ಈ ಕಥೆಯನ್ನು ಇಲ್ಲಿ ಕೇಳಿ:
ರಾಜಣ್ಣ ಊರಂಚಿನ ತೋಟದಲ್ಲಿ ವಾಸಿಸುತ್ತಿದ್ದ. ಅವನ ತೋಟದೊಳಗಿನ ಪುಟ್ಟ ಮನೆಯಲ್ಲಿ ರಾಜಣ್ಣ ಮತ್ತು ಅವನ ಹೆಂಡತಿ ಸೀತಕ್ಕ ಇಬ್ಬರೇ ಇದ್ದಿದು. ತೋಟದಲ್ಲಿ ಕಷ್ಟಪಟ್ಟು ದುಡೀತಾ ಇದ್ದಿದ್ರಿಂದ ಜೀವನ ಚೆನ್ನಾಗಿಯೇ ಸಾಗತಾ ಇತ್ತು. ಒಂದು ದಿನ ರಾಜಣ್ಣ ತೋಟದಲ್ಲಿ ನೆಲ ಅಗೀತಾ ಇದ್ದಾಗ ಕೆಳಗೇನೋ ಸಿಕ್ಕಿದಂತಾಯ್ತು. ಇನ್ನಷ್ಟು ಅಗೆದು ನೋಡಿದಾಗ ಸಿಕ್ಕಿದ್ದು ಪುಟ್ಟದೊಂದು ಕಬ್ಬಿಣದ ಪೆಟ್ಟಿಗೆ. ಅದಕ್ಕೊಂದು ಸಣ್ಣ ಬೀಗವೂ ಇತ್ತು. ಆ ಬೀಗ ಒಡೆದು ನೋಡಿದರೆ… ಆ ಪೆಟ್ಟಿಗೆ ತುಂಬಾ ಚಿನ್ನದ ನಾಣ್ಯಗಳಿದ್ದವು. ಇಷ್ಟೊಂದು ಸಂಪತ್ತು! ತಾನೀಗ ಇದರಿಂದ ದೊಡ್ಡದೊಂದು ತೋಟ ತಗೋಬಹುದು, ಅದರಲ್ಲಿ ಸುಂದರವಾದ ಮನೆ ಕಟ್ಟಬಹುದು ಅಂತೆಲ್ಲಾ ರಾಜಣ್ಣ ಕೂತಲ್ಲೇ ಕನಸು ಕಾಣೋದಕ್ಕೆ ಶುರು ಮಾಡಿದ.
ಆದರೆ ಫಕ್ಕನೆ ಅವನಿಗೊಂದು ಸಮಸ್ಯೆ ಎದುರಾಯ್ತು. ಇದನ್ನೀಗ ಮನೆಗೆ ತೆಗೆದುಕೊಂಡು ಹೋದ ತಕ್ಷಣ ತನ್ನ ಹೆಂಡತಿ ಸೀತಕ್ಕನ ಕಣ್ಣಿಗೆ ಬೀಳತ್ತೆ. ಸೀತಕ್ಕನ ಕಣ್ಣಿಗೆ ಮತ್ತು ಬಾಯಿಗೆ ಬಿದ್ದರೆ- ಊರಿಗೆಲ್ಲಾ ತಿಳಿಯತ್ತೆ. ಊರಿಗೆಲ್ಲಾ ಈ ವಿಷಯ ತಿಳಿದರೆ ಸಮಸ್ಯೆಯಾಗತ್ತೆ. ಕಳ್ಳ-ಕಾಕರ ಭಯ ಶುರುವಾಗತ್ತೆ. ಊರಿನ ರಾಜನಿಗೆ ತಿಳಿದರೆ ಉಳಿಗಾಲವಿಲ್ಲ. ಛೇ! ಏನು ಮಾಡಲಿ? ಅಂತ ಯೋಚಿಸಿದ ರಾಜಣ್ಣ. ಸ್ವಲ್ಪ ಯೋಚಿಸಿದ ನಂತರ ಅವನಿಗೊಂದು ಉಪಾಯ ಹೊಳೆಯಿತು.
