vistara News

ಮಕ್ಕಳ ಕಥೆ: ಗುಡ್ಡದ ಮೇಲಿದ್ದ ಘಂಟಾಕರ್ಣಿ ಭೂತ

ghantakarni demon

ಈ ಕಥೆಯನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/02/GhantakarniBhoota-1-1.mp3

ಬೆಟ್ಟದ ತಪ್ಪಲಲ್ಲಿ ಒಂದೂರಿತ್ತು. ಸುತ್ತಲೂ ಕಾಡಿನಿಂದ ಕೂಡಿದ ಆ ಊರು ಯಾವುದೇ ಗದ್ದಲವಿಲ್ಲದೆ ಪ್ರಶಾಂತವಾಗಿತ್ತು. ಜನಗಳು ಸಹ ಶಾಂತಿ ಪ್ರಿಯರಾಗಿದ್ದರು. ಕಾಡಿನಲ್ಲಿರುವ ಪ್ರಾಣಿಗಳ ಜೊತೆಯೂ ಅವರದ್ದು ಸಹಬಾಳ್ವೆಯೇ ಆಗಿದ್ದಕ್ಕೆ, ಎಲ್ಲೆಲ್ಲೂ ನೆಮ್ಮದಿ ನೆಲೆಸಿತ್ತು.

ಒಂದು ಮುಂಜಾನೆ ಬೆಟ್ಟದ ಕಡೆಯಿಂದ ವಿಚಿತ್ರವಾದ ಶಬ್ದವೊಂದು ಕೇಳಿಬರತೊಡಗಿತು. ಕೆಲವೊಮ್ಮೆ ಗಂಟೆಯ ದನಿಯಂತೆ ಕೇಳಿದರೆ ಕೆಲವೊಮ್ಮೆ ದೊಡ್ಡ ನಗಾರಿಯನ್ನು ಪರಚಿದ ಶಬ್ದದಂತೆ, ಅಂತೂ ಕರ್ಕಶವಾಗಿ ಕೇಳುತ್ತಿತ್ತು ಆ ಶಬ್ದ. ಬೆಳಗ್ಗೆ ಏಳುತ್ತಿದ್ದಂತೆಯೇ ಮಕ್ಕಳೆಲ್ಲಾ ಭಯಭೀತರಾದರು. ಹಸು-ಕರುಗಳು ಬೆದರಿ ಕೂಗಿದವು. ದೊಡ್ಡವರಿಗೂ ಅದೇನು ವಿಚಿತ್ರ ಶಬ್ದ ಮತ್ತು ಯಾಕಾಗಿ ಬರುತ್ತಿದೆ ಎಂಬುದು ಅರ್ಥವಾಗಲಿಲ್ಲ.

ಊರಿನ ಮುಖಂಡ ಸಭೆ ಕರೆದ. ಸುಮಾರು ಅರವತ್ತು ವರ್ಷ ಪ್ರಾಯದ ಆತ, ತನ್ನ ಜೀವಮಾನದಲ್ಲಿ ಇಂಥದ್ದೊಂದು ಶಬ್ದವನ್ನು ಕೇಳಿಯೇ ಇರಲಿಲ್ಲ ಎಂದು ಹೇಳಿದ. ಇದಕ್ಕೆ ಹಲವರು ದನಿಗೂಡಿಸಿದರು. ಊರಾಚೆಯ ಗುಡ್ಡದ ಮೇಲೆ ಒಂದು ಕಲ್ಲಿನ ಗುಡಿಯಿತ್ತು. ಅಲ್ಲಿನ ದೇವರಿಗೆ ಯಾವುದೇ ಪೂಜೆ-ಉತ್ಸವ ಇಲ್ಲದೆ ಬಹಳ ಕಾಲವಾಗಿತ್ತು. ಅತ್ತ ಯಾರೂ ಹೋಗುತ್ತಿರಲಿಲ್ಲ. ಈಗ ಗಲಾಟೆ ಕೇಳುತ್ತಿರುವುದು ಅಲ್ಲಿಂದಲೇ ಆಗಿತ್ತು. ʻಯಜಮಾನ್ರೇ, ನಾನು ಮೊನ್ನೆ ಆ ಕಡೆ ದನ ಮೇಯ್ಸಕ್ಕೋಗಿದ್ದಾಗ ಈ ಗುಡ್ಡುದ್‌ ಮೇಲೆ ದೊಡ್ಡದೊಂದು ಭೂತ ಕಂಡೆ. ಅದರ ಕಿವಿ ದೊ…ಡ್ಡ್‌ ಬಾಳೆ ಎಲೆ ಇದ್ದಂಗಿತ್ತು. ಕಿವಿ ಅಲ್ಲಾಡ್ತಿದ್ದಂಗೆ ಹಿಂಗೆ ಗಂಟೆ ಸದ್ದು ಅಥವಾ ನಗಾರಿ ಸದ್ದು ಬರದು. ನಮ್ತಂದೆ ಕಾಲ್ದಲ್ಲೂ ಹಿಂಗೆ ಒಂದ್‌ ಭೂತ ಬಂದಿತ್ತಂತೆ. ಅದರ ಹೆಸ್ರು ಘಂಟಾಕರ್ಣಿ ಅಂತೆʼ ಎಂದು ಊರಿನ ದನ ಮೇಯಿಸುವ ತಿಮ್ಮ ವರದಿ ಮಾಡಿದ. ಎಲ್ಲರಿಗೂ ತಿಮ್ಮ ಹೇಳಿದ್ದು ನಿಜ ಅನ್ನಿಸ್ತು.

