Site icon Vistara News

ಮಕ್ಕಳ ಕಥೆ: ಕುರಿ ಮತ್ತು ಮೇಕೆಯ ಜಗತ್‌ ಪರ್ಯಟನೆ

children story

ಈ ಕಥೆಯನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/02/sheep-and-goat.mp3

ಸ್ನೇಹಿತರಾಗಿದ್ದ ಕುರಿ ಮತ್ತು ಮೇಕೆಗೆ ಪ್ರಪಂಚ ಸುತ್ತಬೇಕು ಎನ್ನುವ ಆಸೆ ಉದಿಸಿಬಿಟ್ಟಿತ್ತು. ಎಲ್ಲರೂ ಪ್ರಪಂಚ, ಜಗತ್ತು, ವಿಶ್ವ ಎಂದೆಲ್ಲಾ ಹೇಳುತ್ತಾರಲ್ಲ- ಅವೆಲ್ಲ ಎಲ್ಲಿವೆ? ಎಷ್ಟಿವೆ? ಹೇಗಿವೆ? ಎಂಬುದನ್ನು ನೋಡುವ ಬಯಕೆಯಾಗಿತ್ತು ಇಬ್ಬರಿಗೂ. ಆದರೆ ತಮ್ಮೂರನ್ನು ಬಿಟ್ಟು ಬೇರೇನನ್ನೂ ನೋಡಿಯೇ ಇಲ್ಲದ, ಬೇರೆಲ್ಲೂ ಹೋಗಿಯೇ ಇಲ್ಲದ ಅವರಿಗೆ ಪ್ರಪಂಚ ನೋಡುವದಕ್ಕೆ ಹೇಗೆ ಹೋಗಬೇಕು, ಎಲ್ಲಿಂದ ಪ್ರಾರಂಭಿಸಬೇಕು ಎಂಬುದೇ ಗೊತ್ತಿರಲಿಲ್ಲ. ಅವರಲ್ಲೆಲ್ಲಾ ಅನುಭವಶಾಲಿ ಎಂದರೆ ಆಡಜ್ಜ. ಹಾಗಾಗಿ ಆತನ ಬಳಿಗೆ ಸಲಹೆ ಕೇಳುವುದಕ್ಕೆ ಕುಳಿತವು.

ʻಏನು! ಪ್ರಪಂಚ ಸುತ್ತಬೇಕೆ? ಅಯ್ಯೋ, ಎಳೆನಿಂಬೆಕಾಯಿಗಳಾ! ಹಂಗಂದ್ರೆ ಏನೂಂತಾನಾದ್ರೂ ಗೊತ್ತಾ ನಿಮಗೆ? ಇವತ್ತು ಹೊರಟು ಇನ್ನೊಂದು ವಾರಕ್ಕೆ ತಿರುಗಿ ಬರೋದಕ್ಕೆ ಅದೇನು ನಿಮ್ಮ ನೆಂಟರ ಮನೆ ಅಂದ್ಕೊಂಡ್ರಾ? ಪ್ರಪಂಚ ಸುತ್ತುವಷ್ಟರಲ್ಲಿ ನಿಮ್ಮ ಕಾಲ ಮುಗಿದು, ನಿಮ್ಮ ಮರಿಮಕ್ಕಳ ಕಾಲ ಬರತ್ತೆ- ಅಷ್ಟು ದಿನ ಬೇಕು ಜಗತ್ತು ನೋಡದಕ್ಕೆ. ಅಲ್ಲಿಯವರೆಗೆ ಬದುಕಿರಬೇಕಲ್ಲ ನೀವು. ಸುಮ್ಮನೆ ಹುಲ್ಲು ತಿಂದ್ಕೊಂಡು ಬಿದ್ಗೊಳಿ!ʼ ಎಂದು ನಕ್ಕುಬಿಟ್ಟಿತು ಆಡಜ್ಜ. ಕುರಿ, ಮೇಕೆಗಳೆರಡೂ ಪೆಚ್ಚಾದವು. ಆದರೂ ಜಗತ್ತು ನೋಡುವ ಆಸೆ ಹೋಗಲಿಲ್ಲ. ತಮ್ಮೂರಿನ ಪಕ್ಕದ ಕಾಡಿನಿಂದಲೇ ಜಗತ್‌ ಯಾತ್ರೆಯನ್ನು ಆರಂಭಿಸಬೇಕು ಎಂದು ನಿರ್ಧರಿಸಿ, ಒಂದಿಷ್ಟು ಹುಲ್ಲು ಮತ್ತು ನೀರನ್ನು ಒಂದು ಚೀಲಕ್ಕೆ ತುಂಬಿಸಿಕೊಂಡವು. ಮರುದಿನ ಬೆಳಗಾಗುತ್ತಿದ್ದಂತೆಯೇ ಪ್ರಯಾಣ ಎಂದು ನಿಶ್ಚಯಿಸಿಕೊಂಡವು.

