Site icon Vistara News

ಮಕ್ಕಳ ಕಥೆ: ಪ್ರಾಮಾಣಿಕ ಅಜ್ಜಿ ಮತ್ತು ಧೂರ್ತ ಸಹಾಯಕ

kids story granny

ಈ ಕಥೆಯನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/04/PramanikaAjji-1.mp3

ಒಂದೂರಿನಲ್ಲಿ ಅಜ್ಜಿಯೊಬ್ಬಳಿದ್ದಳು. ಒಬ್ಬಳು ಅಂದರೆ, ಒಬ್ಬಳೆ ಅಲ್ಲ! ಅವಳು ಆ ಊರಿನ ಅನಾಥ ಮಕ್ಕಳನ್ನೆಲ್ಲಾ ಸಾಕುತ್ತಿದ್ದಳು. ಹಾಗಾಗಿ ಅವಳ ಪುಟ್ಟ ಮನೆಯಲ್ಲಿ ಹತ್ತಾರು ಮಕ್ಕಳಿದ್ದರು ಮತ್ತು ಆ ಮಕ್ಕಳಿಗೆಲ್ಲಾ ಆಕೆ ಅಜ್ಜಿಯಾಗಿದ್ದಳು. ಆದರೆ ಆಕೆ ಅಜ್ಜಿಯಾಗಿದ್ದರಿಂದ, ಅಂದರೆ ಮುದುಕಿಯಾಗಿದ್ದರಿಂದ ದುಡಿಯುವುದು ಕಷ್ಟವಾಗ್ತಾ ಇತ್ತು. ಮನೆಯಲ್ಲಿರುವ ಹತ್ತಾರು ಮಕ್ಕಳ ಹೊಟ್ಟೆ ತುಂಬಿಸುವುದು ತುಂಬಾನೇ ಕಷ್ಟ ಆಗ್ತಾ ಇತ್ತು. ಈ ಮಕ್ಕಳನ್ನು ಸಾಕುವುದಕ್ಕೆ ಏನು ಮಾಡಲಿ? ಅಂತ ಆಲೋಚನೆ ಮಾಡುವಾಗ, ಅವಳಿಗೊಂದು ಉಪಾಯ ಹೊಳೆಯಿತು. ಆ ಊರಿನ ರಾಜ ದಯಾಪರನಾಗಿದ್ದ. ಆತನಲ್ಲಿ ಸಹಾಯ ಕೇಳಿದರೆ ಹೇಗೆ ಎನಿಸಿತು. ಆದರೆ ರಾಜನದ್ದೊಂದು ನಿಯಮವಿತ್ತು. ಸಹಾಯ ಕೇಳಿ ಬರುವ ಯಾರಾದರೂ ಒಂದೇ ಅರಮನೆಯಲ್ಲಿ ಏನಾದರೂ ಸೇವೆ ಮಾಡಬೇಕು ಅಥವಾ ರಾಜನ ಮನಸ್ಸನ್ನು ಸಂತೋಷಪಡಿಸಬೇಕು.

