ಈ ಕಥೆಯನ್ನು ಇಲ್ಲಿ ಕೇಳಿ:
ಸಿರಿಯಾ ದೇಶದ ಕಥೆಯಿದು. ಫರಸ್ ಎಂಬಾತ ಡೆಮಾಸ್ಕಸ್ ನಗರದಲ್ಲಿ ವಾಸಿಸುತ್ತಿದ್ದ. ದೀರ್ಘ ಕಾಲದವರೆಗೆ ಬಡವನಾಗಿದ್ದ ಆತ, ತುಂಬಾ ಕಷ್ಟಪಟ್ಟು ದುಡಿದು ಹಣ ಗಳಿಸಿದ್ದ. ಹಾಗಂತ ಶ್ರೀಮಂತನೇನೂ ಆಗಿರದಿದ್ದರೂ, ನೆಮ್ಮದಿಯಿಂದ ಬದುಕಲು ತೊಂದರೆಯಿರಲಿಲ್ಲ. ಹಣ ಇದ್ದವನಿಗೆ, ಹುಣ್ಣಿದ್ದವನಿಗೆ ಹೆದರಿಕೆ ತಪ್ಪಿದ್ದಲ್ಲ ಅಂತ ಗಾದೆ. ಹಣ ಇದ್ದವನಿಗೆ ಅದೆಲ್ಲಿ ಕಳೆದೋಗತ್ತೋ ಅಂತ ಹೆದರಿಕೆಯಾದರೆ, ಹುಣ್ಣಿದ್ದವನಿಗೆ ಅದೆಲ್ಲಿ ಒಡೆದೋಗತ್ತೋ ಅನ್ನುವ ಹೆದರಿಕೆಯಂತೆ. ಫರಸ್‌ಗೂ ಹಾಗೆಯೇ ಹೆದರಿಕೆ, ತಾನು ಕಷ್ಟಪಟ್ಟು ದುಡಿದ ಹಣವೆಲ್ಲಿ ಕಳೆದು ಅಥವಾ ಕದ್ದು ಹೋಗತ್ತೋ ಅಂತ.
ಬಹಳ ಆಲೋಚನೆ ಮಾಡಿದ ಆತ, ಆ ಹಣವನ್ನು ಒಂದು ಪೆಟ್ಟಿಗೆಯಲ್ಲಿ ಭದ್ರಮಾಡಿ, ಊರಾಚೆಯ ಕಾಡಿಗೆ ಹೋಗಿ ಒಂದು ಮರದಡಿಗೆ ಹುಗಿದುಟ್ಟು ಬಂದ. ಮನೆಯಲ್ಲಿ ನೆಮ್ಮದಿಯಲ್ಲಿ ಮಲಗಿದ ಅಥವಾ ಹಾಗಂದುಕೊಂಡಿದ್ದ. ಮಾರನೆಯ ದಿನ ಅಂದರೆ ಮತ್ತೆ ಚಿಂತೆ ಶುರುವಾಯಿತು. ಮರದಡಿಯ ಪೆಟ್ಟಿಗೆಯನ್ನೂ ಯಾರಾದ್ರೂ ಕದ್ದುಬಿಟ್ಟರೆ! ಛೇ, ನೆಮ್ಮದಿಯಿಂದ ಇರಬೇಕೆಂದರೆ ಆ ಸಂಪತ್ತು ನನ್ನ ಬಳಿಯೇ ಇರಬೇಕು ಎಂದು ನಿರ್ಧರಿಸಿದ ಆತ, ನೇರ ಊರಾಚೆಯ ಕಾಡಿನ ಆ ಮರದಡಿಗೆ ಹೋದ. ಸಣ್ಣ ಗುದ್ದಲಿಯಿಂದ ಆ ಜಾಗವನ್ನು ಅಗೆಯತೊಡಗಿದ, ಅಗೆದ, ಅಗೆದ, ಅಗೆದ. ಆದರೆ ಸಂಪತ್ತಿನ ಪೆಟ್ಟಿಗೆ ಮಾತ್ರ ಸಿಗಲೇ ಇಲ್ಲ. ʻಅಯ್ಯೋ! ನಾನು ಯಾವುದಕ್ಕೆ ಹೆದರಿದೆನೋ ಅದೇ ಆಯಿತಲ್ಲ. ನನ್ನ ಶ್ರಮವೆಲ್ಲಾ ಕಳೆದುಹೋಯಿತುʼ ಎಂದು ಗೋಳಾಡಿದ. ಎಷ್ಟು ದುಃಖ ಮಾಡಿದರೇನು ಬಂತು, ಹೋದ ಸಂಪತ್ತು ತಿರುಗಿ ಬರುತ್ತದೆಯೇ?