ಬೆಳಗಾಯ್ತು, ಇವರ ಯಾತ್ರೆಯೂ ಆರಂಭವಾಯ್ತು. ಒಳ್ಳೆಯ ಹುರುಪಿನಿಂದ ಕಾಡೊಳಗೆ ಹೊಕ್ಕ ಕುರಿಗೆ, ಸ್ವಲ್ಪ ದೂರ ಹೋದ ಮೇಲೆ, ಕಾಡು ಪ್ರಾಣಿಗಳು ಎದುರಾದರೇನು ಮಾಡುವುದು ಎಂಬ ಚಿಂತೆ ಶುರುವಾಯ್ತು. ತನ್ನ ಆತಂಕವನ್ನು ಮೇಕೆಯಲ್ಲಿ ತೋಡಿಕೊಂಡಿತು. ʻಅಯ್ಯೋ ಕುರಿಯಣ್ಣ, ಹಂಗೆಲ್ಲಾ ಹೆದರಿದರೆ ಪ್ರಪಂಚ ನೋಡುವುದು ಹೇಗೆ? ಪ್ರಾಣಿ ಅಂದ ಮೇಲೆ ಸ್ವಲ್ಪನಾದ್ರೂ ಧೈರ್ಯ ಬೇಡವಾ! ಏನಾಗಲ್ಲ ಬಾʼ ಎಂದು ಸಮಾಧಾನ ಹೇಳಿತು ಮೇಕೆ. ಇಬ್ಬರೂ ಮುಂದುವರಿದರು. ಹಸಿವಾದಾಗ ತಮ್ಮ ಚೀಲದಲ್ಲಿದ್ದ ಹುಲ್ಲು ತಿಂದು, ಬಾಯಾರಿದಾಗ ನೀರು ಕುಡಿದು, ಆಯಾಸವಾದಾಗ ವಿಶ್ರಮಿಸಿದರು. ದಾರಿಯಲ್ಲಿ ಅವರಿಗೊಂದು ತೋಳದ ತಲೆ ಸಿಕ್ಕಿತು. ʻಯಾವುದಕ್ಕೂ ಇರಲಿʼ ಎಂದು ಅದನ್ನು ತಮ್ಮ ಚೀಲಕ್ಕೆ ಹಾಕಿಕೊಂಡಿತು ಮೇಕೆ. ಅರಣ್ಯದ ನಡುವಿಗೆ ಬರುವಷ್ಟರಲ್ಲೇ ಕತ್ತಲಾಯಿತು. ಚಳಿ ಹೆಚ್ಚುತ್ತಿತ್ತು.

ಮೊದಲೇ ಸ್ವಲ್ಪ ಹೆದರಿದ್ದ ಕುರಿಗೆ ಈಗಂತೂ ಊರಿನಲ್ಲಿದ್ದ ತಮ್ಮ ಮನೆಯ ನೆನಪಾಗತೊಡಗಿತ್ತು. ʻಮೇಕೆ ಮಾಮಾ, ಈ ರಾತ್ರಿಯನ್ನು ಎಲ್ಲಿ ಕಳೆಯೋದು?ʼ ಅಳುಕುತ್ತಲೇ ಕೇಳಿತು ಕುರಿ. ಮೇಕೆಗೂ ರಾತ್ರಿಯ ಕತ್ತಲೆಯಲ್ಲಿ ಕಾಡಿನ ಅಭ್ಯಾಸ ಇರದಿದ್ದರಿಂದ, ಸ್ವಲ್ಪ ಆತಂಕ ಆಗುತ್ತಿತ್ತು. ಅಷ್ಟರಲ್ಲಿ ದೂರದಲ್ಲಿ ಒಂದೆಡೆ ಹೊಗೆ ಏಳುತ್ತಿರುವುದು ಕಾಣಿಸಿತು. ʻನೋಡಲ್ಲಿ ಕುರಿಯಣ್ಣ, ಕಾಡಿನ ಚಳಿಗೆ ನಡುಗುವ ಅಗತ್ಯವಿಲ್ಲ. ಅಲ್ಲಿ ಯಾರೋ ಹೊಗೆ ಹಾಕಿದ್ದಾರೆ. ನಾವೂ ಅಲ್ಲೇ ರಾತ್ರಿ ಕಳೆಯೋಣʼ ಎಂಬ ಮೇಕೆಯ ಮಾತನ್ನು ಕುರಿಯೂ ಒಪ್ಪಿಕೊಂಡಿತು. ಇಬ್ಬರೂ ಬೆಂಕಿ ಇರುವಲ್ಲಿ ಹೆಜ್ಜೆ ಹಾಕಿದರು.