ಅರಮನೆಯಲ್ಲಿ ಸೇವೆ ಮಾಡುವುದು ತನ್ನಿಂದ ಆಗುವ ಕೆಲಸವಲ್ಲ. ಬದಲಿಗೆ ರಾಜನ ಮನಸ್ಸಿಗೆ ಸಂತೋಷ ಆಗುವಂಥದ್ದು ಏನು ಮಾಡಲಿ ಎಂದು ಯೋಚಿಸಿದಳು ಅಜ್ಜಿ. ಅವಳು ಸುಂದರವಾಗಿ ಕವಿತೆ ಕಟ್ಟುತ್ತಿದ್ದಳು. ತನ್ನ ಕವಿತೆಗಳನ್ನೇ ವಾಚಿಸಿ ರಾಜನಿಂದ ನೆರವು ಪಡೆಯೋಣ ಎಂದು ಯೋಚಿಸಿ, ಅರಮನೆಯತ್ತ ನಡೆದಳು. ರಾಜನನ್ನು ಕಂಡು, ತನ್ನದೊಂದೆರಡು ಕವಿತೆಗಳನ್ನು ವಾಚಿಸಲು ಅವಕಾಶ ಬೇಡಿದಳು. ರಾಜನಿಗೂ ಕಲೆ, ಸಾಹಿತ್ಯದಲ್ಲಿ ಅಭಿರುಚಿ ಇದ್ದಿದ್ದರಿಂದ ಅವಕಾಶ ದೊರೆಯಿತು. ಮಾತ್ರವಲ್ಲ, ಆಕೆಯ ಕವಿತೆಗಳು ರಾಜನಿಗೆ ಬಹಳ ಸಂತೋಷ ನೀಡಿದ್ದರಿಂದ, ಏನು ಸಹಾಯ ಬೇಕು ಎಂದು ಕೇಳಿದ ಅರಸ. ತಾನು ಒಂದಿಷ್ಟು ಅನಾಥ ಮಕ್ಕಳನ್ನು ಸಾಕುತ್ತಿರುವ ವಿಷಯ ತಿಳಿಸಿದ ಆಕೆ, ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ ಎಂದು ಹೇಳಿದಳು. ಆಕೆ ಕೈಗೆ ಪತ್ರವೊಂದನ್ನು ನೀಡಿದ ಅರಸ, ಇದನ್ನು ಅರಮನೆಯ ಕೋಶಾಧಿಕಾರಿಗೆ ನೀಡಿ, ಒಂದು ವರಹ ಪಡೆಯಬಹುದು. ಹಾಗೆಯೇ ದಿನಾ ಬಂದು ಒಂದೊಂದು ಕವಿತೆ ವಾಚಿಸಿ, ಈ ಪತ್ರ ಪಡೆದು ಒಂದೊಂದು ವರಹ ಪಡೆದುಕೊಳ್ಳಬಹುದು ಎಂದು ತಿಳಿಸಿದ. ರಾಜನ ಈ ಉದಾರತೆಯಿಂದ ಅಜ್ಜಿಯ ಮನೆಯಲ್ಲಿದ್ದ ಮಕ್ಕಳಿಗೆ ಎರಡು ಹೊತ್ತಿನ ಊಟಕ್ಕೆ ಈಗ ಸಮಸ್ಯೆ ಇರಲಿಲ್ಲ. ಅಜ್ಜಿ ನೆಮ್ಮದಿಯಿಂದ ಹಣ ಪಡೆದು, ಸಂತೆಗೆ ಹೋಗಿ, ಬೇಕಾದ ವಸ್ತುಗಳನ್ನು ಖರೀದಿಸಿ ಮನೆಗೆ ನಡೆದಳು.

ಇದನ್ನೂ ಓದಿ: ಮಕ್ಕಳ ಕಥೆ: ಮಧುಕರ ಮತ್ತು ಅಜ್ಜ

ಮಾರನೆಯ ದಿನದಿಂದ ಅರಸನಲ್ಲಿಗೆ ಹೋಗಿ ಕವನ ವಾಚಿಸಿ, ʻಈ ಪತ್ರ ತಂದವರಿಗೆ ಒಂದು ವರಹ ನೀಡುವುದುʼ ಎಂಬ ರಾಜನ ಸಹಿಯಿದ್ದ ಪತ್ರವನ್ನು ಕೋಶಾಧಿಕಾರಿಗೆ ನೀಡಿ, ಪ್ರತಿದಿನ ಹಣ ಪಡೆಯುತ್ತಿದ್ದಳು. ಒಂದಿಷ್ಟು ದಿನಗಳು ಹೀಗೆಯೆ ಕಳೆದವು. ಇದನ್ನು ದಿನವೂ ನೋಡುತ್ತಿದ್ದ ರಾಜನ ಸಹಾಯಕ ಒಬ್ಬನಿಗೆ ಈ ಅಜ್ಜಿಯ ಮೇಲೆ ಅಸೂಯೆಯಾಯಿತು. ಅವಳಿಂದ ಹಣ ಕಿತ್ತುಕೊಳ್ಳುವ ಉದ್ದೇಶದಿಂದ ಆಕೆಯನ್ನು ಅಡ್ಡಗಟ್ಟಿದ. ಪ್ರತಿದಿನ ಅರಮನೆಯಿಂದ ನೀಡುವ ಒಂದು ವರಹದಲ್ಲಿ ಅರ್ಧ ವರಹ ತನಗೆ ಕೊಡಬೇಕು ಎಂದು ತಾಕೀತು ಮಾಡಿದ; ಅಜ್ಜಿ ಆತನ ಮಾತಿಗೆ ಸೊಪ್ಪು ಹಾಕಲಿಲ್ಲ. ಮಾರನೇ ದಿನ ಮತ್ತೆ ಅಡ್ಡಗಟ್ಟಿ ಹೆದರಿಸಿದ; ಊಹುಂ, ಬದಲಿಗೆ ರಾಜನಿಗೆ ದೂರು ನೀಡುವುದಾಗಿ ಅಜ್ಜಿಯೇ ಆತನನ್ನು ಹೆದರಿಸಿದಳು. ಈ ಅಜ್ಜಿಗೊಂದು ಮದ್ದು ಮಾಡಲೇಬೇಕು ಎಂದು ನಿರ್ಧರಿಸಿದ ಆ ಹುಳುಕು ಬುದ್ಧಿಯ ಸಹಾಯಕ, ನಾಲ್ಕಾರು ದಿನಗಳ ನಂತರ ಮತ್ತೆ ಅಜ್ಜಿಯನ್ನು ದಾರಿಯಲ್ಲಿ ಅಡ್ಡಗಟ್ಟಿದ.