ಮನೆಗೆ ತಿರುಗಿ ಬಂದ ಫರಸ್. ಆದರೆ ಮನಸ್ಸಿಗೆ ನೆಮ್ಮದಿಯಿಲ್ಲ, ಕಣ್ಣಿಗೆ ನಿದ್ದೆಯಿಲ್ಲ, ಊಟ ಬೇಡವಾಗಿತ್ತು. ಇದಕ್ಕೇನಾದರೂ ಮಾಡಬೇಕೆಂದು ನಿರ್ಧರಿಸಿ, ಒಬ್ಬ ಜ್ಞಾನಿಯ ಬಳಿ ತೆರಳಿದ. ಫರಸ್‌ನ ಬಾಡಿದ ಮುಖವನ್ನು ಕಾಣುತ್ತಿದ್ದಂತೆಯೇ, ʻಬಾ ಗೆಳೆಯ, ಕುಳಿತುಕೋ. ನಿನ್ನ ಮುಖ ನೋಡಿದರೆ ಬದುಕಿನಲ್ಲಿ ನೆಮ್ಮದಿ ಕಳೆದುಕೊಂಡ ಹಾಗಿದೆ. ಏನಾಯಿತು?ʼ ಅಂತ ಕೇಳಿದ ಜ್ಞಾನಿ.
ಇಷ್ಟು ಮಾತಿಗೆ ಫರಸ್‌ನ ಕಣ್ಣಲ್ಲಿ ನೀರೇ ಬಂತು. ʻಏನಂತ ಹೇಳಲಿ ನನ್ನ ದುಃಖವನ್ನು! ಕಷ್ಟಪಟ್ಟು ದುಡಿದು ಗಳಿಸಿದ ಸಂಪತ್ತು ಕೈತಪ್ಪಿ ಹೋಗಿದೆ…ʼ ಎಂದು ತನ್ನ ಕಥೆಯನ್ನೆಲ್ಲಾ ಕೇಳಿದ ಫರಸ್. ʻಹಮ್, ವಿಷಯ ಸ್ವಲ್ಪ ಗಂಭೀರವಾಗಿಯೇ ಇದೆ. ಮೊದಲು ನನ್ನ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರಿಸಿ. ನಿನ್ನ ಸಂಪತ್ತನ್ನು ಹುಡುಕಲು ಸಾಧ್ಯವೋ ನೋಡೋಣʼ ಎಂದ ಜ್ಞಾನಿ, ʻನೀನು ಪೆಟ್ಟಿಗೆಯನ್ನು ಅಡಗಿಸುವಾಗ ಸುತ್ತಮುತ್ತ ಯಾರಾದರೂ ಇದ್ದರೇ?ʼ ಎಂದು ಕೇಳಿದ.
ʻನನಗೆ ಖಾತ್ರಿಯಿದೆ, ಯಾರೂ ನನ್ನನ್ನು ನೋಡಿಲ್ಲ ಅಲ್ಲಿʼ ಎಂದ ಫರಸ್. ʻಹಾಗಾದರೆ… ನೆಲ ಅಗೆದಿದ್ದ ಗುರುತು ಕಂಡ ದಾರಿಹೋಕರು ಯಾರಾದರೂ ಅಲ್ಲಿ ಅಗೆದಿರಬಹುದಲ್ಲʼ ಮುಂದುವರೆಸಿದ ಜ್ಞಾನಿ. ʻಅದೂ ಅಸಂಭವ. ಯಾಕೆಂದರೆ, ಅಗೆದಿದ್ದ ಗುರುತೂ ಮೂಡದಂತೆ ನಾನು ಎಚ್ಚರ ವಹಿಸಿದ್ದೆʼ ಎಂದು ವಿಶ್ವಾಸದಲ್ಲಿ ಹೇಳಿದ ಫರಸ್.
ʻನಿನಗೆ ಯಾರಾದರೂ ಶತ್ರುಗಳು ಇರಬಹುದೆಂದು ನನಗನ್ನಿಸುವುದಿಲ್ಲʼ ಎಂದು ಜ್ಞಾನಿ. ʻನನಗೂ ಹಾಗನ್ನಿಸುವುದಿಲ್ಲʼ ಎಂದ ಫರಸ್. ʻಗೆಳೆಯಾ, ಹಾಗಾದರೆ ನನಗೆ ಹತ್ತು ದಿನಗಳ ಅವಕಾಶ ಕೊಡು. ನಿನ್ನ ಸಂಪತ್ತೇನಾಯಿತು ಎಂಬ ಯಾವುದಾದರೂ ಸುಳಿವು ಸಿಗುತ್ತದೆಯೋ ನೋಡುತ್ತೇನೆʼ ಎಂದು ಜ್ಞಾನಿ.