ಆ ಪೆಟ್ಟಿಗೆಯನ್ನು ಅವನಿಗೆ ಮಾತ್ರ ಗೊತ್ತಾಗುವಂಥ ಒಂದು ಸ್ಥಳದಲ್ಲಿ ಹೂತಿಟ್ಟ. ನೇರ ಪೇಟೆಗೆ ಹೋಗಿ ಒಂದು ದೊಡ್ಡ ಚೀಲದ ತುಂಬಾ ಬಣ್ಣಬಣ್ಣದ ಮಣಿಗಳನ್ನು ಖರೀದಿಸಿ ತಂದು, ಮನೆಯ ಹೊರಗೆ ಬಚ್ಚಿಟ್ಟ. ಸೀತಕ್ಕನ ಹತ್ತಿರ ಹೋಗಿ, “ಸೀತೂ, ಇವತ್ತು ನನಗೊಂದು ವಿಚಿತ್ರ ವಿಷಯ ಗೊತ್ತಾಗಿದೆ” ಅಂದ ಮೆಲ್ಲಗೆ. ಸೀತೆಯ ಕುತೂಹಲ ಹೆಚ್ಚಾಗಿ, ಸರಕ್ಕನೆ ರಾಜಣ್ಣನ ಪಕ್ಕದಲ್ಲಿ ಕೂತು, ʻಏನದು?ʼ ಎಂದು ಕೇಳಿದಳು. “ಅದು ಹಂಗೆಲ್ಲಾ ಹೇಳಕ್ಕಾಗಲ್ಲ. ಸ್ವಲ್ಪ ಗುಟ್ಟಿನ ವಿಷಯ” ಅಂದ ರಾಜಣ್ಣ. “ಅಯ್ಯೋ! ಇದೊಳ್ಳೆ ಚನ್ನಾಗಿದೆ! ನಾನೇನು ಯಾರಿಗೋ ಹೇಳಿಬಿಡ್ತೀನಾ ಗುಟ್ಟನ್ನ! ಅದೇನು ಹೇಳಿ” ಅಂದಳು ಸೀತಕ್ಕ. “ಯಾರಿಗೂ ಹೇಳಲ್ಲ ತಾನೇ? ಸರಿ, ಕೇಳು- ನಮ್ಮ ರಾಜನ ಹೊಟ್ಟೆಯಲ್ಲಿ ಒಂದು ಆಮೆ ಸೇರ್ಕೊಂಡಿದೆ. ಅದಕ್ಕೇ ರಾಜನಿಗೆ ಹೊಟ್ಟೆ ಬರ್ತಾ ಇರೋದು” ಅಂದ ರಾಜಣ್ಣ ಸಣ್ಣ ದನಿಯಲ್ಲಿ. ʻಯಾರಿಗೂ ಹೇಳಲ್ಲ ತಾನೆʼ ಎನ್ನುತ್ತಾ ತನ್ನ ಕೆಲಸಕ್ಕೆ ಹೊರಟುಹೋದ.
ಇನ್ನೀಗ ಸೀತಕ್ಕನ ಹೊಟ್ಟೆಯಲ್ಲಿ ತಾಳ ಕುಟ್ಟುವುದಕ್ಕೆ ಶುರುವಾಯ್ತು. ಯಾರಿಗೂ ಹೇಳಲ್ಲ ಎಂದಿರುವ ವಿಷಯವನ್ನು ಯಾರಿಗಾದರೂ ಹೇಳುವುದು ಹೇಗೆ? ಆದರೆ ರಾಜನ ಹೊಟ್ಟೆಯಲ್ಲಿ ಆಮೆ ಇರುವಂಥ ಮುಖ್ಯ ವಿಷಯವನ್ನು ಯಾರಿಗೂ ಹೇಳದೆ ಇರುವುದಾದರೂ ಹೇಗೆ? ರಾತ್ರಿ ಊಟವೂ ಸರಿಯಾಗಿ ಸೇರಲಿಲ್ಲ ಅವಳಿಗೆ. ಹೇಗೋ ನಿದ್ದೆ ಮಾಡಿದವಳು ಬೆಳಗ್ಗೆ ಎದ್ದು ನೋಡಿದರೆ, ಅಂಗಳದ ತುಂಬೆಲ್ಲಾ ಬಣ್ಣಬಣ್ಣದ ಮಣಿಗಳು ಚೆಲ್ಲಾಡಿದ್ದವು. “ಅಯ್ಯೋ! ಇದೆಂಥಾ ವಿಚಿತ್ರ. ಇಲ್ಲಿ ನೋಡಿ ಬನ್ನಿ” ಎಂದು ರಾಜಣ್ಣನನ್ನೂ ಕರೆದಳು. ಅದನ್ನು ನೋಡಿದ ರಾಜಣ್ಣ, “ರಾತ್ರಿ ಸುರಿದ ಮಳೆ ಶಬ್ದ ಎಂದಿನ ಹಾಗೆ ಇಲ್ಲವಲ್ಲ ಅನಿಸಿತ್ತು. ಮುತ್ತಿನ ಮಳೆ ಬಂದಿದೆ ಅಂತಾಯ್ತು. ಬೇಕಾದಷ್ಟು ಆರಿಸಿಕೊ” ಎಂದ. ಸೀತೆಗಂತೂ ಖುಷಿಯೋ ಖುಷಿ. ಸಡಗರದಿಂದ ಮುತ್ತುಗಳನ್ನು ಆರಿಸಿಕೊಂಡು, ಅದರಲ್ಲಿ ಹಸೆ, ಆರತಿಕಟ್ಟು, ಬಾಗಿಲ ತೋರಣಗಳನ್ನೆಲ್ಲಾ ಮಾಡಬೇಕು ಅಂತ ಯೋಚಿಸಿದಳು. ಆದ್ರೂ ರಾಜನ ಹೊಟ್ಟೆಯ ಆಮೆಯ ಗುಟ್ಟು ಅವಳನ್ನು ಕಾಡುತ್ತಲೇ ಇತ್ತು.