ʻನೋಡು ಅಜ್ಜಮ್ಮ, ನಿನ್ನೊಳ್ಳೆದಕ್ಕೆ ಹೇಳದು ನಾನು. ನಮ್ಮ ದೊರೆಗಳಿಗೆ ನಿನ್ನ ಬಿಳಿ ಕೂದಲು ಕಂಡರೆ ಆಗಲ್ಲ. ಇನ್ನೊಂದು ಸಾರಿ ಬಿಳಿ ಕೂದಲು ಕಂಡರೆ ತಲೆ ಕತ್ತರಿಸ್ತೀನಿ ಅಂತ ಮೊನ್ನೆ ಯಾರಲ್ಲೋ ಹೇಳ್ತಾ ಇದ್ದರು. ಯಾವುದಕ್ಕೂ ಸ್ವಲ್ಪ ಜೋಪಾನವಾಗಿರುʼ ಅಂತ ಹೇಳಿ ಹೊರಟುಹೋದ. ʻಅಯ್ಯೋ ದೇವರೇ! ಮುದುಕಿ ತಲೆಲ್ಲಿ ಬಿಳಿ ಕೂದಲಲ್ಲದೆ ಕರೀ ಕೂದಲು ಇರೋದಕ್ಕೆ ಸಾಧ್ಯವೇ? ಈಗೇನು ಮಾಡ್ಲಿ? ಅರಮನೆಗೆ ಹೋಗದಿದ್ರೆ ನನ್ನ ಮಕ್ಕಳ ಹೊಟ್ಟೆ ತುಂಬಿಸೋದು ಹೇಗೆ?ʼ ಅಂತ ಚಿಂತಿಸಿದ ಆಕೆ, ತಲೆಗೊಂದು ಕರಿ ಬಟ್ಟೆಯನ್ನು ಕಟ್ಟಿಕೊಂಡು ಹೋಗುವುದೆಂದು ನಿರ್ಧರಿಸಿದಳು.