ಮೊದಲೇ ಆ ಗುಡ್ಡದೆಡೆಗೆ ಯಾರೂ ಹೋಗುತ್ತಿರಲಿಲ್ಲ. ಈಗಂತೂ ಹೆದರಿದ ಜನ ಆ ಕಡೆಗೆ ತಲೆ ಹಾಕಿ ಮಲಗುತ್ತಲೂ ಇರಲಿಲ್ಲ. ಹಠ ಮಾಡುವ ಮಕ್ಕಳನ್ನು ಹೆದರಿಸಲು ʻಬಂತು ಬಂತು ಘಂಟಾಕರ್ಣಿ ಗುಡ್ಡ ಇಳಿದು…ʼ  ಎಂದರೆ ಸಾಕು, ಮಕ್ಕಳೆಲ್ಲ ಗಪ್‌ಚುಪ್‌! ಹಗಲಿರುಳೆನ್ನದೆ ಕೇಳುತ್ತಿದ್ದ ಆ ವಿಚಿತ್ರ ಶಬ್ದಕ್ಕೆ ಕತ್ತಲಲ್ಲಿ ದಾರಿ ತುಳಿಯಲು ದೊಡ್ಡವರೂ ಹೆದರುವಂತಾಗಿತ್ತು. ಊರಿನ ಒಬ್ಬೊಬ್ಬರ ಮನದಲ್ಲೂ ಘಂಟಾಕರ್ಣಿ ಭೂತದ ಚಿತ್ರವಿಚಿತ್ರ ಆಕೃತಿ ಮೂಡಿತ್ತು. ಕೆದರಿದ ತಲೆ, ಕೆಂಗಣ್ಣು, ಉಂಡೆ ಮೂಗು, ಬಾಯೊಳಗೆ ತೂರದಷ್ಟು ದೊಡ್ಡ ಹಲ್ಲುಗಳು, ಡೊಳ್ಳು ಹೊಟ್ಟೆ, ಜೊತೆಗೆ ದೊ…ಡ್ಡ ಬಾಳೆಲೆಯಂಥಾ ಕಿವಿ. ಆದರೆ ಬಾಳೆಲೆ ಕಿವಿಯಿಂದ ಗಂಟೆ ಶಬ್ದ ಅಥವಾ ನಗಾರಿ ಶಬ್ದ ಬರುವುದು ಹೇಗೆ ಎಂಬುದು ಯಾರಿಗೂ ಅರ್ಥವಾಗಲಿಲ್ಲ. ಅದಿಲ್ಲೇಕೆ ಬಂದಿದೆ, ಅದೇನನ್ನು ತಿನ್ನುತ್ತದೆ ಇತ್ಯಾದಿ ಯಾವ ವಿವರಗಳೂ ಅವರಿಗೆ ಗೊತ್ತಿರಲಿಲ್ಲ.