ಹತ್ತು ದಿನಗಳು ಸಂದವು. ತನ್ನನ್ನು ಭೇಟಿ ಮಾಡಲು ಬಂದ ಫರಸ್‌ಗೆ ಬೇಸರದಿಂದಲೇ, ʻನಿನ್ನ ಸಂಪತ್ತಿನ ಬಗ್ಗೆ ಯಾವ ಸುಳಿವು-ಹೊಳಹೂ ಸಿಗಲಿಲ್ಲ. ಆದರೆ ನಿನಗೆ ನೆರವಾಗಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೆ…ʼ ಎಂದು ಜ್ಞಾನಿ ಹೇಳುತ್ತಿರುವಾಗಲೇ ಆತನ ಮನೆಯೆದುರು ವ್ಯಕ್ತಿಯೊಬ್ಬ ಕಾಣಿಸಿಕೊಂಡ. ನೋಡುವುದಕ್ಕೆ ಅರೆಹುಚ್ಚನಂತೆ ಕಾಣುತ್ತಿದ್ದ, ಕೊಳೆಯಾದ ವಸ್ತ್ರಗಳನ್ನು ತೊಟ್ಟಿದ್ದ. ತನ್ನಷ್ಟಕ್ಕೇ ಮಾತನಾಡಿಕೊಳ್ಳುತ್ತಿದ್ದ. ಇವರನ್ನು ಕಂಡಕೂಡಲೇ, ʻಏನದು, ಗುಸುಗುಸು ಗುಟ್ಟು?ʼ ಎಂದು ಕುತೂಹಲದಿಂದ ಕೇಳಿದ. ʻನಮ್ಮ ಸಮಸ್ಯೆಯನ್ನು ಇವನಲ್ಲಿ ಕೇಳೋಣವೇ?ʼ ಎಂದ ಜ್ಞಾನಿ. ʻಅಯ್ಯೋ! ನಿನ್ನಂಥ ಬುದ್ಧಿವಂತನಿಂದಲೇ ಪರಿಹಾರವಾಗಲಿಲ್ಲ, ಈ ಬುದ್ಧಿಹೀನನಿಂದ ಏನು ಮಾಡಲಾದೀತುʼ ಎಂದು ದುಃಖಿಸಿದ ಫರಸ್. ʻಹಾಗೆನ್ನುವಂತಿಲ್ಲ. ನೆರವು ಯಾರಿಂದ, ಯಾವ ರೂಪದಲ್ಲಾದರೂ ಬರಬಹುದುʼ ಎಂದ ಜ್ಞಾನಿ, ಈ ಸಮಸ್ಯೆಯನ್ನು ಅರೆಮರುಳನ ಹಾಗೆ ಕಾಣುತ್ತಿದ್ದ ವ್ಯಕ್ತಿಗೆ ವಿವರಿಸಿದ.
ಸುಮ್ಮನೆ ಕುಳಿತು ಶಾಂತನಾಗಿ ಕೇಳಿಸಿಕೊಂಡ ಆ ವ್ಯಕ್ತಿ. `ಆ ಮರದ ಬೇರನ್ನು ಯಾವಾತ ತೆಗೆದಿದ್ದಾನೋ, ಆ ಪೆಟ್ಟಿಗೆಯನ್ನೂ ಅವನೇ ತೆಗೆದಿದ್ದಾನೆʼ ಎಂದು ಹೇಳುತ್ತಾ ಅಲ್ಲಿಂದ ಹೊರಟುಹೋದ. ʻಅರೆ! ಹೌದಲ್ಲಾ, ಈ ಸಾಧ್ಯತೆಯನ್ನು ನಾವು ಯೋಚಿಸಲೇ ಇಲ್ಲʼ ಎಂದು ಕೊಂಡರು ಇಬ್ಬರೂ. ಆದರೆ ಬೇರು ತೆಗೆದಿದ್ದು ಯಾರು ಎಂಬುದನ್ನು ಪತ್ತೆ ಮಾಡುವುದು ಹೇಗೆ? ʻಆ ಮರ ಯಾವುದು ಎಂಬುದು ನಿನಗೆ ನೆನಪಿದೆಯೇ?ʼ ಪ್ರಶ್ನಿಸಿದ ಜ್ಞಾನಿ.