ಇದನ್ನೂ ಓದಿ: ಮಕ್ಕಳ ಕಥೆ: ಮುಗ್ಧ ಶಿಷ್ಯರು ಮತ್ತು ಕುದುರೆ ಮೊಟ್ಟೆ

ಆಕೆಯನ್ನು ಮಾರನೇ ದಿನವೂ ಅರಮನೆಯಲ್ಲಿ ಕಂಡ ಸಹಾಯಕನಿಗೆ ಅಚ್ಚರಿಯಾಯಿತು. ʻಅರೆ! ಈ ಮುದುಕಿ ಇನ್ನು ಹೆದರಿಕೊಂಡು ಅರಮನೆಗೆ ಬರೋದಿಲ್ಲ ಅಂತ ಭಾವಿಸಿದರೆ, ಮತ್ತೆ ಬಂದಳಲ್ಲ, ಅದೂ ತಲೆಗೆ ಬಟ್ಟೆ ಕಟ್ಟಿಕೊಂಡು!ʼ ಎಂದು ಹುಬ್ಬೇರಿಸಿದ. ಇವಳನ್ನು ಹೆದರಿಸಿ ಪ್ರಯೋಜನವಿಲ್ಲ ಎಂದು ಅರಿತ ಆತ, ರಾಜನ ತಲೆಗೆ ಹುಳ ಬಿಡುವ ಪ್ರಯತ್ನ ಮಾಡಿದ. ʻಮಹಾಪ್ರಭೂ, ತಮ್ಮಲ್ಲಿಗೆ ಬರುವ ಆ ಮುದುಕಿಗೆ ಬೆಟ್ಟದಷ್ಟು ಸೊಕ್ಕು! ತನ್ನ ಸುಂದರವಾದ ಬಿಳಿ ಕೂದಲಿಗೆ ಮಹಾರಾಜನ ದೃಷ್ಟಿ ತಾಗಬಾರದು ಅಂತ ಬಟ್ಟೆ ಕಟ್ಟಿಕೊಂಡು ಬರುತ್ತಾಳಲ್ಲ ಆಕೆ!ʼ ಎಂದು ರಾಜನ ಕಿವಿಯೂದಿದ. ಮೊದಲಿಗೆ ರಾಜ ಈತನ ಮಾತುಗಳ ಬಗ್ಗೆ ನಿರ್ಲಕ್ಷ್ಯ ತೋರಿದರೂ, ಆಕೆ ದಿನವೂ ತಲೆಗೆ ಬಟ್ಟೆ ಕಟ್ಟಿಕೊಂಡು ಬರುವುದನ್ನು ಕಂಡು ʻಹೌದೇನೋʼ ಎನಿಸಿತು. ಮಾರನೇ ದಿನ ಅಜ್ಜಿ ಅರಮನೆಗೆ ಬರುವ ಮುನ್ನ ಸಹಾಯಕ ಮತ್ತೆ ರಾಜನ ಕಿವಿಯೂದಿದ. ಇಷ್ಟಾದ ಮೇಲೆ ರಾಜನಿಗೂ ಆ ಮುದುಕಿ ಸೊಕ್ಕಿನವಳು ಎನಿಸಿಬಿಟ್ಟಿತು. ಆಕೆ ಬಂದು ಕವನ ಓದಿದ ಮೇಲೆ ಎಂದಿನಂತೆ ಪತ್ರವೊಂದನ್ನು ನೀಡಿ ಹೊರಟುಹೋದ ರಾಜ. ಅದನ್ನಾಕೆ ತೆಗೆದುಕೊಂಡು ಕೋಶಾಧಿಕಾರಿಯ ಬಳಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಸಹಾಯಕ, ಆ ಪತ್ರವನ್ನು ಆಕೆಯಿಂದ ಕಿತ್ತುಕೊಂಡು, ಅಜ್ಜಿಯನ್ನು ಅಲ್ಲಿಂದ ಓಡಿಸಿದ. ಬೇಸರವಾಗಿ ಕಣ್ಣೀರಿಡುತ್ತಾ ಆಕೆ ಹೊರಟುಹೋದಳು.

ಅವಳಿಂದ ಕಿತ್ತುಕೊಂಡ ಪತ್ರವನ್ನು ಕೋಶಾಧಿಕಾರಿಯ ಬಳಿ ಕೊಡುತ್ತಿದ್ದಂತೆಯೇ, ಇಬ್ಬರು ಸೈನಿಕರು ಬಂದು ಸಹಾಯಕನನ್ನು ಒಂದು ಕಂಬಕ್ಕೆ ಬಿಗಿದು ಕಟ್ಟಿದರು. ಮತ್ತೊಬ್ಬ ಬಂದು ತಲೆ ಬೋಳಿಸಿದ, ಜೊತೆಗೆ ಹತ್ತು ಛಡಿ ಏಟುಗಳನ್ನೂ ನೀಡಿದ. ನೋವು, ಅವಮಾನ ತಾಳಲಾರದ ಸಹಾಯಕ ನೇರವಾಗಿ ರಾಜನ ಬಳಿ ಬಂದು ದೂರಿತ್ತ. ʻಅರೆ! ತಲೆಬೋಳಿಸಿ, ಹತ್ತು ಛಡಿ ಏಟು ಕೊಡಿ ಎಂದು ಅಜ್ಜಿಗೆ ನೀಡಿದ ಪತ್ರದಲ್ಲಿ ಬರೆದಿದ್ದರೆ. ಅದು ನಿನ್ನ ಕೈಗೆ ಹೇಗೆ ಬಂತು?ʼ ಕೇಳಿದ ಅರಸ. ಸಹಾಯಕನಿಗೀಗ ತನ್ನ ತಪ್ಪಿನ ಅರಿವಾಗಿತ್ತು. ಅಷ್ಟೇ ಅಲ್ಲ, ಆತನ ಮೋಸವೂ ರಾಜನೆದುರು ಬಯಲಾಯಿತು. ಅನಾಥ ಮಕ್ಕಳಿಗೆ ನೆರವಾಗುತ್ತಿರುವ ಪ್ರಾಮಾಣಿಕ ಅಜ್ಜಿಯ ವಿರುದ್ಧ ಸಂಚು ಮಾಡಿದ್ದಕ್ಕೆ ಆತನನ್ನು ಊರಿನಿಂದಲೇ ರಾಜ ಗಡೀಪಾರು ಮಾಡಿದ. ಅಜ್ಜಿಯನ್ನು ಎಂದಿನಂತೆ ಅರಮನೆಗೆ ಕರೆಸಿಕೊಂಡ.

ಇದನ್ನೂ ಓದಿ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ- ಭಾಗ 2

Exit mobile version