ಸಂಜೆ ಆಚೀಚೆ ಮನೆಯ ಮಹಿಳೆಯರು ಸಿಕ್ಕಿದಾಗ ಅದನ್ನು ಗುಟ್ಟಿನಲ್ಲಿ ಅವರಲ್ಲಿ ಹೇಳಿದಳು ಸೀತೆ. ಅವರು ಇನ್ನಷ್ಟು ಜನರಿಗೆ ಗುಟ್ಟಾಗಿ ಹೇಳಿದರು. ಹೀಗೆ ಬಾಯಿಂದ ಬಾಯಿಗೆ ಹರಡಿ, ʻರಾಜನ ಹೊಟ್ಟೆಯಲ್ಲಿ ಆಮೆಯಿದೆʼ ಎಂಬ ಸುದ್ದಿ ಒಂದೆರಡು ದಿನಗಳಲ್ಲೇ ರಾಜನನ್ನೂ ತಲುಪಿತು. ಸುದ್ದಿ ಕೇಳಿದ ರಾಜ ಕೆಂಡಾಮಂಡಲವಾದ. ಈ ಬಗ್ಗೆ ತನಿಖೆ ಮಾಡುವಂತೆ ಮಂತ್ರಿಗೆ ಆದೇಶಿಸಿದ ಅರಸ. ಈ ಸುದ್ದಿ ಹೊರಟಿದ್ದೆಲ್ಲಿಂದ ಎಂಬುದನ್ನು ಪತ್ತೆ ಮಾಡುತ್ತಾ… ಮಾಡುತ್ತಾ, ರಾಜಣ್ಣನ ಮನೆಯೆದುರು ಬಂದು ನಿಂತರು ಸೈನಿಕರು. ರಾಜಣ್ಣ-ಸೀತಕ್ಕನಿಗೆ ಅರಮನೆಗೆ ಬುಲಾವ್ ಬಂತು.
ಇದನ್ನೂ ಓದಿ: ಮಕ್ಕಳ ಕಥೆ: ಸೂರ್ಯನ ಕಳೆದುಹೋದ ಸೈಕಲ್ ಎಲ್ಲಿ ಹೋಗಿತ್ತು?
ರಾಜನ ಹೊಟ್ಟೆಯೊಳಗೆ ಆಮೆ ಇರುವುದನ್ನು ತಾನೇನು ನೋಡಿಲ್ಲ, ತನ್ನ ಪತಿ ರಾಜಣ್ಣ ಹೇಳಿದ್ದರಿಂದ ಗೊತ್ತಾಗಿತ್ತು ಎಂದಳು ಸೀತಕ್ಕ. ತನ್ನತ್ತ ಕೆಂಗಣ್ಣು ಬೀರಿದ ರಾಜನಿಗೆ, “ಮಹಾಪ್ರಭುಗಳು ಮನ್ನಿಸಬೇಕು. ಕನಸಲ್ಲಿ ಕಂಡಿದ್ದೆಲ್ಲಾ ನಿಜ ಅಂತ ನಂಬಿ ಕೆಲವೊಮ್ಮೆ ಹೀಗೆ ಏನೇನೋ ಹೇಳತಾಳೆ ಇವಳು. ಅದನ್ನು ತಾವು ಮನಸ್ಸಿಗೆ ಹಚ್ಚಿಕೊಳ್ಳಬಾರದು” ಎಂದ ರಾಜಣ್ಣ. ಸೀತಕ್ಕನಿಗೆ ಸಿಟ್ಟು ಬಂತು. “ನನಗೇನೂ ಕನಸು ಬಿದ್ದಿದ್ದಲ್ಲ. ಮೊನ್ನೆ ದಿನ ಬೆಳಗ್ಗೆ ಮುತ್ತಿನ ಮಳೆ ಸುರಿದಿತ್ತಲ್ಲ, ಅದರ ಹಿಂದಿನ ದಿನಾನೇ ಇವರು ಬಂದು ಈ ವಿಷಯವನ್ನು ನನಗೆ ಹೇಳಿದ್ದರು” ಅಂತ ಸಮರ್ಥಿಸಿಕೊಂಡಳು ಸೀತೆ.