ಯಾರೋ ಒಬ್ಬಾತ ಕಂಬಳಿ ಹೊದ್ದು ಚಳಿ ಕಾಯಿಸುತ್ತಿರುವಂತೆ ಕಂಡಿತು ಹಿಂದಿನಿಂದ. ಇಬ್ಬರೂ ಧೈರ್ಯದಿಂದ ಬೆಂಕಿಯ ಬಳಿಗೆ ಹೋಗಿ ಕುಳಿತು ನೋಡಿದರೆ… ಚಳಿ ಕಾಯಿಸುತ್ತಿರುವುದು ತೋಳ! ʻಅಯ್ಯೋ, ಸತ್ತೆ!ʼ ಎಂದುಕೊಂಡವು ಎರಡೂ ಮನದಲ್ಲೇ. ʻಹಿಹ್ಹಿಹ್ಹಿ, ಬನ್ನಿ ಬನ್ನಿʼ ಎಂದಿತು ತೋಳ ಇವರಿಬ್ಬರತ್ತ, ಇನ್ನು ನಾಲ್ಕಾರು ದಿನಗಳು ಊಟಕ್ಕೆ ತೊಂದರೆಯಿಲ್ಲ ಎಂದು ಲೆಕ್ಕ ಹಾಕುತ್ತಾ. ಕುರಿ ಬೇಗನೇ ಕಂಗಾಲಾಗುವ ಸ್ವಭಾವದ್ದಾದರೂ ಮೇಕೆಯದ್ದು ಹಾಗಲ್ಲ. ಈಗ ಧೈರ್ಯಗೆಟ್ಟರೆ ಇಬ್ಬರೂ ಸಾಯುತ್ತೇವೆ ಎಂಬುದನ್ನು ಅರ್ಥಮಾಡಿಕೊಂಡ ಮೇಕೆ, ʻಕುರಿಯಣ್ಣ, ಇವನಷ್ಟು ದೊಡ್ಡ ತಲೆ ಸಾಕೇ?ʼ ಎಂದು ಕೇಳಿತು. ಕುರಿಗೆ ಹಿಂದೆ ಮುಂದೆ ಅರ್ಥವಾಗದೆ ಮೇಕೆಯ ಮುಖವನ್ನೇ ಕಕಮಕ ನೋಡಿತು.