ಇದನ್ನೂ ಓದಿ | ಮಕ್ಕಳ ಕಥೆ | ರಾಜಕುಮಾರಿ ಮತ್ತು ಜಾದೂ ಪೆಟ್ಟಿಗೆಯಿಂದ ಹೊರಬರುವ ರಾಜ
ʻಹೌದು, ಅದು ಜುಜುಬಾ ಮರವಾಗಿತ್ತುʼ ಎಂದ ಫರಸ್. ʻಒಳ್ಳೆಯದಾಯ್ತು. ಕಳೆದ ೧೫ ದಿನಗಳಲ್ಲಿ ಜುಜುಬಾ ಮರದ ಬೇರನ್ನು ಯಾರಿಗೆ ಔಷಧವಾಗಿ ನೀಡಲಾಗಿದೆ ಎಂಬುದನ್ನು ಸ್ಥಳಿಯ ವೈದ್ಯರಿಂದ ಪತ್ತೆ ಮಾಡೋಣʼ ಎಂದು ಜ್ಞಾನಿ.
ಊರಲ್ಲಿರುವ ವೈದ್ಯರನ್ನೆಲ್ಲಾ ಕೇಳಿದಾಗ ಒಬ್ಬಾತ ತನ್ನ ರೋಗಿಗೆ ಜುಜುಬಾ ಮರದ ಬೇರನ್ನು ಔಷಧವಾಗಿ ನೀಡಿದ್ದೇನೆ. ಆತ ಸಮಂದರ್ ಎನ್ನುವ ವರ್ತಕ ಎಂಬುದಾಗಿ ತಿಳಿಸಿದ. ಜ್ಞಾನಿಯೊಬ್ಬನೇ ಆ ವರ್ತಕನ ಮನೆಗೆ ತೆರಳಿದ.
ಜ್ಞಾನಿಯನ್ನು ಕಂಡು ಸಂತೋಷವಾದ ವರ್ತಕ, ಕರೆದು ಕುಳ್ಳಿರಿಸಿ ಉಪಚರಿಸಿದ. ʻನಿಮ್ಮ ಆರೋಗ್ಯ ಸರಿಯಿರಲಿಲ್ಲ ಎಂದು ಕೇಳಿದ್ದೆ. ಈಗ ಹೇಗಿದ್ದೀರಿ?ʼ ಕೇಳಿದ ಜ್ಞಾನಿ. ʻದೇವರ ದಯೆ, ಈಗ ಆರಾಮಾಗಿದ್ದೇನೆʼ ಎಂದ ಸಮಂದರ್. ʻಏನು ಔಷಧಿ ತೆಗೆದುಕೊಂಡಿರಿ?ʼ ವಿಚಾರಿಸಿದ ಜ್ಞಾನಿ. ʻಕೇವಲ ಜುಜುಬಾ ಮರದ ಬೇರಷ್ಟೆ. ಆದರೆ ಆರೋಗ್ಯ ಮೊದಲಿನಂತಾಗಿದೆʼ ಎಂದ ವರ್ತಕ. ʻಆ ಮರದ ಬೇರನ್ನು ತೆಗೆಯುವಾಗ, ಅಲ್ಲೊಂದು ಪೆಟ್ಟಿಗೆಯೂ ಸಿಕ್ಕಿದೆಯಲ್ಲವೇ?ʼ ಎಂಬ ಜ್ಞಾನಿಯ ಮಾತಿಗೆ ವರ್ತಕ ಮೌನವಾದ. ಆ ಪೆಟ್ಟಿಗೆಯ ಕಥೆಯನ್ನೆಲ್ಲ ಹೇಳಿದ ಜ್ಞಾನಿ, ಆ ಸಂಪತ್ತು ಸಿಕ್ಕಿದ್ದು ಹೌದಾದರೆ ದಯವಿಟ್ಟು ಫರಸ್‌ಗೆ ಮರಳಿಸಿ ಎಂದು ವಿನಂತಿಸಿದ.
ಜ್ಞಾನಿಯ ಮಾತಿಗೆ ಪ್ರತಿ ಹೇಳದ ವರ್ತಕ, ಸಂಪತ್ತಿನೊಂದಿಗೆ ಪೆಟ್ಟಿಗೆಯನ್ನು ಫರಸ್‌ಗೆ ಮರಳಿಸಿದ. ʻಈ ಬಾರಿ ನಿನ್ನ ಸಂಪತ್ತು ನಿನಗೆ ದೊರೆತಿದೆ. ಆದರೆ ನೆನಪಿಡು ಫರಸ್, ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ. ನಿನ್ನ ಸಂಪತ್ತಿನ ಸದುಪಯೋಗ ಮಾಡಿಕೊʼ ಎಂದು ಬುದ್ಧಿ ಹೇಳಿ ಹೊರಟುಹೋದ ಜ್ಞಾನಿ.
ಇದನ್ನೂ ಓದಿ | ಮಕ್ಕಳ ಕಥೆ | ಬಡ ಸುಗುಣಿಯ ಮನೆಗೆ ಸಿರಿವಂತಿಕೆ ಬಂದದ್ದು ಹೇಗೆ?