ಮುತ್ತಿನ ಮಳೆ! ಎಲ್ಲಾದರೂ ಉಂಟೇ!
“ನಾನು ಹೇಳಿದ್ದೆನಲ್ಲ ಮಹಾಸ್ವಾಮಿ, ಕನಸನ್ನೆಲ್ಲಾ ನಿಜಾಂತ ತಿಳಿದುಕೊಳ್ಳುತ್ತಾಳೆ ಇವಳು. ತಾವು ದಯವಿಟ್ಟು ಬೇಸರ ಮಾಡಿಕೊಳ್ಳಬಾರದು” ಎಂದು ವಿನೀತನಾಗಿ ಕೈ ಮುಗಿದ ರಾಜಣ್ಣ. ಇನ್ನೊಮ್ಮೆ ಇಂಥ ಮಾತನ್ನಾಡಬಾರದು ಎಂದು ಎಚ್ಚರಿಕೆ ನೀಡಿದ ಕಳುಹಿಸಿದ ರಾಜ. ಆದರೆ ರಾಜನ ಎದುರು ತನ್ನ ಬಗ್ಗೆ ಕೇವಲವಾಗಿ ಮಾತಾಡಿದ ಎಂದು ರಾಜಣ್ಣನ ಮೇಲೆ ಕೋಪಿಸಿಕೊಂಡಳು ಸೀತೆ. “ಮೊದಲೇ ಹೇಳಿದ್ದೆ ನಿನಗೆ, ಯಾರಲ್ಲೂ ಹೇಳಬೇಡ ಅಂತ. ಆದರೆ ಮಾತಿಗೆ ತಪ್ಪಿದೆ ನೀನು. ಈಗ ನೋಡು ಏನೇನೆಲ್ಲಾ ಆಯ್ತು ಅಂತ” ಎಂದ ರಾಜಣ್ಣ. ಸೀತೆಗೆ ತನ್ನ ತಪ್ಪಿನ ಅರಿವಾಯ್ತು.
ಮಾರನೇ ದಿನವೇ ಚಿನ್ನದ ನಾಣ್ಯದ ಪೆಟ್ಟಿಗೆಯನ್ನು ಮನೆಗೆ ತಂದ ರಾಜಣ್ಣ. ಸೀತಕ್ಕನ ಸಂಭ್ರಮಕ್ಕೆ ಸೀಮೆಯೇ ಇರಲಿಲ್ಲ. “ನೋಡು, ಮತ್ತೆ ಯಾರಲ್ಲಾದರೂ ಈ ವಿಷಯ ಹೇಳಿದರೆ ಆಗುವ ಸಮಸ್ಯೆ ಎಷ್ಟು ಅನ್ನೋದು ನಿನಗೇ ಗೊತ್ತು” ಅಂದ ರಾಜಣ್ಣ. ಆದರೆ ಯಾರಲ್ಲೂ ಈ ವಿಷಯ ಹೇಳಬಾರದೆಂದು ನಿರ್ಧಾರ ಮಾಡಿದಳು ಸೀತಕ್ಕ. ಇದರಿಂದ ಅವರ ಜೀವನಕ್ಕಾಗುವಷ್ಟು ಸಂಪತ್ತು ಅವರ ಹತ್ರನೇ ಉಳಿಯಿತು.
ಇದನ್ನೂ ಓದಿ: ಮಕ್ಕಳ ಕಥೆ: ಮರಿ ಹಾಕಿದ ಕಡಾಯಿ, ಸತ್ತುಹೋದ ಡಬರಿ!