ಇದನ್ನೂ ಓದಿ: ಮಕ್ಕಳ ಕಥೆ: ಗುಡ್ಡದ ಮೇಲಿದ್ದ ಘಂಟಾಕರ್ಣಿ ಭೂತ

ʻನೋಡು ಚೀಲದಲ್ಲಿರುವ ಯಾವುದಾದರೂ ತಲೆ ತೆಗೆದುʼ ಎಂದಿತು ಮೇಕೆ. ತನ್ನ ಕೈಯಲ್ಲಿದ್ದ ಚೀಲದೊಳಗಿಂತ ತೋಳದ ತಲೆಯನ್ನು ಹೊರಗೆಳೆದು ತೋರಿಸಿತು ಕುರಿ. ಅದನ್ನು ಕೈಯಲ್ಲಿ ಹಿಡಿದು ಆಚೀಚೆ ಮಾಡಿ, ʻಇದಲ್ಲ, ಸ್ವಲ್ಪ ದೊಡ್ಡದು ತೆಗಿʼ ಎಂದಿತು ಮೇಕೆ. ಮಿತ್ರನ ಇಂಗಿತವನ್ನು ಅರಿತ ಕುರಿ, ಆ ತಲೆಯನ್ನು ಚೀಲಗೊಳಗೆ ಹಾಕಿ, ಹಿಂದೆ ಮುಂದೆ ತಡಕಾಡಿ ಮತ್ತೆ ಅದೇ ತಲೆಯನ್ನು ಹೊರಗೆಳೆಯಿತು. ʻಇದೂ ಅಲ್ಲ, ಆ ತೊರೆಯ ಹತ್ತಿರ ಕೊಂದಿದ್ದೆವಲ್ಲ, ಆ ತೋಳದ್ದು ತೆಗಿʼ ಎಂದಿತು ಮೇಕೆ. ʻಅದಾದರೆ ಕೆಳಗೆ ಹೋಗಿ ಕೂತಿದೆʼ ಎನ್ನುತ್ತಾ ಚೀಲದ ತಳದಲ್ಲಿ ಹುಡುಕತೊಡಗಿತು. ಚೀಲದ ತಳದಲ್ಲಿ ಒಂದಿಷ್ಟು ಹುಲ್ಲು ಬಾಕಿ ಇದ್ದಿದ್ದರಿಂದ ಆ ಭಾಗ ದಪ್ಪಗೆ ಕಾಣುತ್ತಿತ್ತು. ಎದುರಿಗಿರುವ ತೋಳಕ್ಕೆ ಇವರೇನು ಮಾಡುತ್ತಿದ್ದಾರೆ ಎಂಬುದು ಮೊದಲಿಗೆ ಅರ್ಥವಾಗದಿದ್ದರೂ, ಒಂದಾದ ಮೇಲೊಂದು ತೋಳದ ತಲೆಗಳನ್ನು ಚೀಲದಿಂದ ತೆಗೆಯುತ್ತಿದ್ದಾರೆ ಎಂಬುದಂತೂ ಅರ್ಥವಾಗಿತ್ತು. ʻಇವರಿಬ್ಬರು ಕಾಣುವಷ್ಟು ಸಾಧುಗಳಲ್ಲ. ಕುರಿ, ಮೇಕೆಗಳು ಎಲ್ಲಾದರೂ ಹೀಗೆ ಕಾಡು ಅಲೆಯುವುದಕ್ಕೆ ಸಾಧ್ಯವೇ? ಆ ವೇಷದಲ್ಲಿ ಬಂದು ತೋಳಗಳನ್ನು ಬಲೆಗೆ ಬೀಳಿಸುವ ಮಾಯಾವಿಗಳಿರಬೇಕು. ಅದಕ್ಕಾಗಿ ನನ್ನನ್ನೇ ಹುಡುಕಿಕೊಂಡು ಬಂದಿದ್ದಾರೆʼ ಎನಿಸಿತು ತೋಳಕ್ಕೆ. ʻನೀವಿಬ್ಬರೂ ಇಲ್ಲೇ ಚಳಿ ಕಾಯಿಸುತ್ತಿರಿ, ನಾನೊಂದಿಷ್ಟು ಸೌದೆ ತರ್ತೇನೆʼ ಎನ್ನುತ್ತಾ ಅಲ್ಲಿಂದ ಕಾಲ್ಕಿತ್ತಿತು ತೋಳ.

ಬದುಕಿದೆಯಾ ಬಡಜೀವವೇ ಎನ್ನುತ್ತಾ ಎರಡೂ ಪ್ರಾಣಿಗಳು ಸುತ್ತಲಿರುವ ಪುರಳೆಗಳಿಂದ ಬೆಂಕಿಯನ್ನು ಜೋರಾಗಿ ಉರಿಸಿಕೊಂಡು ಬೆಳಗಾಗುವವರೆಗೆ ಕಳೆದವು. ಆಡಜ್ಜ ಹೇಳಿದ್ದೇನು ಎಂಬುದು ಅವರಿಗೀಗ ಅರ್ಥವಾಗತೊಡಗಿತ್ತು. ಸೂರ್ಯ ಮೂಡುತ್ತಿದ್ದಂತೆಯೇ ಹೆಚ್ಚು ಯೋಚನೆ ಮಾಡದೆಯೇ ತಂತಮ್ಮ ಮನೆಯ ಹಾದಿ ಹಿಡಿದವು. ಹೀಗೆ ಮುಗಿಯಿತು ಅವರ ಜಗತ್‌ ಪರ್ಯಟನೆ.

ಇದನ್ನೂ ಓದಿ: ಮಕ್ಕಳ ಕಥೆ: ಯುದ್ಧವನ್ನೇ ಮಾಡದ ಸಮರ ಗುರು ಸೋತಿದ್ದು ಹೇಗೆ?

Exit mobile version