ಗೋಪಾಲಯ್ಯ ಆ ಊರಿನ ಹಿರೀಕ. ವಯಸ್ಸು ಎಂಬತ್ತರ ಮೇಲಾಗಿದ್ದರೂ ಆರೋಗ್ಯವಾಗಿದ್ದ. ಗುಡ್ಡದ ಗುಡಿಗೆ ಒಂದಾನೊಂದು ಕಾಲದಲ್ಲಿ ಪೂಜೆ ಮಾಡುತ್ತಿದ್ದಾತ. ಈಗ ಅದೆಲ್ಲಾ ನಿಂತು ಹೋಗಿದ್ದರಿಂದ ತಮ್ಮ ತುಂಡು ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದ. ಗುಡ್ಡದ ಮೇಲಿಂದ ಬರುತ್ತಿದ್ದ ವಿಚಿತ್ರ ಶಬ್ದದ ಬಗ್ಗೆ ಅವರಿಗೆ ತೀರದ ಕುತೂಹಲ. ʻಒಂದೊಮ್ಮೆ ಘಂಟಾಕರ್ಣಿ ಭೂತವೇ ಇದ್ದರೂ, ಹೆಚ್ಚೆಂದರೆ ಏನಾಗಬಹುದು? ನನ್ನನ್ನು ಹಿಡಿದು ತಿನ್ನಬಹುದು. ಪಾಪದ ಭೂತದ ಹೊಟ್ಟೆ ತುಂಬುವುದೂ ಅನುಮಾನ ನನ್ನನ್ನು ತಿಂದರೆ. ಏನಾದರಾಗಲಿ, ಗುಡ್ಡದ ಮೇಲೆ ಹೋಗಿ ನೋಡಲೇಬೇಕುʼ ಅಂತ ತೀರ್ಮಾನಿಸಿ ಆ ಕಡೆ ಹೊರಟ. ಬೆಳಗ್ಗೆ ಬಿಸಿಲಾಗುವ ಮುನ್ನವೇ ಗುಡ್ಡ ಹತ್ತತೊಡಗಿದ ಗೋಪಾಲಯ್ಯ. ಗುಡ್ಡದ ಮೇಲಿನ ಗುಡಿಯ ಬಳಿ ಬಂದು ದಣಿವಾರಿಸಿಕೊಳ್ಳಲು ಕುಳಿತ. ಅಷ್ಟರಲ್ಲಿ ಸುತ್ತಲಿನ ಮರಗಳೆಲ್ಲಾ ಅಲ್ಲಾಡಿ, ಏನೇನೋ ಶಬ್ದ ಕೇಳತೊಡಗಿತು. ಹೆದರಿಕೆಯಾದಂತಾಗಿ ಗುಡಿಯ ಕಂಬದ ಹಿಂದೆ ಅಡಗಿ ಕೂತ.

ಇದನ್ನೂ ಓದಿ: ಮಕ್ಕಳ ಕಥೆ: ಕನ್ನಡಿಯಲ್ಲಿರುವುದು ಯಾರು?

ಕೆಲವೇ ಕ್ಷಣಗಳಲ್ಲಿ ಕಪಿಗಳ ದೊಡ್ಡದೊಂದು ಹಿಂಡು ಅಲ್ಲಿಗೆ ಬಂತು. ಬಂದಂಥ ಹಿಂಡಿನಲ್ಲಿ ಒಂದಿಷ್ಟು ಮರಿ ಮಂಗಳಿದ್ದವು. ಅವು ಒಂದಾದಮೇಲೊಂದು ಗುಡಿ ತುಂಬಾ ಓಡಾಡತೊಡಗಿದವು. ಆ ಗುಡಿಯಲ್ಲಿ ಬೃಹತ್ತಾದ ಗಂಟೆಯೊಂದನ್ನು ಉಕ್ಕಿನ ಸರಪಳಿಗೆ ನೇತಾಡಿಸಲಾಗಿತ್ತು. ನಾಲ್ಕಾರು ಮಂಗಗಳು ಸೇರಿ ಆ ಗಂಟೆಯ ಮೇಲೆ ಕುಳಿತು ಜೋಕಾಲಿಯಾಡಲು ಪ್ರಾರಂಭಿಸಿದವು. ಆ ಗುಡಿಯ ಗೋಡೆಯ ಮೇಲೆ ದೊಡ್ಡದೊಂದು ನಗಾರಿಯನ್ನು ಸಿಕ್ಕಿಸಲಾಗಿತ್ತು. ಜೋಕಾಲಿ ಆಡತೊಡಗಿದ ಮಂಗಗಳು ದೊಡ್ಡ ಗಂಟೆಯ ಸಮೇತ, ಗೋಡೆಯ ಮೇಲಿದ್ದ ನಗಾರಿಗೆ ಢಿಕ್ಕಿ ಹೊಡೆಯತೊಡಗಿದವು. ಗಂಟೆಯ ಶಬ್ದದ ಜೊತೆಗೆ ನಗಾರಿ ಸದ್ದಿಗೆ ಇನ್ನಷ್ಟು ಉತ್ತೇಜಿತರಾದ ಕಪಿ ಸಮೂಹದ ಯುವ ನಾಯಕರು, ಗುಡಿಯ ಕಂಬ ಹತ್ತಿ, ಗಂಟೆಯ ಮೇಲೆ ಹಾರುತ್ತಿದ್ದವು. ಇದರಿಂದ ಗಂಟೆ ಇನ್ನಷ್ಟು ಜೋರಾಗಿ ತೂಗುತ್ತಿತ್ತು, ಮತ್ತೂ ಜೋರಾಗಿ ನಗಾರಿಗೆ ಬಡಿಯುತ್ತಿತ್ತು. ಇದರಿಂದ ಆ ಕಲ್ಲಿನ ಗುಡಿಯಲ್ಲಿ ಗಂಟೆ ಮತ್ತು ನಗಾರಿಯ ಸದ್ದುಗಳೆರಡೂ ಒಟ್ಟಿಗೇ ಮೊಳಗಲಾರಂಭಿಸಿತು. ಊರನ್ನೆಲ್ಲಾ ಬೆಚ್ಚಿ ಬೀಳಿಸುತ್ತಿದ್ದ ʻಘಂಟಾಕರ್ಣಿʼ ಭೂತ ಬರೀ ಕಪಿಚೇಷ್ಟೆ ಎಂಬುದು ತಿಳಿಯುತ್ತಿದ್ದಂತೆ ಗೋಪಾಲಯ್ಯ ಬಿದ್ದೂಬಿದ್ದು ನಗತೊಡಗಿದ.

ನೇರ ಗುಡ್ಡದಿಂದ ಕೆಳಗಿಳಿದ ಗೋಪಾಲಯ್ಯ ಅರಳಿಕಟ್ಟೆಯಲ್ಲಿ ಊರನ್ನೆಲ್ಲಾ ಕರೆಸಿದ. ತಾನು ಘಂಟಾಕರ್ಣಿ ದೆವ್ವವನ್ನು ನೋಡಿ ಬಂದಿದ್ದಾಗಿ ಹೇಳಿದ. ʻಸುಮ್ನೆ ಬುರುಡೆ ಬಿಡಬೇಡ!ʼ ಎಂದು ಕೆಲವರು ಹೇಳಿದರೆ, ʻದೆವ್ವ ನಿನ್ನ ತಿನ್ನಲಿಲ್ಲವಾ?ʼ ಎಂದು ಕೆಲವರು ಸೋಜಿಗಪಟ್ಟರು. ತಾನು ಗುಡ್ಡದ ಗುಡಿಯಲ್ಲಿ ನೋಡಿದ ಕಥೆಯನ್ನು ವಿವರಿಸಿದ ಗೋಪಾಲಯ್ಯ. ಕುತೂಹಲ ತಡೆಯಲಾರದ ಕೆಲವರು ಗುಡ್ಡದ ಗುಡಿಯತ್ತ ಓಡಿದರು. ಅಲ್ಲಿ ನಡೆಯುತ್ತಿರುವ ಕಪಿಚೇಷ್ಟೆಯನ್ನು ಕಂಡು ಹೊಟ್ಟೆ ಬಿರಿಯುವಂತೆ ನಗುತ್ತಾ ಊರಿಗೆ ಬಂದರು. ಸತ್ಯವನ್ನೇ ತಿಳಿಯದೆ ಕೇವಲ ಶಬ್ದಕ್ಕಂಜಿ ಕುಳಿತ ತಮ್ಮ ಪೆದ್ದುತನಕ್ಕೆ ತಾವೇ ನಾಚಿಕೊಂಡರು. ಅಂದಿನಿಂದ ಆ ಊರಿನಲ್ಲಿ ಘಂಟಾಕರ್ಣಿ ಭೂತದ ಹೆದರಿಕೆ ದೂರವಾಯ್ತು.

ಇದನ್ನೂ ಓದಿ: ಮಕ್ಕಳ ಕಥೆ: ಬೀರಬಲ್ಲನ ಕಥೆ: ನಿಜವಾದ ರಾಜ ಯಾರು?

Exit mobile version